ಬ್ಯಾಡ್ ಮಾರ್ನಿಂಗ್ ಇಂಡಿಯಾ… ದನಕ್ಕಿರುವ ಮೌಲ್ಯ ದಲಿತನ ಜೀವಕ್ಕಿಲ್ಲವೇ?, ನಿರ್ಭಯ ಆಕ್ರೋಶಕ್ಕಿಲ್ಲವಾಯ್ತಲ್ಲ ಅತ್ಯಾಚಾರ ತಡೆವ ಶಕ್ತಿ, ಬದುಕೇ ಮುಳುಗಿದೆ ಅಲ್ಲಿ ನಮಗಿಲ್ಲಿ ಕಬಾಲಿ

ಡಿಜಿಟಲ್ ಕನ್ನಡ ಟೀಮ್:

ಗುಜರಾತಿನ ಉನಾ ಪಟ್ಟಣದಲ್ಲಿ ಗೋ ಸಂರಕ್ಷಕರೆಂದು ಹೇಳಿಕೊಳ್ಳುವ ಕೆಲವರು ಕೆಲದಿನಗಳ ಹಿಂದೆ ಏಳು ಮಂದಿ ದಲಿತ ಯುವಕರನ್ನು ಘೋರವಾಗಿ ಥಳಿಸಿರುವ ಘಟನೆ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ತಾವು ಸತ್ತ ದನದ ಚರ್ಮ ತೆಗೆದುಕೊಳ್ಳಲು ಹೋಗಿದ್ದೆವೇ ಹೊರತು, ದನ ಕೊಲ್ಲುವುದಕ್ಕೆ ಅಲ್ಲವೇ ಅಲ್ಲ ಎಂದು ದೌರ್ಜನ್ಯಕ್ಕೊಳಗಾದ ಹುಡುಗರು ಸ್ಪಷ್ಟಪಡಿಸಿದ್ದಾರೆ.

ಖಂಡಿತ ಗೋ ಸಂರಕ್ಷಣೆ, ಇದರ ಹಿಂದಿರುವ ಭಾವನೆ ಎಲ್ಲವೂ ಉನ್ನತವೇ. ಆದರೆ ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಾಥಮಿಕ ಸಂಗತಿ ಎಂದರೆ ಗೋವನ್ನು ಸಾಕುವುದು. ಆದರೆ ಗುಜರಾತಿನಂಥ ಘಟನೆಗಳು ಗೋಪಾಲಕರಿಗಿಂತ ‘ಗೋ ಸಂರಕ್ಷಕರ’ ಆಟಾಟೋಪ ಹೆಚ್ಚಾಗುತ್ತಿರುವ ಅನಪೇಕ್ಷಿತ ಬೆಳವಣಿಗೆಯನ್ನು ತೋರಿಸುತ್ತದೆ.

ಈ ಘಟನೆ ಆದಾಗಿನಿಂದ ರಾಜ್ಕೋಟ್, ಪೋರ್ಬಂದರ್, ಬೊತಾಡ್ ಮತ್ತು ಗಿರ್-ಸೋಮನಾಥ ಹೀಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ದಲಿತ ಯುವಕರು ಆತ್ಮಹತ್ಯೆಗೆ ಯತ್ನಿಸಿರುವ ಸಂಖ್ಯೆ ಅತಿಯಾಗಿ ವರದಿಯಾಗುತ್ತಿದೆ. ಜುಲೈ 11ರಿಂದ ಈವರೆಗೆ ಅಂಥ ಯತ್ನಗಳ ಸಂಖ್ಯೆ 17ಕ್ಕೆ ಏರಿದೆ.

ಇಲ್ಲಿ ಆತ್ಮಹತ್ಯೆಯ ವೈಭವೀಕರಣ ಸಲ್ಲ. ಆದರೆ ಇಷ್ಟು ಸಂಖ್ಯೆಯಲ್ಲಿ ಆತ್ಮಹತ್ಯೆ ಪ್ರಯತ್ನ ನಡೆಯುತ್ತಿದೆ ಎಂದರೆ ಅವರು ತಮ್ಮ ಸಾವಿನ ಮೂಲಕ ಏನನ್ನು ನಿರೂಪಿಸುವ ಹತಾಶೆಗೆ ಸಿಲುಕಿದ್ದಾರೆ ಎಂಬುದನ್ನು ತುಸು ಸಂವೇದನೆಯಿಂದ ಯೋಚಿಸಬೇಕಾಗುತ್ತದೆ. ಟಿಬೆಟ್ ನಲ್ಲಿ ಆತ್ಮಾಹುತಿ ಮೂಲಕ ಚೀನಾದ ದಮನ ನೀತಿಯನ್ನು ಜಗತ್ತಿಗೆ ತೋರಿಸುತ್ತಿರುವ ಬೌದ್ಧ ಭಿಕ್ಕುಗಳ ಬಗ್ಗೆ ಮಾತನಾಡುವ ನಾವು, ಈ ನೆಲದ ಯುವಕರ ಸಾಯುವಂಥ ನೋವನ್ನು ಕೇವಲ ಏನೋ ರಾಜಕೀಯವಿದೆ ಎಂಬಂತೆ ನೋಡಿ ಸುಮ್ಮನಾಗಲಾಗುವುದಿಲ್ಲ.

ಘಟನೆ ಸಂಬಂಧ 16 ಮಂದಿ ಆರೋಪಿಗಳನ್ನು ಆನಂದಿಬೆನ್ ಸರ್ಕಾರ ಬಂಧಿಸಿದೆ. ಮುಖ್ಯಮಂತ್ರಿ ಸಂತ್ರಸ್ತರ ಮನೆಗಳಿಗೆ ಭೇಟಿಕೊಟ್ಟು ಅಗತ್ಯ ಸಹಾಯಗಳ ಭರವಸೆಯನ್ನು ಕೊಟ್ಟಿದ್ದಾರೆ. ಘಟನೆಯ ಕುರಿತ ದಲಿತ ಪ್ರತಿಭಟನೆಗಳಲ್ಲಿ ಕೆಲವೆಡೆ ಸಾರ್ವಜನಿಕ ಆಸ್ತಿಹಾನಿ, ಇನ್ನೊಂದೆಡೆ ಪೊಲೀಸ್ ಒಬ್ಬರ ಸಾವು ಸಂಭವಿಸಿದೆ. ಹೀಗಾಗಿ, ಈ ವರ್ಗದ ಭಯ- ಹತಾಶೆಗಳಿಗೆ ಅಭಯ ನೀಡುವ, ಸಂವಾದಕ್ಕೆ ತೆರೆದುಕೊಳ್ಳುವ ಕೆಲಸಗಳಿಗೆ ಭಾರತ ಬೆಂಬಲವಾಗಿ ನಿಲ್ಲಬೇಕು.

ಉಳಿದಂತೆ, ದಲಿತರ ಸಾವು ಎಂದಕೂಡಲೇ ರಾಜಕೀಯ ಹಿತಾಸಕ್ತಿ ಇದ್ದದ್ದೇ. ಲೋಕಸಭೆಯಲ್ಲಿ ಈ ವಿಷಯ ಚರ್ಚೆಯಾಗುತ್ತಿದ್ದಾಗ ನಿದ್ದೆ ಮಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇವತ್ತು ಗುಜರಾತಿಗೆ ಭೇಟಿ ಕೊಡಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಭೇಟಿ ಶುಕ್ರವಾರಕ್ಕೆ ನಿಗದಿ ಆಗಿದೆ.

ಆದರೆ… ಈ ಕೇಜ್ರಿವಾಲರ ನೆಲದಲ್ಲಿ ಆಗಿರುವುದೇನು ಅಂತ ನೋಡಿದಾಗ ಅದು ಇನ್ನೊಂದು ದುರಂತ ಸರಣಿಗೆ ನಮ್ಮ ಸಂವೇದನೆಯನ್ನು ಸೆಳೆದೊಯ್ಯುತ್ತದೆ.

—-

ಮಂಗಳವಾರ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಕ್ಷದ ಸಹೋದ್ಯೋಗಿಯೊಬ್ಬರಿಂದ ಲೈಂಗಿಕ ಕಿರುಕುಳವಾಗಿದೆ ಎಂಬ ದೂರಿನನ್ವಯ ರಮೇಶ ವಾಧ್ವಾ ಎಂಬಾತನನ್ನು ಬಂಧಿಸಲಾಗಿತ್ತು. ಈ ವ್ಯಕ್ತಿ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಲೇ ಖಿನ್ನತೆಗೆ ಜಾರಿದ ಈಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.

ಈಕೆಯ ಕುಟುಂಬದವರು ಹೇಳುವ ಪ್ರಕಾರ, ಲೈಂಗಿಕ ದೌರ್ಜನ್ಯದ ಕೇಸು ಹೊತ್ತವನಿಗೆ ಆಪ್ ಶಾಸಕರೊಬ್ಬರು ಬೆಂಬಲಿಸುತ್ತಿದ್ದಾರೆ ಅಂತ ಈಕೆ ಧೃತಿಗೆಟ್ಟಿದ್ದರಂತೆ. ಇತ್ತ ಆಪ್ ಮಾತ್ರ ಆರೋಪಿತನಿಗೂ ಪಕ್ಷಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿದೆ. ಬೇರೆ ಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಅಂತ ಆರೋಪಿಸುತ್ತಿದೆ ಆಪ್… ಅಲ್ಲಿಗೆ ಯಾವುದು ರಾಜಕೀಯ, ಇನ್ಯಾವುದು ಕಾಳಜಿ ಎಂಬುದೇ ತಿಳಿಯದ ರೀತಿ ಎಲ್ಲವೂ ಕಲಸಿಕೊಳ್ಳುತ್ತಿದೆ…

ದೆಹಲಿಯ ನಿರ್ಭಯ ಪ್ರಕರಣದಲ್ಲಿ ಜನಾಕ್ರೋಶ ಸಿಡಿದೆದ್ದಿದ್ದನ್ನು ಕಂಡಾಗ, ಇನ್ನು ಅತ್ಯಾಚಾರಕ್ಕೆ ಮುಂದಾಗುವವರಿಗೆ ಒಂದು ಹೆದರಿಕೆ ಇರುತ್ತದೆ ಎಂಬ ಆಶಾಭಾವನೆ ಒಡಮೂಡಿತ್ತು. ಆದರೆ ಇತ್ತೀಚಿನ ಪ್ರಕರಣಗಳನ್ನು ನೋಡುತ್ತಿದ್ದರೆ ದಿಗಿಲೇ ಕಾಡುತ್ತಿದೆ.

ಹರ್ಯಾಣದ ರೋಹ್ಟಕ್ ನಲ್ಲಿ 21ರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಆಕೆಯ ಹೇಳಿಕೆ ಪ್ರಕಾರ ಅತ್ಯಾಚಾರ ಎಸಗಿದವರಲ್ಲಿ ಇಬ್ಬರು ಈ ಮೊದಲು ಅತ್ಯಾಚಾರ ಎಸಗಿ ಜೈಲು ಸೇರಿದವರೇ ಆಗಿದ್ದರು. ಅಂದರೆ 2013ರಲ್ಲಿ ಈಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೈಲು ಸೇರಿದ್ದವರು, ಜಾಮೀನಿನ ಮೇಲೆ ಹೊರಬಂದಾಗಲೇ ಈ ಕೃತ್ಯದಲ್ಲಿ ಪಾಲುಗೊಂಡಿದ್ದಾರೆ! ಆರೋಪಿಗಳ ಕುಟುಂಬ ಇದನ್ನು ನಿರಾಕರಿಸುತ್ತಿದ್ದು, ಘಟನೆ ನಡೆದ ಸಂದರ್ಭದಲ್ಲಿ ಇಬ್ಬರು ಆ ಸ್ಥಳದಲ್ಲಿರಲೇ ಇಲ್ಲ ಎಂಬುದಕ್ಕೆ ಸಾಕ್ಷ್ಯಗಳಿವೆ ಎಂದು ಪ್ರತಿಪಾದಿಸುತ್ತಿದೆ. ಒಟ್ಟಿನಲ್ಲಿ ಅತ್ಯಾಚಾರವಾಗಿರುವುದಂತೂ ಸತ್ಯ. ಐವರು ಆರೋಪಿಗಳ ಪೈಕಿ ಈವರೆಗೆ ಪೊಲೀಸರಿಗೆ ಸಿಕ್ಕವರು ಮೂವರು.

ಅತ್ತ ಮಹಾರಾಷ್ಟ್ರದಿಂದ ವರದಿಯಾಗಿರುವ ಭೀಕರತೆ ಪದಗಳಿಗೆ ನಿಲುಕದ್ದು. ಜುಲೈ 13ರಂದು ಕೊಪರ್ದಿ ಎಂಬ ಹಳ್ಳಿಯಲ್ಲಿ 14 ವರ್ಷದ ಹುಡುಗಿಯ ಮೇಲೆ ಭೀಕರ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆ. ಮೂವರು ಆರೋಪಿಗಳ ಬಂಧನವಾಗಿದೆ. ಅತ್ತ ಈ ಘಟನೆ ನಡೆದ ಅಹ್ಮದ್ ನಗರದ ವ್ಯಾಪ್ತಿಯಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸುತ್ತಿದ್ದಾರೆ. ಅಂಥದೊಂದು ಭಯವನ್ನು ಬಿತ್ತಿದೆ ಈ ಘಟನೆ. ಅದು ಸಹಜವೂ ಹೌದು. ಹೈಸ್ಕೂಲಿಗೆ ಹೋಗುವ ಹುಡುಗಿಯರನ್ನೂ ಮಾರ್ಗಮಧ್ಯೆ ಎಳೆದು ಅತ್ಯಾಚಾರ ಎಸಗಲಾಗುತ್ತಿದೆ ಎಂದರೆ ಈ ಭೀಕರ ಕೃತ್ಯಕ್ಕೆ ಪ್ರತಿಕ್ರಿಯಿಸುವುದಕ್ಕೂ ಮನಸಿಗೆ ಮಂಕು ಕವಿಯುತ್ತದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಈ ಅತ್ಯಾಚಾರಿಗಳಿಗೆ ಸರ್ಕಾರ ಮರಣದಂಡನೆಯನ್ನೇ ನ್ಯಾಯಾಲಯದೆದುರು ಕೇಳಲಿದೆ ಎಂದಿದ್ದಾರೆ.

ಕಳೆದ ಕೆಲದಿನಗಳಲ್ಲಿ ಭಾರತದಲ್ಲಿ ಘಟನೆಯೊಂದಕ್ಕೆ 59 ಮಂದಿ ಪ್ರಾಣ ತೆತ್ತಿದ್ದಾರೆ. ಉಹುಂ. ಯಾವ ಉಗ್ರವಾದಿ ಕೃತ್ಯವೇನಿಲ್ಲ. ಹಾಗಾಗಿಯೇ ಈ ಸಾವು-ನೋವಿನ ಮೊತ್ತ ನಮ್ಮ ಗಮನಕ್ಕೇ ಬರುತ್ತಿಲ್ಲ.  ಹೀಗೆ ಪ್ರಾಣಬಲಿ ತೆಗೆದುಕೊಳ್ಳುತ್ತಿರುವುದು ಪ್ರವಾಹ. ಬೆಳಗಿನ ಚಹಾ ಹೀರಿ, ಕೆಲಸದ ತುರ್ತಿನಲ್ಲಿರುವ ನಮಗ್ಯಾರಿಗೂ ಆ ಚಹಾದ ಎಲೆಗಳು ಅರಳಿರಬಹುದಾದ ಅಸ್ಸಾಂ ಕಳೆದ ಕೆಲದಿನಗಳಿಂದ ಪ್ರವಾಹದಲ್ಲಿ ಮುಳುಗಿದೆ ಎಂಬ ಸಂಗತಿ ಗಮನಕ್ಕೇ ಬಂದಿರುವುದಿಲ್ಲ.

ಬ್ರಹ್ಮಪುತ್ರ ಉಕ್ಕಿ ಹರಿಯುತ್ತಿದೆ. ಅಸ್ಸಾಮಿನ ಆರು ಜಿಲ್ಲೆಗಳು ಪ್ರವಾಹಪೀಡಿತವಾಗಿವೆ. ಇಲ್ಲಿನ 213 ಹಳ್ಳಿಗಳು ನೀರಿನಿಂದಾವೃತವಾಗಿ ಸುಮಾರು 1 ಲಕ್ಷ 80 ಸಾವಿರ ಮಂದಿಯ ಬದುಕು ಕಣ್ಣೀರಲ್ಲಿ ಮುಳುಗಿದೆ. ಸುಮಾರು 4 ಸಾವಿರ ಮಂದಿ ಸರ್ಕಾರದ 24 ನಿರಾಶ್ರಿತ ಶಿಬಿರಗಳಲ್ಲಿ ಹಂಚಿಹೋಗಿದ್ದಾರೆ. 13,519 ಹೆಕ್ಟೇರುಗಳ ಕೃಷಿಭೂಮಿ ಪ್ರವಾಹದಲ್ಲಿ ಮುಳುಗಿ ಬೆಳೆನಷ್ಟವಾಗಿದೆ.

ಪ್ರವಾಹದ ಅತಿ ಸಂತ್ರಸ್ತ ರಾಜ್ಯವೆಂದರೆ ಮಧ್ಯಪ್ರದೇಶ. ಇಲ್ಲಿನ 23 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು 35 ಮಂದಿ ಪ್ರಾಣ ತೆತ್ತಿದ್ದಾರೆ ಹಾಗೂ 3 ಲಕ್ಷ ಮಂದಿ ಪ್ರವಾಹಪೀಡಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರವಾಹಕ್ಕೆ ಮೃತರಾದವರ ಸಂಖ್ಯೆ 17.

ಮಧ್ಯಪ್ರದೇಶದಲ್ಲಿ ಪ್ರವಾಹ ಸಂತ್ರಸ್ತರಿಗೆ ವಿತರಿಸಿರುವ ಆಹಾರಧಾನ್ಯಗಳಲ್ಲಿ ಕಲ್ಲು- ಮಣ್ಣುಗಳೇ ತುಂಬಿವೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಸಾರುತ್ತಿದೆ. ಬದುಕೇ ಮುಳುಗುತ್ತಿರುವ ಹಂತದಲ್ಲೂ ಭ್ರಷ್ಟಾಚಾರದ ಭಜನೆ!

flood

ಭಾರತ ಇಂಥದ್ದನ್ನೆಲ್ಲ ನೋಡುತ್ತಿರಬೇಕಾದರೆ ಈ ನೋವುಗಳಿಂದ ದೂರ ನಿಂತುಬಿಡುವುದು ಸಾಧುವೇ?

Leave a Reply