ನಮ್ಮ ಮನೆಯಿಂದ ಕಾಣೆಯಾಗಿರೋ ಸದಸ್ಯನಾರು ಗೊತ್ತಾ?

sumangala (2)ಸುಮಂಗಲಾ ಎಸ್. ಮುಮ್ಮಿಗಟ್ಟಿ

ನಮ್ಮ ಮನೆಯ ಸದಸ್ಯನೊಬ್ಬ ಕಾಣೆಯಾಗಿದ್ದಾನೆ… ಅದೂ ಇನ್ನೆಂದು ಸಿಗದಂತೆ ಕಾಣೆಯಾಗಿದ್ದಾನೆ. ಆತ ಯಾವುದೇ ಪತ್ರವನ್ನು ಬರೆದಿಟ್ಟು ಹೋಗಿಲ್ಲವಾದರೂ ಅಧ್ಯಯನಗಳಿಂದ ತಿಳಿದು ಬಂದ ವಿಚಾರವೆಂದರೆ ಈ ಸದಸ್ಯನ ಕಾಣೆಯಾಗಿರುವಿಕೆಗೆ ನಾವೇ ಕಾರಣ! ಕಳೆದ ದಶಕದಲ್ಲಿನ್ನೂ ಆರಾಮವಾಗಿ ಓಡಾಡಿಕೊಂಡಿದ್ದ ಇವನು ಹೀಗೆ ಇದ್ದಕ್ಕಿದ್ದ ಹಾಗೆ ಕಾಣೆಯಾಗಲು ಕಾರಣ ನಮ್ಮ ಚಟುವಟಿಕೆಗಳೇ ಕಾರಣ ಎಂದು ತಿಳಿದು ಬಂದಿದೆ.

ವೈಜ್ಞಾನಿಕವಾಗಿ ಈ ಸದಸ್ಯನ ಹೆಸರು ಬ್ರಾಂಬಿಲೆ ಕೆ ಮೆಲೊಮಾಯ್ಸ್. ನೋಡಲು ಸಣ್ಣ, ಕೆಂಪು ಇಲಿಯಂತೆ ಇರುವ ಈ ಕಡುಕಂದು ಬಣ್ಣದ ತುಪ್ಪಳದ ಮೈ ಹೊಂದಿರುವ ಸ್ತನಿ.  ಹವಳದ ಜೀವಿಗಳ ಖ್ಯಾತಿಯ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ತನ್ನ ಅವಾಸವನ್ನು ಮಾಡಿಕೊಂಡಿತ್ತು. ಕ್ವೀನ್ಸ್ ಲ್ಯಾಂಡ್ ದ್ವೀಪ, ಆಸ್ಟ್ರೇಲಿಯಾ, ಪಪುವಾ ನ್ಯೂಗಿನಿಗಳಲ್ಲಿ ಮನೆ ಮಾಡಿಕೊಂಡು ತನ್ನ ಸಂತತಿಯನ್ನು ಅಭಿವೃದ್ಧಿ ಮಾಡಿತ್ತು.

ಹೇರಳವಾಗಿದ್ದ ಈ ಮೆಲೋಮಾಯ್ಸ್ ನ ಸಂತತಿ ಕ್ಷಿಣಿಸಿದ್ದು 1970 ರಲ್ಲಿ ಮೊದಲ ಬಾರಿಗೆ ಕಂಡು ಬಂದಿತು ಆಗ ಅದನ್ನು ವಿನಾಶದ ಅಂಚಿನಲ್ಲಿರುವ ಜೀವಿ ಎಂದು ಗುರುತಿಸಲಾಯಿತು. ಕೇವಲ ಕೆಲವು ದ್ವೀಪಗಳಲ್ಲಿ ಮಾತ್ರ ವಾಸಿಸುತ್ತಿದ್ದ ಈ ಜೀವಿ, ಆ ಪ್ರದೇಶಗಳಿಗೆ ಸೀಮಿತ ಅಂದರೆ ಎಂಡಮಿಕ್ ಎಂದು ತಿಳಿದು ಬಂತು. ಈ ಸದಸ್ಯ ಕೊನೆಯ ಬಾರಿಗೆ ಕಂಡದ್ದು 2009 ರಲ್ಲಿ, 2014 ರಲ್ಲಿ ಮೊಲೊಮಾಯ್ಸ್ ಅನ್ನು ಹುಡುಕಲು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾದವು ಕ್ಯಾಮೆರಾ ಅಳವಡಿಸಿ ಟ್ರ್ಯಾಪ್ ಮಾಡಲು ಮಾಡಿದ ಪ್ರಯತ್ನಕ್ಕೂ ಯಾವುದೇ ಫಲಿತಾಂಶ ದೊರೆಯಲಿಲ್ಲ. ಅಂತಿಮವಾಗಿ ಇದನ್ನು ಅಳಿದು ಹೋಗಿದೆ ಎಂದು ಘೋಷಿಸಲಾಯಿತು.

ಇದರ ವಿನಾಶಕ್ಕೆ ಆಸ್ಟ್ರೇಲಿಯಾ ಸರಕಾರ ನಡೆಸಿದ ಅಧ್ಯಯನ ಬ್ರಾಂಬಿಲೆ ಕೆ ಮೆಲೊಮಾಯ್ಸ್ ನ ಅಳಿವಿಗೆ ಹೆಚ್ಚುತ್ತಿರುವ ಸಾಗರ ನೀರಿನ ಮಟ್ಟ, ಎತ್ತರದ ಅಲೆಗಳು ಕಾರಣ ಎಂದು ಗುರುತಿಸಲಾಗಿದೆ. ಹೀಗೆ ಸಾಗರ ನೀರಿನ ಮಟ್ಟ ಹೆಚ್ಚುತ್ತಿರುವುದು ಭೂಮಿಯ ತಾಪಮಾನದಿಂದ. 2014 ರಲ್ಲಿ ದ್ವೀಪಗಳು ನೀರಿನಲ್ಲಿ ಮುಳುಗಿ ಹೋದವು. ಕಲ್ಲಿನ ಕೊರಕಲುಗಳು, ಗುಹೆಗಳು ಮಾಯವಾದವು. ಆಹಾರ ಕೊರತೆಯೂ ಇದರೊಂದಿಗೆ ಸೇರಿಕೊಂಡಿತು. ಇತರ ಸ್ತನಿಗಳೊಂದಿಗೆ ಸ್ಪರ್ಧೆಯನ್ನು ಎದುರಿಸಲಾರದೆ ಕ್ರಮೇಣವಾಗಿ ಇವು ಕ್ಷೀಣಿಸುತ್ತಾ ಇಲ್ಲದಂತಾಗಿವೆ. ಭೂಮಿಯ ತಾಪಮಾನದ ಏರಿಕೆಗೆ ಕಾರಣ ನಮ್ಮ ಇಂಗಾಲದ ಹೆಜ್ಜೆ ಗುರುತು, ನಮ್ಮ ಕೊಳ್ಳುಬಾಕತನ, ಬಳಸಿ ಬಿಸಾಡುವ, ಮಿತಿಮೀರಿ ಬಳಸುವ, ವ್ಯರ್ಥ ಮಾಡುವ ಬೇಜವಾಬ್ದಾರಿತನ. ಎಲ್ಲವೂ ಸೇರಿ ನಮ್ಮ ವಿಕಾಸಕ್ಕೆ ಕಾರಣವಾದ ಜೀವಿಯೊಂದನ್ನು ಇಲ್ಲವಾಗಿಸಿತು.

ಹಾಗೆಂದು ನಮ್ಮ ಮನೆಯ ಸದಸ್ಯರನ್ನು ನಾವು ನಿರ್ಣಾಮ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇಂತಹ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಡೊಡೋ ಹಕ್ಕಿ, ಪ್ಯಾಸಿಂಜರ್ ಪಿಜನ್ ಇತ್ಯಾದಿ..

ನಮ್ಮ ಪಶ್ಚಿಮ ಘಟ್ಟದ ಹಲವಾರು ಸಸ್ಯ ಸಂಕುಲ ನಾಶವಾಗಿದೆ. ಮುಂದಿನ ಸಲದ ಅಂಕಣದಲ್ಲಿ ಪಶ್ಚಿಮ ಘಟ್ಟದಲ್ಲಿ ನಿರ್ಣಾಮವಾಗಲಿದ್ದ ಜೀವಿಯೊಂದನ್ನು ನಮ್ಮ ವಿಜ್ಞಾನಿಗಳು ಉಲಿಸಿಕೊಂಡ ಕತೆಯನ್ನು ತಿಳಿಯೋಣ. ಅಂದಹಾಗೆ ನೀವು ನಿಮ್ಮ ಇಂಗಾಲದ ಹೆಜ್ಜೆ ಗುರುತನ್ನು ಎಷ್ಟು ಕಿರಿದಾಗಿಸಿ ಭೂಮಿ ಹಗುರಾದಿರಿ ನಮಗೆ ತಿಳಿಸಿ.

Leave a Reply