ವೇಶ್ಯೆಯ ಹೋಲಿಕೆ ಮಾಡಿದವರೊಂದಿಗೆ ನಾಲಗೆ ಕತ್ತರಿಸುವುದಕ್ಕೆ ಇನಾಮು ಘೋಷಿಸಿದವರೂ ಜೈಲಲ್ಲಿರಬೇಕಲ್ಲವೇ?

ಪ್ರವೀಣ್ ಕುಮಾರ್

ಬಿಜೆಪಿಯ ದಯಾಶಂಕರ್ ಸಿಂಗ್, ಬಿಎಸ್ಪಿಯ ಮಾಯಾವತಿ ವಿರುದ್ಧ ನೀಡಿದ ಹೇಳಿಕೆ ನಾಗರಿಕ ಸಮಾಜ ಒಪ್ಪುವುದಕ್ಕೆ ಸಾಧ್ಯವಿಲ್ಲದ್ದು. ಅದಕ್ಕೆ ಬಿಜೆಪಿಯೂ ತ್ವರಿತ ಕ್ರಮ ತೆಗೆದುಕೊಂಡು ಮೊದಲಿಗೆ ಪಕ್ಷದ ಪದಾಧಿಕಾರಿ ಹುದ್ದೆಗಳಿಂದ ಹಾಗೂ ನಂತರ ಪಕ್ಷದಿಂದಲೂ ಹೊರಹಾಕಿದೆ.

ಬುಧವಾರ ರಾತ್ರಿಯೇ ದಯಾಶಂಕರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವುದು, ಅವಮಾನ ಮತ್ತು ಶಾಂತಿಭಂಗದ ಉದ್ದೇಶ, ಮಹಿಳೆಯ ಗೌರವಕ್ಕೆ ಭಂಗ ತರುವ ಕ್ರಿಯೆ ಹಾಗೂ ಎಸ್ಸಿ-ಎಸ್ಟಿ ಸಮುದಾಯದ ವಿರುದ್ಧ ದೌರ್ಜನ್ಯ ತಡೆ… ಈ ಎಲ್ಲ ಕಾರಣಗಳಿಗೆ ಸಲ್ಲುವ ಮೊಕದ್ದಮೆಗಳನ್ನು ಹಾಕಲಾಗಿದೆ.

ಈ ಘಟನೆ ಮತ್ತು ಉನಾದಲ್ಲಿ ಸತ್ತ ದನದ ಚರ್ಮ ತೆಗೆದುಕೊಳ್ಳಲು ಹೋದಾಗ ಗೋರಕ್ಷಣೆ ಹೆಸರಿನ ಗುಂಪೊಂದು ಅವರನ್ನು ಅಮಾನವೀಯವಾಗಿ ಥಳಿಸಿದ ಘಟನೆ ಇವೆರಡನ್ನೂ ತಳುಕು ಹಾಕಿ ಬಿಜೆಪಿ ದಲಿತ ವಿರೋಧಿ ಎಂದು ದೂರುವ ಕಾರ್ಯವನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಯಶಸ್ವಿಯಾಗಿ ಮಾಡಿವೆ ಪ್ರತಿಪಕ್ಷಗಳು. ಉನಾ ಘಟನೆಯಲ್ಲಿ ಸಹ ಎಫ್ ಐ ಆರ್ ದಾಖಲು, ಆರೋಪಿಗಳ ಬಂಧನಗಳೆಲ್ಲ ಆಗಿವೆ. ಸಂತ್ರಸ್ತರ ಮನೆಗೆ ಮುಖ್ಯಮಂತ್ರಿ ಭೇಟಿಯಾಗಿದೆ.

ದಯಾಶಂಕರ್ ಹೇಳಿಕೆಗೆ ಪಕ್ಷ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳುವುದು ಹಾಗೂ ಉನಾ ಘಟನೆಯಲ್ಲಿ ಆರೋಪಿಗಳನ್ನು ನ್ಯಾಯದ ಕಟಕಟೆಗೆ ತರುವುದಲ್ಲದೇ, ನೈತಿಕ ಪೊಲೀಸ್’ಗಿರಿಗೆ ತೊಡಗಿರುವವರ ನಿಯಂತ್ರಣವಾಗಬೇಕು ಎಂದು ಒತ್ತಾಯಿಸುವುದು ಅಪೇಕ್ಷಣೀಯವೇ. ಒಂದೊಮ್ಮೆ ಈ ಎರಡೂ ಪ್ರಕರಣಗಳಲ್ಲಿ ಬಿಜೆಪಿ ಸರ್ಕಾರಗಳು ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂದೆ-ಮುಂದೆ ನೋಡಿದ್ದರೆ ಆಗ ಬೀದಿಗಿಳಿಯುವುದಕ್ಕೆ ಕಾರಣವೂ ಇರುತ್ತಿತ್ತು.

ಹೀಗಾಗಿ, ಒಂದು ಹಂತದ ನಂತರ ನಡೆಯುತ್ತಿರುವ ಹಾರಾಟ- ಚೀರಾಟಗಳೆಲ್ಲ ಯಾವುದೇ ದಲಿತ ಕಾಳಜಿಗೆ ಹೊರತಾದ ಹಾರಾಟ-ಚೀರಾಟಗಳಷ್ಟೆ ಎಂಬುದನ್ನೂ ದಾಖಲಿಸಬೇಕಾಗಿದೆ.

ಬಹುಜನ ಸಮಾಜ ಪಕ್ಷದ ಚಂಡೀಗಢ ವಿಭಾಗದ ಮುಖ್ಯಸ್ಥೆ ಜನ್ನತ್ ಜಹಾನ್, ‘ದಯಾಶಂಕರ್ ನಾಲಿಗೆ ತಂದುಕೊಡುವವರಿಗೆ 50 ಲಕ್ಷ ರುಪಾಯಿಗಳ ಇನಾಮು’ ಅಂತ ಘೋಷಿಸಿದ್ದಾರೆ. ಸಂವಿಧಾನ- ಕಾನೂನು ಪಾಲನೆ ಎಂದೆಲ್ಲ ಮಾತನಾಡುವವರು ಇದನ್ನೂ ಅಷ್ಟೇ ಕಟುವಾಗಿ ಟೀಕಿಸಬೇಕಲ್ಲವೇ? ಇಲ್ಲ.. ಇಲ್ಲಿ ಮಾತ್ರ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಸಮಜಾಯಿಷಿ ಹುಡುಕಿಕೊಂಡು ಜನ್ನತ್ ಜಹಾನ್ ಹೇಳಿಕೆಯ ವಿದ್ಯಮಾನವನ್ನು ಹಗುರಗೊಳಿಸಿಬಿಡುತ್ತಾರೆ. ದಯಾಶಂಕರ್ ವಿರುದ್ಧ ಕಾನೂನು ತನ್ನ ಕೆಲಸ ಮಾಡುತ್ತಿರುವಾಗ ನಾಲಗೆ ಕತ್ತರಿಸುವ ಹೇಳಿಕೆ ನೀಡುವವರದ್ದೂ ಶಾಂತಿಭಂಗದ ಯತ್ನವೇ ಅಲ್ಲವೇ? ಈಕೆಯ ವಿರುದ್ಧವೂ ಮೊಕದ್ದಮೆ ದಾಖಲಾಗಬೇಕಲ್ಲವೇ?

‘ಬಿಜೆಪಿ ಕಾಂಗ್ರೆಸ್ ಗಳೆಲ್ಲವೂ ದಲಿತರ ವಿಷಯದಲ್ಲಿ ರಾಜಕೀಯ ಮಾಡುತ್ತವೆ. ದಲಿತರ ಸಮಸ್ಯೆಯನ್ನು ರಾಜಕೀಯದಿಂದ ಹೊರತಾಗಿ ನೋಡಬೇಕು’ ಎಂದು ಸಂಸತ್ತಿನಲ್ಲಿ ಹೇಳಿದ ಮಾಯಾವತಿಯವರು ತಾವು ಮಾತ್ರ ರಾಜಕೀಯದಿಂದ ಮೇಲೇರಲಿಲ್ಲ. ಎಫ್ ಐ ಆರ್ ದಾಖಲಾಗಿರುವುದರಿಂದ, ಕಾನೂನಾತ್ಮಕವಾಗಿಯೇ ದಯಾಶಂಕರ್ ಬಂಧನಕ್ಕೆ ಒತ್ತಾಯಿಸುತ್ತೇನೆ ಹಾಗೂ ಈ ವಿಷಯದಲ್ಲಿ ರಾಜಕೀಯ ಹೋರಾಟ ಬೇಡ ಎಂದು ಹೇಳುವ ದೊಡ್ಡತನವನ್ನೇನೂ ಮಾಯಾವತಿ ತೋರಲಿಲ್ಲ. ಸಂಸತ್ತಿನ ಹೊರಗೆ ಸಹ ಅವರು, ‘ಹೇಳಿಕೆಯಿಂದ ಜನರು ಆಕ್ರೋಶಗೊಂಡಿದ್ದಾರೆ. ಏಕೆಂದರೆ ಮಾಯಾವತಿ ಕೇವಲ ಬೆಹನ್ಜಿ(ಸಹೋದರಿ) ಅಲ್ಲ, ಶಕ್ತಿಹೀನ ಸಮುದಾಯದವರು ನನ್ನನ್ನು ದೇವತೆಯ ಸ್ಥಾನದಲ್ಲಿ ನೋಡುತ್ತಾರೆ’ ಅಂತ ಘೋಷಿಸಿಕೊಂಡರು. ಅಲ್ಲಿಗೆ, ದಲಿತರ ವಿಷಯದಲ್ಲಿ ಮತ್ಯಾರೂ ರಾಜಕೀಯ ಮಾಡಬೇಡಿ, ನಾವಷ್ಟೇ ಮಾಡುತ್ತೇವೆ ಎಂದು ಹೇಳಿದಂತಾಯಿತು.

ಇಲ್ಲಿ ಯಾರೂ ಪ್ರಶ್ನಿಸಿದ ಇನ್ನೊಂದು ಸಂಗತಿ ಇದೆ. ದಯಾಶಂಕರ್ ಮಾತುಗಳು ಅತ್ಯಂತ ಹೀನಶಬ್ದದಿಂದ ಕೂಡಿದ್ದು ಹಾಗೂ ಖಂಡನಾರ್ಹ ಎಂಬುದರಲ್ಲಿ ಎರಡು ಮಾತೇ ಇಲ್ಲ. ಮಹಿಳೆಯ ಗೌರವಕ್ಕೆ ಧಕ್ಕೆ ತರುವ, ಶಾಂತಿಭಂಗದ ಉದ್ದೇಶಗಳೆಲ್ಲ ಅವರ ಮಾತಿನಲ್ಲಿವೆ ಎಂದು ಹೇಳಬಹುದು. ಆ ನಿಟ್ಟಿನಲ್ಲಿ ಕಟಕಟೆಯಲ್ಲಿ ನಿಲ್ಲಬೇಕಿರುವುದು ಯೋಗ್ಯವೇ ಆಗಿದೆ. ಆದರೆ ದಯಾಶಂಕರ್ ಹೇಳಿಕೆಗಳಲ್ಲಿ ‘ಮಾಯಾವತಿ ಇಂಥ ಜಾತಿಯವರಾಗಿರುವುದರಿಂದ ಹೀಗೆ’ ಅಂತ ನಿಂದಿಸಲಾಗಿದೆಯೇ? ಟಿಕೆಟ್ ಗಳನ್ನು ದುಡ್ಡಿದ್ದವರಿಗೆ ಮಾಯಾವತಿ ಹಂಚುತ್ತಾರೆ ಎಂದು ಆರೋಪಿಸುತ್ತ ಅತಿಕೆಟ್ಟ ಶಬ್ದಗಳನ್ನು ಬಳಸಿರುವುದರಲ್ಲಿ ಅನುಮಾನವಿಲ್ಲ. ಆದರೆ ಜಾತಿಯನ್ನು ಎಳೆತಂದು ನಿಂದಿಸಿರುವ ಸಾಕ್ಷ್ಯವೇನೂ ಸಿಗುತ್ತಿಲ್ಲ. ಹೀಗಿರುವಾಗ, ಉಳಿದೆಲ್ಲ ಪ್ರಕರಣಗಳ ಅಡಿಯಲ್ಲಿ ಕೇಸು ದಾಖಲಿಸಿದ್ದೇನೋ ಸರಿ. ಆದರೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹೇಗೆ ಎಂಬುದೊಂದು ಜಿಜ್ಞಾಸೆ.

ಬಿಎಸ್ಪಿಯ ಶಾಸಕಿ ಉಷಾ ಚೌಧುರಿ ನೀಡಿದ ಪ್ರತಿಕ್ರಿಯೆ- ‘ಈ ದಯಾಶಂಕರ್ ವಂಶವಾಹಿಯಲ್ಲೇ ಏನೋ ದೋಷವಿದೆ. ಖುದ್ದು ಈ ಮನುಷ್ಯನೇ ಅಕ್ರಮ ಸಂತಾನವಿರಬಹುದು’ ಎಂದರು! ವೇಶ್ಯೆಗೆ ಹೋಲಿಸಿದ ಬಿಜೆಪಿಗನ ಹೇಳಿಕೆಗಿಂತ ಇದು ಹೇಗೆ ಭಿನ್ನವಾಗಿದೆ ಹೇಳಿ?

ಗುಜರಾತಿನ ಉನಾ ಘಟನೆಗೆ ಬರುವುದಾದರೆ ಇಲ್ಲಿ ಸತ್ತ ದನದ ಚರ್ಮ ತೆಗೆದುಕೊಳ್ಳುವವರನ್ನು ವಾಹನಕ್ಕೆ ಕಟ್ಟಿ ಬೆತ್ತಲೆ ಬೆನ್ನಿಗೆ ಬಾರಿಸಿದ ಗೋ ರಕ್ಷಕರು ಜೈಲಿನಲ್ಲಿರಬೇಕಾದವರು ಎಂಬ ಬಗ್ಗೆ ಅನುಮಾನಗಳೇ ಬೇಡ. ಆದರೆ ಇಡೀ ಚರ್ಚೆಯಲ್ಲಿ, ಗುಜರಾತಿನಲ್ಲೊಂದು ಬಿಜೆಪಿ ಸರ್ಕಾರವಿದೆ ಹಾಗೂ ಅದಕ್ಕಾಗಿಯೇ ಈ ಘಟನೆ ನಡೆದಿದೆ ಎಂಬ ಪ್ರತಿಪಾದನೆ ಬಿಟ್ಟರೆ ಮತ್ಯಾವ ಧ್ವನಿಗಳೂ ಏಕೆ ಕೇಳುತ್ತಿಲ್ಲ? ಆರೆಸ್ಸೆಸ್ ಸಹ ಉನಾ ಘಟನೆಯನ್ನು ಖಂಡಿಸಿದೆಯಲ್ಲದೇ, ಗೋವಿನ ಹೆಸರಲ್ಲಿ ದಲಿತರನ್ನು ಶೋಷಿಸುವವರನ್ನು ಸಹಿಸಬಾರದು ಎಂದೂ ಹೇಳಿದೆ. ಕೆಲ ತಿಂಗಳ ಹಿಂದೆ ದಲಿತರಿಗೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಬಿಜೆಪಿಯ ತರುಣ್ ವಿಜಯ್ ಮೇಲೆ ಸವರ್ಣೀಯರಿಂದ ಗಂಭೀರ ದಾಳಿಯಾಗಿ ಅವರು ಆಸ್ಪತ್ರೆ ಸೇರಿದರು. ಆಗ ಅದೊಂದು ದಲಿತ ವಿಚಾರ ಅಂತ ರಾಜಕೀಯ ಪಕ್ಷಗಳಿಗೆ ಅನಿಸಲಿಲ್ಲ. ಏಕೆಂದರೆ ಏಟು ತಿಂದ ಜಾಗದಲ್ಲಿ ಬಿಜೆಪಿ-ಆರೆಸ್ಸೆಸ್ ಮನುಷ್ಯ ಇದ್ದಿದ್ದರಿಂದ ಅದರ ಲಾಭ ಸಿಗದು ಎಂಬ ಲೆಕ್ಕಾಚಾರ.

ಉನಾದಲ್ಲಿ ಗೋ ರಕ್ಷಣೆ ಹೆಸರಲ್ಲಿ ಗೂಂಡಾಗಿರಿ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬಷ್ಟೇ ಮುಖ್ಯವಾಗಿ ನಿಜವಾದ ದಲಿತ ಕಾಳಜಿ ಇನ್ನೊಂದಿದೆ. ಅದೆಂದರೆ- ಹೀಗೆ ಜಾತಿಯೊಂದಿಗೆ ಬೆಸೆದುಕೊಂಡಿರುವ ಚರ್ಮದ ಕೆಲಸವನ್ನು ಬಿಟ್ಟು ನಿಮ್ಮನ್ನು ಅವಮಾನಿಸುತ್ತಿರುವ ಸಮಾಜಕ್ಕೆ ಸವಾಲು ಹಾಕಿ ಎಂಬ ಸ್ವಾಭಿಮಾನದ ಕರೆಯನ್ನು ಒಬ್ಬನೇ ಒಬ್ಬ ರಾಜಕಾರಣಿಯೂ ಕೊಡಲಿಲ್ಲ!

ವಾಸ್ತವದಲ್ಲಿ ನಿಜವಾದ ಅಂಬೇಡ್ಕರವಾದಿಗೆ ಈ ಅಂಶವೇ ಮೊದಲು ಹೊಳೆಯಬೇಕು. ಏಕೆಂದರೆ ಜಾತಿಯೊಂದಿಗೆ ಬೆಸೆದುಕೊಂಡಿರು ಗೌರವವಿಲ್ಲದ ಕೆಲಸವನ್ನು, ಅದು ಹಣ ಒದಗಿಸುತ್ತಿದ್ದರೂ ಬಿಟ್ಟುಬಿಡಿ ಎಂಬುದು ಅಂಬೇಡ್ಕರರ ನಿಷ್ಠುರ ನಿಲುವಾಗಿತ್ತು. ಪತ್ರಕರ್ತನೊಬ್ಬ ಅಂಬೇಡ್ಕರರೊಂದಿಗೆ ಮಾತನಾಡುತ್ತ, ‘ನೀವೇನೋ ಹೀಗೆ ಹೇಳುತ್ತೀರಿ. ಆದರೆ ಅಂಥ ವೃತ್ತಿ ತೊರೆಯುವುದರಿಂದ ಅವರ ದುಡಿಮೆಗೆ ಹೊಡೆತ ಬೀಳುವುದಿಲ್ಲವೇ’ ಎಂದು ಪ್ರಶ್ನಿಸಿದಾಗ ಅವರು ಹೇಳಿದ್ದರು- ‘ಆತ್ಮಸಮ್ಮಾನವಿಲ್ಲದ ಜಾಗದಲ್ಲಿ ಆರ್ಥಿಕತೆ ಇದ್ದರೆ ಪ್ರಯೋಜನವಿಲ್ಲ. ನೀವೀಗ ಪತ್ರಕರ್ತರಾಗಿ ಗಳಿಸುತ್ತಿರುವುದಕ್ಕೆ ಎರಡು ಪಟ್ಟು ಹಣವನ್ನು ನಿಮಗೆ ಕೊಡಿಸುತ್ತೇನೆ. ನೀವು ದನಗಳ ಕಳೆಬರ ಎತ್ತುವ ಕೆಲಸ ಮಾಡುತ್ತೀರಾ?’ ಅಂತ ಕೇಳಿ ಪತ್ರಕರ್ತನನ್ನು ನಿರುತ್ತರನನ್ನಾಗಿಸಿದ್ದರು ಡಾ. ಬಿ. ಆರ್. ಅಂಬೇಡ್ಕರ್.

ದಲಿತ ಕಾಳಜಿ, ದಲಿತರ ಪರ ಆಕ್ರೋಶ ಪ್ರದರ್ಶಿಸಿದ ಒಬ್ಬೇ ಒಬ್ಬ ರಾಜಕಾರಣಿ ಇವತ್ತು ಉನಾದ ವಿದ್ಯಮಾನದ ನಡುವೆ ನಿಂತು, ‘ಕಷ್ಟವಾದರೂ ಪರವಾಗಿಲ್ಲ. ಆ ಕೆಲಸ ಬಿಟ್ಟುಬನ್ನಿ’ ಅಂತ ಹೇಳುವ ಛಾತಿ ತೋರಿದರಾ?

ಇಲ್ಲ… ಅಂಬೇಡ್ಕರ್, ದಲಿತವಾದ ಎಂಬುದೆಲ್ಲ ಬಳಸಿಕೊಳ್ಳುವ ಹೆಸರಾಗಿದೆ. ದಲಿತರು ಅದೇ ಸ್ಥಿತಿಯಲ್ಲಿದ್ದು ಅವರ ಅಸರುಕ್ಷತೆಯನ್ನು ಮತಗಳಿಗೆ ಬಳಸಿಕೊಳ್ಳೋಣ ಎಂಬ ಯೋಚನೆಯೇ ದಟ್ಟವಾಗಿದೆ.

ಇವೆಲ್ಲದರ ನಡುವೆ ಉನ್ನಾದ ದಲಿತ ವರ್ಗ ಮಾತ್ರ ‘ಇನ್ನು ಮುಂದೆ ಈ ಕೆಲಸ ನಾವು ಮಾಡುವುದಿಲ್ಲ. ಸತ್ತ ದನಗಳನ್ನು ನೀವೇ ದಫನ್ ಮಾಡಿಕೊಳ್ಳಿ’ ಎಂದಿರುವ ವರದಿಗಳಿವೆ. ಶಹಭಾಸ್! ಇದುವೇ ಮುಂದುವರಿಯಬೇಕಾದ ಮಾರ್ಗ. ಗೋರಕ್ಷಣೆ ಹೆಸರಲ್ಲಿ ಗೂಂಡಾಗಿರಿ ನಡೆಸಿಕೊಂಡವರು ಆ ಕೆಲಸ ಮಾಡಿ ತಮ್ಮ ಗೋ ಭಕ್ತಿ ಸಾಬೀತುಪಡಿಸಲಿ.

Leave a Reply