ಮಾರುಕಟ್ಟೆ ತಂತ್ರಗಾರಿಕೆಯ ‘ಕಬಾಲಿ’ ಹವಾಕ್ಕೆ ಕನ್ನಡ ಚಿತ್ರರಂಗವೇಕೆ ತತ್ತರಿಸ ಬೇಕು?

author-ssreedhra-murthyಇಂದು ಬಿಡುಗಡೆ ಆಗಿರುವ ರಜನೀಕಾಂತ್ ಅವರ ‘ಕಬಾಲಿ’ಚಿತ್ರ ಎಬ್ಬಿಸಿರುವ ಹವಾದ ಕುರಿತು ವರ್ಣರಂಜಿತ ಸುದ್ದಿಗಳು ಕಳೆದ ಕೆಲವು ದಿನಗಳಿಂದಲೂ ಕೇಳಿ ಬರುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಕಳೆದ ಕೆಲವು ದಿನಗಳಿಂದ ‘ಕಬಾಲಿ’ಯದೇ ಸುದ್ದಿ. ಸಿನಿಮಾ ಮಾರುಕಟ್ಟೆಯ ತಂತ್ರಗಳನ್ನು ಚೆನ್ನಾಗಿಯೇ  ಬಲ್ಲ ರಜನೀಕಾಂತ್ ಅವರ ಹಿಂದಿನ ಚಿತ್ರಗಳ ಕುರಿತೂ ಇಂತಹದೇ ಸುದ್ದಿಗಳು ಬಂದಿದ್ದವು. ಇಂತಹ ಹವಾ ಸೃಷ್ಟಿ ಮಾಡಲು ಕಾರ್ಪೋರೇಟ್ ವ್ಯವಸ್ಥೆಯೇ ಇದೆ ಎನ್ನುವುದೇನು ಈಗ ರಹಸ್ಯವಾಗಿ ಉಳಿದಿಲ್ಲ. ಹಾಗೇ ರಜನಿಕಾಂತ್ ಅವರ  ಹಿಂದಿನ ಚಿತ್ರಗಳಾದ ‘ಕೊಚಾಡಿಯನ್‍’, ‘ಲಿಂಗ’ ನಿರೀಕ್ಷೆಯಷ್ಟು ಗೆಲುವನ್ನು ಪಡೆಯಲಿಲ್ಲ ಎನ್ನುವುದು ಇದು  ಕೃತಕವಾಗಿ ಸೃಷ್ಟಿಯಾದ ಹವಾ ಎನ್ನುವುದಕ್ಕೆ ಸಾಕ್ಷಿಯಾಗಿದೆ .ಅಷ್ಟೇ ಅಲ್ಲ ‘ಬಾಬಾ’ ಗಲ್ಲಾ ಪೆಟ್ಟಿಗೆಯಲ್ಲಿ ಮುಗ್ಗರಿಸಿ ಬಿದ್ದ ಉದಾಹರಣೆ ಕೂಡ ಇದೆ. ‘ಕಬಾಲಿ’ಯ ನಿಜವಾದ ಸಾಧನೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಈ ಕೃತಕ ಹವಾಕ್ಕೆ ಕನ್ನಡ ಚಿತ್ರರಂಗ ತತ್ತರಿಸಿರುವುದಂತೂ  ನಿಜವೇ! ಬಹುತೇಕ ಕನ್ನಡ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿದ್ದರೆ ವಿತರಣಾ ವ್ಯವಸ್ಥೆಯಂತೂ  ಅಸ್ತವ್ಯಸ್ತವಾಗಿದೆ.

ಮೊದಲಿಗೆ  ಹವಾಕ್ಕೆ ಕಾರಣ  ರಜನೀಕಾಂತ್ ಕನ್ನಡಿಗರು. ಬಸ್‍ ಕಂಡೆಕ್ಟರ್‍ ಆಗಿ ಕಾರ್ಪೆಂಟರ್ ಆಗಿ ಕೂಲಿಯಾಗಿ ಬೆಂಗಳೂರಿನಲ್ಲಿ ಕಷ್ಟದ ದಿನಗಳನ್ನು ಕಳೆದವರು ಈಗ ಸೂಪರ್ ಸ್ಟಾರ್ ಆಗಿದ್ದಾರೆ ಈ ಕುರಿತು ನಾವು ಹೆಮ್ಮೆ ಪಡಬೇಕು ಎನ್ನುವ ಭಾವನಾತ್ಮಕ ವಾದವನ್ನು ಮಂಡಿಸುವವರಿದ್ದಾರೆ. ಕರ್ನಾಟಕದಿಂದ ತಮಿಳುನಾಡಿಗೆ ಹೋಗಿ ಸೂಪರ್ ಸ್ಟಾರ್ ಆದ ಮೊದಲ ಕನ್ನಡಿಗರು ಹೊನ್ನಪ್ಪ ಭಾಗವತರ್,  ಅವರು ಅಭಿನಯಿಸಿದ ‘ಅರುಂಧತಿ’ ‘ವಾಲ್ಮೀಕಿ’ ‘ಕುಂಡಲಕೇಶಿ’ ‘ಭಕ್ತ ಜನ’ ಮೊದಲಾದ ತಮಿಳು ಚಿತ್ರಗಳು ಇಂದಿಗೂ ಮೈಲಿಗಲ್ಲುಗಳು ಎಂದು ಪರಿಗಣಿತವಾಗಿವೆ. 1940-50ರ ದಶಕದಲ್ಲೇ ಐವತ್ತು ಸಾವಿರ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದ ಸೂಪರ್ ಸ್ಟಾರ್ ಅವರು. ಆದರೆ ತಮಿಳು ಚಿತ್ರರಂಗ ಅಷ್ಟೆಲ್ಲಾ ಯಶಸ್ಸು ಕೀರ್ತಿ ತಂದು ಕೊಟ್ಟಿದ್ದರೂ ಅವರ ಮನಸ್ಸು ಮಿಡಿದಿದ್ದು ಕನ್ನಡ ಚಿತ್ರರಂಗಕ್ಕಾಗಿ. ಎರಡು ಬಿಗ್ ಬಜೆಟ್ ತಮಿಳು ಚಿತ್ರಗಳನ್ನು ಬಿಟ್ಟು ‘ಸುಭದ್ರ’ಎನ್ನುವ ಕನ್ನಡ ಚಿತ್ರದಲ್ಲಿ ಅವರು ಅಭಿನಯಿಸಿದ್ದರು. ‘ಗೋರಾ ಕುಂಬಾರ’ ಮಹಾಕವಿ ಕಾಳಿದಾಸ’ ಕನ್ನಡ ಚಿತ್ರಗಳನ್ನು ನಿರ್ಮಿಸಿದರು. ಬಹಳ ಮುಖ್ಯವಾಗಿ ಡಬ್ಬಿಂಗ್ ಚಳುವಳಿಯಲ್ಲಿ ಕನ್ನಡಿಗರ ಪರವಾಗಿ ಹೋರಾಡಿದ್ದರು.ಆದರೆ ಇಂತಹ ಒಂದೇ ಒಂದು ಉದಾಹರಣೆಯನ್ನು ರಜನೀಕಾಂತ್ ಬಗ್ಗೆ ನೀಡಲು ಸಾಧ್ಯವೆ? ಕಾವೇರಿ ವಿವಾದದಲ್ಲಿ ಸ್ಪಷ್ಟವಾಗಿಯೇ ಅವರು ತಮಿಳುನಾಡಿನ ಪರವಾದ ನಿಲುವನ್ನು ತೆಗೆದುಕೊಂಡಿದ್ದನ್ನು ಮರೆಯ ಬಹುದೆ?

ಕನ್ನಡ ಚಿತ್ರಗಳಿಗೆ 2-3 ಚಿತ್ರಮಂದಿರಗಳು ದೊರಕುವುದು ಕಷ್ಟವಾಗುತ್ತಿರುವ ಕಾಲದಲ್ಲಿ ‘ಕಬಾಲಿ’ ಕರ್ನಾಟಕದ 250 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಇಲ್ಲಿ ಕೂಡ ಟಿಕೇಟ್ ದರ ರೂ ಐದುನೂರು ರೂಪಾಯಿಗಳ ಸುತ್ತಮುತ್ತಲೇ ಇದೆ. ವಿಚಿತ್ರವೆಂದರೆ ತಮಿಳಿನಾಡಿನಲ್ಲಿ  ಸಿನಿಮಾ ಟಿಕೇಟ್ ದರ ರೂ 120ರ ಒಳಗಿರಬೇಕು ಎನ್ನುವ ನಿಯಮವಿದೆ. ಬುಕ್‍ ಮೈ ಶೋ ಪ್ರಕಾರ ಬೆಂಗಳೂರಿನ ಮಲ್ಟಿಪ್ಲಕ್ಸ್‍ಗಳಲ್ಲಿ ಪ್ಲಾಟಿನಮ್ ಟಿಕೇಟ್ ದರ ರೂ 500, ಗೋಲ್ಡ್ ರೂ 450 ಮತ್ತು ಸಿಲ್ವರ್ ರೂ 400 ಆಗಿದೆ. ಸಿಂಗಲ್‍ ಸ್ಕೀನ್‍ನಲ್ಲಿ ಕೂಡ ಊರ್ವಶಿ, ರೆಕ್ಸ್ ಗಳಲ್ಲಿ ಬಾಲ್ಕನಿ ದರ ರೂ 500 ಆದರೆ ಮಿಡ್ಲ್ ‍ಕ್ಲಾಸ್ ದರ ರೂ 300 ಆಗಿದೆ. ಅಷ್ಟೇ ಅಲ್ಲ ವಿಶೇಷತೆ ಕಾರಣ ನೀಡಿ ಆರು ಪ್ರದರ್ಶನಗಳನ್ನು ನಡೆಸಲಾಗುತ್ತಿದೆ.  ಕರ್ನಾಟಕದಲ್ಲಿ ಇದನ್ನು ನಿಯಂತ್ರಿಸಲು ಯಾವ ಕಾನೂನು ಕೂಡ ಇಲ್ಲ. ಅಷ್ಟಕ್ಕೂ ಈ ಬೆಲೆ ಏರಿಕೆಗೆ ಕಾರಣ ವಿತರಕರಲ್ಲಿ ಆಗಿರುವ ಕೈ ಬದಲಾವಣೆ ಎನ್ನುತ್ತದೆ ಚಿತ್ರರಂಗದ ಮೂಲಗಳು. ‘ಕಬಾಲಿ ‘ ಚಿತ್ರದ ಹಕ್ಕನ್ನು 10.5 ಕೋಟಿ ರೂಪಾಯಿಗಳಿಗೆ ಮೊದಲು ಕೊಂಡವರು ರಾಕ್‍ಲೈನ್ ವೆಂಕಟೇಶ್ ಅವರು ಅದನ್ನು 12.5 ಕೋಟಿ ರೂಪಾಯಿಗಳಿಗೆ ಗೋಕುಲ್‍ ರಾಜ್ ಫಿಲಂಸ್‍ಗೆ ಮಾರಿದರು ಅಲ್ಲಿಂದ 18 ಕೋಟಿ ರೂಪಾಯಿಗಳಿಗೆ ವಲಯವಾರು ಆರು ಜನ ವಿತರಕರಿಗೆ ಹಕ್ಕುಗಳು ಮಾರಾಟವಾದವು. ಈ ಬದಲಾವಣೆ ಹಣ ಗಳಿಕೆಗೆ ‘ಹವಾ’ದ ಉತ್ಪ್ರೇಕ್ಷೆಯನ್ನು ಬಳಸಿಕೊಳ್ಳಲಾಗಿದೆ ಎನ್ನುತ್ತವೆ ಮೂಲಗಳು. ಕನ್ನಡ ಚಿತ್ರರಂಗದ ಮೇಲೆ ನಡೆಯುತ್ತಿರುವ ಪರಭಾಷಾ ಚಿತ್ರಗಳ ಸವಾರಿ ಎಂತಹದು ಎನ್ನುವುದಕ್ಕ ಇದೇ ದೊಡ್ಡ ಉದಾಹರಣೆ ಎನ್ನಬಹುದು.

‘ಬಾಹುಬಲಿ’ ವಿಚಾರದಲ್ಲಿ ಕೂಡ ಇಂತಹ ಒಳಗುಟ್ಟುಗಳೇ ಕೆಲಸ ಮಾಡಿದ್ದವು. ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನದ ಹಕ್ಕುಗಳನ್ನು ಪಡೆದ ‘ಲಹರಿ ಸಂಸ್ಥೆ’ಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಂಚತಾರಾ ಹೋಟಲ್‍ಗಳಲ್ಲಿ ರೂ 1250ಕ್ಕೆ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಿದ್ದರು. ಸಿನಿಮಟೋಗ್ರಫಿ ಕಾಯಿದೆ 1960ರ ತಿದ್ದಪಡಿ 58ನೇ ವಿಧಿ ಮತ್ತು ಕರ್ನಾಟಕ ಸಿನಿಮಾಸ್ ರೆಗ್ಯುಲೇಷನ್ ಆಕ್ಟ್‍ 2014ರ ವಿಧಿ 18ರಂತೆ ಅಂಗೀಕೃತ ಚಿತ್ರಮಂದಿರಕ್ಕಿಂತಲೂ ಭಿನ್ನವಾದ ಸ್ಥಳದಲ್ಲಿ ಚಿತ್ರ ಬಿಡುಗಡೆಗೆ ಅವಕಾಶವೇ ಇಲ್ಲ. ವಿಶೇಷ ಸಂದರ್ಭದಲ್ಲಿ ಕೂಡ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ.  ಈ ‍ಸ್ಪಷ್ಟ ನಿಯಮವನ್ನು ಉಲ್ಲಂಘಿಸುವ ಉತ್ಸಾಹವನ್ನು ‘ಲಹರಿ ಸಂಸ್ಥೆ’ಯವರು ತೋರಿದ್ದಕ್ಕೆ ಕಾರಣ ನಿಗೂಢವಾಗಿದೆ. ಈಗ ಚಲನಚಿತ್ರ ವಾಣಿಜ್ಯ ಮಂಡಳಿಯ ಮಧ್ಯಪ್ರವೇಶದಿಂದ  ಪ್ರಯತ್ನಕ್ಕೆ ತೆರೆ ಬಿದ್ದಿದ್ದರೂ ಹೊಸ ಸಾಧ್ಯತೆ,  ಚರ್ಚೆಯನ್ನು ಹುಟ್ಟು ಹಾಕಿರುವುದಂತೂ ನಿಜ.

ಇದರ ಜೊತೆಗೆ ತಮಿಳು ಮತದಾರರನ್ನು ಓಲೈಸಿಕೊಳ್ಳುವ ಉದ್ದೇಶದಿಂದ ರಾಜ್ಯದ ರಾಜಕಾರಣಿಗಳೂ ‘ಕಬಾಲಿ’ಯ ಹವಾಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಒಟ್ಟಿನಲ್ಲಿ ‘ಕಬಾಲಿ’ಯ ಹವಾ ಮಾರುಕಟ್ಟೆಯ ತಂತ್ರಗಾರಿಕೆಯಿಂದ ಸೃಷ್ಟಿಯಾಗಿರುವುದಂತೂ ನಿಜ. ಇದನ್ನು ಮಾರುಕಟ್ಟೆಯ ತಂತ್ರಗಳಿಂದಲೇ ಕನ್ನಡ ಚಿತ್ರರಂಗ ಎದುರಿಸ ಬೇಕು. ಕೇವಲ ಭಾವನಾತ್ಮಕ ಸಂಗತಿಗಳಿಂದ ಇಂತಹ ಸವಾಲುಗಳನ್ನು ಜಾಗತೀಕರಣದ ಇಂದಿನ ದಿನಗಳಲ್ಲಿ ಎದುರಿಸುವುದು ಕಷ್ಟ ಎನ್ನುವುದನ್ನು ಅರಿತರೆ ಮುಂದೆ ‘ಕಬಾಲಿ’ಯಂತಹ ಹವಾ ಸೃಷ್ಟಿಯಾದರೆ ಕನ್ನಡ ಚಿತ್ರರಂಗ ತತ್ತರಿಸ ಬೇಕಾಗುವುದಿಲ್ಲ.

Leave a Reply