50 ಸಾವಿರ ಲೀಟರ್… ರಜನೀ ಕಟೌಟಿಗೆ ಸುರಿದು ಹಾಳಾಗುವ ಹಾಲಿನ ಅಂದಾಜು

 

ಡಿಜಿಟಲ್ ಕನ್ನಡ ಟೀಮ್:

ರಜನಿಕಾಂತರ ಕಬಾಲಿ ಮೇನಿಯಾ ಮತ್ತು ಅದರ ಸುತ್ತ ಬೆಸೆದುಕೊಂಡಿರುವ ಮಾರುಕಟ್ಟೆ ಮಾಧ್ಯಮಕ್ಕೆ ಇನ್ನೊಂದು ವಾರಕ್ಕಾದರೂ ಆಗುವಷ್ಟು ಸರಕು ನೀಡುವುದರಲ್ಲಿ ಅನುಮಾನವಿಲ್ಲ. ಅಭಿಮಾನಿಗಳ ಅನನ್ಯ ಬೆಂಬಲ ಹಾಗೂ ಗಲ್ಲಾಪೆಟ್ಟಿಗೆಯ ಗರಿಗರಿ ಸಮಾಚಾರಗಳ ನಡುವೆ ಕಬಾಲಿಗೆ ಜೈ ಎನ್ನದವರೇ ಪಾಪಿಗಳು ಎಂಬ ಸ್ಥಿತಿ ಇದೆ.

ರಜನೀಕಾಂತ್ ತೆರೆಯಲ್ಲಿ ಹೇಗೆ ಮಿನುಗಿದರೂ ನಿಜ ಜೀವನದಲ್ಲಿ ಒಬ್ಬ ಸರಳಜೀವಿಯಾಗಿಯೇ ಸಮಾಜದಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಏನೆಲ್ಲ ಅವತಾರ- ಸ್ಟೈಲುಗಳಲ್ಲಿ ರಾರಾಜಿಸುವ ರಜನಿ, ಸಾದಾ ದಿನಗಳಲ್ಲಿ ಬಿಳಿ ಪಂಚೆ, ಶುಭ್ರ ಸಾಮಾನ್ಯ ಅಂಗಿ, ಮೆಕಪ್ಪಿಗೆ ಕಾತರಿಸದ ಮುಖ, ವಿಗ್ಗಿಗಾಗಿ ಬೇಡಿಕೆ ಇಡದ ತಲೆ ಇಂಥ ನಡೆಯಿಂದಲೇ ಆಪ್ತರು.

ಆದರೆ…

ಇವರ ಚಿತ್ರ ಬಿಡುಗಡೆ ಆದಾಗ ಮಾತ್ರ ಅಭಿಮಾನದ ಭರದಲ್ಲಿ ಜನ ಸರಳತೆಯನ್ನು ಗಾಳಿಗೆ ತೂರುವುದೊಂದು ವೈಚಿತ್ರ್ಯ. ಹೀಗೆಂದೇ, ಕಬಾಲಿ ಬಿಡುಗಡೆಗೆ ಸ್ವಲ್ಪ ದಿನ ಮೊದಲು ತಮಿಳುನಾಡಿನ ಹಾಲು ಮಾರಾಟದ ನೌಕರರ ಕಲ್ಯಾಣ ಒಕ್ಕೂಟವು ರಜನೀ ಅಭಿಮಾನಿಗಳಲ್ಲಿ ಒಂದು ವಿನಂತಿ ಮಾಡಿಕೊಂಡಿತ್ತು. ‘ದಯವಿಟ್ಟು ರಜನೀಕಾಂತರ ಕಟೌಟ್’ಗೆ ಹಾಲಿನ ಅಭಿಷೇಕ ಮಾಡುವುದನ್ನು ಬಿಟ್ಟುಬಿಡಿ’ ಅಂತ. ಏನೋ ಒಂದೆರಡು ಪ್ಯಾಕೆಟ್ ಹಾಲು ಸುರಿದು ಖುಷಿಪಟ್ಟರೆ ಇವರೇಕೆ ಅಪಸ್ವರ ಎತ್ತುತ್ತಾರೆ ಅಂದಿರಾ? ಉಹುಂ.. ವಿಷಯ ಅಷ್ಟು ಸರಳವಿಲ್ಲ. ಪ್ರತಿಬಾರಿ ರಜನೀಕಾಂತ್ ಸಿನಿಮಾದ ಫಸ್ಟ್ ಡೆ ಫಸ್ಟ್ ಶೊ ಸಂಭ್ರಮಕ್ಕೆ ಅವರ ನೂರಡಿ ಎತ್ತರದ ಕಟೌಟ್ ನಿಲ್ಲಿಸಿ ಕ್ಷೀರಾಭಿಷೇಕ ಮಾಡಲಾಗುತ್ತದೆ. ಈ ಮೂಲಕ ದುಂದುವೆಚ್ಚವಾಗುವ ಹಾಲು ಸುಮಾರು 50,000 ಲೀಟರ್!

ಹಾಗೆಂದೇ ಒಕ್ಕೂಟದ  ಅಧ್ಯಕ್ಷ ಎಸ್. ಎ. ಪೊನ್ನುಸ್ವಾಮಿ ಹೇಳಿದ್ದರು- ‘ತಮಿಳುನಾಡಿನ ಶೇ. 15 ಜನಕ್ಕೆ ಪ್ರತಿದಿನ ಹಾಲು ಕೊಳ್ಳಲಾಗದ ಸ್ಥಿತಿ ಇರುವಾಗ ಇಷ್ಟೆಲ್ಲ ಹಾಲು ವ್ಯರ್ಥವಾಗಿಸುವುದು ನಿಮಗೆ ಸರಿ ಕಾಣುತ್ತದೆಯೇ? ಹೀಗೆ ಹಾಲಿನ ಅಭಿಷೇಕ ಮಾಡುವುದರ ಬದಲು ಮೊದಲ ಹತ್ತು ದಿನ ಥಿಯೇಟರಿನಲ್ಲಿ ರಕ್ತದಾನ, ನೇತ್ರದಾನ ದೇಹದಾನಗಳ ಕಾರ್ಯಕ್ರಮಗಳಾಗಲಿ ಎಂದು ನಾವು ರಜನೀಕಾಂತರನ್ನು ಹಾಗೂ ಅವರ ಅಭಿಮಾನಿಗಳನ್ನೂ ಕೇಳಿಕೊಳ್ಳುತ್ತೇವೆ.’

ರಜನೀಕಾಂತ ಅಭಿಮಾನಿ ಸಂಘವೂ ಈ ಬೇಡಿಕೆ ಸರಿಯಾಗಿಯೇ ಇದೆ ಅಂತ ಒಪ್ಪಿಕೊಂಡಿತ್ತು. ಆದರೆ ಬೆಂಗಳೂರಿನ ದೃಶ್ಯಗಳನ್ನೇ ಗಮನಿಸಿದರೆ ಅಂಥ ರಿವಾಜಿಗೆ ಬ್ರೇಕ್ ಹಾಕುವುದೇನೂ ಸಾಧ್ಯವಾದಂತಿಲ್ಲ ಎಂಬುದು ಮನದಟ್ಟಾಗುತ್ತದೆ.

kabali1

ಇನ್ನು, ಪರಭಾಷೆ ಚಿತ್ರಕ್ಕೆ ಇಷ್ಟೆಲ್ಲ ಸಿನಿಮಾ ಮಂದಿರಗಳು ಸಿಕ್ಕುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಬಳಗದಿಂದ ಪೋಸ್ಟರ್- ಪ್ರತಿಕೃತಿಗೆ ಬೆಂಕಿ ಹಚ್ಚುವ ಕಾರ್ಯ ನಡೆಯಿತು.  ಇದಕ್ಕೆ ರಜನೀ ಅಭಿಮಾನಿಗಳು ಉಗ್ರವಾಗಿ ಪ್ರತಿಕ್ರಿಯಿಸಿದಾಗ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು.

kabali vatal

kabali4

Leave a Reply