ಕೆಎಎಸ್ ಅಧಿಕಾರಿಗಳ ವರ್ಗಾವಣೆ, ಸಾರಿಗೆ ನೌಕರರು- ಸಿಎಂ ಸಂಧಾನ ಮಾತುಕತೆ ವಿಫಲ, ಜು.27ಕ್ಕೆ ಸಿಎಂ ನೇತೃತ್ವದಲ್ಲಿ ರಾಜ್ಯ ಸಂಸದರ ಸಭೆ, ಮಾಯಾವತಿ ವಿರುದ್ಧವೂ ಎಫ್ಐಆರ್

ಉತ್ತರಪ್ರದೇಶದ ಗೋರಖ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ 2 ಯೋಜನೆಗಳನ್ನು ಉದ್ಘಾಟಿಸಿದ್ದರು. 26 ವರ್ಷಗಳಿಂದ ಮುಚ್ಚಿದ್ದ ರಸಗೊಬ್ಬರ ಕಾರ್ಖಾನೆಯ ಪುನರುಜ್ಜೀವನ ಹಾಗೂ 750 ಹಾಸಿಗೆಗಳ ಏಮ್ಸ್ ಆಸ್ಪತ್ರೆಗೆ ಅಡಿಗಲ್ಲು ಇವೆರಡು ಪ್ರಮುಖ ಯೋಜನೆಗಳು. ‘ಉತ್ತರಪ್ರದೇಶದಲ್ಲಿ ಜಾತಿ ಹಾಗೂ ವಂಶವಾಹಿ ಆಡಳಿತಕ್ಕೆ ಜಾಗವಿಲ್ಲ’ ಎಂದರು. ಇದು ಗೋರಖನಾಥ ದೇವಾಲಯ ಸಂದರ್ಶನದ ಚಿತ್ರ…

ಡಿಜಿಟಲ್ ಕನ್ನಡ ಟೀಮ್:

ಆಡಳಿತಕ್ಕೆ ಸರ್ಕಾರದ ಸರ್ಜರಿ

ಆಡಳಿತ ಯಂತ್ರವನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸುವ ಉದ್ದೇಶದಿಂದ 47 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮೂಲಕ ಭರ್ಜರಿ ಸರ್ಜರಿ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.

ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರ ವಿಕೇಂದ್ರಿಕರಣಗೊಳಿಸಿ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಬೇಕು ಎಂದು ತಮ್ಮ ಸಚಿವರಿಗೆ ಸಲಹೆ ನೀಡಿದ್ದ ಮುಖ್ಯಮಂತ್ರಿಗಳು ಈಗ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದ್ದಾರೆ. ನಿನ್ನೆಯಷ್ಟೇ ಕಂದಾಯ, ಸಮಾಜ ಕಲ್ಯಾಣ, ಸಾರಿಗೆ, ಆರೋಗ್ಯ ಇಲಾಖೆಗೆ ಸೇರಿದ 24 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ, ಎರಡನೇ ಹಂತದಲ್ಲಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.

ಮುರಿದು ಬಿತ್ತು ಸಂಧಾನ ಮಾತುಕತೆ

ಸಾರಿಗೆ ಇಲಾಖೆ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಣ ಸಂಧಾನ ಮಾತುಕತೆ ಶುಕ್ರವಾರ ಮುರಿದು ಬಿದ್ದಿದೆ. ಇದರ ಪರಿಣಾಮವಾಗಿ ಕೆಎಸ್ಆರ್ ಟಿಸಿ ಸೇರಿದಂತೆ ವಿವಿಧ ನಿಗಮಗಳ ನೌಕರರು ಸೋಮವಾರ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ನೌಕರರ ವೇತನವನ್ನು ಶೇ.30 ರಷ್ಟು ಹೆಚ್ಚಿಸುವಂತೆ ಬೇಡಿಕೆ ಇಡಲಾಗಿತ್ತು. ಇದು ಸಾಧ್ಯವಾಗುವುದಿಲ್ಲ ಎಂದ ಮುಖ್ಯಮಂತ್ರಿಗಳು, ಈಗಷ್ಟೇ ಶೇ.8 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ. ಕನಿಷ್ಠ ಶೇ.10 ರಷ್ಟು ಹೆಚ್ಚಳದ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ನೌಕರರ ಸಂಘ ತಮ್ಮ ಪಟ್ಟು ಬಿಡಲಿಲ್ಲ. ಇದರೊಂದಿಗೆ ಮಾತುಕತೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಕೇಂದ್ರದ ಮೇಲೆ ಒತ್ತಡ ಹೇರಲು ಸಿಎಂ ನೇತೃತ್ವದಲ್ಲಿ ರಾಜ್ಯ ಸಂಸದರ ಸಭೆ

ರೈತರಿಗೆ ನೀಡುವ ಕೃಷಿ ಸಾಲದಲ್ಲಿ ಶೇ. 40 ರಷ್ಟನ್ನು ಒದಗಿಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಈಗ ಉಲ್ಟಾ ಹೊಡೆದಿದೆ. ಈ ವಿಷಯದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಜುಲೈ 27 ರಂದು ನವದೆಹಲಿಯಲ್ಲಿ ರಾಜ್ಯ ಸಂಸದರ ಸಭೆ ನಡೆಸಲು ನಿರ್ಧರಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಈ ವರ್ಷ ರಾಜ್ಯದ ಇಪ್ಪತ್ತೈದು ಲಕ್ಷ ರೈತರಿಗೆ ₹11 ಸಾವಿರ ಕೋಟಿ ಕೃಷಿ ಸಾಲ ನೀಡಲು ನಿರ್ಧರಿಸಿದ್ದು ಶೇ. 40 ರಷ್ಟು ಹಣವನ್ನು ನಬಾರ್ಡ್ ವತಿಯಿಂದ ಒದಗಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಕಳೆದ ವರ್ಷದವರೆಗೂ ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ರಾಜ್ಯ ಸರ್ಕಾರ ನೀಡುವ ಕೃಷಿ ಸಾಲದಲ್ಲಿ ಶೇ. 50 ರಷ್ಟು ಹಣ ಭರಿಸುತ್ತಿತ್ತು. ಈ ವರ್ಷ ಅದನ್ನು ಶೇ.40 ಕ್ಕೆ ಇಳಿಸಿದೆ. ಕೇಂದ್ರ ಶೇ.40 ರಷ್ಟು ಹಣ ಪೂರೈಸಿದರೂ ₹4400 ಕೋಟಿ ಬರಬೇಕಿದೆ. ಆದ್ರೆ ಕೇಂದ್ರ ಈಗ ಕೇವಲ ₹ 3120 ಕೋಟಿ ನೀಡಲು ನಿರ್ಧರಿಸಿದೆ. ಈ ಬಾಬ್ತಿನಲ್ಲಿ ಗುರುವಾರ 1170 ಕೋಟಿ ರೂ ಬಿಡುಗಡೆ ಮಾಡಿದೆ.

ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜುಲೈ 26 ರಂದು ಸಿಎಂ ದಿಲ್ಲಿಗೆ ತೆರಳಲಿದ್ದಾರೆ. ರಾಜ್ಯಕ್ಕೆ ನಬಾರ್ಡ್ ವತಿಯಿಂದ ನೀಡುವ ಕೃಷಿ ಸಾಲದ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ತೀರ್ಮಾನಿಸಲಾಗಿದೆ.

ಮಾಯಾವತಿ ವಿರುದ್ಧವೂ ಎಫ್ಐಆರ್

ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ವೇಶ್ಯೆ ಜತೆ ಹೋಲಿಕೆ ಮಾಡಿ ವಿವಾದಕ್ಕೆ ಸಿಲುಕಿರುವ ಉತ್ತರ ಪ್ರದೇಶ ಬಿಜೆಪಿಯ ಮಾಜಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಗೊತ್ತಿರುವ ಸಂಗತಿ. ಈಗ ಪ್ರತಿದಾಳಿಯಾಗಿ ದಯಾಶಂಕರ್ ಪತ್ನಿ ಸ್ವಾತಿ ಸಿಂಗ್, ಮಾಯಾವತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ದಯಾಶಂಕರ್ ವಿರುದ್ಧ ಬಿಎಸ್ಪಿ ಕಾರ್ಯಕರ್ತರು ಲಖನೌ ನಲ್ಲಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ದಯಾಶಂಕರ್ ಮಾತ್ರವಲ್ಲದೇ ಆತನ ಪತ್ನಿ ಹಾಗೂ ಮಗಳನ್ನು ಟಾರ್ಗೆಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾತಿ ಸಿಂಗ್, ಪ್ರತಿಯಾಗಿ ಮಾಯಾವತಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಸ್ವಾತಿ ಸಿಂಗ್ ಹೇಳಿರೋದಿಷ್ಟು:

‘ಅಸಭ್ಯವಾಗಿ ಮಾತನಾಡಿದ್ದಕ್ಕಾಗಿ ಅವರು (ಬಿಎಸ್ಪಿ) ನನ್ನ ಪತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಈಗ ಅವರು ನೇರವಾಗಿ ನನ್ನನ್ನು ಮತ್ತು ನನ್ನ ಮಗಳ ವಿರುದ್ಧ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನನ್ನ 12 ವರ್ಷದ ಮಗಳು ಯಾವ ತಪ್ಪು ಮಾಡಿದ್ದಾಳೆ ಎಂದು ಬಿಎಸ್ಪಿ ಕಾರ್ಯಕರ್ತರು ಆಕೆ ವಿರುದ್ಧ ನಿಂತಿದ್ದಾರೆ. ನನ್ನ ಪತಿಯ ಮಾತುಗಳು ಮಾಯಾವತಿಗೆ ನೋವು ತರುವುದಾದರೆ, ಅವರ ಮಾತುಗಳಿಂದ ನಮಗೆ ನೋವಾಗುವುದಿಲ್ಲವೇ? ತನ್ನ ವಿರುದ್ಧ ಅವಾಚ್ಯ ಮಾತುಗಳನ್ನು ಕೇಳಿದ ನನ್ನ ಮಗಳು ಮಾನಸಿಕವಾಗಿ ಕುಗ್ಗಿಹೋಗಿದ್ದಾಳೆ. ಶಾಲೆಯಲ್ಲೂ (7ನೇ ತರಗತಿ) ಈ ವಿವಾದದಿಂದ ಬೇರೆ ಮಕ್ಕಳು ಆಕೆಯತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ. ಮಹಿಳಾ ಪರ ಕಾರ್ಯಕರ್ತರು ಈಗ ಎಲ್ಲಿದ್ದಾರೆ?’

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಆಮ್ ಆದ್ಮಿ ಪಕ್ಷದ ಸಂಸದ ಭಗ್ವಂತ್ ಮಾನ್ ಸಂಸತ್ತಿನ ಭದ್ರತಾ ಪ್ರವೇಶಗಳ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ವಿವಾದ ಲೋಕಸಭೆ ಹಾಗೂ ರಾಜ್ಯಸಭೆಯ ಸಮಯವನ್ನು ನುಂಗಿ ಹಾಕಿತು. ಆಪ್ ಸಂಸದನ ಈ ಕೃತ್ಯಕ್ಕೆ ಕಠಿಣ ಶಿಕ್ಷೆ ಆಗಬೇಕೆಂದು ಬಿಜೆಪಿ, ಅಕಾಲಿ ದಳ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಆಗ್ರಹಿಸಿದ ಪರಿಣಾಮ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ವೇಳೆ ಭಗ್ವಂತ್ ಮಾನ್ ಸ್ಪೀಕರ್ ಅವರಿಗೆ ಬರವಣಿಗೆ ಮೂಲಕ ಕ್ಷಮೆ ನೀಡಿದ್ದು, ಸ್ಪೀಕರ್ ಇದನ್ನು ತಿರಸ್ಕರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ಸುಮಿತ್ರಾ ಮಹಾಜನ್, ಇದೊಂದು ಗಂಭೀರ ವಿಚಾರ, ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ನಾನು ಎಲ್ಲರೊಂದಿಗೆ ಚರ್ಚಿಸುತ್ತೇನೆ ಎಂದರು.
  • ಮುಂಬೈನಲ್ಲಿ ಹಗರಣಕ್ಕೆ ಸಿಲುಕಿರುವ ಆದರ್ಶ ಅಪಾರ್ಟ್ ಮೆಂಟ್ ಅನ್ನು ಒಂದು ವಾರದ ಒಳಗಾಗಿ ವಶಕ್ಕೆ ತಗೋಬೇಕು ಅಂತ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ಕಟ್ಟಡವನ್ನು ಕೆಡವುವ ಯೋಚನೆಯನ್ನು ಕೈಬಿಡಿ ಅಂತಲೂ ಹೇಳಿದೆ. ಇದಕ್ಕೆ ಪ್ರತಿಯಾಗಿ ಕಟ್ಟಡ ಕೆಡವಲ್ಲ ಎಂದು ತಿಳಿಸಿದೆ.
  • ಉನಾ ದಲಿತರ ಮೇಲಿನ ಹಲ್ಲೆ ಪ್ರಕರಣದ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ಮಾಡಿ ಪೊಲೀಸ್ ಪೇದೆ ಸಾವಿಗೆ ಕಾರಣವಾದ ಪ್ರಮುಖ ಆರೋಪಿ ಕಾಂತಿವಾಲನನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಶುಕ್ರವಾರ ಬೇಟಿ ಮಾಡಿದ್ರು. ರಾಜ್ಕೋಟ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಮಾತನಾಡಿದ ಕೇಜ್ರಿ, ಮತ್ತೆ ಕೇಂದ್ರದ ವಿರುದ್ಧ ಕಿಡಿ ಕಾರಿದರು. ‘ದಲಿತರ ಮೇಲೆ ಪೊಲೀಸ್ ಠಾಣೆ ಮುಂದೆಯೇ ಥಳಿಸುತ್ತಾರೆ. ಆದರೂ ಪೊಲೀಸರು ಮೂಖಪ್ರೇಕ್ಷರಾಗಿದ್ದೇಕೆ? ಪೊಲೀಸರು ಈ ರೀತಿ ಮೌನ ವಹಿಸಿದ್ದಾರೆ ಎಂದರೆ ಅವರಿಗೆ ಮೇಲಾಧಿಕಾರಿಗಳಿಂದ ಸೂಚನೆ ಬಂದಿದೆ ಎಂದರ್ಥ ದಲಿತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ ಇಲ್ಲವಾದರೆ, ಜನರು ನಿಮಗೆ ಬುದ್ಧಿ ಕಲಿಸ್ತಾರೆ’ ಎಂದರು.

Leave a Reply