ಕೊಹ್ಲಿ ಶತಕದ ಕರಾಮತ್ತು.. ಕೆರಿಬಿಯನ್ನರ ವಿರುದ್ಧ ಭಾರತಕ್ಕೆ ಸಿಕ್ತು ಮೊದಲ ದಿನದ ಗೌರವ..

Antigua India West Indies Cricket

ಡಿಜಿಟಲ್ ಕನ್ನಡ ಟೀಮ್:

ನಾಯಕ ವಿರಾಟ್ ಕೊಹ್ಲಿ ಅಜೇಯ ಶತಕ (143).. ಶಿಖರ್ ಧವನ್ ಅರ್ಧಶತಕ (84).. ವಿಂಡೀಸ್ ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ 3 ವಿಕೆಟ್.. ಅಂತಿಮವಾಗಿ ಭಾರತಕ್ಕೆ ದಿನದ ಗೌರವ.. ಇವಿಷ್ಟೂ ಭಾರತ ಮತ್ತು ವೆಸ್ಚ್ ಇಂಡೀಸ್ ನಡುವಣ ಆರಂಭಿಕ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಹೈಲೈಟ್ಸ್.

ಸುಮಾರು 6 ತಿಂಗಳ ನಂತರ ಮತ್ತೆ ಟೆಸ್ಟ್ ಆಡುತ್ತಿರುವ ಟೀಂ ಇಂಡಿಯಾ, ಕೆರಿಬಿಯನ್ನರ ನಾಡಲ್ಲಿ ಶುಭಾರಂಭ ಮಾಡಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದ ಪಿಚ್ ಮಂದಗತಿಯಲ್ಲಿದ್ದ ಕಾರಣ, ನಾಯಕ ಕೊಹ್ಲಿ ಟಾಸ್ ಗೆಲ್ಲುತ್ತಿದ್ದಂತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ರು. ಗುರುವಾರದ ದಿನದಾಟದಲ್ಲಿ ಭಾರತ ಗಳಿಸಿದ್ದು 90 ಓವರ್ ಗಳಲ್ಲಿ 4 ವಿಕೆಟ್ ಗೆ 302 ರನ್. ಇದರೊಂದಿಗೆ ಮೊದಲ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸುವ ಮೂಲಕ ಆತಿಥೇಯರ ಮೇಲೆ ಒತ್ತಡ ಹೇರುವ ಗುರಿ ಟಿಂ ಇಂಡಿಯಾದು.

ಮುರಳಿ ವಿಜಯ್, ಶಿಖರ್ ಧವನ್, ಕೆ.ಎಲ್ ರಾಹುಲ್ ಈ ಮೂವರಲ್ಲಿ ಯಾರು ಆರಂಭಿಕರಾಗಿ ಕಣಕ್ಕಿಳಿತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ತಂಡದ ಮ್ಯಾನೇಜ್ಮೆಂಟ್, ಕೆ.ಎಲ್ ರಾಹುಲ್ ಬದಲಿಗೆ ಶಿಖರ್ ಧವನ್ ಗೆ ಮತ್ತೊಂದು ಅವಕಾಶ ಕೊಟ್ಟಿತು. ಆರಂಭದಲ್ಲಿ ಪಿಚ್ ತಾಜಾತನದ ನೆರವಿನಿಂದ ಕೆರಿಬಿಯನ್ ವೇಗಿಗಳು ಭಾರತ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಸಿದ್ರು. ಇದಕ್ಕೆ ಪ್ರತಿಯಾಗಿ ಭಾರತದ ಬ್ಯಾಟ್ಸ್ ಮನ್ ಗಳು ಆತುರ ಪಡದೆ ನಿಧಾನವಾಗಿಯೇ ಆಡಲು ಮುಂದಾದರು.

ಹೆಚ್ಚಿನ ರಕ್ಷಣಾತ್ಮಕ ಆಟದ ಹೊರತಾಗಿಯೂ ಮುರಳಿ ವಿಜಯ್ (7) ಹಾಗೂ ಚೇತೇಶ್ವರ ಪೂಜಾರ (16) ಬೇಗನೆ ಪೆವಿಲಿಯನ್ ಸೇರಿದ್ರು. ಆಗ ಜತೆಯಾದ ಧವನ್ ಮತ್ತು ಕೊಹ್ಲಿ, ಆಮೆಗತಿಯಲ್ಲಿ ಸಾಗುತ್ತಿದ್ದ ತಂಡದ ರನ್ ಗತಿ ಹೆಚ್ಚಿಸಿದರು. ಈ ಜೋಡಿ 105 ರನ್ ಗಳ ಶತಕದ ಜತೆಯಾಟ ನೀಡಿ ತಂಡದ ಇನ್ನಿಂಗ್ಸ್ ಗೆ ಬೆನ್ನೆಲುಬಾಯಿತು. ಸಮಯೋಚಿತವಾಗಿಯೇ ಆಡುತ್ತಿದ್ದ ಧವನ್ ರನ್ನು ವಿಂಡೀಸ್ ನ ಲೆಗ್ಗಿ ಬಿಶೂ ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ಇದರೊಂದಿಗೆ ಭಾರತ ಚಹಾ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 173 ರನ್ ದಾಖಲಿಸಿತ್ತು.

ಮೂವರು ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡ ಪರಿಣಾಮ ದಿನದಾಟದ ಅಂತಿಮ ಅವಧಿ ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ವೃತ್ತಿಜೀವನದ ಶ್ರೇಷ್ಠ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಮಾತ್ರ ಯಾವುದೇ ಹಂತದಲ್ಲೂ ರನ್ ವೇಗಕ್ಕೆ ಬ್ರೇಕ್ ಹಾಕಲೇ ಇಲ್ಲ. ಅಜಿಂಕ್ಯ ರಹಾನೆ ಜತೆ ಅರ್ಧಶತಕದ (60) ಜತೆಯಾಟ ಪೂರೈಸಿದರು. ಕೊಹ್ಲಿ ಶತಕದ ಹೊಸ್ತಿಲಲ್ಲಿದ್ದಾಗ ರಹಾನೆ (26) ಅನಗತ್ಯವಾಗಿ ವಿಕೆಟ್ ಕಳೆದುಕೊಂಡರು. ಆಗ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಬದಲಿಗೆ ಆಲ್ರೌಂಡರ್ ಅಶ್ವಿನ್ ಕ್ರೀಸ್ ಗೆ ಬರುವ ಮೂಲಕ ಟೀಂ ಇಂಡಿಯಾ ಕೊಂಚ ಗ್ಯಾಂಬ್ಲಿಂಗ್ ಮಾಡಿತು. ಇದರ ಫಲವಾಗಿ ಕೊಹ್ಲಿ- ಅಶ್ವಿನ್ ದಿನದಾಟ ಮುಕ್ತಾಯಕ್ಕೆ ಅಜೇಯ 66 ರನ್ ಜತೆಯಾಟವಾಡಿ ತಂಡದ ಮೊತ್ತ 300 ರ ಗಡಿ ದಾಟಿಸಿದ್ದಾರೆ.

ದಿನದ ಆಕರ್ಷಣೆಯ ಕೇಂದ್ರಬಿಂದು ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್. ಎಂದಿನಂತೆ ಮಾಸ್ಟರ್ ಕ್ಲಾಸ್ ಆಟ ಪ್ರದರ್ಶಿಸಿದ ಕೊಹ್ಲಿ, ವಿಂಡೀಸ್ ಬೌಲಿಂಗ್ ದಾಳಿಯನ್ನು ತೀರಾ ಸಪ್ಪೆ ಮಾಡಿಟ್ಟರು. 72.58 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 197 ಎಸೆತಗಳಲ್ಲಿ 16 ಬೌಂಡರಿಗಳು ಸೇರಿದಂತೆ ಅಜೇಯ 143 ರನ್ ಗಳಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ 12ನೇ ಶತಕ ಪೂರೈಸಿ, ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.

ಇನ್ನು ವಿಂಡೀಸ್ ಬೌಲಿಂಗ್ ಬಗ್ಗೆ ಹೇಳೋದಾದ್ರೆ, ಆರಂಭದಲ್ಲಿ ವೇಗಿಗಳು, ನಂತರ ಬಿಶೂ ಭಾರತೀಯರನ್ನು ಸ್ವಲ್ಪಮಟ್ಟಿಗೆ ಕಾಡುವಲ್ಲಿ ಯಶಸ್ವಿಯಾದ್ರು. ಪಂದ್ಯ ಸಾಗಿದಂತೆ ಪಿಚ್ ಮತ್ತಷ್ಟು ಮಂದಗತಿ ಪಡೆಯಲಿದ್ದು, ಭಾರತೀಯ ಸ್ಪಿನ್ನರ್ ಗಳು ಪ್ರಮುಖ ಪಾತ್ರವಹಿಸಲಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನಿಂಗ್ಸ್ (302ಕ್ಕೆ 4, 90 ಓವರ್)

ವಿಜಯ್ 7, ಧವನ್ 84, ಪೂಜಾರ 16, ಕೊಹ್ಲಿ ಅಜೇಯ 143, ರಹಾನೆ 22, ಅಶ್ವಿನ್ ಅಜೇಯ 22, ಇತರೆ 8 (ಬಿಶೂ 108ಕ್ಕೆ 3, ಶಾನನ್ ಗೆಬ್ರಿಯಲ್ 43ಕ್ಕೆ 1)

Leave a Reply