ಡಿಜಿಟಲ್ ಕನ್ನಡ ಟೀಮ್:
ಜರ್ಮನಿಯ ಮ್ಯೂನಿಕ್ ಪಟ್ಟಣದ ಒಲಂಪಿಯಾ ಶಾಪಿಂಗ್ ಮಾಲ್’ಗೆ ನುಗ್ಗಿದ ಬಂದೂಕುಧಾರಿ ಒಂಬತ್ತು ಜನರನ್ನು ಕೊಂದಿದ್ದಾನೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನನ್ನು ಸದ್ಯಕ್ಕೆ ಬಂದೂಕುಧಾರಿ ಎಂದಷ್ಟೇ ಗುರುತಿಸುತ್ತಿರುವುದಕ್ಕೆ ಕಾರಣವೇನೆಂದರೆ, ಈತ ಈವರೆಗೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗವಹಿಸಿದ ಹಿನ್ನೆಲೆ ಹೊಂದಿಲ್ಲ. ಎಂದಿನಂತೆ ಈ ದಾಳಿಗೆ ಐ ಎಸ್ ಐ ಎಸ್ ಉಗ್ರ ಸಂಘಟನೆ ಹರ್ಷ ವ್ಯಕ್ತಪಡಿಸಿದೆಯಾದರೂ, ಈ ವ್ಯಕ್ತಿ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಎಂಬ ಬಗ್ಗೆ ಪುರಾವೆಗಳೇನೂ ಸದ್ಯಕ್ಕೆ ಸಿಕ್ಕಿಲ್ಲ. ಒಲಂಪಿಯಾ ಶಾಪಿಂಗ್ ಮಾಲಿನಿಂದ ಕಿಲೋಮೀಟರ್ ದೂರದಲ್ಲಿ ಸತ್ತಿರುವುದರಿಂದ ಹಾಗೂ ಮೃತವ್ಯಕ್ತಿಯ ಬೆನ್ನಿಗಿದ್ದ ಬ್ಯಾಗಿನಲ್ಲಿ ಸ್ಫೋಟಕಗಳು ಇದ್ದಿದ್ದರಿಂದ ‘ಇವನೇ ಅವನು’ ಎಂದು ಸ್ಥಳೀಯ ಪೊಲೀಸರು ನಿರ್ಧರಿಸಿದ್ದಾರೆ. ಈತ ಇರಾನಿಯನ್ ಮೂಲದ 18ರ ಹರೆಯದ ಜರ್ಮನಿಗ. ಉಭಯ ದೇಶಗಳ ಪೌರತ್ವವನ್ನೂ ಹೊಂದಿದ್ದ ಎಂದು ತಿಳಿದುಬಂದಿದೆ.
ಈತ ಉಗ್ರಜಾಲದೊಂದಿಗೆ ಸಂಪರ್ಕ ಇರಿಸಿಕೊಂಡವನೇನೂ ಆಗಿರದಿದ್ದರೂ ಐ ಎಸ್ ಐಎಸ್ ನಿಂದ ಸ್ಫೂರ್ತಿಗೊಂಡಿದ್ದ ಎಂಬುದು ಸದ್ಯಕ್ಕೆ ಲಭ್ಯವಿರುವ ಮಾಹಿತಿ. ಜರ್ಮನಿ ಮಾತ್ರವಲ್ಲ, ಇಡೀ ಯುರೋಪಿಗೆ ದೊಡ್ಡ ಸವಾಲಾಗಿರುವ ಸಂಗತಿಯೇ ಇದು. ಉದ್ಯೋಗ ಕೊರತೆ, ಕುಸಿದ ಆರ್ಥಿಕತೆ ಇಂಥ ಯಾವ್ಯಾವುದೋ ಕಾರಣಗಳಿಂದ ಹತಾಶೆಗೆ ಬೀಳುವ ಯುವಸಮೂಹ ತನ್ನ ಮಡುಗಟ್ಟಿದ ಆಕ್ರೋಶಗಳನ್ನು ಸಮಾಜದ ಮೇಲೆ ಅಪ್ಪಳಿಸುವುದಕ್ಕೆ ಕಾದಿರುತ್ತದೆ. ಅದಕ್ಕೆ ಸ್ಫೂರ್ತಿಯಾಗಿ ಕತ್ತು ಕತ್ತರಿಸುವ ಒಂದು ಐಎಸ್ ಐಎಸ್ ವಿಡಿಯೋ ಇಲ್ಲವೇ ಸರ್ಕಾರಗಳು ಇರುವುದೇ ಶೋಷಣೆಗೆ ಎಂದು ಕಿಚ್ಚು ಹತ್ತಿಸುವ ಇನ್ಯಾವುದೋ ಪ್ರಚೋದಕ ಮಾಹಿತಿ ತೆರೆದುಕೊಂಡರೆ ಸಾಕು. ಗೊತ್ತು-ಗುರಿ ಇಲ್ಲದೇ ಆತ ಶಾಪಿಂಗ್ ಮಾಲ್ ಇಲ್ಲವೇ ಸಿನಿಮಾ ಥಿಯೇಟರಿಗೆ ಹೋಗಿ ಡಬಡಬ ಗುಂಡುಹಾರಿಸಿಬಿಡಬಲ್ಲ. ತಾನಂತೂ ಹೇಗೂ ಸಾಯಲು ಸಿದ್ಧವಾಗಿರುವಾತ.
ಅಲ್ಲಿಗೆ ಇಸ್ಲಾಮಿಕ್ ಉಗ್ರ ಸಂಘಟನೆಗಳು ಸಿರಿಯಾದಿಂದಲೋ, ಇರಾಕಿನಿಂದಲೋ ಆತ್ಮಹತ್ಯಾ ಬಾಂಬರ್ ಒಬ್ಬನನ್ನು ತಯಾರುಮಾಡಿ ಕಳುಹಿಸಬೇಕಿಲ್ಲ. ಜಗತ್ತನ್ನೇ ಹಳ್ಳಿಯಾಗಿಸಿರುವ ಇಂಟರ್ನೆಟ್ ನಲ್ಲಿ ದ್ವೇಷವನ್ನು ಕುಳಿತಲ್ಲಿಂದಲೇ ರಫ್ತು ಮಾಡಿದರೆ ಸಾಕು. ಜಿಹಾದು ಮತ್ತೊಂದು ಗೊತ್ತಿಲ್ಲದವ ಕೂಡ ತಿಕ್ಕಲು ಹತ್ತಿಸಿಕೊಳ್ಳುತ್ತಾನೆ. ಉಗ್ರನೊಬ್ಬ ಯಾವ ಪರಿಣಾಮ ಉಂಟುಮಾಡಬಲ್ಲನೋ ಅದನ್ನೇ ಇಂಥ ಪ್ರಚೋದಿತ ಕೃತ್ಯಗಳೂ ಮಾಡುತ್ತವೆ.
ಮೊದಲಿಗೆ ನಾಗರಿಕ ಸಮಾಜದಲ್ಲಿ ಭಯ ಮತ್ತು ಅವಿಶ್ವಾಸಗಳು ನೆಲೆಯಾಗುತ್ತವೆ. ಬರ ಬರುತ್ತ ಹಿಂಸಾತ್ಮಕ ಕೃತ್ಯ- ಹತ್ಯೆಗಳನ್ನು ಇಸ್ಲಾಮಿಕ್ ಉಗ್ರರು ಮಾಡುತ್ತಿದ್ದಾರೋ ಅಥವಾ ಪ್ರತೀ ಘಟನೆಗೆ ಬೇರೆ ಕಾರಣವೋ ಎಂಬ ವಿವೇಚನೆ ತಾಳ್ಮೆ ಕುಂದಿಹೋಗುತ್ತದೆ. ಇದಕ್ಕೆ ಪೂರಕವಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಎಲ್ಲ ಘಟನೆಗಳಿಗೂ ತಾವೇ ಕಾರಣ ಅಂತ ಸಾಮಾಜಿಕ ತಾಣಗಳಲ್ಲಿ ಸಂದೇಶ ಹೊರಡಿಸುತ್ತಾರೆ. ಇದೇ ಜರ್ಮನಿಯ ಬವೇರಿಯಾದಲ್ಲಿ ಕಳೆದ ಸೋಮವಾರ ವಲಸಿಗನೊಬ್ಬ ರೈಲಿನಲ್ಲಿ ಐವರು ಪ್ರಯಾಣಿಕರನ್ನು ಚಾಕುವಿನಿಂದ ಇರಿದಿದ್ದ. ಇದಕ್ಕೂ ತಾನೇ ಹೊಣೆ ಹೊತ್ತಿತ್ತು ಐಎಸ್ಐಎಸ್. ಅಲ್ಲದೇ, ಫ್ರಾನ್ಸ್ ನಲ್ಲಿ ಕೆಲದಿನದ ಹಿಂದಷ್ಟೇ ಅಲ್ಲಾಹು ಅಕ್ಬರ್ ಎಂದು ಜನರ ಮೇಲೆ ಟ್ರಕ್ ನುಗ್ಗಿಸಿ 84 ಮಂದಿಯನ್ನು ಕೊಂದ ಉಗ್ರನ ಉದಾಹರಣೆ ಹಸಿರಾಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಯುರೋಪು ಅದಾಗಲೇ ದಿಗಿಲಿಗೆ ಬಿದ್ದಿದೆ. ಅದೆಂಥದೇ ನವನವೀನ ಭದ್ರತಾ ವ್ಯವಸ್ಥೆ ಇದ್ದರೂ ಈ ಯುರೋಪಿಯನ್ ರಾಷ್ಟ್ರಗಳಿಗೆ ಭಾರತದಂತೆ ಪದೇ ಪದೆ ಉಗ್ರದಾಳಿಯನ್ನು ತಾಳಿಕೊಳ್ಳುವ ಅಂತಃಸತ್ವವೇನಿಲ್ಲ. ಮೇಲಿಂದ ಮೇಲೆ ಇಂಥದೇ ನಾಲ್ಕು ದಾಳಿಗಳಾಗಿಬಿಟ್ಟರೆ ಕುಸಿದು ಕುಳಿತುಬಿಡುತ್ತಾರಷ್ಟೆ. ಅಲ್ಲದೇ, ಈಗಾಗಲೇ ಯುರೋಪ್ ಅಂದರೆ ಡೇಂಜರ್ ಜೋನ್ ಎಂಬ ಭಾವನೆಯೊಂದು ನೆಲೆಗೊಳ್ಳುವುದಕ್ಕೆ ಶುರುವಾಗಿದೆ. ಇದು ಪ್ರವಾಸೋದ್ಯಮ ಮತ್ತು ಯುರೋಪಿನ ರಾಷ್ಟ್ರಗಳಿಗೆ ಜನರ ಓಡಾಟವನ್ನು ಸಹಜವಾಗಿಯೇ ಕುಗ್ಗಿಸತೊಡಗುತ್ತದೆ. ಅಲ್ಲಿನ ಏಷ್ಯನ್ನರಿಗಂತೂ ಕೆಲಸ ಮಾಡುವ ವಾತಾವರಣ ವಿಷಮಗೊಳ್ಳುತ್ತದೆ. ಕಾರಣ, ಯಾರೋ ಅಫ್ಘನ್ ಮೂಲದ, ಇನ್ಯಾರೋ ಇರಾನ್ ಮೂಲದವ ಉಗ್ರಕೃತ್ಯ ಎಸಗಿದರೂ ಅಂಥವರ ಮುಖ ಹೋಲಿಕೆ ಇರುವ ಏಷ್ಯ ಜನರಿಗೆಲ್ಲ ಅವಿಶ್ವಾಸ, ಸದಾ ಸಂದೇಹ ಎದುರಿಸಬೇಕಾದ ಸ್ಥಿತಿ ನಿಧಾನಕ್ಕೆ ಗಟ್ಟಿಯಾಗಿಬಿಡುತ್ತದೆ. ಹೀಗೆ ಭಯ-ಆತಂಕಗಳೇ ಬದುಕಾಗಿಬಿಟ್ಟ ಕ್ಷಣದಲ್ಲಿ ಎಂಥ ಅದ್ಭುತ ಕಟ್ಟಡ ಅಥವಾ ಇನ್ಯಾವ ಸೌಂದರ್ಯ ಗೋಪುರದಲ್ಲಿ ಇದ್ದರೂ ಅದು ಸ್ವರ್ಗವಾಗಿ ಉಳಿಯಲಾರದು.
‘ಉಗ್ರದಾಳಿ ಎನ್ನುವುದಕ್ಕೆ ಸದ್ಯಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಹಾಗಂತ ಈ ಸಾಧ್ಯತೆಯನ್ನು ತಳ್ಳಿಹಾಕುವುದೂ ಇಲ್ಲ’ ಎಂದಿದ್ದಾರೆ ಜರ್ಮನಿ ಪ್ರಧಾನಿ ಮರ್ಕೆಲ್.
ಯುರೋಪಿನ ಮೇಲೆ ಒಂದರ ಹಿಂದೊಂದರಂತೆ ಆಗುತ್ತಿರುವ ದಾಳಿಗಳು ಇಸ್ಲಾಮಿಕ್ ಉಗ್ರರನ್ನು ಕುಂತಲ್ಲೇ ಗೆಲ್ಲಿಸುತ್ತಿದೆಯಾ ಎಂಬ ಆತಂಕವೊಂದು ಕಾಡುತ್ತಿದೆ.