ಪ್ರವಾಹಕ್ಕೆ ಕೊಚ್ಚಿ ಹೋಗಿದೆ ಅಸ್ಸಾಂ, ನರಕವಾಗಿದೆ ಜನರ ಬದುಕು

ಡಿಜಿಟಲ್ ಕನ್ನಡ ಟೀಮ್:

ದೇಶದ ಈಶಾನ್ಯ ಭಾಗಕ್ಕೆ ಮುಂಗಾರು ತಡವಾಗಿ ಪ್ರವೇಶಿಸಿದರೂ ಸಿಕ್ಕಾಪಟ್ಟೆ ದಾಂಧಲೆ ಎಬ್ಬಿಸಿದೆ. ಅಸ್ಸಾಂ ಪರಿಸ್ಥಿತಿಯಂತೂ ದಿನೇ ದಿನೇ ಭೀಕರವಾಗುತ್ತಿದೆ. ಪ್ರವಾಹಕ್ಕೆ 9 ಜಿಲ್ಲೆಗಳು ತತ್ತರಿಸಿದ್ದು, ಸುಮಾರು 3 ಲಕ್ಷ ಜನರ ಬದುಕು ನರಕವಾಗಿದೆ.

ಅತಿ ಮಳೆಯಿಂದ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮತ್ತೊಂದೆಡೆ ಭೂತಾನ್ ನ ಅತಿವೃಷ್ಟಿ ಅಸ್ಸಾಂ ಮೇಲೂ ಪರಿಣಾಮ ಬೀರಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಲಕ್ಷ್ಮಿಪುರ್, ಗೊಲ್ಘಾಟ್, ಮಾರಿಗಾವ್, ಜೊರ್ಹತ್, ಧೆಮಾಜಿ, ಶಿವಸಾಗರ್, ಕೊಕ್ರಝಾರ್, ಬರ್ಪೆಟಾ ಮತ್ತು ಬೊಂಗೈಗಾನ್ ಜಿಲ್ಲೆಗಳ 464 ಹಳ್ಳಿಗಳು ಮುಳುಗಡೆ ಆಗಿವೆ. 25 ಸಾವಿರ ಎಕ್ಟೇರ್ ಕೃಷಿ ಭೂಮಿ ಜಲಾವೃತಗೊಂಡಿದೆ. ಕಳೆದ ವರ್ಷವೂ ಪ್ರವಾಹದಿಂದ ಅಸ್ಸಾಂನ 92 ಸಾವಿರ ಜನ ತೊಂದರೆಗೆ ಸಿಲುಕಿದ್ದರು. ಈ ಬಾರಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಬಿದೆ.

ನಾಲ್ಕು ಸೇನಾಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಜನರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲು 20 ಬೋಟುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಸ್ಸಾಂ ವಿಪತ್ತು ನಿರ್ವಹಣೆ ಪ್ರಾಧಿಕಾರ ಹೇಳಿದೆ. ಮುಂದಿನ 24 ಗಂಟೆಗಳಲ್ಲಿ ದುರ್ಬಿ ಜಿಲ್ಲೆ ಸಹ ಪ್ರವಾಹಕ್ಕೆ ಸಿಲುಕುವ ಎಚ್ಚರಿಕೆಯನ್ನು ನೀಡಿದೆ.

Leave a Reply