ಬೆಂಗ್ಳೂರು- ಮೈಸೂರಿಗೆ ಸೆಮಿ ಹೈಸ್ಪೀಡ್ ರೈಲು, ಕಾಂಗ್ರೆಸ್ ಹೈಮಾಂಡ್ ವಿರುದ್ಧ ಗೌಡ್ರ ಬೇಸರ, ಬಂಡಾಯ ಶಾಸಕರ ವಿರುದ್ಧ ಜೆಡಿಎಸ್ ಸಮರ

ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ, ಎಸ್ಬಿಐ ಕೊಡುಗೆಯ ‘ರೆಫ್ರಿಜರೇಟೆಡ್ ಸೆಂಟ್ರಿಫ್ಯೂಜ್’ ಸಾಧನವನ್ನು ಲೋಕಾರ್ಪಣಗೊಳಿಸಲಾಯಿತು. ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ಪಾಲ್ಗೊಂಡಿದ್ದರು.

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು- ಮೈಸೂರು ನಡುವೆ ಸೆಮಿ ಹೈಸ್ಪೀಡ್ ರೈಲು

ಬೆಂಗಳೂರು ಮತ್ತು ಮೈಸೂರು ನಡುವೆ ಸೆಮಿ ಹೈಸ್ಪೀಡ್ ರೈಲು ಸೇವೆಯನ್ನು ಆರಂಭಿಸಲು ಕೇಂದ್ರ ರೈಲ್ವೆ ಇಲಾಖೆ ಒಪ್ಪಿದೆ. ಇದರಿಂದಾಗಿ ಒಂದು ಗಂಟೆ 10 ನಿಮಿಷದಲ್ಲಿ ಈ ಎರಡು ನಗರಗಳ ನಡುವಿನ ಸಂಚಾರ ಮಾಡಬಹುದು. ಸದ್ಯ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಮತ್ತು ರಾಜ್ಯ ಮೂಲಸೌಕರ್ಯ ಸಚಿವ ಆರ್.ವಿ.ದೇಶಪಾಂಡೆ ಈ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರಮುಖ ನಗರಗಳ ನಡುವೆ ಹೈಸ್ಪೀಡ್ ಇಲ್ಲವೇ ಸೆಮಿ ಹೈಸ್ಪೀಡ್ ರೈಲುಗಳನ್ನು ಪ್ರಮುಖ ನಗರಗಳಲ್ಲಿ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರು ನಡುವೆ ಇಂತಹ ಸೇವೆ ಆರಂಭಿಸಲಾಗುವುದು ಎಂದಿದ್ದಾರೆ ಸುರೇಶ್ ಪ್ರಭು.

ನಂತರ ಮಾತನಾಡಿದ ಆರ್.ವಿ.ದೇಶಪಾಂಡೆ, ಕೇಂದ್ರ ಸರ್ಕಾರ ರಾಜ್ಯದ ಮೈಸೂರು ಹಾಗೂ ಬೆಂಗಳೂರು ನಡುವಿನ ಸಂಚಾರ ದಟ್ಟಣೆ ಗಮನಿಸಿ ಸುಗಮ ಸಂಚಾರಕ್ಕೆ ಇಂತದ್ದೊಂದು ಸೇವೆ ಆರಂಭಿಸಲು ಮುಂದಾಗಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರದ ವತಿಯಿಂದ ಎಲ್ಲ ರೀತಿಯ ನೆರವು ಕಲ್ಪಿಸಲಾಗುವುದು ಎಂದರು.

ಇದೇ ವೇಳೆ ರಾಜ್ಯದ ಪ್ರತಿಯೊಂದು ಮನೆ ಹಾಗೂ ಕೈಗಾರಿಕೆಗಳಿಗೆ ಗ್ಯಾಸ್ ಸಂಪರ್ಕ ಒದಗಿಸುವ ಮಹತ್ವದ ಯೋಜನೆ ಜಾರಿಯಲ್ಲಿದ್ದು ಆದಷ್ಟು ಬೇಗ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ರು. ಮಹಾರಾಷ್ಟ್ರದ ದಾಬೋಲ್ ನಿಂದ ರಾಜ್ಯಕ್ಕೆ ನೈಸರ್ಗಿಕ ಅನಿಲ ಸರಬರಾಜು ಮಾರ್ಗ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು ಭಾರೀ ಕೈಗಾರಿಕೆಗಳು ಹಾಗೂ ಬೆಂಗಳೂರು ಹಾಗೂ ಸುತ್ತು ಮುತ್ತಲ ಜಿಲ್ಲೆಗಳಿಗೆ ಗ್ಯಾಸ್ ಸಂಪರ್ಕ ಒದಗಿಸಲಾಗುವುದು ಎಂದರು.

ಕಾಂಗ್ರೆಸ್ ಹೈಕಮಾಂಡ್ ಮೌನಕ್ಕೆ ಗೌಡರ ಬೇಸರ

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೌನವಾಗಿರೋದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.

‘ಗಣಪತಿ, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ, ಅನುಪಮಾ ಶೆಣೈ ರಾಜೀನಾಮೆ, ಮೈಸೂರು ಜಿಲ್ಲಾಧಿಕಾರಿ ಶಿಖಾ ಮೇಲಿನ ದೌರ್ಜನ್ಯ, ಹಾಸನ ಎಸಿ ವಿಜಯಾ ಆತ್ಮಹತ್ಯೆ ಯತ್ನ ಪ್ರಕರಣಗಳು ಆಡಳಿತ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿ. ಸಿದ್ದರಾಮಯ್ಯ ನನ್ನ ಒಡನಾಡಿ. ನನ್ನ ಜತೆ ಅವರು ಕೆಲಸ ಮಾಡಿದ್ದಾರೆ. ಆದರೆ, ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳು ಯಾವುದೇ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತದ್ದಲ್ಲ. ಸೋನಿಯಾ ನಾರಂಗ್ ಪ್ರಕರಣ ಏನಾಯ್ತು ಎಂಬುದು ಗೊತ್ತಿದೆ. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೆ ಕೆಲಸ ಮಾಡಲು ಮುಕ್ತ ವಾತಾವರಣ ಕೊಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

ಬಂಡಾಯ ಶಾಸಕರ ಅನರ್ಹಗೊಳಿಸಲು ಜೆಡಿಎಸ್ ಪಟ್ಟು

ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿರುವ ಎಂಟು ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು. ಈ ರೀತಿಯಾದ ಪಕ್ಷವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಮುಖಂಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಶನಿವಾರ ಸಭಾಧ್ಯಕ್ಷರೆದುರು ಜೆಡಿಎಸ್ ವಾದಿಸಿದೆ.

ಶಾಸಕಕರಾದ ಚೆಲುವರಾಯಸ್ವಾಮಿ, ಬಾಲಕೃಷ್ಣ,ಜಮೀರ್ ಅಹ್ಮದ್, ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ್, ಬಾಲಕೃಷ್ಣ ಸೇರಿದಂತೆ ಎಂಟು ಮಂದಿಯನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಉಚ್ಚಾಟಿಸಲು ಜೆಡಿಎಸ್ ಪ್ರಯತ್ನಿಸುತ್ತಿದೆ. ಈ ಶಾಸಕರು ಪಕ್ಷ ವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡಿರುವ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನೂ ಮುಂದಿನ ದಿನಗಳಲ್ಲಿ ಪ್ರತಿವಾದಿಗಳನ್ನಾಗಿ ಮಾಡುವಂತೆ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸುವುದಾಗಿ ಜೆಡಿಎಸ್ ಘೋಷಿಸಿದೆ.

ಸಾರಿಗೆ ನೌಕರರ ಮುಷ್ಕರ, ಪರ್ಯಾಯ ವ್ಯವಸ್ಥೆಗೆ ಮುಂದಾದ ಸರ್ಕಾರ

ವೇತನ ಹೆಚ್ಚಳ ಬೇಡಿಕೆ ಈಡೇರಿಸದ ಕಾರಣ ಸೋಮವಾರ ಮುಷ್ಕರ ನಡೆಸುತ್ತೇವೆ ಎಂದು ಸಾರಿಗೆ ಇಲಾಖೆ ನೌಕರರು ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಶೇ 30 ರಷ್ಟು ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ನಾಳೆ ರಾತ್ರಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮದ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಎಲ್ಲಾ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳೊಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಕಳೆದ ತಿಂಗಳು ಕಾಬುಲ್ ನಲ್ಲಿ ಅಪಹರಣಕ್ಕೊಳಗಾಗಿದ್ದ ಜುದಿತ್ ಡಿಸೋಜಾ ಅವರನ್ನು ರಕ್ಷಿಸಲಾಗಿದ್ದು, ಶನಿವಾರ ಭಾರತಕ್ಕೆ ಮರಳಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಇವರು ಅಘಾ ಖಾನ್ ಎಂಬ ಅಂತಾರಾಷ್ಟ್ರೀಯ ಎನ್ ಜಿ ಒನಲ್ಲಿ ತಾಂತ್ರಿಕ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಜೂನ್ 9ರಂದು ಇವರು ನಾಪತ್ತೆಯಾಗಿದ್ದರು.

sushma tweet

  • ಶುಕ್ರವಾರ ಚೆನ್ನೈನಿಂದ ಹಾರಾಟ ಆರಂಭಿಸಿ, ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಎಎನ್ 32 ವಿಮಾನದ ಯಾವುದೇ ಸುಳಿವು ಸಿಕ್ಕಿಲ್ಲ. ಈ ವಿಮಾನದಲ್ಲಿ 29 ಮಂದಿ ಇದ್ದು, ಆ ಪೈಕಿ ಕರ್ನಾಟಕದ ಯೋಧ ಏಕನಾಥ ಶೆಟ್ಟಿ ಸಹ ಇದ್ದಾರೆ. ವಿಮಾನ ಹುಡುಕಾಟ ಕಾರ್ಯ ಇನ್ನು ಮುಂದುವರಿದಿದೆ. ಅಲ್ಲದೆ ಶನಿವಾರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕಾರ್ಯಾಚರಣೆಯ ಪರಿಶೀಲನೆ ನಡೆಸಿದರು.
  • ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ಬೆಂಗಳೂರಿನಲ್ಲಿದ್ದರು. ಅರಮನೆ ಮೈದಾನದಲ್ಲಿ ‘ಆದಾಯ ಘೋಷಣೆ ಯೋಜನೆ-2016’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ‘ಯಾವ ಯಾವ ಕ್ಷೇತ್ರದಲ್ಲಿ ಕಪ್ಪುಹಣ ಹೆಚ್ಚುತ್ತಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಪೂರ್ಣ ಮಾಹಿತಿ ಇದೆ. ಹಾಗೆಂದು ಅನುಮಾನದ ಕಣ್ಣು ಇಡುವುದಿಲ್ಲ. ಯಾವುದೇ ಸರ್ಕಾರ ತನ್ನ ಪ್ರಜೆಯ ಮೇಲೆಯೇ ಅನುಮಾನ ಪಡುವುದು ಉತ್ತಮ ಬೆಳವಣಿಗೆಯಲ್ಲ. ತೆರಿಗೆದಾರರು ಸರಿಯಾದ ಪ್ರಮಾಣದಲ್ಲಿ ತೆರಿಗೆ ಕಟ್ಟಿ ತಲೆ ಎತ್ತಿ ನೆಮ್ಮದಿಯ ಜೀವನ ನಡೆಸಲು ಉತ್ತಮ ಅವಕಾಶವಿದೆ ಎಂದಿದ್ದಾರೆ’ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ.

 

Leave a Reply