ಬೆಳಕು ಮಾಡಿದ ರಾತ್ರಿಯ ಲೂಟಿ, ‘ಆಕಾಶಗಂಗೆ’ ದೃಶ್ಯವಂಚಿತರು 250 ಕೋಟಿ

author-ananthramuಮೇಲೆ ನೋಡೆ ಕಣ್ಣ ತಣಿಪ
ನೀಲಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
          ಚಿತ್ರ ಚತುರನಾರ್!
ಕಾಲದಿಂದೆ ಮಾಸದ ವಿ
       ಚಿತ್ರವೆಸಪನಾರ್
ಡಿ.ವಿ.ಜಿ. (ನಿವೇದನ)
ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಬಿಡುಗಡೆಮಾಡಿರುವ ಪಟ್ಟಿ ನೋಡಿದರೆ ಗಾಬರಿಯಾಗುತ್ತದೆ. ಜಗತ್ತಿನಲ್ಲಿ ದೃಷ್ಟಿ ವ್ಯತ್ಯಯವಾಗಿರುವವರ ಸಂಖ್ಯೆ 28.5 ಕೋಟಿ. ಈ ಪೈಕಿ ಸುಮಾರು ನಾಲ್ಕು ಕೋಟಿ ಮಂದಿಗೆ ಶಾಶ್ವತ ಅಂಧತ್ವವಿದೆ ಎನ್ನುತ್ತದೆ ಈ ವರದಿ. ಆದರೆ ಕಣ್ಣಿದ್ದೂ ದೃಶ್ಯವಂಚಿತರು ಇದ್ದಾರೆ. ಅವರ ಸಂಖ್ಯೆ 250 ಕೋಟಿ ಅಥವಾ ಜಗತ್ತಿನ ಜನಸಂಖ್ಯೆಯ ಸುಮಾರು ಮೂರನೆಯ ಒಂದು ಭಾಗ. ಇದು ಯಾವ ಲೆಕ್ಕದಲ್ಲಿ ಅನ್ನಿಸಬಹುದು.
ಒಮ್ಮೆ ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ, ಅದರಲ್ಲೂ ಹಳ್ಳಿಗಾಡುಗಳಲ್ಲಿ ಹುಟ್ಟಿದ್ದರೆ ಕೃಷ್ಣಪಕ್ಷದ ಇರುಳ ಬಾನಿನಲ್ಲಿ ಎಂಥೆಂಥ ಚಿತ್ರ, ಗೆರೆ, ಜ್ಯಾಮಿತಿಗಳನ್ನು ಕಲ್ಪಿಸಬಹುದಾಗಿತ್ತು ನಕ್ಷತ್ರ ತೋಟದಲ್ಲಿ. ಧ್ರವನಕ್ಷತ್ರ, ಮಹಾವ್ಯಾಧ, ವೃಶ್ಚಿಕ ಪುಂಜ, ಮೇಷರಾಶಿ, ಋತುಮಾನಕ್ಕನುಗುಣವಾಗಿ ಪ್ರಕೃತಿ ಈ ಸ್ಲೈಡ್ ಷೋ ನಡೆಸುತ್ತಿತ್ತು. ಅದನ್ನು ಅನುಭವಿಸಿರುವವರು ಪ್ರಕೃತಿಗೆ ಮಾರುಹೋಗುತ್ತಾರೆ, ವಿಶಾಲ ಆಕಾಶದ ಚಿತ್ರಗಳನ್ನೆಲ್ಲ ಭದ್ರವಾಗಿ ತಲೆ ತುಂಬಿಕೊಂಡು ಪ್ರೌಢರಾಗಿ ಬೆಳೆಯುತ್ತಾರೆ. ನಮ್ಮ ನೆಚ್ಚಿನ ದಾರ್ಶನಿಕ ಇವಿ ಡಿ.ವಿ. ಗುಂಡಪ್ಪನವರ `ನಿವೇದನ’ ಕವಿತೆಯ ಮೇಲಿನ ಒಂದು ಚರಣ ನಾಸ್ತಿಕರನ್ನೂ ಆಸ್ತಿಕರನ್ನಾಗಿಸುತ್ತದೆ, ಆಕಾಶದ ಚುಕ್ಕಿಗಳ ಚೆಲುವಿನ ಚಿತ್ತಾರಗಳನ್ನು ಮತ್ತೆ ಕಣ್ಣಮುಂದೆ ನಿಲ್ಲಿಸುತ್ತದೆ.
ಹೆದ್ದಾರಿಯಲ್ಲಿ ಹಾದಂತೆ ಕಾಣುವ ಒತ್ತೊತ್ತಾದ ನಕ್ಷತ್ರಗಳಿರುವ ಪಟ್ಟಿ ವಿವಿಧ ಊಹೆಗೆ ಎಡೆಗೊಡುತ್ತದೆ. ಇದೇ ಕ್ಷೀರಪಥ, ಆಕಾಶಗಂಗೆ, ಮಿಲ್ಕಿ ವೇ-ಸ್ಥಳೀಯ ಬ್ರಹ್ಮಾಂಡ, ಗೆಲಾಕ್ಸಿ ಇತ್ಯಾದಿ ಹೆಸರನ್ನೊತ್ತ ಮಹಾರಚನೆ. ಒತ್ತೊತ್ತಾಗಿ ಹೂ ಪೋಣಿಸಿದ ಹೂಮಾಲೆಯಂತೆ ಅದರಲ್ಲಿ ಪಿಳಿಪಿಳಿ ಬಿಡುವ ನಕ್ಷತ್ರದರ್ಶನ. ಇಂಥ ಗೆಲಾಕ್ಸಿ ಅಂದರೆ ಬ್ರಹ್ಮಾಂಡಗಳು ಎಷ್ಟಿದ್ದಾವು? ಅಥವಾ ಇದೊಂದೆಯೆ? 1920ರಲ್ಲಿ ಹಾರ್ಲೊ ಶಾಪ್ಲಿ ಮತ್ತು ಕರ್ಟಿಸ್ ಎಂಬ ಖಗೋಳಮಲ್ಲರು ಜಿದ್ದಾಜಿದ್ದಿ ನಡೆಸಿ, ಪಟ್ಟು ಸಡಿಲಿಸದೆಯೇ ವಾಗ್ವಾದ ಮಾಡಿದರು. ಇವರ ಮಧ್ಯೆ ಪ್ರವೇಶಿಸಿದ ಎಡ್ವಿನ್ ಹಬಲ್ ಎಂಬ ಮಹಾನುಭಾವ `ಅಯ್ಯೋ, ಕನಿಷ್ಠ 200 ಶತಕೋಟಿ ಗೆಲಾಕ್ಸಿಗಳು (ಬ್ರಹ್ಮಾಂಡ) ವಿಶ್ವದಲ್ಲಿವೆ. ಅದರಲ್ಲಿ ನಮ್ಮದೂ ಒಂದು’ ಎಂದು ಹೇಳಿ ಎಲ್ಲರ ಬಾಯಿ ತೆರೆಯುವಂತೆ ಮಾಡಿದ. ಜನಸಾಮಾನ್ಯರು ಇದನ್ನು ಊಹಿಸುವುದು ಹೇಗೆ? ಹತ್ತು ಕೋಟಿಯಲ್ಲಿ ನೀವೂ ಒಬ್ಬರು ಎಂದರೆ ಎಷ್ಟು ನಿರಾಶೆಯಾಗುತ್ತದೆ. ಅಂಥದ್ದರಲ್ಲಿ 200 ಶತಕೋಟಿ ಗೆಲಾಕ್ಸಿಗಳಲ್ಲಿ ನಮ್ಮದೂ ಒಂದು ಎಂದರೆ ನಿರಾಶೆಯಾಗಬೇಕೋ, ವಿಸ್ಮಯಪಡಬೇಕೋ ಆಯ್ಕೆ ನಿಮ್ಮದು.
ಆಕಾಶಗಂಗೆಗೆ ಸೆಲ್ಫಿ ತೆಗೆಯುವ ಹುಚ್ಚಿದ್ದರೆ ನಾವು ಇನ್ನಷ್ಟು ಹುಚ್ಚರಾಗುವಷ್ಟು ಅದರ ರೂಪ ಕಾಣುತ್ತಿತ್ತೇನೋ. ನಮ್ಮ ಸೌರಮಂಡಲ ಸುರುಳಿಯಾಕಾರದ ಆಕಾಶಗಂಗೆಯ ಒಂದು ಬಾಹುವಿನಲ್ಲಿ ಇದೆಯಂತೆ. ಕಾಲುತಿರುಚಿದ ಜೇಡದ ಚಿತ್ರವನ್ನು ನೆನಪಿಸಿಕೊಳ್ಳಿ. ಅದರ ತಿರುಚಿದ ಕಾಲಿನ ಒಂದು ಮೂಲೆಯಲ್ಲಿ ನಗಣ್ಯವಾಗಿ ನಮ್ಮ ಸೌರಮಂಡಲದ ನೆಲೆ ಇದೆಯಂತೆ. ಆಕಾಶಗಂಗೆಯ ಪಾರಮ್ಯವನ್ನು ಒಂದೆರಡು ವಿಸ್ಮಯಗಳ ಮೂಲಕ ಹೇಳಲೇಬೇಕು. ಮಧ್ಯದಲ್ಲಿ ಅದು ಉಬ್ಬಿದೆ ಅದು ಇಡ್ಲಿಯಂತೆ. ಇದರ ಅಂಚಿನಿಂದ ಬೆಳಕು ಒಂದು ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್ ವೇಗದಲ್ಲಿ ಧಾವಿಸುತ್ತ ಹೊರಟರೆ ಆಚೆಗೆ ಬರಲು 120 ಸಾವಿರ ಜ್ಯೋತಿರ್ವರ್ಷ ಬೇಕಂತೆ. ಇಡೀ ಆಕಾಶಗಂಗೆಯಲ್ಲಿ 100ರಿಂದ 400 ಬಿಲಿಯನ್ ನಕ್ಷತ್ರಗಳಿವೆ. ಹೆಚ್ಚುಕಡಿಮೆ ಅಷ್ಟೇ ಪ್ರಮಾಣದ ಗ್ರಹಗಳಿವೆ. ಇದನ್ನು ನೆನೆಸಿಕೊಂಡರೆ ನಮ್ಮ ತಲೆ ಗಿರ್ರೆನ್ನುತ್ತದೆ. ಇದಕ್ಕೇ ಇರಬಹುದು ನಮ್ಮಲ್ಲಿ ಅನಂತ (ಇನ್‍ಫಿನಿಟಿ) ಎಂಬ ಕಲ್ಪನೆ ಮೊಳೆತದ್ದು.
ಬ್ರಹ್ಮಾಂಡದ ಈ ಗುಟ್ಟುಗಳನ್ನೆಲ್ಲ ತಿಳಿದು ಎಷ್ಟೋ ವರ್ಷಗಳಾದವು. ಈ ಹಳೆಯ ಸಂಗತಿಗಳೆಲ್ಲ ಈಗ ಏಕೆ? ಖಗೋಳ ಅಧ್ಯಯನ ಮಾಡಿದ ವಿದ್ಯಾರ್ಥಿಗೂ ಇದೆಲ್ಲ ಗೊತ್ತು ತಾನೆ? ಹೌದು ಮನುಷ್ಯನ ಚಿಂತನಶೀಲತೆ, ಸೌಂದರ್ಯಾರಾಧನೆ, ವಿಸ್ಮಯಪಡುವ ಸ್ವಭಾವಸಿದ್ಧ ಗುಣಗಳನ್ನೆಲ್ಲ ಪಲ್ಟಿ ಹೊಡೆಸುತ್ತಿದೆ ನಾವು ಸೃಷ್ಟಿಸುತ್ತಿರುವ ಕೃತಕ ಬೆಳಕು.
2
ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಎದುರಿಗೆ ಹೆಡ್ ಲೈಟ್ ಹಾಕಿಕೊಂಡು ಭರ್ರನೆ ರಾತ್ರಿವೇಳೆ ಒಂದು ವಾಹನ ಹಾದುಹೋದರೆ, ನೀವು ಫುಟ್‍ಪಾತ್‍ನಲ್ಲಿ ನಡೆಯುತ್ತಿರಿ ಅಥವಾ ವಾಹನ ಸವಾರಿ ಮಾಡುತ್ತಿರಲಿ, ಅಕ್ಕಪಕ್ಕ ಏನಿದೆ ಎಂಬುದು ತಿಳಿಯುವುದಿಲ್ಲ. ಬೆಳಕು ನಿಮ್ಮ ಮೇಲೆ ಪ್ರಹಾರ ನಡೆಸಿರುತ್ತದೆ. ಹಳ್ಳಿಗಳಲ್ಲಿ ಹಿಂದೆ ಮೊಲಗಳನ್ನು ಬೇಟೆಯಾಡಲು ತಲೆಗೆ ಟಾರ್ಚ್ ಸಿಕ್ಕಿಸಿಕೊಂಡು ಅವು ಆ ಬೆಳಕಿನಲ್ಲಿ ದಿಗ್ಭ್ರಮೆಯಾಗಿ ನಿಂತೇಬಿಟ್ಟಾಗ ಶಿಕಾರಿ ಸುಲಭವಾಗುತ್ತಿತ್ತು.
ಮಾಲಿನ್ಯ ಕುರಿತು ಹೇಳುವಾಗಲೆಲ್ಲ ಜಲಮಾಲಿನ್ಯ, ನೆಲಮಾಲಿನ್ಯ, ವಾಯುಮಾಲಿನ್ಯ ಕುರಿತೇ ಮತ್ತೆ ಮತ್ತೆ ಹೇಳುತ್ತಿರುತ್ತೇವೆ. ಬೆಳಕಿನ ಮಾಲಿನ್ಯವೂ ಉಂಟೆಂಬುದು ನಮ್ಮ ಅನುಭವಕ್ಕೆ ಬಂದರೂ ಅದರ ಬಗ್ಗೆ ಹೆಚ್ಚು ನಿಗಾ ಇಲ್ಲ. ಪ್ರಖರ ಬೆಳಕಿನಿಂದ ನಮಗೆ ಬಾಧೆಯಾಗುತ್ತದೆ, ಆಕಾಶ ವೀಕ್ಷಣೆಗೆ ಪ್ರತಿಕೂಲವಾಗಿ ನಿರಾಶೆ ಕಾಡುತ್ತದೆ. ವನ್ಯಜೀವಿಗಳು ದಿಕ್ಕುಕೆಡುತ್ತವೆ, ನಿಶಾಚರಿ ಜೀವಿಗಳು ಅನಪೇಕ್ಷಿತ ಜಾಗಕ್ಕೆ ಗುಳೆಹೋಗುತ್ತವೆ. ಅವುಗಳ ವಲಸೆಗೆ ಬೆಳಕು ಅಡ್ಡಬರುತ್ತದೆ. ಇನ್ನು ನಮಗೋ ಮೆಲಾಟಿನ್ ಉತ್ಪನ್ನವೇ ಕಡಿಮೆಯಾಗುತ್ತದೆ. ನಿದ್ರಾಹೀನ ಸ್ಥಿತಿ ಬರುತ್ತದೆ. ಮಲಗುವಾಗ ಕಿಟಕಿಯಿಂದ ಬೆಳಕಿನ ದೊಡ್ಡ ದೂಲ ಬಂದರೆ ತಕ್ಷಣ ಏನು ಮಾಡುತ್ತೀರಿ? ಕಿಟಕಿ ಮುಚ್ಚಿ ಕರ್ಟನ್ ಎಳೆಯುತ್ತೀರಿ ತಾನೆ?
ಸದ್ಯದ ಮಾತು ಆಕಾಶ ವೀಕ್ಷಣೆಗೆ ಸಂಬಂಧಿಸಿದ್ದು. ನಗರವಾಸಿಗಳು ನಮ್ಮ ಆಕಾಶಗಂಗೆಯ ವೀಕ್ಷಣೆಯ ಅವಕಾಶದಿಂದಲೇ ವಂಚಿತರಾಗುತ್ತಿದ್ದಾರೆಂದು ಈಗ ಜಗತ್ತಿನಾದ್ಯಂತ ಹವ್ಯಾಸಿ ಖಗೋಳ ವಿಜ್ಞಾನಿಗಳು ದೊಡ್ಡ ದನಿ ತೆಗೆದಿದ್ದಾರೆ. ಸುಲಭಕ್ಕೆ ವೀಕ್ಷಿಸಬಹುದಾದ ಮಹಾವ್ಯಾಧ ನಕ್ಷತ್ರ ಪುಂಜವನ್ನು ನೋಡಲು ನಗರ ತೊರೆದು ಪ್ರಶಾಂತ ಗುಡ್ಡದ ಮೇಲೆ ವೀಕ್ಷಿಸಬಹುದಾದ ಸ್ಥಿತಿ ಉಂಟಾಗಿದೆ. ಜಗತ್ತಿನ ಯಾವ ಭಾಗ ಹೆಚ್ಚು ಬೆಳಕಿನ ಮಾಲಿನ್ಯಕ್ಕೆ ತುತ್ತಾಗಿದೆ ಎಂಬುದನ್ನು ಅಧ್ಯಯನ ಮಾಡಲೆಂದೇ `Light Pollution Science and Technology Institute-Italy’ ಹತ್ತುವರ್ಷಗಳ ಹಿಂದೆ ಒಂದು ಅಟ್ಲಾಸ್ ಪ್ರಕಟಿಸಿತ್ತು. ಕಳೆದ ತಿಂಗಳು ಅದನ್ನು ಪರಿಷ್ಕರಿಸಿ ಈಗ ಹೊಸ ಅಟ್ಲಾಸ್ ತಂದಿದೆ. ಇದೇನೂ ಸುಲಭದ ಕೆಲಸವಲ್ಲ. ಜಗತ್ತಿನ ಬೇರೆ ಬೇರೆ ಕಡೆ 3,500  ಮಾಪನಮಾಡಿ ಈ ಸಂಸ್ಥೆ ಇರುಳು ಬಾನಿನ ಚಿತ್ರಣವನ್ನು ರೂಪಿಸಿದೆ. ಇದಲ್ಲದೆ ಅಮೆರಿಕದ ನಾಸಾ ಸಂಸ್ಥೆ ಉಡಾವಣೆ ಮಾಡಿರುವ `ಸುಯೋಮಿ’ ಧ್ರುವ ಪರಿಭ್ರಮಣ ಉಪಗ್ರಹ ತೆಗೆದಿರುವ ಛಾಯಾಚಿತ್ರಗಳನ್ನು ಬಳಸಿಕೊಂಡಿದೆ. ಈಗ ಗೂಗಲ್ ಮ್ಯಾಪ್‍ನಲ್ಲೂ ಜಗತ್ತಿನ ಬೆಳಕಿನ ಮಾಲಿನ್ಯದಲ್ಲಿ ಮುಂದಿರುವ ದೇಶಗಳ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯ.
ಅಮೆರಿಕದ ಶೇ.99 ಜನರಿಗೆ, ಯೂರೋಪಿನ ಕೆಲವು ದೇಶಗಳಿಗೆ ಬೆಳಕಿನ ಮಾಲಿನ್ಯ ತೀವ್ರವಾಗಿ ತಟ್ಟಿದೆ. ಸಿಂಗಪುರ ಮೊದಲ ಸ್ಥಾನದಲ್ಲಿದೆ. ಆಫ್ರಿಕದ ಬಹು ಭಾಗದಲ್ಲಿ ಇರುಳು ಬಾನು ತನ್ನ ಇರವನ್ನು ಪ್ರಕಟಿಸಿದೆ. ಕೆನಡ ಮತ್ತು ಆಸ್ಟ್ರೇಲಿಯ ಕೂಡ ಆಕಾಶಗಂಗೆಯ ದೃಶ್ಯದಿಂದ ಸದ್ಯಕ್ಕೆ ವಂಚಿತವಾಗಿಲ್ಲ. ಭಾರತ `ಪರವಾಗಿಲ್ಲ’ ಎನ್ನುವ ಸಾಲಿಗೆ ಸೇರಿದೆ. ಇಟಲಿಯಂತೂ ಗಬ್ಬೆದ್ದು ಹೋಗಿದೆ ಎನ್ನುತ್ತಾನೆ ಈ ಅಟ್ಲಾಸನ್ನು ತಯಾರಿಸಿದವರಲ್ಲಿ ಒಬ್ಬನಾದ ಫಾಲ್ಚಿ. ಆತ ಇನ್ನೊಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾನೆ. ಭೂಮಿಯ ಮೇಲೆ ಜೀವಿ ಉಗಮವಾದಾಗಿನಿಂದ ಅವುಗಳ ವಿಕಾಸ ಹಗಲು, ಇರುಳಿನ ಪ್ರಮಾಣದ ಪರಿಸ್ಥಿತಿಗೆ ಹೊಂದಿಕೊಂಡಿದೆ. ಮುಂದೆ ಇದು ಯಾವ ದಾರಿ ಹಿಡಿಯುತ್ತದೋ ತಿಳಿಯದು ಎನ್ನುತ್ತಾನೆ. ಹಳೆಯ ಬಲ್ಬುಗಳಿಗಿಂತ ಈಗಿನ ಎಲ್.ಇ.ಡಿ. ಬಲ್ಬುಗಳಲ್ಲಿ ಪ್ರಖರತೆ ಕುಗ್ಗಿಸಲು ಅವಕಾಶವಿದೆ. ಮನಸ್ಸು ಮಾಡಬೇಕು ಎನ್ನುವುದು ಅವನು ನೀಡುವ ಪರಿಹಾರ.
ಬಹುಶಃ ಗೆಲಿಲಿಯೋ ಕಾಲದಲ್ಲಿ ಇಂಥದೇ ಪರಿಸ್ಥಿತಿ ಇದ್ದಿದ್ದರೆ ಗುರುಗ್ರಹದ ಉಪಗ್ರಹಗಳನ್ನು ಆತ ದೂರದರ್ಶಕದ ಮೂಲಕ ವೀಕ್ಷಿಸಲು ಸಾಧ್ಯವಾಗುತ್ತಿತ್ತೆ? ಇದು ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಏಕೆಂದರೆ ಆ ಭೂಪತಿ ಅಸಲೀ ಬಾನ ಚಿತ್ರಣವನ್ನೇ ಜಗತ್ತಿನ ಮುಂದೆ ಇಟ್ಟಾಗ ಆಗ ತಳೆದಿದ್ದ ಕಲ್ಪನೆಗಳೆಲ್ಲವೂ ಟುಸ್ ಎಂದವು.

Leave a Reply