ಕೊಹ್ಲಿ, ಅಶ್ವಿನ್ ಬ್ಯಾಟಿಂಗ್ ಮುಂದೆ ಕಂಗಾಲಾದ್ರು ಕೆರಿಬಿಯನ್ನರು..

ಡಿಜಿಟಲ್ ಕನ್ನಡ ಟೀಮ್:

ನಾಯಕ ವಿರಾಟ್ ಕೊಹ್ಲಿ (200) ದಾಖಲೆಯ ದ್ವಿಶತಕ.. ಆಲ್ರೌಂಡರ್ ಆರ್.ಅಶ್ವಿನ್ (113) ಅಮೋಘ ಶತಕ.. ಅಮಿತ್ ಮಿಶ್ರಾ (53) ಉಪಯುಕ್ತ ಅರ್ಧಶತಕ.. ಇವು ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದ ಪ್ರಮುಖ ಅಂಶಗಳು.

ಮೊದಲ ದಿನದಾಟದ ಮೊತ್ತ 4 ವಿಕೆಟ್ ಗೆ 302 ರನ್ ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಭಾರತ, 566 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ದಿನದಾಟದ ಅಂತಿಮ ಹಂತದಲ್ಲಿ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ 31 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ ಪಂದ್ಯದ ದ್ವಿತೀಯ ದಿನದಾಟವೂ ಭಾರತದ ಪಾಲಾಗಿದ್ದು, ಆತಿಥೇಯರು ನಿಧಾನವಾಗಿ ಕುಸಿತ ಕಾಣುತ್ತಿದೆ.

ದಿನದಾಟ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ (200 ರನ್, 283 ಎಸೆತ, 24 ಬೌಂಡರಿ) ಮತ್ತು ಆರ್. ಅಶ್ವಿನ್ (113 ರನ್, 253 ಎಸೆತ, 12 ಬೌಂಡರಿ) ತಮ್ಮ ಜತೆಯಾಟದಲ್ಲಿ ದಾಖಲಿಸಿದ್ದು 168 ರನ್. ಈ ಇಬ್ಬರು ಎರಡನೇ ದಿನದಾಟದ ಮೊದಲ ಅವಧಿಯಲ್ಲಿ ವಿಕೆಟ್ ಕಳೆದುಕೊಳ್ಳದೇ ಸುಲಭವಾಗಿ ರನ್ ಪೇರಿಸುವ ಮೂಲಕ ಕೆರಿಬಿಯನ್ನರನ್ನು ಕಾಡಿದ್ರು. ಭಾರತದಾಚೆಗಿನ ಪಿಚ್ ಗಳಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಭಾರತ ತಂಡದ ನಾಯಕ ಎಂಬ ಶ್ರೇಯಸ್ಸು ಕೊಹ್ಲಿ ಪಾಲಾಯ್ತು. ಭೋಜನ ವಿರಾಮದ ಹೊತ್ತಿಗೆ 400 ರ ಗಡಿ ದಾಟಿದ ಭಾರತ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಸೂಚನೆ ನೀಡಿತು.

ದಿನದಾಟದ ಎರಡನೇ ಅವಧಿಯ ಆರಂಭದಲ್ಲೇ ವಿರಾಟ್ ಕೊಹ್ಲಿ, ಗೆಬ್ರಿಯಲ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿದ್ರು. ನಂತರ ಬಂದ ವೃದ್ಧಿಮಾನ್ ಸಾಹ (40), ಅಮಿತ್ ಮಿಶ್ರಾ (53)ರ ಉತ್ತಮ ಕಾಣಿಕೆಯಿಂದ ತಂಡ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂತು. ನಂತರ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಗೆ ಅಗತ್ಯದ ಆರಂಭ ಸಿಗಲಿಲ್ಲ. ಆರಂಭಿಕ ರಾಜೇಂದ್ರ ಚಂದ್ರಿಕಾ (16) ಶಮಿ ಎಸೆತಕ್ಕೆ ಬಲಿಯಾದರು. ಇನ್ನು ಕ್ರೇಗ್ ಬ್ರಾಥ್ ವೈಟ್ (11 ಬ್ಯಾಟಿಂಗ್) ಮತ್ತು ನೈಟ್ ವಾಚ್ಮನ್ ದೇವೇಂದ್ರ ಬಿಶೂ ಕ್ರೀಸ್ ನಲ್ಲಿದ್ದು, ಮೂರನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.

ಭಾರತದ ವೇಗಿಗಳು ಶುಭಾರಂಭ ಮಾಡಿದ್ದು ಸ್ಪಿನ್ನರ್ ಗಳೂ ಬಲೆ ಬೀಸುತ್ತಿದ್ದಾರೆ. ಮೂರನೇ ದಿನ ಮಧ್ಯಾಹ್ನದ ನಂತರ ಪಿಚ್ ವರ್ತನೆ ಬದಲಾಗುವ ನಿರೀಕ್ಷೆಯಿದ್ದು ವಿಂಡೀಸ್ ಬ್ಯಾಟ್ಸ್ ಮನ್ ಗಳ ಮುಂದೆ ಗುರುತರ ಸವಾಲು ನಿಂತಿದೆ.

ಸಂಕ್ಷಿಪ್ತ ಸ್ಕೋರ್ (ಎರಡನೇ ದಿನದಾಟ ಮುಕ್ತಾಯಕ್ಕೆ)

ಭಾರತ ಮೊದಲ ಇನಿಂಗ್ಸ್ (566ಕ್ಕೆ 8, 161.5 ಓವರ್)

ವಿಜಯ್ 7, ಧವನ್ 84, ಪೂಜಾರ 16, ಕೊಹ್ಲಿ 200, ರಹಾನೆ 22, ಅಶ್ವಿನ್ 113, ಸಾಹ 40, ಮಿಶ್ರಾ 53, ಶಮಿ ಅಜೇಯ 17, ಇತರೆ 14 (ಬಿಶೂ 163ಕ್ಕೆ 3, ಕ್ರೇಗ್ ಬ್ರಾಥ್ ವೈಟ್ 65ಕ್ಕೆ 3, ಶಾನನ್ ಗೆಬ್ರಿಯಲ್ 65ಕ್ಕೆ 2).

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ (31ಕ್ಕೆ 1, 16 ಓವರ್)

ಕ್ರೇಗ್ ಬ್ರಾಥ್ ವೈಟ್ ಅಜೇಯ 11, ಚಂದ್ರಿಕಾ 14, ಬಿಶೂ ಅಜೇಯ 0 (ಮೊಹಮದ್ ಶಮಿ 6ಕ್ಕೆ 1)

Leave a Reply