ಉನಾ ಘಟನೆ, ದಲಿತರ ಮೇಲಿನ ದೌರ್ಜನ್ಯ: ದಲಿತ ವಿದ್ವಾಂಸ ನರೇಂದ್ರ ಜಾಧವ್ ರಾಜ್ಯಸಭೆಯಲ್ಲಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಎರಡು ವಾರಗಳ ಹಿಂದೆ ಗುಜರಾತ್ ನ ಉನಾ ಪ್ರದೇಶದಲ್ಲಿ ನಾಲ್ವರು ದಲಿತ ಯುವಕರ ಮೇಲಿನ ಅಮಾನವೀಯ ಹಲ್ಲೆಗೆ ರಾಷ್ಟ್ರವ್ಯಾಪಿ ಖಂಡನೆಯಾಗಿದ್ದು, ರಾಜಕೀಯ ಆರೋಪ ಪ್ರತ್ಯಾರೋಪಗಳು ಕೇಳಿಬಂದದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ಬಗ್ಗೆ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಡಾ.ನರೇಂದ್ರ ಜಾಧವ್ ಸಹ ಮಾತನಾಡಿದ್ದಾರೆ. ಈ ಹಿಂದೆ ಸೋನಿಯಾ ಗಾಂಧಿಯವರ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿದ್ದವರನ್ನು ಬಿಜೆಪಿ ರಾಜ್ಯಸಭೆ ಸದಸ್ಯನನ್ನಾಗಿ ಮಾಡಿದೆ. ಅಂಬೇಡ್ಕರ್ ಕುರಿತಾಗಿಯೇ 20 ಪುಸ್ತಕಗಳನ್ನು ಬರೆದಿರುವವರು ಜಾಧವ್.

ದಲಿತರ ಮೇಲಾದ ದೌರ್ಜನ್ಯದಲ್ಲಿ ರಾಜಕೀಯ ಚರ್ಚೆಗಳೇ ಮುನ್ನಡೆ ಕಾಣುತ್ತಿರುವಾಗ ನರೇಂದ್ರ ಜಾಧವ್ ಅವರ ಮಾತುಗಳು ಭಿನ್ನವಾಗಿ ಗಮನಸೆಳೆಯುತ್ತವೆ. ಅವರು ಮಾತನಾಡಿದ್ದಿಷ್ಟು:

ಗುಜರಾತ್ ನಲ್ಲಿ ನಡೆದಿರುವ ಈ ಕೃತ್ಯ ಅತ್ಯಂತ ಹೇಯ ಹಾಗೂ ಭೀಕರ. ಇದು ದೇಶವೇ ತಲೆತಗ್ಗಿಸುವಂತಹ ಘಟನೆ. ಹೀಗಾಗಿ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ಅದೂ ಶೀಘ್ರದಲ್ಲಿ. ಈ ಘಟನೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಲು ಇಚ್ಛಿಸುವುದಿಲ್ಲ. ಸಾಕಷ್ಟು ವರ್ಷಗಳಿಂದ ನಮ್ಮ ದೇಶವನ್ನು ಅಂಟಿಕೊಂಡಿರುವ ಜಾತಿ ವ್ಯವಸ್ಥೆಯ ಕೆಟ್ಟ ರೋಗದ ಚಿಹ್ನೆಯಂತೆ ಇಂತಹ ಘಟನೆಗಳು ಗೋಚರಿಸುತ್ತಿವೆ.

ದೇಶದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯದ ಚಿತ್ರಣ ನೋಡುವುದಾದ್ರೆ, ದ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊ (ಎನ್ಸಿಆರ್ಬಿ)ನ 2014 ರ ವರೆಗಿನ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಜಾತಿಯವರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 47,064. ಇನ್ನು 2015 ರಲ್ಲಿ ಇದರ ಸಂಖ್ಯೆ 54,355 ರಷ್ಟು ಹೆಚ್ಚಿದೆ ಎಂಬುದು ನಮ್ಮ ಸಂಸತ್ ಸದಸ್ಯರಾದ ಮಾನ್ಯ ಶ್ರೀ ಪುನಿಯಾ ಅವರು ನೀಡಿದ ಮಾಹಿತಿ.

ಇಲ್ಲಿ ನಾವು ಪ್ರಮುಖವಾಗಿ ಗಮನಿಸಬೇಕಿರುವ ಅಂಶವೆಂದರೆ, ದೇಶದ ಯಾವ ರಾಜ್ಯಗಳಲ್ಲಿ ಎಷ್ಟು ಪ್ರಮಾಣದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿವೆ ಎಂದು ನೋಡುವುದು. ಪ್ರತಿಲಕ್ಷ ಜನಸಂಖ್ಯೆಗೆ ಹೋಲಿಕೆಯೊಂದಿಗೆ ರಾಜ್ಯವಾರು ಪ್ರಮಾಣ ನೋಡಿದಾಗ ದೇಶದಾದ್ಯಂತ ಈ ಅನಿಷ್ಠ ಪದ್ಧತಿ ಇರುವುದು ಕಾಣುತ್ತದೆ. 2014 ರಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ದಾಖಲಾದ ಮೊದಲ ಮೂರು ರಾಜ್ಯಗಳೆಂದರೆ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರ.

ಸದ್ಯ ಸಂಸತ್ತಿನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಗುಜರಾತ್ ರಾಜ್ಯದಲ್ಲಿ ಇದರ ಪ್ರಮಾಣ ಕಡಿಮೆ ಇದೆ. ಗುಜರಾತ್ ನಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.2.4 ರಷ್ಟಿದ್ದರೆ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಲ್ಲಿ ಶೇ. 17, 18 ರಷ್ಟು ಪ್ರಮಾಣವಿದೆ.

ಈ ರೀತಿಯ ಘಟನೆಗಳು ನಡೆಯುತ್ತಿರುವುದಕ್ಕೆ ಕಾರಣವೇನು ಅಂತಾ ನೋಡುವುದಾದ್ರೆ, ನನಗೆ ಕಂಡುಬರುವುದು ಮೂರು ಅಂಶಗಳು..

ಮೊದಲನೆಯದು, ದೇಶದಲ್ಲಿ ಪ್ರಬಲ ಜಾತಿಗಳು ತಮ್ಮ ಅಧಿಕಾರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ದಲಿತರನ್ನು ಶೋಷಿಸುತ್ತಿರುವುದು. 1936 ರಲ್ಲೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದಲ್ಲಿನ ಜಾತಿ ವ್ಯವಸ್ಥೆಯನ್ನು ಹೀಗೆ ವ್ಯಾಖ್ಯಾನಿಸಿದ್ದರು.. ‘ಭಾರತದಲ್ಲಿನ ಜಾತಿ ವ್ಯವಸ್ಥೆ ಶ್ರೇಣಿಕೃತ ಅಸಮಾನತೆ, ಪವಿತ್ರ ಭಾವನೆಯ ಆರೋಹಣ ಮತ್ತು ನಿಂದನೆಯ ಅವರೋಹಣ ಕ್ರಮವಾಗಿದೆ.’

ದಲಿತರ ಮೇಲಿನ ಬಹುತೇಕ ಎಲ್ಲಾ ದೌರ್ಜನ್ಯ ಪ್ರಕರಣಗಳು ಈ ಅಂಶಗಳ ಸೂಚಕ. ಪ್ರಸ್ತುತ ಸಂದರ್ಭದಲ್ಲಿ ದಲಿತರು ಭಾರತದ ಸಂವಿಧಾನದಲ್ಲಿ ತಮಗೆ ನೀಡಲಾಗಿರುವ ಮೂಲಭೂತ ಹಕ್ಕನ್ನು ಕೇಳುತ್ತಿದ್ದಾರೆ. ಇದರಿಂದ ಮೇಲ್ವರ್ಗದಲ್ಲಿ ಗುರುತಿಸಿಕೊಂಡಿರುವ ಸಮುದಾಯಗಳು ತಮ್ಮ ಹಿಡಿತ ಕೈತಪ್ಪುತ್ತದೆ ಎಂದು ಭಾವಿಸಿ ದಲಿತರ ಮೇಲೆ ದೌರ್ಜನ್ಯಕ್ಕೆ ಮುಂದಾಗುತ್ತಿದ್ದಾರೆ.

ಎರಡನೇಯ ಅಂಶ ಎಂದರೆ, ದೇಶದಲ್ಲಿ ದಲಿತ ವರ್ಗದವರಿಗೆ ನ್ಯಾಯ ದೊರಕುವ ಪ್ರಮಾಣ ತೀರಾ ಕಡಿಮೆ ಮಟ್ಟದಲ್ಲಿರುವುದು. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪರಿಶಿಷ್ಟರ ವಿರುದ್ಧದ ಅಪರಾಧ ಪ್ರಕರಣಗಳು ಶೇ.45 ರಷ್ಟಿದ್ದರೆ, ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳ ಪ್ರಮಾಣ ತೀರಾ ಕಡಿಮೆ ಇದೆ. ಅದೂ ಶೇ.22.4 ರಷ್ಟು ಮಾತ್ರ. ಈ ರೀತಿಯ ಅಪರಾಧ ಪ್ರಕರಣಗಳ ಸರಾಸರಿಯನ್ನು ರಾಜ್ಯಾವಾರು ಪ್ರಮಾಣದಲ್ಲಿ ನೋಡಿದರೆ, ಇಲ್ಲೂ ಅಗ್ರಸ್ಥಾನದಲ್ಲಿ ನಿಲ್ಲುವುದು ಬಿಹಾರ. ಗುಜರಾತಿನಲ್ಲಿ ಇದರ ಪ್ರಮಾಣ ಕೇವಲ ಶೇ. 2.9 ರಷ್ಟಿದೆ. ಇದರಿಂದ ಗುಜರಾತ್ ನಲ್ಲಿ ಹಲವು ವರ್ಷಗಳಿಂದ ದಲಿತರ ಮೇಲೆ ಹೆಚ್ಚಿನ ದೌರ್ಜನ್ಯ ನಡೆಯುತ್ತಿಲ್ಲ.

ಮೂರನೇ ಅಂಶ ಅಂದರೆ, ಆಡಳಿತ ವರ್ಗ, ಪೊಲೀಸ್ ಹಾಗೂ ಇತರೆ ಅಧಿಕಾರಿಗಳಲ್ಲಿ ದಲಿತರ ಪರವಾದ ತುಡಿತದ ಕೊರತೆ ಹಾಗೂ ಪೂರ್ವಾಗ್ರಹ ಮನೋಭಾವ.

‘ಜಾತಿ ವಿನಾಶ’ ಎಂಬ ಕೃತಿಯಲ್ಲಿ ಅಂಬೇಡ್ಕರ್ ಪ್ರತಿಪಾದಿಸುವುದೇನೆಂದರೆ, ‘ಜಾತಿ ವ್ಯವಸ್ಥೆ ಕೊನೆಗೊಳ್ಳಬೇಕೆಂದರೆ ಧರ್ಮಶಾಸ್ತ್ರಗಳನ್ನು ಸ್ಫೋಟಿಸಬೇಕು’ ಎಂಬುದು. ಅಷ್ಟು ತೀವ್ರ ನೆಲೆಯಲ್ಲಿ ಪ್ರತಿಸ್ಪಂದಿಸುವುದಕ್ಕೆ ಆಗದಿದ್ದರೂ, ಈ ಪರಿಸ್ಥಿತಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಯಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದರೆ…

ನನ್ನ ಪ್ರಕಾರ ದಲಿತರ ಮೇಲಿನ ದೌರ್ಜನ್ಯ ತಪ್ಪಿಸಲು ಸಂವಿಧಾನದ ವ್ಯಾಪ್ತಿಯಲ್ಲಿ ನಾವು ನಾಲ್ಕು ಕ್ರಮಗಳನ್ನು ಕೈಗೊಳ್ಳಬಹುದು. ಅವುಗಳು ಹೀಗಿವೆ..

  1. ದೇಶದಲ್ಲಿ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಅದರಲ್ಲೂ 2015ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತಿದ್ದುಪಡಿಯಾದ ಪರಿಶಿಷ್ಠ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುವುದು ಬಹಳ ಮುಖ್ಯ.
  2. ಇಂದಿಗೂ ಮರ್ಯಾದಾ ಹತ್ಯೆಗಳು ನಡೆಯುತ್ತಿದ್ದು, ಈ ಪರಿಸ್ಥಿತಿ ನಿರ್ಮೂಲನೆ ಮಾಡಲು ಅಂತರ್ಜಾತಿ ವಿವಾಹಕ್ಕೆ ಉತ್ತೇಜನ ನೀಡುವ ಅಗತ್ಯವಿದೆ.
  3. ಉಪನಾಮಗಳ ಮೂಲಕ ಜಾತಿ ಗುರುತಿಸುವ ಹಿನ್ನೆಲೆಯಲ್ಲಿ ಅದರ ಬಳಕೆ ನಿಲ್ಲಿಸುವುದು.
  4. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಏಳಿಗೆಗಾಗಿ ಇರುವ ಉಪಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವುದು.

ದೇಶದ ಜನಸಂಖ್ಯೆಯಲ್ಲಿ ಪರಿಶಿಷ್ಟರು ಶೇ.16.8 ರಷ್ಟಿದ್ದಾರೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಪರಿಶಿಷ್ಟರ ಏಳಿಗೆಗಾಗಿ ಹಣ ನೀಡುವ ಉಪಯೋಜನೆ ಜಾರಿ ಮಾಡಲಾಗಿತ್ತು. ಗುಜರಾತ್ ನಲ್ಲಿ ಇದರ ಪ್ರಮಾಣ ಕಡಿಮೆ ಇದೆ ಎಂದು ಹೇಳಲಾಗಿದೆ. ಅದು ನಿಜ. ಆದರೆ, ಈ ಉಪಯೋಜನೆಗಳಿಗೆ ಮೀಸಲಿಡುವ ಹಣದ ಪ್ರಮಾಣ ಈವರೆಗೂ ಶೇ.9 ರ ಗಡಿ ದಾಟಿಲ್ಲ. ಇದು ಕೇವಲ ಈಗಿನ ಪರಿಸ್ಥಿತಿಯಲ್ಲ ಹಿಂದಿನ ವರ್ಷಗಳ ಪರಿಸ್ಥಿತಿಯೂ ಇದೇ ಆಗಿತ್ತು.

ಈ ಉಪಯೋಜನೆಗಳ ಅನುಷ್ಠಾನ ಎಲ್ಲೆಡೆ ದುರ್ಬಲಗೊಂಡಿರುವುದು ದಾಖಲೆಗಳಲ್ಲಿವೆ. ಈ ಯೋಜನೆಗಳಿಗಾಗಿ ಸರಿಯಾದ ರೀತಿಯಲ್ಲಿ ಹಣ ಮೀಸಲಿಟ್ಟಿಲ್ಲ. ಹೀಗಾಗಿ ಈ ಯೋಜನೆಗಳ ಜಾರಿ ಹಾಗೂ ಗುಜರಾತ್ ನ ಉನಾ ಪ್ರದೇಶದಲ್ಲಿ ನಡೆದಿರುವಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.

Leave a Reply