‘ನನಗೆ ಕೊಡಬೇಕೆಂದಿರೋ ಹಣ ಕಷ್ಟದಲ್ಲಿರೋ ಆಕೆಗೆ ಕೊಡಿ..’: ಕರ್ನಾಟಕದ ಸಿಯಾಚಿನ್ ಹುತಾತ್ಮರ ಮನೆಗೆ ಭೇಟಿ ಕೊಟ್ಟಾಗ ಕಂಡ ಉದಾತ್ತ ಬಿಂಬ!

ರಂಗಸ್ವಾಮಿ ಮೂಕನಹಳ್ಳಿ

ಸುಬೇದಾರ್ ನಾಗೇಶ್, ಸಿಪಾಯಿ ಮಹೇಶ್… ಯಾರಿವರು? ಏನಾದರೂ ನೆನಪಾಯ್ತಾ? ಇಲ್ಲ ಅಲ್ವಾ.. ಸರಿ ಇನ್ನೊಂದು ಹೆಸರು ಹೇಳ್ತಿನಿ. ಆಗ ಏನಾದರು ನೆನಪಾಗಬಹುದು… ಹನುಮಂತಪ್ಪ ಕೊಪ್ಪದ… ಯೆಸ್, ನೆನಪನ್ನು ಸ್ವಲ್ಪ ರಿಫ್ರೆಶ್ ಮಾಡುವ ಇರಾದೆ ನಮ್ಮದು.

ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಸಿಯಾಚಿನ್ ನಲ್ಲಿ ಹಠಾತ್ ಹಿಮಪಾತದಿಂದ ನಮ್ಮ ಸೈನ್ಯದ ಹತ್ತು ಜನ ಸೈನಿಕರು ಪ್ರಾಣ ತೆತ್ತರು. ಹನುಮಂತಪ್ಪ ಕೊಪ್ಪದ ಜೀವಂತವಾಗಿ 25 ಅಡಿ ಹಿಮದ ಅಡಿಯಲ್ಲಿ ಹೂತುಹೋಗಿದ್ದ ಸ್ಥಿತಿಯಲ್ಲಿ ಸಿಕ್ಕರು. ಅದೂ ಘಟನೆ ನೆಡೆದ  ಆರು ದಿನಗಳ  ನಂತರ! ಮೈನಸ್ ಅರವತ್ತು ಡಿಗ್ರಿ ಸೆಲ್ಸಿಯಸ್ ನಲ್ಲಿ ಜೀವಂತ ಸಮಾಧಿಯಾಗಿದ್ದ ಹನುಮಂತಪ್ಪ  ಸಿಕ್ಕಾಗ ಬದುಕಿದ್ದರೂ ನಂತರ ನಮ್ಮನ್ನೆಲ್ಲಾ ಅಗಲಿದ್ದು ತಿಳಿದ ಸಂಗತಿಯಾಗಿದೆ.
ನೆನಪಾಯ್ತು ಅಲ್ವಾ, ಮಡಿದ ಹತ್ತು ಜನ ನಮ್ಮ ಸೈನಿಕರಲ್ಲಿ ಮೂವರು ಕನ್ನಡಿಗರು!
ಸಿಯಾಚಿನ್ ನಲ್ಲಿ ಕರ್ನಾಟಕದ ಮೂವರು ಸಿಪಾಯಿಗಳು ಮಡಿದಾಗ ಆ ಬಿಸಿಯಲ್ಲಿ ಎಲ್ಲರೂ ‘ಶಹಿದ್ ಸೈನಿಕರಿಗೆ ನಮನ’ ‘ಮತ್ತೆ ಹುಟ್ಟಿ ಬಾ’ ಹೀಗೆ ಹತ್ತಾರು ಭಾವೋನ್ಮಾದದ, ಫ್ಲೆಕ್ಸ್ ಬರೆಸಿ ಸಿಕ್ಕ ಸಿಕ್ಕ ಜಾಗದಲೆಲ್ಲ ಹಾಕಿದರು.  ಕರ್ನಾಟಕದ ಉದ್ದಗಲಕ್ಕೂ  ಈ ಸೈನಿಕರ ಸಾವಿಗೆ ಶ್ರದ್ಧಾಂಜಲಿ ಅರ್ಪಿಸುವ ಬ್ಯಾನರ್ ಗಳು ಫ್ಲೆಕ್ಸ್ ಗಳನ್ನು ಹಾಕುವ ಬದಲು ಅದೇ ದುಡ್ಡನ್ನು ಸೇರಿಸಿ ಆ ಸೈನಿಕರ ಮನೆಯವರಿಗೆ ಕೊಟ್ಟಿದ್ದರೆ ಅವರ ಬದುಕು ಹಸನಾಗುತಿತ್ತು. ಅವರ ಮಕ್ಕಳ ಭವಿಷ್ಯ ಉಜ್ವಲವಾಗುತಿತ್ತು.
ಈ ಬಿಸಿಯೆಲ್ಲ ಆರಿದ ಮೇಲೆ ನಾವೊಂದಿಷ್ಟು ಮಂದಿ ಈ ಯೋಧರ ಕುಟುಂಬಕ್ಕೆ ಭೇಟಿ ಕೊಡುವುದಕ್ಕೆ ಯೋಜಿಸಿದೆವು. ಮೃತ ಯೋಧರ ಕುಟುಂಬಕ್ಕೆ ಸಹಾಯ ಮಾಡುವುದರ ಜತೆಗೆ, ನಿಜಕ್ಕೂ ಅವರಿಗೆ ಎಷ್ಟು ಸಹಾಯ ಸಿಕ್ಕಿದೆ/ಇಲ್ಲ ಎನ್ನುವುದರ ಲೆಕ್ಕ ಸಿಗುತ್ತೆ.  ನಂತರ ಪ್ರತಿಯೊಬ್ಬ ಯೋಧನ ಮನೆಗೆ ಹೋಗಿ ನಿಧಾನವಾಗಿ ಅವರ ಕಷ್ಟ ಸುಖ ಆಲಿಸುವುದು. ಸತ್ತಾಗ ಸರಕಾರಗಳು ಕೊಟ್ಟಿದ್ದ ಭರವಸೆಗಳಲ್ಲಿ ಎಷ್ಟು ಈಡೇರಿವೆ? ಎಷ್ಟು ಬಾಕಿ ಇವೆ? ಇವುಗಳ ಲೆಕ್ಕ ಸಿಗುತ್ತೆ ಎನ್ನುವ ಒಂದು ಆಶಯದೊಂದಿಗೆ  ‘ಸಿಯಾಚಿನ್’ ಎನ್ನುವ ಒಂದು ವಾಟ್ಸ್ ಅಪ್ ಗ್ರೂಪ್ ನಿರ್ಮಿಸಿ, ಜಗತ್ತಿನ ಉದ್ದಗಲ ಹರಡಿ ಹೋಗಿರುವ ಸಮಾನ ಮನಸ್ಕ 15 ಜನ ಗೆಳೆಯರ ಬೆಸೆದು, ಹಣ ಕೂಡಿಸಿ ಸೈನಿಕರ ಮನೆಗೆ ಹಣ ತಲುಪಿಸುವ ಕೆಲಸಕ್ಕೆ ಮುಂದಾದೆವು.
ಹನುಮಂತಪ್ಪ ಕೊಪ್ಪದ ಅವರ ಮನೆಯ ಜನ ಹೇಗಿದ್ದಾರೆ ಎಂದು ವಿಚಾರಿಸಲು ಹೋದಾಗ ಹನುಮಂತಪ್ಪ ಅವರ ಪತ್ನಿ ಮಹಾದೇವಿ ‘ಸಾರ್ ನನ್ನ ಪತಿ ಅಲ್ಲಿಂದ ಜೀವ ಹಿಡಿದು ಬಂದು ಇಲ್ಲಿ ಸತ್ತರು. ಅವರ ಬಗ್ಗೆ ಸಾಕಷ್ಟು ಪ್ರಚಾರವಾಗಿದ್ದರಿಂದ ಸರಕಾರಗಳು ನನಗೆ ನೀಡಿದ ಭರವಸೆಗಳ್ನೆಲ್ಲ ಶೀಘ್ರವಾಗಿ ಈಡೇರಿಸಿವೆ. ಪಾಪ ಆಶಾಗೆ (ಆಶಾ – ಸುಬೇದಾರ್ ನಾಗೇಶ್ ಅವರ ಪತ್ನಿ) ತುಂಬಾ ಕಷ್ಟ. ಆಕೆಯೂ ಪತಿಯನ್ನು ಕಳೆದು ಕೊಂಡಿದ್ದಾಳೆ.  ಈ ಹಣ ನನ್ನ ಬದಲು ಅವರಿಗೆ ಕೊಡಿ’  ಎಂದರು.  ಎಂಥ ಉದಾತ್ತ ಭಾವನೆ! ಹನಮಂತಪ್ಪ ಗಟ್ಟಿಗ. ಮೈನಸ್ ಅರವತ್ತು ಡಿಗ್ರಿ ಸೆಲ್ಸಿಯಸ್ ಕೊರೆಯುವ ಚಳಿಯಲ್ಲಿ ಆರು ದಿನ ಬದುಕಿ ಉಳಿಯುವುದು ಸಾಮಾನ್ಯ ಮಾತಲ್ಲ. ಈತನ ಪತ್ನಿ ಮಹಾದೇವಿ ಅವರು ಇನ್ನೂ ಗಟ್ಟಿ ವ್ಯಕ್ತಿತ್ವದವರು.

yodha1ಹುತಾತ್ಮ ಸುಬೇದಾರ್ ನಾಗೇಶರ ಕುಟುಂಬ

ಸರಕಾರ ನೀಡಿದ ಭರವಸೆಗಳು ಏನಾಗಿವೆ
ಮೂರು ಸೈನಿಕರ ಮನೆಯವರ ಮಾತಿನಲ್ಲಿ ಒಂದಂಶ ಸಾಮಾನ್ಯವಾಗಿತ್ತು. ಕೇಂದ್ರ ಸರಕಾರ ನೀಡಿದ ಭರವಸೆಗಳನ್ನ  ತಕ್ಷಣವೇ ಈಡೇರಿಸಿದೆ . ರಾಜ್ಯ ಸರಕಾರದಿಂದ ನೀಡಿದ್ದ ಅಭಯ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ಮೂರು ತಿಂಗಳಿಂದ ಕೇಂದ್ರ ಸರಕಾರದಿಂದ ಪಿಂಚಣಿ ಕೂಡ ಸಿಗುತ್ತಿದೆಯಂತೆ. ಕೇಂದ್ರ ಸರಕಾರ ಶೀಘ್ರ ಗತಿಯಲ್ಲಿ ಏನೇನು ಮಂಜೂರಾಗಬೇಕಿತ್ತೋ ಅವೆಲ್ಲಾ ಮಾಡಿದೆ.
ರಾಜ್ಯ ಸರಕಾರದ ಅಧಿಕಾರಿಗಳ ಮುಂದೆ  ದಯಮಾಡಿ ನೀವು ಹೇಳಿದಂತೆ ‘ಸಮಾಧಿ’ ಕಟ್ಟಿಕೊಡಿ ಎಂದು ಕೇಳಲು ಹೋದರೆ, ‘ಸತ್ತವರಿಗೆಲ್ಲಾ ಸಮಾಧಿ ಕಟ್ಟೋಕ್ಕೆ ಆಗುತ್ತಾ ? ಪ್ರಾಕ್ಟಿಕಲ್ ಆಗಿ ಯೋಚಿಸಿ  … , ಹೋಗ್ರಿ’  ಎನ್ನುವ ಉಡಾಫೆ ಮಾತು ಸೈನಿಕರ ಮನೆಯವರಿಗೆ ಸಿಕ್ಕಿರುವ  ಬಹುಮಾನ.

ಅವೇನೆ ಇದ್ದಿರಲಿ. ಸರ್ಕಾರವನ್ನು ನಿಂದಿಸುವ ಬದಲು ಸಮಾನ ಮನಸ್ಕರೆಲ್ಲ ‘ಹನಿ ಹನಿಗೂಡಿದರೆ ಹಳ್ಳ’ ಎಂಬ ಮಾತಿನಂತೆ ಇಂಥ ಕಾರ್ಯಗಳಲ್ಲಿ ತೊಡಗಿಕೊಂಡರೆ ಸೈನಿಕರ ಸ್ಮಾರಕ ನಿರ್ಮಾಣ ಕಾರ್ಯ ಸಾಕಾರವಾದೀತು.

Leave a Reply