ಇಷ್ಟಕ್ಕೂ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರು ಬೇರೆಯವರಿಗಿಂತ ಭಿನ್ನವಾಗಿ ಕಾಣುವುದಾದರೂ ಏಕೆ?

ಡಿಜಿಟಲ್ ಕನ್ನಡ ವಿಶೇಷ:

ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನ ಪತ್ನಿಯನ್ನು ಮಾತಾಡಿಸಲು ಆಗುವುದಿಲ್ಲ. ಗಂಡ ಪಂಚಾಯಿತಿ ಪಾರುಪತ್ಯೆದಾರ ಎಂಬ ಧಿಮಾಕೇ ಧಿಮಾಕು. ಇವರದೇ ಈ ಕತೆ, ಇನ್ನೂ ಕೆಲವು ಮಂತ್ರಿ-ಮಹೋದಯರ ಪತ್ನಿಯರ ಆರ್ಭಟವನ್ನಂತೂ ಕೇಳೋ ಹಂಗೇ ಇಲ್ಲ.. ಮನೇಲೆ ಗಲ್ಲಾಪೆಟ್ಟಿಗೆ ಓಪನ್ ಮಾಡಿಕೊಂಡು ವ್ಯಾಪಾರಕ್ಕೆ ಇಳಿದು ಬಿಟ್ಟಿರುತ್ತಾರೆ. ಅಂತಾದ್ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರು ಪತಿಯೆ ಹೆಸರು, ಹುದ್ದೆಯನ್ನು ಎಲ್ಲೂ ಬಳಸದೆ, ಪ್ರಚಾರವನ್ನೂ ಬಯಸದೆ ಸಾಮಾನ್ಯ ಪ್ರಜೆಯಂತೆ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿ ದರ್ಶನ ಪಡೆದದ್ದು ನಿಜಕ್ಕೂ ಶ್ಲಾಘನೀಯ, ಆದರ್ಶಪ್ರಾಯ.

ಹಾಗೇ ನೋಡಿದರೆ ಮೂಲತಃ ಮೈಸೂರಿನವರೇ ಆದ ಪಾರ್ವತಮ್ಮನವರು ಮೊದಲಿಂದಲೂ ಹೀಗೆಯೇ. ಸರಳ, ಸಜ್ಜನಿಕೆ ಪ್ರತೀಕ. ಪೂಜೆ-ಪುನಸ್ಕಾರ ಅಚ್ಚುಮೆಚ್ಚು. ಪ್ರತಿವರ್ಷ ಆಷಾಡ ಮಾಸದಲ್ಲಿ ಚಾಮುಂಡಿದೇವಿ ವಿಶೇಷ ಪೂಜೆಗೆ ಕಡ್ಡಾಯ ಹಾಜರು. ಪತಿಯ ಅಧಿಕಾರ, ವರ್ಚಸ್ಸು, ಪ್ರಭಾವದ ನೆರಳಿನಿಂದ ಸದಾ ದೂರ. ಅವರಿಗೂ ಪ್ರಚಾರಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಸಿದ್ದರಾಮಯ್ಯನವರು ತಾಲೂಕು ಪಂಚಾಯಿತಿ ರಾಜಕೀಯದಿಂದ ಎಂಎಲ್ಎ, ಮಂತ್ರಿ, ಉಪಮುಖ್ಯಮಂತ್ರಿ ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆದಾಗಲೂ ಪತಿಯ ಹೆಸರು ಬಳಸುವುದು ಒತ್ತಟ್ಟಿಗಿರಲಿ ಅವರ ಜತೆ ಯಾವತ್ತೂ ಮೀಡಿಯಾ ಎದಿರು ಬಂದವರಲ್ಲ, ಅವರ ಕ್ಯಾಮರಾ ಕಣ್ಣಿಗೆ ಬಿದ್ದವರಲ್ಲ. ಮಾಧ್ಯಮದ ಕತೆ ಅತ್ಲಾಗಿರಲಿ ನೆಂಟರಿಷ್ಟರ ಮದುವೆ, ಜಾತ್ರೆ, ಹಬ್ಬಹರಿದಿನದ ಸಂದರ್ಭಗಳಲ್ಲೂ ಫೋಟೋಗೆ ಸಿಕ್ಕವರಲ್ಲ. ಅಪ್ಪಿತಪ್ಪಿ ಕ್ಯಾಮರಾ ಕ್ಲಿಕ್ ಆದರೆ ಮರುಕ್ಷಣವೇ ಫೋಟೋ ಡಿಲಿಟ್.

ಚಾಮುಂಡಿ ಬೆಟ್ಟದಲ್ಲಿ ಮೊನ್ನೆ ಅಪ್ಪಿತಪ್ಪಿ ಕಣ್ಣಿಗೆ ಬಿದ್ದ ಪಾರ್ವತಮ್ಮನವರ ಫೋಟೋವನ್ನು ಮಾಧ್ಯಮದವರು ಪಟಾಪಟ್ ಅಂತ ಕ್ಲಿಕ್ ಮಾಡಿದ್ದರು. ತಕ್ಷಣವೇ ಸುತ್ತಲಿದ್ದ ಪೊಲೀಸರು ಛಾಯಾಗ್ರಾಹಕರ ಕ್ಯಾಮರಾ ಕಸಿದು ಫೋಟೋ ಡಿಲಿಟ್ ಮಾಡಿದರು. ಈ ರೀತಿ ಆಗಿರೋದು ಇದೇ ಮೊದಲಲ್ಲ. ಕಳೆದ ವರ್ಷ ಮೈಸೂರಿನ ಪೊಲೀಸ್ ಭವನದಲ್ಲಿ ನಡೆದ ಸಿದ್ದರಾಮಯ್ಯನವರ ಸಹೋದರನ ಮಗನ ಮದುವೆಯಲ್ಲೂ ಪತಿ ಜತೆ ಧಾರೆ ಎರೆದ ಸಂದರ್ಭದಲ್ಲಿ ಮಾಧ್ಯಮವರ ಫೋಟೋ ಅತ್ಲಾಗಿರಲಿ, ಮದುವೆ ಮನೆ ಫೋಟೋ ತೆಗೆಯುತ್ತಿದ್ದವನ ಕ್ಯಾಮರಾ ಕಣ್ಣನ್ನೂ ಅ ಕ್ಷಣಕ್ಕೆ ಮುಚ್ಚಿಸಲಾಗಿತ್ತು. ಅದರೂ ಅದ್ಯಾರೋ ಖತರನಾಕ್ ಅಸಾಮಿ ಮೊಬೈಲಿ ಫೋನ್ ನಿಂದ ಫೋಟೋ ತೆಗೆದ. ತಕ್ಷಣವೇ ಅಂಗರಕ್ಷಕರು ಮೊಬೈಲ್ ಕಿತ್ತುಕೊಂಡು ಫೋಟೋ ಎರೇಸ್ ಮಾಡಿಸಿದ್ದರು. ಇಂಥ ಬೇಕಾದಷ್ಟು ನಿದರ್ಶನಗಳಿವೆ. ಅದ್ಯಾಕೆ ಈ ಪಾಟಿ ಎಚ್ಚರಿಕೆ ತೆಗೆದುಕೊಳ್ಳುತ್ತಾರೋ, ಫೋಟೋ ಬಂದರೆ ಅದೇನಾಗಿ ಬಿಡ್ತದೋ ಗೊತ್ತಿಲ್ಲ. ಇದು ವೈಯಕ್ತಿಕ ವಿಚಾರವೇ ಆದರೂ ಒಂದು ರೀತಿ ಸೋಜಿಗ ಸೃಷ್ಟಿ ಮಾಡಿರೋದಂತೂ ಆ ಚಾಮುಂಡೇಶ್ವರಿ ಆಣೆಗೂ ಸತ್ಯ.

ಬೆಂಗಳೂರಿನ ಬಸವೇಶ್ವರನಗರದಲ್ಲಿ ಪುತ್ರ ಡಾ. ಯತೀಂದ್ರ ಜತೆ ಇರುವ ಪಾರ್ವತಮ್ಮನವರು ಸಿದ್ದರಾಮಯ್ಯನವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಒಮ್ಮೆ ಪೂಜೆ ಸಂದರ್ಭದಲ್ಲಿ ಕಾಣಿಸಿಕೊಂಡದ್ದು ಬಿಟ್ಟರೆ, ಅಲ್ಲಾಗಲಿ ಗೃಹ ಕಚೇರಿ ‘ಕೃಷ್ಣಾ’ದಲ್ಲಾಗಲಿ ಸುಳಿದಿದ್ದೇ ಇಲ್ಲ.  ಹಿಂದೆಲ್ಲ ಮೈಸೂರಿಗಾಗಲಿ, ಸಿದ್ದರಾಮಯ್ಯನವರ ಹುಟ್ಟೂರು ಸಿದ್ದರಾಮನಹುಂಡಿಗಾಗಲಿ ಬಸ್ಸಿನಲ್ಲಿ ಹೋಗಿ ಬಂದಿರುವುದು ಉಂಟು. ಆಗಲೂ ಅಷ್ಟೇ ಪತಿಯ ಪದವಿಯನ್ನು ಎಂದೂ ಎಟುಕಿಸಿಕೊಂಡವರಲ್ಲ. ತಮ್ಮ ಪಾಡಿಗೆ ತಾವು ಎಂಬಂತೆ ಇರುವವರು. ಡಾ. ಯತೀಂದ್ರ ಕೂಡ ಅಷ್ಟೇ. ಮೊದಲಿಂದಲೂ ಪ್ರಚಾರದಿಂದ ಬಲು ದೂರ. ಎಷ್ಟೋ ಜನಕ್ಕೆ ಸಿದ್ದರಾಮಯ್ಯ ಅವರಿಗೆ ಯತೀಂದ್ರ ಅಂಥ ಮತ್ತೊಬ್ಬ ಮಗ ಇದ್ದಾರೆ ಎಂದು ಗೊತ್ತಾಗಿದ್ದೇ ಮೊನ್ನೆ ವಿವಾದ ಉಂಟಾದಾಗ. ಆ ಸಂದರ್ಭದಲ್ಲಿ ಮಾಧ್ಯಮದವರು ಇದ್ದಪದ್ದ ಜಾಲವನ್ನೆಲ್ಲ ಜಾಲಾಡಿದರೂ ಯತೀಂದ್ರ ಅವರ ಫೋಟೋ ಸಿಗಲಿಲ್ಲ. ರಾಜಕೀಯದಲ್ಲೇ ಭವಿಷ್ಯ ಅರಸುತ್ತಿರುವ ಸಿದ್ದರಾಮಯ್ಯನವರ ಮತ್ತೊಬ್ಬ ಪುತ್ರ ರಾಕೇಶ್ ಅವರ ಫೋಟೋ ಬೇಕಾದರೆ ದಂಡಿ-ದಂಡಿ ಸಿಗುತ್ತದೆ.

ಯಾಕೋ ಏನೋ ಗೊತ್ತಿಲ್ಲ. ಅದು ಸಿದ್ದರಾಮಯ್ಯನವರೇ ಅವಾಯ್ಡ್ ಮಾಡ್ತಾರೋ ಅಥವಾ ಪಾರ್ವತಮ್ಮನವರೇ ಅವಾಯ್ಡ್ ಆಗ್ತಾರೋ ಅಂತೂ ಪಾರ್ವತಮ್ಮನವರು ಸಾರ್ವಜನಿಕ ಸ್ಥಳಗಳಲ್ಲಿ ಪತಿ ಜತೆ ಕಾಣಿಸಿಕೊಂಡದ್ದು ಅತಿ ಅಪರೂಪ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದ ಸಂದರ್ಭದಲ್ಲಿ ಮಾಧ್ಯಮದ ಕಣ್ಣುಗಳು ಸಹಜವಾಗಿ ಹುಡುಕಿದ್ದು ಅವರ ಪತ್ನಿಯನ್ನು. ಸಾಮಾನ್ಯವಾಗಿ ಇಂಥ ಮಹತ್ವದ ಕ್ಷಣವನ್ನು ಪತ್ನಿ ಸೇರಿದಂತೆ ಕುಟುಂಬ ಸದಸ್ಯರು ಖುದ್ದು ಕಣ್ತುಂಬಿಕೊಳ್ಳುವುದು ಪರಂಪರೆ. ಆದರೆ ಅವತ್ತು ಕ್ಯಾಮರಾ ಕಣ್ಣುಗಳಿಗೆ ನಿರಾಸೆ. ಹೋಗಲಿ ಅಂತ ಸಿದ್ದರಾಮಯ್ಯನವರ ಚರಿತ್ರೆ ಫೋಟೋಗಳನ್ನು ಹುಡುಕಿದಾಗಲೂ ಅಲ್ಲೂ ಸಹ ಪಾರ್ವತಮ್ಮನವರು ನಾಪತ್ತೆ. ಮಾಧ್ಯಮಗಳಿಗೆ ಹುಡುಕಿದ್ದಷ್ಟೇ ‘ಭಾಗ್ಯ’ ಎಂಬಂತಾಗಿತ್ತು.

ಕೆಆರ್ ಎಸ್ ತುಂಬಿದಾಗ ಮುಖ್ಯಮಂತ್ರಿ ಅದವರು ಪತ್ನಿಸಮೇತರಾಗಿ ಕಾವೇರಿಗೆ ಬಾಗೀನ ಅರ್ಪಿಸುವುದು ಕೂಡ ಪ್ರತೀತಿ. ಹಿಂದಿನ ವರ್ಷ ಏನೋ ಕೆಆರ್ ಎಸ್ ತುಂಬಿರಲಿಲ್ಲ, ಆದರೆ ಅದರ ಹಿಂದಿನ ಎರಡು ವರ್ಷ ಸಿದ್ದರಾಮಯ್ಯನವರು ಬಾಗಿನ ಅರ್ಪಿಸಿದಾಗಲೂ ಪಕ್ಕದಲ್ಲಿ ಪಾರ್ವತಮ್ಮನವರು ಇರಲಿಲ್ಲ. ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮತ್ತಿತರರು ಇದ್ದರು. ಅದೇ ರೀತಿ ಪ್ರತಿ ವರ್ಷ ಮೈಸೂರು ದಸರಾ ಸಂದರ್ಭದಲ್ಲಿ ವಾಡಿಕೆಯಂತೆ ಮುಖ್ಯಮಂತ್ರಿ ಆದವರು ನಂದಿಧ್ವಜ ಪೂಜೆ ನೆರವೇರಿಸುವಾಗಲೂ ಪತ್ನಿಸಮೇತ ಇರುತ್ತಾರೆ. ಆದರೆ ಪಾರ್ವತಮ್ಮನವರು ಈ ‘ಭಾಗ್ಯ’ಕ್ಕೂ ಸಾಕ್ಷಿ ಆಗಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮತ್ತಿತರರು ಇದ್ದರು.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕಾವೇರಿ ಮತ್ತು ನಂದಿಧ್ವಜ ಈ ಎರಡೂ ಪೂಜೆಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ಶೋಭಾ ಕರಂದ್ಲಾಜೆ ಅವರು ನೆರವೇರಿಸಿದ್ದರು. ಶೋಭಾ ಕರಂದ್ಲಾಜೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು ಎಂಬುದು ಬೇರೆ ಮಾತು. ಆದರೆ ಪತಿಯ ಪದವಿ ನಿಮಿತ್ತ ಬರುವ ಇಂಥ ಮಹತ್ವದ ಸಂದರ್ಭಗಳಿಂದ, ಪತಿಯ ಹೆಸರು, ಅಧಿಕಾರ, ಪ್ರಭಾವದಿಂದ ದೂರ ಉಳಿಯುವ ಪಾರ್ವತಮ್ಮನವರು ಮಾತ್ರ ಭಿನ್ನವಾಗಿಯೇ ಕಾಣುತ್ತಾರೆ. ಅದರಲ್ಲೂ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಹೋದಲ್ಲೆಲ್ಲ ಬಂದಲ್ಲೆಲ್ಲ ಅವರನ್ನು ಅಂಟಿಕೊಂಡೇ ಓಡಾಡುವ ಪತ್ನಿ ಬ್ಲಾಸಮ್ ಫರ್ನಾಂಡಿಸ್ ಅವರಂಥವರ ನಡುವೆ..!

Leave a Reply