ಶಮಿ, ಉಮಿ ಮಾರಕ ದಾಳಿಗೆ ತತ್ತರಿಸ್ತು ವಿಂಡೀಸ್, ಸೋಲಿನ ಭೀತಿಯಲ್ಲಿ ಆತಿಥೇಯರು

India's bowler Mohammed Shami, back to camera, jumps to celebrates with teammates the dismissal of West Indies' Darren Bravo, left, during day three of their first cricket Test match at the Sir Vivian Richards Stadium in North Sound, Antigua, Saturday, July 23, 2016. (AP Photo/Ricardo Mazalan)

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ವೇಗಿಗಳ ಕರಾರುವಕ್ ದಾಳಿಗೆ ಆತಿಥೇಯ ವೆಸ್ಟ್ ಇಂಡೀಸ್ ನಲುಗಿ ಹೋಗಿದೆ. ಪರಿಣಾಮ ಮೊದಲ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ಗೆ ಸಿಲುಕಿರುವ ಆತಿಥೇಯರು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ.

ಪಂದ್ಯದ ಆರಂಭಿಕ ಎರಡು ದಿನ ಪಾರುಪತ್ಯ ನಡೆಸಿದ್ದು ಭಾರತದ ಬ್ಯಾಟ್ಸ್ ಮನ್ ಗಳು. ಮೂರನೇ ದಿನದಾಟದಲ್ಲಿ ಬೌಲರ್ ಗಳ ಸರದಿ. 566 ರನ್ ಪೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದ ಟೀಂ ಇಂಡಿಯಾ, ಎರಡನೇ ದಿನದಾಟ ಮುಕ್ತಾಯಕ್ಕೆ ವೆಸ್ಟ್ ಇಂಡೀಸ್ ತಂಡವನ್ನು 16 ರನ್ 1 ವಿಕೆಟ್ ಗೆ ನಿಯಂತ್ರಿಸಿತ್ತು. ಮೂರನೇ ದಿನದಾಟದಲ್ಲಿ ಸಂಘಟಿತ ದಾಳಿ ನಡೆಸುವ ಮೂಲಕ ಆತಿಥೇಯರ ಪಡೆಯನ್ನು 243 ರನ್ ಗಳಿಗೆ ಗುಡಿಸಿ ಹಾಕಿದ ಭಾರತ 323 ರನ್ ಮುನ್ನಡೆಯೊಂದಿಗೆ ಫಾಲೋ ಆನ್ ಹೇರಿತು. ಅಂತಿಮವಾಗಿ ದಿನದಾಟ ಮುಕ್ತಾಯಗೊಂಡಾಗ ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ ಮೊತ್ತ 21ಕ್ಕೆ 1.

ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ ಕ್ರೇಗ್ ಬ್ರಾಥ್ ವೈಟ್ (74) ಭಾರತೀಯ ಬೌಲಿಂಗ್ ದಾಳಿಗೆ ಕೊಂಚ ಪ್ರತಿರೋಧ ತೋರಿದರಾದರೂ ಇತರ ಬ್ಯಾಟ್ಸ್ ಮನ್ ಗಳ ವೈಫಲ್ಯ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯ್ತು. ನೈಟ್ ವಾಚ್ಮನ್ ಆಗಿದ್ದ ದೇವೇಂದ್ರ ಬಿಶೂ (12), ಡಾರೆನ್ ಬ್ರಾವೊ (11), ಸಾಮುಯೆಲ್ಸ್ (1), ಬ್ಲಾಕ್ ವುಡ್ (0) ಬಂದ ವೇಗದಲ್ಲಿ ಪೆವಿಲಿಯನ್ ಸೇರ್ಕೊಂಡ್ರು. ಇದರೊಂದಿಗೆ 100 ರನ್ ಕಲೆಹಾಕುವ ಹೊತ್ತಿಗೆ ವಿಂಡೀಸ್ ನ ಅರ್ಧ ಪಡೆ ಆಟ ಮುಗಿಸಿತ್ತು.

ಈ ಹಂತದಲ್ಲಿ ರೊಸ್ಟನ್ ಚೇಸ್ (23), ಶೇನ್ ಡೌರಿಚ್ (57), ಜೇಸನ್ ಹೋಲ್ಡರ್ (36) ಸ್ವಲ್ಪ ಹೊತ್ತು ಕ್ರೀಸ್ ನಲ್ಲಿ ನಿಂತರು. ಆದರೆ, ತಂಡವನ್ನು ಫಾಲೋ ಆನ್ ನಿಂದ ಬಚಾವ್ ಮಾಡಲು ಸಾಧ್ಯವಾಗಲಿಲ್ಲ. ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ವಿಂಡೀಸ್ ಮತ್ತೆ ಆರಂಭಿಕ ಆಘಾತ ಎದುರಿಸಿದೆ. ಆರಂಭಿಕ ಕ್ರೇಗ್ ಬ್ರಾಥ್ ವೈಟ್ ಅವರ ವಿಕೆಟ್ ಪತನವಾಗಿದ್ದು, ಚಂದ್ರಿಕ (9) ಮತ್ತು ಡಾರೆನ್ ಬ್ರಾವೊ (10) ಕ್ರೀಸ್ ನಲ್ಲಿದ್ದು ನಾಲ್ಕನೇ ದಿನ ಆಟ ಮುಂದುವರಿಸಲಿದ್ದಾರೆ.

ದಿನದಾಟದ ಪ್ರಮುಖ ಹೈಲೈಟ್ ಅಂದ್ರೆ, ಭಾರತದ ವೇಗಿ ಮೊಹಮದ್ ಶಮಿ ಹಾಗೂ ಉಮೇಶ್ ಯಾದವ್ ಬೌಲಿಂಗ್. ಆಟ ಸಾಗಿದಂತೆ ಸ್ಪಿನ್ನರ್ ಗಳ ಪ್ರಾಬಲ್ಯ ಹೆಚ್ಚುತ್ತದೆಂಬ ನಿರೀಕ್ಷೆಯಿತ್ತಾದರೂ ಅದು ಮಿಶ್ರಾ ಅವರ ಎರಡು ವಿಕೆಟ್ ಕಬಳಿಕೆಗೆ ಮಾತ್ರ ಸೀಮಿತವಾಯ್ತು. ಉಳಿದಂತೆ 8 ವಿಕೆಟ್ ಕಿತ್ತಿದ್ದು ಈ ಇಬ್ಬರು ವೇಗಿಗಳು. ಈ ಪ್ರದರ್ಶನ ಗಾಯದ ಸಮಸ್ಯೆಯಿಂದ ವರ್ಷಕ್ಕೂ ಹೆಚ್ಚು ಕಾಲ ತಂಡದಿಂದ ಹೊರಗುಳಿದಿದ್ದ ಮೊಹಮದ್ ಶಮಿಗೆ ಇದೊಂದು ಉತ್ತಮ ಕಮ್ ಬ್ಯಾಕ್ ಆಗಿದೆ. ಇನ್ನು ಆಡುವ ಹನ್ನೊಂದರ ಬಳಗದಲ್ಲಿ ಭುವನೇಶ್ವರ್ ಕುಮಾರ್ ಬದಲಿಗೆ ಮೂರನೇ ವೇಗಿಯಾಗಿ ಸ್ಥಾನ ಪಡೆದ ಉಮೇಶ್ ಯಾದವ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಎರಡನೇ ಇನಿಂಗ್ಸ್ ನಲ್ಲಿ ವಿಂಡೀಸ್ ಗೆ ಶಾಕ್ ನೀಡಿರೋದು ಇಶಾಂತ್ ಶರ್ಮಾ.

ಒಟ್ಟಿನಲ್ಲಿ ವಿಂಡೀಸ್ ಪಡೆ ಇನ್ನು 302 ರನ್ ಗಳ ಹಿನ್ನಡೆಯಲ್ಲಿದ್ದು, ಈ ಮೊತ್ತವನ್ನು ದಾಟಿ ಭಾರತಕ್ಕೆ ಕಠಿಣ ಗುರಿ ನೀಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಆತಿಥೇಯರು ಸೋಲಿನಿಂದ ಬಚಾವ್ ಆಗಬೇಕೆಂದರೆ, ವಿಂಡೀಸ್ ದಾಂಡಿಗರಿಂದ ಅವಿಸ್ಮರಣೀಯ ಆಟ ಹೊರಹೊಮ್ಮಬೇಕಿದೆ. ಇಲ್ಲವಾದರೆ ಪಂದ್ಯದ ನಾಲ್ಕನೇ ದಿನವೇ ಭಾರತ ಜಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಸಂಕ್ಷಿಪ್ತ ಸ್ಕೋರ್ (ಮೂರನೇ ದಿನದಾಟ ಮುಕ್ತಾಯಕ್ಕೆ)

ಭಾರತ ಮೊದಲ ಇನಿಂಗ್ಸ್ (566ಕ್ಕೆ 8, 161.5 ಓವರ್)

ವಿಜಯ್ 7, ಧವನ್ 84, ಪೂಜಾರ 16, ಕೊಹ್ಲಿ 200, ರಹಾನೆ 22, ಅಶ್ವಿನ್ 113, ಸಾಹ 40, ಮಿಶ್ರಾ 53, ಶಮಿ ಅಜೇಯ 17, ಇತರೆ 14 (ಬಿಶೂ 163ಕ್ಕೆ 3, ಕ್ರೇಗ್ ಬ್ರಾಥ್ ವೈಟ್ 65ಕ್ಕೆ 3, ಶಾನನ್ ಗೆಬ್ರಿಯಲ್ 65ಕ್ಕೆ 2).

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ (243, 90.2 ಓವರ್)

ಕ್ರೇಗ್ ಬ್ರಾಥ್ ವೈಟ್ 74, ಚಂದ್ರಿಕಾ 16, ಬಿಶೂ 12, ಬ್ರಾವೊ 11, ಸ್ಯಾಮುಯೆಲ್ಸ್ 1, ಬ್ಲ್ಯಾಕ್ ವುಡ್ 0, ಚೇಸ್ 23, ಡೌರಿಚ್ ಅಜೇಯ 57, ಹೋಲ್ಡರ್ 36, ಕ್ರಿಸ್ 0, ಗೆಬ್ರಿಯಲ್ 2, ಇತರೆ 11 (ಉಮೇಶ್ ಯಾದವ್ 41ಕ್ಕೆ 4, ಮೊಹಮದ್ ಶಮಿ 66ಕ್ಕೆ 4, ಅಮಿತ್ ಮಿಶ್ರಾ 43ಕ್ಕೆ 2)

ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ (21ಕ್ಕೆ 1, 13 ಓವರ್)

ಬ್ರಾಥ್ ವೈಟ್ 2, ಚಂದ್ರಿಕಾ ಅಜೇಯ 9, ಬ್ರಾವೊ ಅಜೇಯ 10 (ಇಶಾಂತ್ ಶರ್ಮಾ 3ಕ್ಕೆ 1)

Leave a Reply