ಭಾರತೀಯ ಸೇನೆಯ ಏಕೈಕ ಮಹಿಳಾ ತರಬೇತು ಕಮಾಂಡರ್ ಸೀಮಾ ರಾವ್…. ಬರೀ ಸಾಧನೆಯಲ್ಲವಿದು, 20 ವರ್ಷಗಳ ಆದರ್ಶದ ಕತೆ!

ಡಿಜಿಟಲ್ ಕನ್ನಡ ಟೀಮ್:

ಈಕೆ ಭಾರತೀಯ ಸೇನೆಯ ವೀರಪುತ್ರರನ್ನು ರೂಪಿಸುವವಳು ಎಂದರೆ ಉತ್ಪೇಕ್ಷೆಯಾಗದೇನೋ.. ಏಕೆಂದರೆ ಡಾ.ಸೀಮಾ ರಾವ್ ಭಾರತದ ಕಮಾಂಡೊಗಳಿಗೆ ತರಬೇತಿ ನೀಡುತ್ತಿರುವ ಮೊದಲ ಹಾಗೂ ಏಕೈಕ ಮಹಿಳೆ! ಒಂದೆರಡಲ್ಲ ಕಳೆದ 20 ವರ್ಷಗಳಿಂದ ಯಾವುದೇ ಪ್ರತಿಫಲ ಪಡೆಯದೆ ಭಾರತೀಯ ಸೇನೆಗೆ ಸೇವೆ ಸಲ್ಲಿಸ್ತಿದ್ದಾರೆ. ಡಾಕ್ಟರ್ ಅಂತಾ ಇದೆ, ಕಮಾಂಡೊ ಟ್ರೇನಿಂಗ್ ಹೇಗೆ ಅಂತಿರಾ..  ಈಕೆ ಸಕಲಕಲಾವಲ್ಲಭೆ. ಈ ಸಾಧಕಿಯ ಕತೆ ನಿಮ್ಮ ಈ ವಾರಾಂತ್ಯದ ಸ್ಪೂರ್ತಿದಾಯಕ ಓದಿಗೆ.

ಈಕೆಯ ಪ್ರತಿಭೆಗಳ ಪಟ್ಟಿ ಕೇಳಿದ್ರೆ ನೀವು ಖಂಡಿತಾ ಸುಸ್ತಾಗ್ತೀರಾ. ಕಾರಣ, ವೈದ್ಯಕೀಯ ಜತೆ ಎಂಬಿಎ ಪದವಿ ಪಡೆದಿರುವ ಸೀಮಾ, ಮಿಲಿಟಲಿ ಮಾರ್ಷಲ್ ಆರ್ಟ್ಸ್ ನಲ್ಲಿ 7 ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿರುವಾಕೆ. ಕಾಂಬ್ಯಾಟ್ ಶೂಟಿಂಗ್ ತರಬೇತುಗಾರ್ತಿ, ಫೈಯರ್ ಫೈಟರ್, ಸ್ಕೂಬಾ ಡೈವರ್, ರಾಕ್ ಕ್ಲೈಂಬಿಗ್ ನಲ್ಲಿ ಎಚ್ಎಂಐ ಪದಕ ವಿಜೇತೆ. 1967ರಲ್ಲಿ ಬ್ರೂಸ್ಲಿ ಸ್ಥಾಪಿಸಿದ್ದ ‘ಜೀಟ್ ಕುನ್ ಡು’ ಮಾರ್ಷಲ್ ಆರ್ಟ್ಸ್ ಪ್ರವೀಣೆ.

seema-rao1

ಇಷ್ಟೆಲ್ಲಾ ಸಾಧಿಸಲು ಹೇಗಪ್ಪಾ ಸಾಧ್ಯ ಎಂದು ಆಕೆಯ ಜೀವನದ ಹಾದಿ ನೋಡಲು ಹೊರಟರೆ, ನಮಗೆ ಸಿಗೋದು ಸ್ವಾತಂತ್ರ್ಯ ಹೋರಾಟಗಾರ ಕೌಟುಂಬಿಕ ಹಿನ್ನೆಲೆ. ಈಕೆಯ ತಂದೆ ಪ್ರೊ.ರಮಾಕಾಂತ್ ಸಿನಾರಿ ಒಬ್ಬ ಸ್ವತಂತ್ರ್ಯ ಹೋರಾಟಗಾರರು. ಇನ್ನು ಈಕೆ ಭಾರತೀಯ ಸೇನೆಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ಪತಿ ಮೇಜರ್ ದೀಪಕ್ ರಾವ್ ಮೂಲಕ. ಆರಂಭದಲ್ಲಿ ತಮ್ಮ ಸೇವೆಗೆ ಆರ್ಥಿಕ ಸಂಕಷ್ಟ ಎದುರಾದರೂ ತಾವು ಇಟ್ಟ ಹೆಜ್ಜೆಯನ್ನು ಹಿಂಪಡೆಯಲಿಲ್ಲ. ಮಿಲಿಟರಿ ತರಬೇತಿಗಾಗಿ ನಿರಂತರ ಪ್ರಯಾಣ ಮಾಡಬೇಕಿದ್ದ ಕಾರಣ ಸೀಮಾ ರಾವ್, ತಮ್ಮ ತಂದೆಯ ಅಂತ್ಯ ಸಂಸ್ಕಾರಕ್ಕೂ ಹಾಜರಾಗಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುವ ಸಲುವಾಗಿ ಈ ದಂಪತಿ ತಮ್ಮ ಕರುಳ ಬಳ್ಳಿ ಬೆಳೆಯಲು ಅವಕಾಶ ನೀಡಲಿಲ್ಲ.. ಇವರು ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಪರಿ. ಹೀಗಾಗಿ ಇವರಿಬ್ಬರ ಜೋಡಿ ಭಾರತಕ್ಕೆ ಒಂದು ವರದಾನವೇ ಸರಿ.

ಇಂಡಿಯನ್ ಪ್ಯಾರಾ ಸ್ಪೆಷಲ್ ಫೋರ್ಸ್, ನೇವಿ ಮಾರ್ಕೊಸ್ ಮರೀನ್ ಕಮಾಂಡೋಸ್, ಎನ್ಎಸ್ಜಿ ಬ್ಲಾಕ್ ಕ್ಯಾಟ್, ಏರ್ ಫೋರ್ಸ್ ಗಾರ್ಡ್, ಐಟಿಬಿಪಿ, ಪ್ಯಾರಾ ಮಿಲಿಟರಿ, ಪೊಲೀಸ್ ಯುನಿಟ್ಸ್ ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಯೋಧರಿಗೆ ತರಬೇತಿ ನೀಡಿರುವುದು ಈಕೆಯ ಟ್ರ್ಯಾಕ್ ರೆಕಾರ್ಡ್.

ಇನ್ನು ಯುಪಿಎ ಸರ್ಕಾರದ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದ ಪಿ.ಚಿದಂಬರಮ್ ಈ ದಂಪತಿಗೆ ಎಲ್ಲ ರಾಜ್ಯದ ಪೊಲೀಸರಿಗೆ ಕ್ಲೋಸ್ ಕ್ವಾಟರ್ ಬ್ಯಾಟಲ್ ತರಬೇತಿ ನೀಡಲು ಅನುಮತಿ ನೀಡಿದ್ದರು. ಈವರೆಗೂ ಸುಮಾರು 16 ರಾಜ್ಯ ಪೊಲೀಸರಿಗೆ ಈ ತರಬೇತಿ ನೀಡಲಾಗಿದೆ.

ಈಕೆ ಮತ್ತೊಂದು ಪ್ರತಿಭೆ ಬರವಣಿಗೆ. ಮಿಲಿಟರಿಗೆ ಸಂಬಂಧಿಸಿದಂತೆ ಹ್ಯಾಂಡ್ ಬುಕ್ ಆಫ್ ವರ್ಲ್ಡ್ ಟೆರರಿಸಮ್, ದ ಆರ್ಟ್ ಆಪ್ ಸಕ್ಸಸ್, ಮೈಂಡ್ ರೇಂಜ್, ವರ್ಲ್ಡ್ ಟೆರರಿಸಮ್: ಎ ಕಾಂಪ್ರೊಹೆನ್ಸಿವ್ ಅನಾಲಿಸಿಸ್ ಆಫ್ ವರ್ಲ್ಡ್ ಟೆರರಿಸಮ್, ಎನ್ ಸೈಕ್ಲೋಪಿಡಿಯಾ ಆಫ್ ಕ್ಲೋಸ್ ಕಾಂಬ್ಯಾಟ್ ಆಪ್ಸ್, ಕಮಾಂಡೊ ಮ್ಯಾನ್ಯುಯಲ್ ಆಫ್ ಅನ್ ಆರ್ಮಡ್ ಕಾಂಬ್ಯಾಟ್, ವಾಟ್ ಈಸ್ ದಿಸ್ ಥಿಂಗ್ ಯು ಡು? ಇನ್ ಕ್ಯಾಂಟೊನೆಸ್, ಜೀಟ್ ಕುನ್ ಡು!, ಕಿಂಗ್ ಸ್ಪರ್ಮ್- ಈಕೆಯ ಕೃತಿಗಳು ಅದರಲ್ಲೂ ವರ್ಲ್ಡ್ ಟೆರರಿಸಮ್: ಎ ಕಾಂಪ್ರೊಹೆನ್ಸಿವ್ ಅನಾಲಿಸಿಸ್ ಆಫ್ ವರ್ಲ್ಡ್ ಟೆರರಿಸಮ್ ಮತ್ತು ಕಮಾಂಡೊ ಮ್ಯಾನ್ಯುಯಲ್ ಆಫ್ ಅನ್ ಆರ್ಮಡ್ ಕಾಂಬ್ಯಾಟ್ ಪುಸ್ತಕಗಳು ವಿಶ್ವದ ಪ್ರಮುಖ ತನಿಖಾ ಸಂಸ್ಥೆಗಳಾದ ಎಫ್ ಬಿ ಐ, ಇಂಟರ್ ಪೋಲ್, ಯುಎನ್ ಮತ್ತು ಸ್ವಾಟ್ ಪೊಲೀಸ್ ನ ಗ್ರಂಥಾಲಯಗಳಲ್ಲಿ ಲಭ್ಯವಿದೆ.

seema-rao4

ಈಕೆಯ ಈ ಅಪರಿಮಿತ ಸೇವೆಗೆ ಹಲವು ಗೌರವಗಳು ಇವರ ಮಡಿಲು ಸೇರಿವೆ. ವರ್ಲ್ಡ್ ಪೀಸ್ ಕಾಂಗ್ರೆಸ್ ನಿಂದ ಪೀಸ್ ಅವಾರ್ಡ್, ಮಲೇಷ್ಯಾ ಪ್ರಧಾನಿಯಿಂದ ಮಲೇಷ್ಯಾ ಅವಾರ್ಡ್, ಯುಎಸ್ ಪ್ರೆಸಿಡೆಂಟ್ ವಾಲೆಂಟರಿ ಅವಾರ್ಡ್, ಮೂವರು ಭಾರತೀಯ ಸೇನಾ ಮುಖ್ಯಸ್ಥರಿಂದ ಸನ್ಮಾನ ಪತ್ರ, 2009 ರಲ್ಲಿ ಇವರ ನಿಸ್ವಾರ್ಥ ಸೇವೆಗೆ ಭಾರತ ಸರ್ಕಾರದಿಂದ ಗೌರವ ಪತ್ರ ಹಾಗೂ ಇತರೆ ಸಂದರ್ಭಗಳಲ್ಲಿ ಸನ್ಮಾನಗಳು ಸಿಕ್ಕಿವೆ.

Leave a Reply