ಅಶ್ವಿನ್ ಸ್ಪಿನ್ ಮೋಡಿಗೆ ಕುಸಿದ ಕೆರಿಬಿಯನ್ನರು, ವಿಂಡೀಸ್ ನಾಡಲ್ಲಿ ಭಾರತಕ್ಕಿದು ಮೊದಲ ಇನಿಂಗ್ಸ್ ಜಯ

Antigua India West Indies Cricket

 

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಟ್ರಂಪ್ ಕಾರ್ಡ್ ಆರ್.ಅಶ್ವಿನ್ ಬೀಸಿದ ಸ್ಪಿನ್ ಬಲೆಗೆ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳು ಗೊಂಚಲಾಗಿ ಸಿಕ್ಕಿಬಿದ್ದರು. ಪರಿಣಾಮ ಆತಿಥೇಯರ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ನಾಲ್ಕೇ ದಿನದಲ್ಲಿ ಇನಿಂಗ್ಸ್ ಹಾಗೂ 92 ರನ್ ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಭಾರತ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ನಲ್ಲಿ ಇನಿಂಗ್ಸ್ ಜಯ ದಾಖಲಿಸಿದ ಸಾಧನೆ ಮಾಡಿದೆ.

ಪಂದ್ಯದ ನಾಲ್ಕನೇ ದಿನ ನಿರೀಕ್ಷೆಯಂತೆ ಪಿಚ್ ಸ್ಪಿನ್ ಸ್ನೇಹಿಯಾಯಿತು. ಆರ್.ಅಶ್ವಿನ್ ಮತ್ತು ಅಮಿತ್ ಮಿಶ್ರಾ ಜೋಡಿ ಗಾಳಿಯಲ್ಲಿ ಚೆಂಡನ್ನು ತೇಲಿಬಿಡುತ್ತಿದ್ದರೆ, ಕೆರಿಬಿಯನ್ ಬ್ಯಾಟ್ಸ್ ಮನ್ ಗಳು ಸ್ಪಿನ್ ಮರ್ಮ ಅರಿಯಲು ಸಾಧ್ಯವಾಗದೇ ದಿಕ್ಕೆಟ್ಟು ಭಾರತದ ದಾಳಿಗೆ ಶರಣಾದ್ರು.

ಪಂದ್ಯದ ಮೂರನೇ ದಿನದಾಟ ಅಂತ್ಯದ ಮೊತ್ತ 21ಕ್ಕೆ 1 ರಿಂದ ಭಾನುವಾರ ಎರಡನೇ ಇನಿಂಗ್ಸ್ ಮುಂದುವರಿಸಿದ ವಿಂಡೀಸ್ ಗೆ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಎರಡನೇ ಪಾಳಿಯಲ್ಲಿ ತಂಡ 231 ರನ್ ಗಳಿಗೆ ಪಂದ್ಯದಲ್ಲಿ ಗಂಟು ಮೂಟೆ ಕಟ್ಟಿತು.

ಮರ್ಲಾನ್ ಸ್ಯಾಮ್ಯುಯೆಲ್ಸ್ (50), ಕ್ರಿಸ್ ಬ್ರಾಥ್ ವೈಟ್ (51) ಮತ್ತು ಬಿಶೂ (45) ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದ್ರು. ವಿಂಡೀಸ್ ಮಧ್ಯಮ ಕ್ರಮಾಂಕದಲ್ಲಿ ಬ್ಲಾಕ್ ವುಡ್ (0), ಚೇಸ್ (8), ಡೌರಿಚ್ (9), ಹೋಲ್ಡರ್ (16) ಬೇಗನೆ ವಿಕೆಟ್ ಕೈಚೆಲ್ಲಿದ್ರು. ಪರಿಣಾಮ ತಂಡ 132 ರನ್ ಗಳಿಗೇ 8 ವಿಕೆಟ್ ಕಳೆದುಕೊಳ್ತು.

ಆದ್ರೆ ಪಂದ್ಯದಲ್ಲಿ ಭಾರತೀಯ ಬೌಲರ್ ಗಳನ್ನು ಕಾಡಿದ್ದು 9ನೇ ವಿಕೆಟ್ ಜತೆಯಾಟ. 8 ವಿಕೆಟ್ ಬಿದ್ದ ನಂತರ ಭಾರತ ಇನ್ನೆರಡು ವಿಕೆಟ್ ಪಡೆದು ಪಂದ್ಯಕ್ಕೆ ಶೀಘ್ರದಲ್ಲೇ ಅಂತ್ಯವಾಡುತ್ತೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ ಬಿಶೂ ಹಾಗೂ ಕ್ರಿಸ್ ಜತೆಯಾಗಿ 95 ರನ್ ಪೇರಿಸಿ ಟೀಂ ಇಂಡಿಯಾ ಜಯದ ಸಂಭ್ರಮವನ್ನು ಸ್ವಲ್ಪ ಕಾಲ ಮುಂದೂಡಿದ್ರು.

ಭಾರತದ ಪರ ಎರಡನೇ ಇನಿಂಗ್ಸ್ ನಲ್ಲಿ ಮಿಂಚಿದ್ದು ಅಶ್ವಿನ್. ಮೊದಲ ಇನಿಂಗ್ಸ್ ನಲ್ಲಿ ವಿಕೆಟ್ ಪಡೆಯದೇ ನಿರಾಸೆಗೊಂಡಿದ್ದ ಅಶ್ವಿನ್, ಎರಡನೇ ಇನಿಂಗ್ಸ್ ನಲ್ಲಿ ಬಾಚಿದ್ದು 7 ವಿಕೆಟ್. ಪಂದ್ಯದಲ್ಲಿ ಶತಕ ಹಾಗೂ 7 ವಿಕೆಟ್ ಕಬಳಿಸಿ ಆಲ್ರೌಂಡ್ ಪ್ರದರ್ಶನ ನೀಡಿದ ಅಶ್ವಿನ್ ಪಂದ್ಯಶ್ರೇಷ್ಠರಾದ್ರು. ಸರಣಿಯಲ್ಲಿ ಭಾರತ 1-0 ರ ಮುನ್ನಡೆಯೊಂದಿಗೆ ಶುಭಾರಂಭ ಮಾಡಿದೆ. ಸರಣಿಯ ಎರಡನೇ ಪಂದ್ಯ ಜು.30 ರಿಂದ ಕಿಂಗ್ ಸ್ಟನ್ ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ (566ಕ್ಕೆ 8, 161.5 ಓವರ್)

ವಿಜಯ್ 7, ಧವನ್ 84, ಪೂಜಾರ 16, ಕೊಹ್ಲಿ 200, ರಹಾನೆ 22, ಅಶ್ವಿನ್ 113, ಸಾಹ 40, ಮಿಶ್ರಾ 53, ಶಮಿ ಅಜೇಯ 17, ಇತರೆ 14 (ಬಿಶೂ 163ಕ್ಕೆ 3, ಕ್ರೇಗ್ ಬ್ರಾಥ್ ವೈಟ್ 65ಕ್ಕೆ 3, ಶಾನನ್ ಗೆಬ್ರಿಯಲ್ 65ಕ್ಕೆ 2).

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ (243, 90.2 ಓವರ್)

ಕ್ರೇಗ್ ಬ್ರಾಥ್ ವೈಟ್ 74, ಚಂದ್ರಿಕಾ 16, ಬಿಶೂ 12, ಬ್ರಾವೊ 11, ಸ್ಯಾಮುಯೆಲ್ಸ್ 1, ಬ್ಲ್ಯಾಕ್ ವುಡ್ 0, ಚೇಸ್ 23, ಡೌರಿಚ್ ಅಜೇಯ 57, ಹೋಲ್ಡರ್ 36, ಕ್ರಿಸ್ 0, ಗೆಬ್ರಿಯಲ್ 2, ಇತರೆ 11 (ಉಮೇಶ್ ಯಾದವ್ 41ಕ್ಕೆ 4, ಮೊಹಮದ್ ಶಮಿ 66ಕ್ಕೆ 4, ಅಮಿತ್ ಮಿಶ್ರಾ 43ಕ್ಕೆ 2)

ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ (231, 78 ಓವರ್)

ಬ್ರಾಥ್ ವೈಟ್ 2, ಚಂದ್ರಿಕಾ 31, ಬ್ರಾವೊ 10, ಸ್ಯಾಮುಯೆಲ್ಸ್ 50, ಬ್ಲಾಕ್ ವುಡ್ 0, ಚೇಸ್ 8, ಡೌರಿಚ್ 9, ಹೋಲ್ಡರ್ 16, ಕ್ರಿಸ್ ಬ್ರಾಥ್ ವೈಟ್ ಅಜೇಯ 51, ಬಿಶೂ 45, ಗೆಬ್ರಿಯಲ್ 4, ಇತರೆ 5 (ಅಶ್ವಿನ್ 83ಕ್ಕೆ 7, ಇಶಾಂತ್ ಶರ್ಮಾ 27ಕ್ಕೆ 1, ಉಮೇಶ್ 34ಕ್ಕೆ 1, ಮಿಶ್ರಾ 61ಕ್ಕೆ 1).

Leave a Reply