ಬಸ್ ಬಂದ್: ಸರ್ಕಾರ ಮತ್ತು ನೌಕರರ ನಡುವಿನ ಜಗಳದಲ್ಲಿ ಬಡವಾದ್ರು ಸಾಮಾನ್ಯ ಜನತೆ, ಎಲ್ಲಿದೆ ಪರಿಹಾರ ಸಾಧ್ಯತೆ?

ಡಿಜಿಟಲ್ ಕನ್ನಡ ಟೀಮ್:

ಸೋಮವಾರ ಬೆಳಗಿನಿಂದ ಶುರುವಾಗಿರುವ ಕರ್ನಾಟಕ ಸಾರಿಗೆಯ ಮುಷ್ಕರ ಜನಸಾಮಾನ್ಯರನ್ನು ತತ್ತರಗೊಳಿಸಿದೆ. ವಿವರಗಳಿಗೆ ಹೋಗುವ ಮುನ್ನ ಎರಡು ಅಭಿಪ್ರಾಯಗಳನ್ನು ದಾಖಲಿಸಬಹುದು.

  • ಶೇ. 35ರ ವೇತನ ಏರಿಕೆ ಎಂಬುದನ್ನೇ ಉಭಯ ಬಣಗಳು ಹಿಡಿದು ಜಗ್ಗುವ ಅವಶ್ಯವಿಲ್ಲ. ಅಷ್ಟು ವೇತನ ಹೆಚ್ಚಳ ಯಾವುದೇ ವಿಭಾಗದಲ್ಲಿ ಸುಲಭ ಸಾಧ್ಯವಲ್ಲ ಎಂಬುದು ಮೇಲ್ನೋಟಕ್ಕೆ ಎಲ್ಲರ ಅರಿವಿಗೆ ಬರುವ ಸಂಗತಿ. ಆದರೆ, ಕೆಲಸದ ಒತ್ತಡ ಕಡಿಮೆಗೊಳಿಸುವ, ಕೆಲಸದ ವಾತಾವರಣವನ್ನು ಸುಧಾರಿಸುವ ಉಪಕ್ರಮಗಳಿಂದ ಆಗಾಗ ಏಳುತ್ತಲೇ ಇರುವ ಈ ವೇತನ ಬೇಡಿಕೆ ಒತ್ತಾಯದ ಬಿಸಿ ಕರಗಿಸಬಹುದು.
  • ಪ್ರತಿ ಬಾರಿ ಇಂಥ ಮುಷ್ಕರಗಳಾದಾಗಲೂ ನಮ್ಮ ನಡುವೆ ಕೆಟ್ಟ ಮನಸ್ಥಿತಿಯೊಂದರ ಪ್ರದರ್ಶನವಾಗುತ್ತದೆ. ಖಾಸಗಿ ಸಾರಿಗೆ ವ್ಯವಸ್ಥೆ, ಇದುವೇ ಸಮಯ ಎಂಬಂತೆ ಜನರಿಂದ, ಆಸ್ಪತ್ರೆಗೆ ಹೊರಟಿರುವ ಅಶಕ್ತರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಅರ್ಥಾತ್, ಅಧಿಕಾರದಲ್ಲಿರುವವರು ಸ್ವಹಿತಾಸಕ್ತಿಗೆ ಒದ್ದಾಡುತ್ತಾರೆ ಎಂದು ಆರೋಪದಲ್ಲಿ ಕಾಲಕಳೆಯುವ ಜನವರ್ಗ, ಇಂಥ ಬಿಕ್ಕಟ್ಟು ತಲೆದೋರಿದಾಗ ತನ್ನ ಲಾಭಕ್ಕೆ ಹಾತೊರೆಯುವುದನ್ನು ಬಿಡೋದಿಲ್ಲ ಅನ್ನೋದು ಸಾಬೀತಾಗಿದೆ.

ಬೆಂಗಳೂರಿನ ನರನಾಡಿಯಂತೆ ಕಾರ್ಯನಿರ್ವಹಿಸುತ್ತಿದ್ದ ಬಿಎಂಟಿಸಿ ಬಸ್ ಗಳು ಸೋಮವಾರ ಕಣ್ಮರೆ.. ರೋಗಿಗಳು ಸೇರಿದಂತೆ ಸಾರ್ವಜನಿಕರು ಆಟೋ, ಕ್ಯಾಬ್ ಗಳ ಮೊರೆ, ದುಬಾರಿ ಹಣ ತೆತ್ತು ಹಿಡಿ ಶಾಪ ಹಾಕುತ್ತಿರೋದು.. ಹಲವೆಡೆ ಬಸ್ ಗಳ ಮೇಲೆ ಕಲ್ಲು ತೂರಾಟ.. ಇತರೆ ಜಿಲ್ಲೆಗಳಲ್ಲೂ ಪ್ರಯಾಣಿಕರ ಪರದಾಟ.. ಸಾರಿಗೆ ಇಲಾಖೆಗೆ ಕೋಟ್ಯಾಂತರ ರುಪಾಯಿ ನಷ್ಟ.. ಇವಿಷ್ಟೂ ಸಾರಿಗೆ ನೌಕರರ ಮುಷ್ಕರದ ಚಿತ್ರಣ.

ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಇವುಗಳು ಈಡೇರುವವರೆಗೂ ಮುಷ್ಕರ ನಿಲ್ಲೊಲ್ಲ ಎಂಬದು ಸಾರಿಗೆ ನೌಕರರ ಸಂಘ ಪಟ್ಟು ಹಿಡಿದ್ರೆ, ಇಲಾಖೆಗಳು ನಷ್ಟದಲ್ಲಿವೆ ಹೀಗಾಗಿ ವೇತನ ಹೆಚ್ಚಳ ಸೇರಿದಂತೆ ಇತರೆ ಕೆಲವು ಬೇಡಿಕೆಗಳು ಸಾಧ್ಯವಿಲ್ಲ ಎಂಬುದು ಸರ್ಕಾರದ ಹಠ. ಈ ಎರಡರ ಮಧ್ಯೆ ನಿಜಕ್ಕೂ ತತ್ತರಿಸಿರೋದು ಮಾತ್ರ ಸಾರ್ವಜನಿಕರು.

ಭಾನುವಾರ ಮಧ್ಯಾಹ್ನದ ನಂತರವೇ ಕ್ರಮೇಣವಾಗಿ ಬಸ್ ಸಂಚಾರ ಕಡಿಮೆಯಾಗೊ ಮೂಲಕ ಮುಷ್ಕರದ ಕಾವು ಆರಂಭವಾಯಿತು. ಸೋಮವಾರ ಇದರ ತೀವ್ರತೆ ಹೆಚ್ಚಾಗಿದೆ. ಸರ್ಕಾರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆಯಾದ್ರೂ ಇದು ನಿರೀಕ್ಷಿತ ಮಟ್ಟದ ಪರಿಹಾರವಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಿರೋದು ವಿದ್ಯಾರ್ಥಿಗಳು ಸಮಸ್ಯೆ ಎದುರಿಸೋದು ತಪ್ಪಿದೆ.

ಈ ಪರಿಸ್ಥಿತಿಯನ್ನು ಸಿಕ್ಕ ಅವಕಾಶ ಎಂಬಂತೆ ಕೆಲವು ಆಟೋ ಮತ್ತು ಟ್ಯಾಕ್ಸಿ ಚಾಲಕರು ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆಟೋಗಳು ಮೀಟರ್ ಬೆಲೆಗಿಂತ ಐದರಿಂದ ಆರು ಪಟ್ಟು ರಷ್ಟು ಹೆಚ್ಚಿನ ಹಣ ಪಡೆಯುತ್ತಿದ್ದರೆ, ಕೆಲವು ಖಾಸಗಿ ಬಸ್ ಗಳು ಸಹ ಈ ರೀತಿಯ ಸುಲಿಗೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಮುಷ್ಕರದಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.

ಶೇ.35 ರಷ್ಟು ವೇತನ ಹೆಚ್ಚಳ, ಅಂತರ್ ನಿಗಮಗಳ ವರ್ಗಾವಣೆ ಪ್ರಕ್ರಿಯೆ ಆರಂಭ, ಎಲ್ಲ ರೀತಿಯ ಬಾಟಾ(ಹೆಚ್ಚುವರಿ ಸೇವೆಗೆ ನೀಡುವ ಹಣ) ಹಾಗೂ ಭತ್ಯೆಗೆ ತೆರಿಗೆ ಬೇಡ, ಚಾಲಕ, ನಿರ್ವಾಹಕರಿಗೆ ರಾತ್ರಿ ಭತ್ಯೆ, ಎಲ್ಲ ಕಾರ್ಮಿಕರಿಗೆ ಇಎಸ್ಐ ವ್ಯಾಪ್ತಿಗೆ ಸೇರಿಸುವುದು ಹಾಗೂ ನಿವೃತ್ತಿ ನಂತರವೂ ಚಿಕಿತ್ಸೆಯ ವೆಚ್ಚ ಭರಿಸಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಗಳು.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳೋದಿಷ್ಟು: ನೌಕರರಿಗೆ ಶೇ.35 ರಷ್ಟು ವೇತನ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕವಾಗಿ ₹4500 ಕೋಟಿ ಹೊರೆ ಬೀಳಲಿದೆ. ಈಗಾಗಲೇ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಇಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಿಸಲು ಸಾಧ್ಯವಿಲ್ಲ. ಈಗ ಮಾಡಿರುವ ಶೇ.8 ರಷ್ಟು ವೇತನ ಹೆಚ್ಚಳವನ್ನು ಶೇ.10ರ ವರೆಗೆ ಹೆಚ್ಚಿಸುವ ಮೂಲಕ ಚಿಂತನೆ ನಡೆಸುತ್ತೇವೆ. ಈ ಬಗ್ಗೆ ನೌಕರರೊಂದಿಗೆ ಮಾತುಕತೆ ನಡೆಸಲು ಯಾವಾಗಲು ಸಿದ್ಧ. ಆದ್ರೆ ಅವರು ಕೇಳಿದಷ್ಟು ಕೊಡೋಕೆ ಸಾಧ್ಯವಿಲ್ಲ. ನೌಕರರು ಮುಷ್ಕರವನ್ನು ಕೈಬಿಟ್ಟು ಸೇವೆ ಮುಂದುವರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

ಸರ್ಕಾರದ ಈ ಹೆಳಿಕೆಗೆ ವ್ಯತಿರಿಕ್ತವಾಗಿದೆ ರಾಜ್ಯ ಪ್ರವಾಸಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರ ಹೇಳಿಕೆ. ‘ಸಾರಿಗೆ ಸೇವೆ ಕೊಡುವ ಬಗ್ಗೆ ಖಾಸಗಿ ವಾಹನಗಳ ಮಾಲೀಕರು ಎಲ್ಲೂ ಅಧಿಕೃತವಾದ ಹೇಳಿಕೆ ಕೊಟ್ಟಿಲ್ಲ. ಈ ಬಗ್ಗೆ ಸರ್ಕಾರದಿಂದ ನಮಗೆ ಯಾವುದೇ ಬೇಡಿಕೆ ಬಂದೇ ಇಲ್ಲ. ಒಂದು ವೇಳೆ ಬಂದರೂ ಸ್ಪಂದಿಸುವುದಿಲ್ಲ’ ಅಂದ್ರು. ಇದರೊಂದಿಗೆ ಸರ್ಕಾರ ಎಷ್ಟರ ಮಟ್ಟಿಗೆ ಪರ್ಯಾಯ ವ್ಯವಸ್ಥೆ ಮಾಡಿದೆ ಎಂಬುದು ಗೋಚರಿಸುತ್ತಿದೆ.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅನಂತಸುಬ್ಬರಾವ್ ಹೇಳಿದಿಷ್ಟು: 4 ನಿಗಮಗಳಿಂದ ಸರ್ಕಾರಕ್ಕೆ ನಷ್ಟವಾಗಿದೆ ಎಂಬುದನ್ನು ನಾವು ನಂಬುವುದಿಲ್ಲ. ಈ ನಿಗಮಗಳಿಂದ ಸರ್ಕಾರಕ್ಕೆ ಕೋಟ್ಯಾಂತರ ರುಪಾಯಿ ಲಾಭವಿರುವುದು ನೌಕರರಿಗೆ ಗೊತ್ತಿದೆ. ಸರ್ಕಾರ ಸಾರ್ವಜನಿಕರಿಗೆ ಈ ಬಗ್ಗೆ ತಪ್ಪು ಮಾಹಿತಿ ನೀಡ್ತಿದೆ. ಚಾಲಕರು ಮತ್ತು ನಿರ್ವಾಹಕರಿಂದ ದಂಡವಾಗಿ ವಸೂಲಿ ಮಾಡುವ ಮೊತ್ತವೇ ವರ್ಷಕ್ಕೆ ₹50-60 ಕೋಟಿಯಷ್ಟು ಸಂಗ್ರಹವಾಗ್ತಿದೆ. ಕೆಎಸ್ಆರ್ ಟಿಸಿಯಿಂದ ₹40 ಕೋಟಿ, ಬಿಎಂಟಿಸಿಯಿಂದ ₹10 ಕೋಟಿ ಸಂಗ್ರಹವಾಗ್ತಿದೆ. ಇದು ಲಾಭವಲ್ಲವೇ? ಈ ಹಿಂದೆ ಸಂಸ್ಥೆ ಲಾಭದಲ್ಲಿದ್ದಾಗ ನೌಕರರಿಗೆ ನೀಡಿದ ಕೊಡುಗೆಯಾದ್ರು ಏನು?

ಸರ್ಕಾರ ಹಾಗೂ ಅಧಿಕಾರಿಗಳು ನೀಡುತ್ತಿರುವ ಹೇಳಿಕೆಗಳು ಹೇಗಿದೆ ಅಂದ್ರೆ, ಬಸ್ ಮುಷ್ಕರ ಯಾರಿಗೂ ತಟ್ಟಿಲ್ಲ. ತಮ್ಮ ಪರ್ಯಾಯ ವ್ಯವಸ್ಥೆ ಸಾರ್ವಜನಿಕರ ಸಮಸ್ಯೆ ಬಗೆಹರಿಸಿದೆ ಎಂಬಂತಿದೆ. ಆದರೆ, ವಾಸ್ತವ ಸ್ಥಿತಿ ಭಿನ್ನವಾಗಿದೆ. ಇಂತಹ ಹೇಳಿಕೆಗಳು ಸಾರಿಗೆ ನೌಕರರ ಈ ಬೇಡಿಕೆಯನ್ನು ಸರ್ಕಾರ ಈಗಲೇ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಇದೇ ಸಂದರ್ಭದಲ್ಲಿ ನೌಕರರು ತಮ್ಮ ಹೋರಾಟವನ್ನು ಬೇಡಿಕೆ ಈಡೇರುವವರೆಗೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದು, ಈ ಸಮಸ್ಯೆ ಹೀಗೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ.

ಮುಷ್ಕರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ‘ಈ ಬಗ್ಗೆ ಸರ್ಕಾರವೇ ಕೈಗೊಳ್ಳಬೇಕು. ಸರ್ಕಾರ ಎಸ್ಮಾ ಜಾರಿಗೊಳಿಸಲು ಹಿಂಜರಿಯುತ್ತಿದೆ. ಎಸ್ಮಾ ಜಾರಿಗೊಳಿಸುವುದು ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ’ ಎಂದು ಅರ್ಜಿದಾರ ಆರ್.ವಾಸುದೇವನ್ ಗೆ ಸೂಚಿಸಿದೆ.

Leave a Reply