ಫ್ಲೋರಿಡಾ ಶೂಟೌಟ್, ಜರ್ಮನಿ ಸ್ಫೋಟಗಳು… ಈಗ ಪಾಶ್ಚಾತ್ಯರಿಗೆ ಬೇಕಿರೋದು ಸೆಕ್ಯುರಿಟಿ ಅಲ್ಲ, ಸೈಕಾಲಜಿಸ್ಟ್!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಪದೇ ಪದೆ ಅಲ್ಲಿ ನಡೆಯುತ್ತಿರುವ ಶೂಟೌಟ್ ಪ್ರಕರಣಗಳೇ ಸಾಕ್ಷಿ. ಇದಕ್ಕೆ ಹೊಸ ಸೇರ್ಪಡೆಯಾಗಿರೋದು ಸೋಮವಾರ ಬೆಳಗಿನ ಜಾವ ಫ್ಲೋರಿಡಾದ ನೈಟ್ ಕ್ಲಬ್ ಶೂಟೌಟ್ ಪ್ರಕರಣ.

ಫೊರ್ಟ್ ಮೆಯರ್ಸ್ ನಲ್ಲಿರುವ ಕ್ಲಬ್ ಬ್ಲೂನಲ್ಲಿ ಭಾನುವಾರ ರಾತ್ರಿ ಟೀನ್ ಪಾರ್ಟಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಸೇರಿ ವೀಕೆಂಡ್ ಮಸ್ತಿಯಲ್ಲಿದ್ದರು. ಅಲ್ಲಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಇಬ್ಬರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬಂದೂಕುಧಾರಿ ಮನಸೋ ಇಚ್ಛೆ ಗುಂಡು ಹಾರಿಸಿರುವ ಬಗ್ಗೆ ವರದಿಗಳು ಬಂದಿವೆ. ಕ್ಲಬ್ ನ ಸಮೀಪ ವಾಸವಾಗಿರುವ ಮಹಿಳೆ ನೀಡಿರುವ ಮಾಹಿತಿ ಪ್ರಕಾರ, ಆಕೆ ಸುಮಾರು 30 ಬಾರಿ ಗುಂಡು ಹಾರಿದ ಶಬ್ದ ಕೇಳಿದ್ದು, ಹಲವು ಬಂದೂಕುಗಳಿರುವ ಶಂಕೆ ಇದೆ. ಪೊಲೀಸರು ಈ ಸ್ಥಳಕ್ಕೆ ಆಗಮಿಸಿದಾಗ ಹಲವಾರು ಮಂದಿ ಗುಂಡೇಟು ತಿಂದು ನರಳುತ್ತಿದ್ದರು. ಈ ದಾಳಿ ನಡೆಸಿದವರು ಯಾರೆಂದು ಈವರೆಗೂ ಗುರುತಿಸಲಾಗಿಲ್ಲ.

ದಾಳಿಯ ನಂತರ ಪೊಲೀಸ್ ಅಧಿಕಾರಿಗಳು ಘಟನೆ ಪ್ರದೇಶವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವುದಾಗಿ ವರದಿಗಳು ಬಂದಿದ್ದು, ಇದರ ಬಗ್ಗೆ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

ಇದು ಅಮೆರಿಕ ಕತೆಯಾದ್ರೆ, ನಿನ್ನೆ ಜರ್ಮನಿಯ ಸಂಗೀತಗೋಷ್ಠಿ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಒಂದು ವರ್ಷದ ಹಿಂದೆ ಜರ್ಮನಿಯಲ್ಲಿ ಆಶ್ರಯ ಪಡೆಯಲು ನಿರಾಕರಿಸಲ್ಪಟ್ಟ 27 ವರ್ಷದ ಸಿರಿಯಾ ವ್ಯಕ್ತಿ ಬಾಂಬ್ ಸ್ಫೋಟಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಗೀತಗೋಷ್ಠಿಯಲ್ಲಿ ಹಾಜರಾಗಲು ಮುಂದಾದ ಈತನಿಗೆ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ನಂತರ ಆತ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ‘ಈ ಹಿಂದೆಯೂ ಈತ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಈ ಬಾರಿ ಆತ ತನ್ನ ಜತೆಗೆ ಇತರರನ್ನು ಸಾಯಿಸುವ ಉದ್ದೇಶ ಹೊಂದಿದ್ದನೇ ಎಂಬುದು ನಿಖರವಾಗಿ ತಿಳಿದಿಲ್ಲ’ ಎಂಬುದು ಬವೇರಿಯಾ ಆಂತರಿಕ ಸಚಿವ ಜೊಚಿಮ್ ಹರ್ಮನ್ ಪ್ರತಿಕ್ರಿಯೆ.

ಇದು ಕಳೆದೊಂದು ವಾರದಲ್ಲಿ ಜರ್ಮನಿಯಲ್ಲಿ ನಡೆದಿರುವ ನಾಲ್ಕನೇ ದಾಳಿ ಎಂಬುದು ಆಘಾತಕಾರಿ. ಜು.18 ರಂದು ನಡೆದ ದಾಳಿಯಲ್ಲಿ 10 ಮಂದಿ ಸತ್ತಿದ್ದು, 34 ಮಂದಿ ಗಾಯಗೊಂಡಿದ್ದರು. ಈ ದಾಳಿ ನಡೆಸಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡವನಿಗೆ ಸುಮ್ಮನೇ ಕೊಂದು ರೋಚಕತೆ ನೋಡುವ ಉನ್ಮಾದವಿತ್ತಂತೆ!

ಪಾಶ್ಚಾತ್ಯ ದೇಶಗಳ ಕತೆ ಹೇಗಾಗಿದೆ ನೋಡಿ. ಅಮೆರಿಕದಲ್ಲಿ ಬಿಳಿತನವೇ ಶ್ರೇಷ್ಠ ಅಂತ ತಿಕ್ಕಲು ಹತ್ತಿಸಿಕೊಂಡವನೊಬ್ಬ ಏಕಾಏಕಿ ಗುಂಡು ಹಾರಿಸಿ ಜನರನ್ನು ಕೊಂದ ವಿದ್ಯಮಾನ ಈ ಹಿಂದೆ ವರದಿಯಾಗಿತ್ತು. ಕೆಲವೇ ದಿನಗಳ ಹಿಂದೆ ಬ್ಯಾಟನ್ ರೋಗ್ ಪೊಲೀಸ್ ಠಾಣೆ ಮೇಲಾದ ಜೀವಹಾನಿ ತಂದ ದಾಳಿಯಲ್ಲಿ ವರ್ಣಸಂಘರ್ಷದ ನೆರಳಿತ್ತು. ಇನ್ನು ಯುರೋಪಿನ ರಾಷ್ಟ್ರಗಳಲ್ಲಿ ಐಎಸ್ಐಎಸ್ ವಿಡಿಯೋಗಳನ್ನು ಇಂಟರ್ನೆಟ್’ನಲ್ಲಿ ವೀಕ್ಷಿಸಿಯೇ ಸ್ಫೂರ್ತಿ ಪಡೆದು ಕೊಲ್ಲುವ ಕಾರ್ಯದಲ್ಲಿ ತೊಡಗಿಸಿಕೊಂಡವರಿದ್ದಾರೆ. ಒಂದು ಕಡೆ ಇಸ್ಲಾಮಿಕ್ ಉಗ್ರರು ಯಾವಾಗ ದಾಳಿ ಮಾಡುವವರೋ ಎಂದು ಹೆದರಿಕೊಳ್ಳುತ್ತಲೇ, ಇತರರನ್ನು ಕೊಂದು ತಮ್ಮ ಬದುಕಿನ ಜಿಗುಪ್ಸೆ ನೀಗಿಸಿಕೊಳ್ಳಲು ಹೊರಟವರ ತಿಕ್ಕಲುತನದಿಂದಲೂ ದಿಕ್ಕೆಡಬೇಕಾದ ಸ್ಥಿತಿ ಆ ರಾಷ್ಟ್ರಗಳಲ್ಲಿ ದಟ್ಟವಾಗುತ್ತಿದೆ.

ಸಮಸ್ಯೆ ಭದ್ರತೆಯದ್ದೇ. ಭಾರತಕ್ಕೆ ಹೋಲಿಸಿದರೆ ತಂತ್ರಜ್ಞಾನ ಮತ್ತು ಜನಸಂಖ್ಯೆ ಯೋಜನೆ ಎಲ್ಲದರಲ್ಲೂ ಸುಧಾರಿತವಾಗಿರುವ ಈ ರಾಷ್ಟ್ರಗಳಿಗೆ ಸೆಕ್ಯುರಿಟಿ ವ್ಯವಸ್ಥೆ ಸಮರ್ಪಕವಾಗಿಡಲು ಸಾಧ್ಯವಾಗುತ್ತಿಲ್ಲ ಎಂದಾದರೆ, ನಾವೆಲ್ಲ ಇನ್ನೆಷ್ಟು ದಿಗಿಲುಪಟ್ಟುಕೊಳ್ಳಬೇಕು ಹಾಗಾದರೆ?

ಹೀಗಾಗಿ ಈ ಕ್ಷಣಕ್ಕೆ ಎನ್ನಿಸುತ್ತಿರುವುದು ಈ ದೇಶಗಳಲ್ಲಿ ಹೆಚ್ಚಬೇಕಿರುವುದು ಸೆಕ್ಯುರಿಟಿ ಅಲ್ಲ ಸೈಕಾಲಜಿಸ್ಟ್ ಅರ್ಥಾತ್ ಮನೋವೈದ್ಯರ ಸಂಖ್ಯೆ! ಸಾಯುವಿಕೆಯಲ್ಲಿ ವಿಕೃತ ಸಂಭ್ರಮವನ್ನು ಕಾಣಲು ಹೊರಟಿರುವ ಮನಸ್ಸುಗಳನ್ನು ಸರಿಪಡಿಸುವುದು ಹೇಗೆ ಎಂಬುದು ಪಾಶ್ಚಾತ್ಯರಿಗೆ ಈ ಶತಮಾನದಲ್ಲಿ ಕಾಡಬೇಕಿರುವ ಪ್ರಶ್ನೆ.

1 COMMENT

Leave a Reply