ರೈ ಅನ್ನು ರಾಜ್ ಆಗಿಸಿದ ನಿರ್ದೇಶಕ ಬಾಲಚಂದರ್ ನೆನಪು ಪ್ರಕಾಶ್ ಮಾತುಗಳಲ್ಲಿ ಅರಳಿದ್ದು ಹೇಗೆ?

ಎನ್. ಎಸ್. ಶ್ರೀಧರಮೂರ್ತಿ

ಸುಚಿತ್ರ ಫಿಲಂ ಸೊಸೈಟಿಯಲ್ಲಿ ಖ್ಯಾತನಟ ಪ್ರಕಾಶ್ ರೈ ಕೆ.ಬಾಲಚಂದರ್ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಈ ನೆನಪಿನ ಪಯಣದ ಕೆಲವು ಸ್ವಾರಸ್ಯಕರ ಸಂಗತಿಗಳು ಹೀಗಿವೆ..

‘ಹರಕೆಯ ಕುರಿ’ ಚಿತ್ರದಲ್ಲಿ ತಮ್ಮೊಂದಿಗೆ ಅಭಿನಯಿಸುತ್ತಿದ್ದ ಕಲಾವಿದೆ ಗೀತಾ ಅವರ ಒತ್ತಾಯದ ಮೇರೆಗೆ ಪ್ರಕಾಶ್‍ ಕೆ.ಬಾಲಚಂದರ್ ಅವರನ್ನು ಭೇಟಿ ಮಾಡಿದರು. ಆಗ ಬಾಲಚಂದರ್ ಯಾವುದೋ ಚಿತ್ರದ ತಾಂತ್ರಿಕ ಕೆಲಸದಲ್ಲಿ ತೊಡಗಿದ್ದರು. ಪ್ರಕಾಶ್ ಅವರ ಕಡೆ ಔಪಚಾರಿಕವಾಗಿ ನೋಡುತ್ತಾ ‘ಏನಾದರೂ ಮಾತನಾಡು’ ಎಂದರು. ಏನು ಹೇಳುವುದು ತಿಳಿಯದೆ ಪ್ರಕಾಶ್ ಒಂದು ಜನಪದ ಕಥೆಯನ್ನು ಹೇಳಲು ಶುರು ಮಾಡಿದರು. ಎರಡು ನಿಮಿಷದ ನಂತರ ಬಾಲಚಂದರ್‍ ‘ಇದನ್ನೇಕೆ ನನಗೆ ಹೇಳುತ್ತಿರುವೆ’ ಎಂದು ಕೇಳಿದರು. ‘ಏನಾದರೂ ಮಾತನಾಡುತ್ತಿರು’ ಎಂದರಲ್ಲ ಎಂದು ಪ್ರಕಾಶ್ ಹೇಳಿದಕ್ಕೆ ‘ತುಂಬಾ ಇಂಟರೆಸ್ಟಿಂಗ್ ಪರ್ಸನಾಲಿಟಿ ಕಣಯ್ಯ ನೀನು’ ಏನುತ್ತಾ ಪ್ರಕಾಶ್ ಕಣ್ಣನ್ನು ಗಮನಿಸಿದವರೆ ‘ಇಷ್ಟು ದಿನ ಏನು ಮಾಡ್ತಾ ಇದ್ದೆ ಇಷ್ಟು ಸುಂದರವಾದ ಕಣ್ಣುಗಳನ್ನು ಇಟ್ಕೊಂಡು ಮೊದಲೇ ಏಕೆ ಸಿನಿಮಾಕ್ಕೆ ಬರಲಿಲ್ಲ’ ಎಂದು ಆವೇಶಭರಿತರಾಗಿ ಮಾತನಾಡಿದರು. ಎರಡು ದಿನ ಇರಲು ಹೇಳಿದರು. ಅವರೊಂದು ಚಿತ್ರಕ್ಕೆ ಪ್ರಕಾಶ್ ಅವರನ್ನು ಹಾಕಿಕೊಳ್ಳಬೇಕು ಎಂದು ಬಯಸಿದ್ದರು. ಆದರೆ ಕೈಗೂಡಲಿಲ್ಲ. ಆರು ತಿಂಗಳ ನಂತರ ಬಾಲಚಂದರ್ ಅವರಿಂದ ಪೋನ್‍ ಬಂದಿತು. ಈಗ ಪ್ರಕಾಶ್‍ ರೈ ಅವರಿಗೆ ಅವಕಾಶ ಸಿಕ್ಕಿತು. ಹೆಸರನ್ನು ಮಣಿ ಪ್ರಕಾಶ್ ಎಂದು ಬದಲಾಯಿಸುವೆ ಎಂದರು. ಪ್ರಕಾಶ್‍ ರೈ ಒಪ್ಪಲಿಲ್ಲ ಆಗ ಬಾಲಚಂದರ್ ಹೇಳಿದರು ‘ನೋಡು ಈ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ವಿವಾದ ನಡೆಯುತ್ತಿದೆ. ಕಲಾವಿದೆ ಈ ಭಾಷೆ-ದೇಶದ ಗೋಜಲಿಗೆ ಸಿಲಕಬಾರದು. ಯೂನಿರ್ಸಲ್ ಆಗ ಬೇಕು’ ಕೊನೆಗೆ ‘ಪ್ರಕಾಶ್‍ ರಾಜ್‍’ ಎಂದು ಬದಲಾಯಿಸಿದರು.

ಬಾಲಚಂದರ್ ಕಥೆಯ ಕುರಿತು ಕಲಾವಿದರೊಂದಿಗೆ ಚರ್ಚಿಸುತ್ತಿರಲಿಲ್ಲ. ಚಿತ್ರೀಕರಣಕ್ಕೆ ಬರುವಾಗಲೇ ಏನು ಬೇಕು ಎನ್ನುವುದು ಅವರಿಗೆ ಖಚಿತವಾಗಿ ಗೊತ್ತಿರುತ್ತಿತ್ತು. ಕಲಾವಿದರನ್ನು ಹೀಗೆ ಅಭಿನಯಿಸು ಎಂದೂ ಹೇಳುತ್ತಿರಲಿಲ್ಲ. ಸೂಚನೆ ಕೊಟ್ಟ ನಂತರ ಕಲಾವಿದರು ತಮ್ಮ ಶೈಲಿಯಲ್ಲಿ ಅದನ್ನು ಬೆಳಸ ಬೇಕು ಎನ್ನುವುದು ಅವರ ನಂಬಿಕೆಯಾಗಿತ್ತು. ಅವರದು ಸದಾ ಚಿಂತಿಸುವ ಮನಸ್ಸು ಚಿತ್ರೀಕರಣ ನಡೆಯುತ್ತಿರುವಾಗಲೇ ಕಥೆ ಬದಲಾಗಿದ್ದೂ ಇದೆ. ಸದಾ ಹೊಸತನಕ್ಕೆ ಹುಡುಕುತ್ತಿದ್ದರು. ಹೊಸತನ ಸಿಕ್ಕಾಗ ಬಾಲಚಂದರ್ ನಿಗಿನಿಗಿಸುವ ಕೆಂಡದ ಹಾಗೆ ಇರುತ್ತಿದ್ದರು. ಪ್ರಕಾಶ್‍ ಹೇಳುತ್ತಾರೆ ‘ಬಾಲಚಂದ್ರ ತುಂಬಿ ಹರಿಯುವ ನದಿಯ ಹಾಗೆ’ ಯಾವುದೋ ಒಂದು ಸುಳಿವನ್ನೋ ಚಿಮ್ಮನ್ನೋ ಕಂಡು ಇದೇ ನದಿ ಎಂದು ಬಿಡುತ್ತೇವೆ. ಆದರೆ ಅದು ನಮ್ಮ ಗ್ರಹಿಕೆಯ ಮಿತಿ ಅಷ್ಟೇ ಬಾಲಚಂದರ್ ಕೂಡ ಹಾಗೆ ನಮ್ಮ ಗ್ರಹಿಕೆಯ ಮಿತಿಯನ್ನು ದಾಟಿದ ವಿಶಾಲ ಪ್ರತಿಭೆ’.

‘ಕಲ್ಕಿ’ಚಿತ್ರದಲ್ಲಿ ಅಭಿನಯಿಸುವಾಗಲೇ ಪ್ರಕಾಶ್‍ ರೈ ಅವರಿಗೆ ಮಣಿರತ್ನಂ ಅವರ ‘ಇರುವರ್’ಚಿತ್ರದ ಅವಕಾಶ ಸಿಕ್ಕಿತು. ಬಿಡಬೇಡ ಎಂದ ಬಾಲಚಂದರ್ ತಮ್ಮ ಚಿತ್ರದ ಡೇಟ್ಸ್‍ಗಳನ್ನು ಹೊಂದಿಸಿಕೊಂಡರು. ಅಷ್ಟೇ ಅಲ್ಲ ‘ಇರುವರ್’ಚಿತ್ರಕ್ಕೆ ತಲೆ ಕೂದಲು ತೆಗಿಸ ಬೇಕಾಗಿ ಬಂದಾಗ ತಮ್ಮ ಚಿತ್ರದಲ್ಲಿ ವಿಗ್ ಹಾಕಿ ಕಂಟ್ಯೂನಿಟಿಯನ್ನು ಉಳಿಸಿದರು. ಕಲಾವಿದರು ಸದಾ ಬೆಳೆಯುತ್ತಿರ ಬೇಕು ಎನ್ನುವುದು ಅವರ ತುಡಿತವಾಗಿತ್ತು. ಒಮ್ಮೆ ಕಾರ್ಯಕ್ರಮದಲ್ಲಿ ಪ್ರಕಾಶ್‍, ರಜನೀಕಾಂತ್, ಕಮಲಾಹಾಸನ್ ಮೂವರೂ ಭಾಗವಹಿಸಿದ್ದರು. ಮೂವರೂ ಬಾಲಚಂದರ್ ಅವರ ಶಿಷ್ಯರೇ! ಬಾಲಚಂದರ್ ಮಾತನಾಡುತ್ತಾ ಮೂವರ ಬಗ್ಗೆ ಕೂಡ ಗೌರವದಿಂದ ಮಾತನಾಡಿದರು. ಇದರಿಂದ ಮುಜುಗರಕ್ಕೆ ಒಳಗಾದ ಪ್ರಕಾಶ್‍ ಬಾಲಚಂದರ್ ಅವರ ಜೊತೆಗೆ ‘ನಾವು ನಿಮ್ಮಿಂದ ಬೆಳೆದವರು, ನಮ್ಮ ಕುರಿತು ಹೀಗೇಕೆ’ ಎಂದು ಜಗಳಾಡಿದರು. ಅದಕ್ಕೆ ಬಾಲಚಂದರ್ ಹೇಳಿದರು ‘ನಾನು ಯಾರನ್ನೂ ಬೆಳಸಲಿಲ್ಲ, ಕಲಾವಿದರನ್ನು ಯಾರೂ ಬೆಳಸಲು ಸಾಧ್ಯವಿಲ್ಲ. ನಾನು ಸ್ವಾರ್ಥಿ ಕಣಯ್ಯ, ನನ್ನ ಕಥೆಗೆ ನೀವು ಹೊಂದಿಕೊಂಡಿರಿ, ಬಳಸಿಕೊಂಡೆ, ನನಗೆ ನನ್ನ ಚಿತ್ರ ಚೆನ್ನಾಗಿ ಬರುವುದು ಮುಖ್ಯವಾಗಿತ್ತು , ನಿಮ್ಮನ್ನು ಬೆಳಸುವುದಲ್ಲ. ಮುಂದೆ ನೀವು ಅವಕಾಶಗಳನ್ನು ಬಳಸಿಕೊಂಡು ನೀವು ಬೆಳೆದಿರಿ ಅದಕ್ಕೆ ನಾನು ಹೇಗೆ ಕಾರಣನಾಗುತ್ತೇನೆ’  ಒಮ್ಮೆ ಪ್ರಕಾಶ್ ಯಾವುದೂ ಆಲ್ಬಂ ಬಿಡುಗಡೆ ಸಮಾರಾಂಭಕ್ಕೆ ಟೀಶರ್ಟ್‍ ಧರಿಸಿ ಹೋಗಿದ್ದನ್ನು ಕಂಡ ಬಾಲಚಂದರ್ ತರಾಟೆಗೆ ತೆಗೆದುಕೊಂಡರು ‘ಸಿನಿಮಾ ನಮಗೆ ಅನ್ನ ಕೊಡುವ ಕಲೆ. ಈ ಕುರಿತು ಎಂದಿಗೂ ಉಡಾಫೆ ಧೋರಣೆ ಇಟ್ಟುಕೊಳ್ಳ ಬಾರದು’.

ಕೆ.ಬಾಲಚಂದರ್ ಅವರಿಗೆ ಕಲಾವಿದ ಎಲ್ಲಾ ಕ್ಷೇತ್ರದಲ್ಲಿಯೂ ಪರಿಣಿತನಾಗ ಬೇಕು ಎನ್ನುವ ನಂಬಿಕೆ ಇತ್ತು. ಆತನಿಗೆ ಸಾಹಿತ್ಯ, ಸಂಗೀತ, ನಿರ್ಮಾಣ, ನಿರ್ದೇಶನ ಎಲ್ಲದರ ಕಡೆ ಕೂಡ ಒಲವಿರ ಬೇಕು ಎನ್ನುವ ಸಮಗ್ರತೆಯಲ್ಲಿ ಅವರಿಗೆ ವಿಶ್ವಾಸವಿತ್ತು. ಹೀಗಾಗಿಯೇ ‘ಕೆ.ಬಿ.ಯೂನಿರ್ಸಿಟಿ’ಯಿಂದ ಬಂದರೆಲ್ಲರೂ ಇಂತಹ ಬಹುಮುಖಿ ಪ್ರತಿಭೆಯನ್ನು ಅಳವಡಿಸಿಕೊಂಡರು.

ಬಾಲಚಂದರ್ ಅವರ ಕೊನೆಯ ಸಿನಿಮಾ ‘ಪೋ’ವನ್ನು ಪ್ರಕಾಶ್‍ ರೈ ನಿರ್ಮಿಸಿದ್ದರು. ಅದು ಗಲ್ಲಾ ಪೆಟ್ಟಿಗೆಯಲ್ಲಿ ಸೋತಿದ್ದರಿಂದ ಬಾಲಚಂದರ್ ಸಂಭಾವನೆ ಪಡೆಯಲು ಹಿಂದೆಗೆದಿದ್ದರು. ಪ್ರಕಾಶ್‍ ಆಗ ಹೇಳಿದ್ದ ಮಾತು ‘ಬೆಂಗಳೂರಿನಿಂದ 120 ರೂಪಾಯಿಗಳನ್ನು ಇಟ್ಟುಕೊಂಡು ಬಂದವನನ್ನು ನೀವು ಮೂರೂವರೆ ಕೋಟಿ ಕಳೆದುಕೊಂಡರೂ ಗಟ್ಟಿಯಾಗಿ ಉಳಿದುಕೊಳ್ಳುವ ಮಟ್ಟಿಗೆ ಬೆಳೆಸಿದ್ದಿರಿ.. ಅದರ ಮುಂದೆ  ಈ ಸೋಲು ಯಾವ ಲೆಕ್ಕ!’

Leave a Reply