ಸೇರಿಗೆ ಸವಾಸೇರು ಎಂಬಂತಿದೆ ಸಾರಿಗೆ ನೌಕರರ ಮತ್ತು ಸರ್ಕಾರದ ಗುದ್ದಾಟ, ನಾಳೆಯೂ ಬಗ್ಗದಿದ್ದರೆ ಎಸ್ಮಾ ಜಾರಿಗೆ ಚಿಂತನೆ

BMTC Buses Deployed with drivers in probation along with Police Escorts at Shantinagar in Bengaluru on Tuesday.

 

ಡಿಜಿಟಲ್ ಕನ್ನಡ ಟೀಮ್:

ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂಬುದು ಸಾರಿಗೆ ನೌಕರರ ಪಟ್ಟು.. ತರಬೇತಿಯಲ್ಲಿರುವ 10 ಸಾವಿರಕ್ಕೂ ಹೆಚ್ಚು ಚಾಲಕ ಮತ್ತು ನಿರ್ವಾಹಕರನ್ನು ಬಳಸಿ ಪೊಲೀಸ್ ರಕ್ಷಣೆಯೊಂದಿಗೆ ಬಸ್ ಸಂಚಾರ ಆರಂಭಿಸಿದೆ ಸರ್ಕಾರ.. ಇದು ಮಂಗಳವಾರ ಸರ್ಕಾರ ಮತ್ತು ಸಾರಿಗೆ ನೌಕಕರ ನಡುವಣ ಗುದ್ದಾಟದ ಪ್ರಮುಖ ಚಿತ್ರಣ.

ಮುಷ್ಕರದ ಎರಡನೇ ದಿನವಾದ ಮಂಗಳವಾರ ಬೆಳಗ್ಗೆ ಮತ್ತೆ ಬಸ್ ಗಳ ಸಂಚಾರವಿಲ್ಲದೆ ಜನ ಪರದಾಡುವಂತಾಯಿತು. ಸಂಜೆ 4 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಸೇವೆಯಿಂದ ಅಮಾನತು ಮಾಡುವುದಾಗಿ ಸರ್ಕಾರ ಎಚ್ಚರಿಕೆಯನ್ನು ಆಯಾ ಡಿಪೊಗಳು ತಮ್ಮ ವ್ಯಾಪ್ತಿಯಲ್ಲಿನ ತರಬೇತಿಯಲ್ಲಿರುವ ನೌಕರರಿಗೆ ನೀಡಿದ್ದವು. ಆಗ ಕೆಲಸದ ನಿರೀಕ್ಷೆಯಲ್ಲಿರುವ ತರಬೇತಿ ಹಂತದ ಚಾಲಕರು ನಿರ್ವಾಹಕರು ಬೇರೆ ದಾರಿ ಇಲ್ಲದೆ ಸೇವೆಗೆ ಹಾಜರಾದ್ರು. ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯಲ್ಲಿ ಚಾಲಕರಾಗಿರುವವರನ್ನು ಸೇವೆಗೆ ಬಳಸಿಕೊಂಡು ಸಂಜೆಯಿಂದಲೇ ಬೆಂಗಳೂರು ನಗರ ಮತ್ತು ದೂರದ ಊರುಗಳಿಗೆ ಬಸ್ ಸಂಚಾರ ಆರಂಭವಾಗಿದೆ. ಈ ವೇಳೆ ಬಸ್ ಚಾಲನೆಗೆ ಮುಂದಾದ ವ್ಯಕ್ತಿಗಳ ಮೇಲೆ ಪ್ರತಿಭಟನಾನಿರತ ನೌಕರರು ಹಲ್ಲೆಗೆ ಮುಂದಾದ ಘಟನೆಯೂ ನಡೀತು. ನೌಕರರು ತಮ್ಮ ಪಟ್ಟು ಸಡಿಲಗೊಳಿಸಿ ಸೇವೆಗೆ ಬಾರದ ಹಿನ್ನೆಲೆಯಲ್ಲಿ ಬುಧವಾರವೂ ಮುಷ್ಕರ ಮುಂದುವರಿಯುವುದು ಖಚಿತವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಪ್ರತ್ಯೇಕವಾಗಿ ಇಡೀ ದಿನ ಸಭೆಗಳನ್ನು ನಡೆಸಿದರು. ತರಬೇತಿ ಹಾಗೂ ಇತರೆ ನೌಕರರು ಬಸ್ಸು ಓಡಿಸಲು ಪೊಲೀಸರ ರಕ್ಷಣೆ ಕೊಡಬೇಕು, ಇದಕ್ಕೆ ಅಡ್ಡಿಪಡಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಎಲ್ಲಿಯೂ ಸಾರ್ವಜನಿಕ ಸೇವೆಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೊಣೆ ಎಂಬುದು ಈ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳು.

ಇದರ ಜತೆಗೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದ ಸಾರಿಗೆ ಸಂಸ್ಥೆ ಬಸ್ ಗಳನ್ನು ಹೆಚ್ಚುವರಿ ಟ್ರಿಪ್ ಗಳನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗೆ ಸರ್ಕಾರ ಆದೇಶಿಸಿದೆ.

ಈ ಸಭೆ ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದಿಷ್ಟು:

‘ಸರ್ಕಾರ ತನ್ನ ಸಾಮರ್ಥ್ಯ ತೋರಿದ್ದು, ಬುಧವಾರ ಬೆಳಗ್ಗೆ ವೇಳೆಗೆ ಶೇ.50 ರಿಂದ 60 ರಷ್ಟು ಬಸ್ಸುಗಳು ರಸ್ತೆಗಿಳಿಯಲಿವೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮುನ್ನ ಮುಷ್ಕರ ನಿರತ ಕಾರ್ಮಿಕರು ಪಟ್ಟು ಬಿಟ್ಟು ಕೆಲಸಕ್ಕೆ ಹಾಜರಾಗಿ. ನಾಳೆ ಮಧ್ಯಾಹ್ನದವರೆಗೂ ಸರ್ಕಾರ ಕಾದು ನೋಡುತ್ತದೆ. ಇಲ್ಲದಿದ್ದರೆ ಎಸ್ಮಾ ಜಾರಿಗೊಳಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಶೇ.10 ಕ್ಕಿಂತ ಹೆಚ್ಚು ವೇತನ ಹೆಚ್ಚಿಸಲು ಸಾಧ್ಯವಿಲ್ಲ. ಮೊದಲು ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಿ. ಆಮೇಲೆ ಲಾಭ-ನಷ್ಟ ನೋಡಿ ಹೆಚ್ಚಳದ ಪ್ರಸ್ತಾವನೆ ಪರಿಗಣಿಸಲಾಗುವುದು. ಮುಷ್ಕರ ಮಾಡಿಕೊಂಡು ಮಾತುಕತೆ ಸಾಧ್ಯವಿಲ್ಲ.’

ಇನ್ನು ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ನಂತರ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ರಜೆ ನೀಡುವುದು ಬಿಡುವುದು ಆಯಾ ಜಿಲ್ಲಾಡಳಿತಕ್ಕೆ ಬಿಟ್ಟ ವಿಷಯ ಎಂದಿದ್ದಾರೆ ಸಚಿವರು.

‘ಸಾರಿಗೆ ಇಲಾಖೆಗೆ ಲಾಭ ಮಾಡುವ ಉದ್ದೇಶವಿಲ್ಲ. ಈ ಮುಷ್ಕರದಿಂದ ಜನರಿಗೆ ಅನಾನುಕೂಲವಾಗ್ತಿದೆ. ಸಾರಿಗೆ ಸಂಸ್ಥೆ ಈಗಾಗಲೇ ನಷ್ಟದಲ್ಲಿದೆ. ಹೀಗಾಗಿ ಶೇ.10 ಕ್ಕಿಂತ ಹೆಚ್ಚು ವೇತನ ಹೆಚ್ಚಿಸಲು ಆಗಲ್ಲ. ನೌಕರರು ಹಠಮಾರಿ ಧೋರಣೆ ಬಿಟ್ಟು ಮುಷ್ಕರ ವಾಪಸ್ ಪಡೆಯಿರಿ’ ಎಂಬುದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ.

ಇನ್ನು ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಚಿಕ್ಕಮಗಳೂರು ಡಿಪೊಗೆ ಸೇರಿದ ಐವರು ಸಿಬ್ಬಂದಿಯನ್ನು ಸರ್ಕಾರ ವಜಾಗೊಳಿಸಿದೆ. ಹೊನ್ನಪ್ಪ, ಜಗದೀಶ್, ಸುರೇಶ್, ಪೆದ್ದಣ್ಣ, ರೇವಣ್ಣಪ್ಪ ಅವರು ವಜಾಗೊಂಡಿರುವ ಸಿಬ್ಬಂದಿ. ಇನ್ನು ಈ ಮುಷ್ಕರದಿಂದ ಎಸ್ಮಾ ಜಾರಿಯಾಗುವ ಆತಂಕದಲ್ಲಿ ಬಾಗಲಕೋಟೆಯ ಬಸ್ ನಿರ್ವಾಹಕ ಫಾರೂಕ್ ಅತ್ತರ್ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Leave a Reply