ಕರ್ನಲ್ ಲಲಿತ್ ರೈ ಹೇಳಿದ ಮನೋಜ್ ಪಾಂಡೆ ಎಂಬ ಪರಮ ವೀರ ಚಕ್ರ ಪುರಸ್ಕೃತನ ಸಾಕ್ಷಾತ್ ವೀರಗಾಥೆ!

ಚೈತನ್ಯ ಹೆಗಡೆ

ಕರ್ನಲ್ ಲಲಿತ್ ರೈ, ವೀರ ಚಕ್ರ…

ಕಾರ್ಗಿಲ್ ಯುದ್ಧದಲ್ಲಿ 1/11 ಗೂರ್ಖಾ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿದ್ದವರು. ಜುಲೈನಲ್ಲಿ ಬಟಾಲಿಕ್ ಉಪ ವಿಭಾಗದ ಕಾಲುಬರ್ ಪರ್ವತ ಶ್ರೇಣಿಯನ್ನು ಪಾಕಿಸ್ತಾನದ ಕಪಿಮುಷ್ಟಿಯಿಂದ ಬಿಡಿಸಿದ್ದು ಇವರ ತಂಡದ ಧೀರೋದ್ದಾತ ಕಾರ್ಯ.

ಯೂಟ್ಯೂಬಿನಲ್ಲಿ ಇವರು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ತಮ್ಮ ತಂಡದ ಕತೆಯನ್ನು ಹಂತ ಹಂತವಾಗಿ ಹೇಳುವ ವಿಡಿಯೋ ಒಂದು ಯೂಟ್ಯೂಬ್’ನಲ್ಲಿ ಲಭ್ಯವಿದೆ. ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಆ ಕತೆಯನ್ನು ಕನ್ನಡದಲ್ಲಿ ಬರೆದಿರಿಸುವ ಯತ್ನವಿದು.

ಈ ಕತೆಯ ಇನ್ನೊಂದು ವಿಶೇಷ ಎಂದರೆ ಇದು ಕಾರ್ಗಿಲ್ ಯುದ್ಧದಲ್ಲಿ ನಾಲ್ವರು ಪರಮವೀರ ಚಕ್ರ ಪಡೆದವರಲ್ಲಿ ಒಬ್ಬರಾದ ಹಾಗೂ ಕ್ಯಾಪ್ಟನ್ ವಿಕ್ರಂ ಬಾತ್ರಾ ಜತೆ ಮರಣೋತ್ತರವಾಗಿ ಪರಮವೀರಚಕ್ರ ಪಡೆದವರಲ್ಲೊಬ್ಬರಾದ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆಯ ವೀರಗಾಥೆಯನ್ನೂ ಒಳಗೊಂಡಿದೆ. ಪಾಂಡೆಯ ವೀರ ಮರಣವನ್ನು ದಾಖಲಿಸಿ, ಪರಮವೀರ ಚಕ್ರ ಪುರಸ್ಕಾರಕ್ಕೆ ಶಿಫಾರಸು ಮಾಡಿದವರು ಕರ್ನಲ್ ಲಲಿತ್ ರೈ.  ಇವರದ್ದೇ ರೆಜಿಮೆಂಟಿನ ಪ್ಲಟೂನ್ ಒಂದರ ನೇತೃತ್ವ ವಹಿಸಿದ್ದ ಯುವ ಯೋಧ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ.

ಇವರು ಕಾರ್ಗಿಲ್ ವಿಜಯದಲ್ಲಿ 1/11 ಗೂರ್ಖಾ ರೆಜಿಮೆಂಟಿನ ಭಾಗವನ್ನು ಹಲವು ಉಪನ್ಯಾಸಗಳಲ್ಲಿ ಕಣ್ಣಿಗೆ ಕಟ್ಟಿದಂತೆ ತೆರೆದಿರಿಸಿದ್ದಾರೆ. ಬರಹರೂಪವನ್ನು ಶಿಸ್ತಲ್ಲಿಡುವ ದೃಷ್ಟಿಯಿಂದ ಸಂಗ್ರಹ ರೂಪದಲ್ಲಿ ಹಂತ ಹಂತವಾಗಿ ಹೀಗೆ ತೆರೆದಿಡುತ್ತ ಹೋಗಬಹುದು.

– ಕಾರ್ಗಿಲ್ ಯೋಜನೆ ಪಾಕಿಸ್ತಾನ ಲಾಗಾಯ್ತಿನಿಂದ ಯೋಚಿಸಿಕೊಂಡು ಬಂದಿರುವಂಥದ್ದೇ. ಇದಕ್ಕೂ ಮೊದಲು ಆಪರೇಷನ್ ಗಿಬ್ರಾಲ್ಟರ್ ನಲ್ಲೂ ಹೀಗೆಯೇ ಮಾಡಿದ್ದರು. ಮುಜಾಹಿದೀನ್ ಗಳು ಅಂದರೆ ಧರ್ಮಕ್ಕಾಗಿ ಸಾಯಲು ಸಿದ್ಧರಿರುವವರು ಹಾಗೂ ಪಾಕ್ ಯೋಧರು ಇವರ ಗುಂಪು ರೂಪಿಸಿಕೊಂಡು, ಚೀನಾದ ಪರೋಕ್ಷ ಬೆಂಬಲದೊಂದಿಗೆ ದಾಳಿ ಯೋಜನೆ ಆಗ ರೂಪುಗೊಂಡಿತ್ತು. ಜಮ್ಮು ಮೂಲಕ ಲೇಹ್ ಗೆ ತಲುಪುವ ಹೆದ್ದಾರಿ ವಶಪಡಿಸಿಕೊಂಡರೆ ಎಲ್ಲವನ್ನೂ ತಡೆದಂತಾಗುತ್ತದೆ. ಮೊದಲು ಒಳನುಗ್ಗಿ ಬೇರೆ ಬೇರೆ ಕಡೆ ಚದುರಿ ಮುಖ್ಯ ಭಾಗಗಳನ್ನು ದಾಳಿ ಮಾಡಲು ತೊಡಗಿದಂತೆ ಜಮ್ಮು-ಕಾಶ್ಮೀರದಲ್ಲಿರುವ ಜನರೇ ತಮ್ಮ ಪರ ನಿಲ್ಲುತ್ತಾರೆ ಎಂಬುದು ಅವರ ಯೋಚನೆ ಆಗಿತ್ತು. ಆದರೆ ಆಗಿನ ಸಂದರ್ಭದಲ್ಲಿ, ಬಹುಮುಖ್ಯವಾಗಿ ಲಢಾಕ್ ಜನರ ರಾಷ್ಟ್ರೀಯವಾದದಿಂದ ಈ ಯೋಜನೆ ಮುಗ್ಗರಿಸಿ ಅವರು ಹಿಂದಕ್ಕೆ ಹೋಗುವಂತಾಗಿತ್ತು.

– ಕಾರ್ಗಿಲ್ ನಲ್ಲಿ ಅತಿಹಿಮ ಬೀಳುತ್ತಿದ್ದಂತೆ ಭಾರತೀಯ ಸೇನೆ ಹಿಂದೆ ಬರುತ್ತದೆ. ನಂತರ ಹಿಮ ಕರಗುತ್ತಲೇ ಮತ್ತೆ ಅಲ್ಲಿಗೆ ಹೋಗುತ್ತದೆ. ಇದು ಯಾವತ್ತಿನಿಂದ ನಡೆದು ಬಂದಿರುವಂಥದ್ದು. ಹೆಲಿಕಾಪ್ಟರ್ ಗಳ ಮೂಲಕ ತೆರವಾದ ಜಾಗದಲ್ಲಿ ಬಂದು ಕುಳಿತು, ಎಲ್ಲ ಸೌಕರ್ಯ ನಿರ್ಮಿಸಿಕೊಂಡು, ಭಾರತೀಯ ಯೋಧರು ಹೋಗುತ್ತಲೇ ಚಕಮಕಿ ನಡೆಸುವುದು… ಇದು ತೀವ್ರವಾಗುತ್ತಲೇ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸುತ್ತದೆ. ಆಗ ಗಡಿಯಲ್ಲಿ ತಾವು ಮುಂದುವರಿದಷ್ಟು ಜಾಗಕ್ಕೆ ರೇಖೆ ಬದಲಿಸಿ ತಮ್ಮ ವಶ ಮಾಡಿಕೊಳ್ಳುವುದು ಪಾಕಿಸ್ತಾನದ ಯೋಜನೆ ಆಗಿತ್ತು.

– ಮೇ 5ರ ಹೊತ್ತಿಗೆ ನಮಗೆ ಪಾಕಿಸ್ತಾನಿಗಳ ಈ ಕೃತ್ಯ ಗೊತ್ತಾಯಿತು. ಆಗಲೂ ಚಿತ್ರಣ ಸ್ಪಷ್ಟವಾಗಿರಲಿಲ್ಲ. ಪಾಕಿಸ್ತಾನ ಸೇನೆ ಸಕಲ ತಯಾರಿಗಳೊಂದಿಗೆ ಅಲ್ಲಿ ಬಂದು ಕುಳಿತಿದೆ ಎಂಬುದೇನೂ ತಿಳಿದಿರಲಿಲ್ಲ. ಪಾಕ್ ಬೆಂಬಲ ಪಡೆದು ಒಂದಿಷ್ಟು ಉಗ್ರರು ಇಂಥ ದುಸ್ಸಾಹಸಕ್ಕಿಳಿದಿದ್ದಾರೆ ಎಂದೇ ಅಂದುಕೊಂಡೆವು. ನಾನು ಕಾರ್ಯಾಚರಣೆಗೆ ಹೋದ ಬಟಾಲಿಕ್ ವಿಭಾಗ ತುಂಬ ಮಹತ್ವದ್ದಾಗಿತ್ತು ಏಕೆಂದರೆ, ಅಲ್ಲಿಂದಲೇ ಕಣಿವೆ ಇಳಿದು ಬಂದು ಲೇಹ್ ದಾರಿಯನ್ನು ಬ್ಲಾಕ್ ಮಾಡುವ ಯೋಜನೆ ಅವರದ್ದಾಗಿತ್ತು. ಸಾಮಾನ್ಯವಾಗಿ ಜುಲೈ ಅಂತ್ಯದಲ್ಲಿ ಹಿಮ ಕರಗಿ ಯೋಧರು ಮತ್ತೆ ಪೋಸ್ಟ್ ಗಳಿಗೆ ಮರಳುತ್ತಾರೆ. ಆದರೆ ಅದೃಷ್ಟ ನಮ್ಮ ಪರವಿತ್ತು ಎನ್ನಿಸುತ್ತದೆ. ಮೇನಲ್ಲೇ ತಪ್ಪಲಿನ ಹಿಮ ಕರಗಿ ದಾರಿ ತೆರೆದುಕೊಳ್ಳುತ್ತಿತ್ತು. ಹೀಗಾಗಿ ಯೋಧರ ಒಂದು ತಂಡ ಪರ್ವತ ಹತ್ತಿತ್ತು. ಬಹುಶಃ ಇವರು ಹೋಗುತ್ತಿರುವಾಗಲೇ ಅಲ್ಲಿ ಅಡಗಿದ್ದ ಪಾಕಿಸ್ತಾನಿಯರಿಗೆ ಇವರ ಪಥ ಸಂಚಲನ ಕಂಡಿತಾದರೂ, ಅವರ ತಯಾರಿ ಮುಗಿದಿರಲಿಲ್ಲವಾದ್ದರಿಂದ ಇವರ ಮೇಲೆ ಬೀಳಲು ಹೋಗದೇ ಮರೆಯಾಗಿದ್ದರೆನಿಸುತ್ತದೆ. ಆದರೆ ಮಾರ್ಗಮಧ್ಯೆ ರೆಡಿಯೋ ಬ್ಯಾಟರಿ ಕಡಿಮೆ ಇದ್ದದ್ದು ಮುಖ್ಯಸ್ಥನ ಗಮನಕ್ಕೆ ಬಂತು. ಹೀಗಾಗಿ ಆತ ಮತ್ತೆ ಬೇಸ್ ಕ್ಯಾಂಪಿಗೆ ಮರಳಿ ರೆಡಿಯೋ ಬ್ಯಾಟರಿಗಳನ್ನು ತರುವುದಕ್ಕೆ ಕೆಲವರನ್ನು ಕೆಳಗೆ ಕಳುಹಿಸುತ್ತಾರೆ. ಹಿಂತಿರುಗುತ್ತ ದಾರಿ ತಪ್ಪಿದ ಅವರು, ಪಾಕಿಸ್ತಾನಿಯರನ್ನು ಕಾಣುತ್ತಾರೆ. ಮೊದಲ ಬಾರಿ ಗುಂಡಿನ ಆರ್ಭಟ ಶುರುವಾಗಿದ್ದೇ ಆವಾಗ. ಸೇನೆಯಲ್ಲಿರುವ ನಮಗೆ ಇದು ಉಗ್ರರ ಗುಂಡೋ ಅಥವಾ ಕರಾರುವಾಕ್ ತರಬೇತಿ ಪಡೆದಿರುವ ಯೋಧರದ್ದೋ ಎಂಬುದು ಎದುರಾಳಿ ಶಸ್ತ್ರ ಚಲಾಯಿಸುವ ಬಿರುಸಿನಲ್ಲೇ ಗೊತ್ತಾಗಿಬಿಡುತ್ತದೆ. ಇದು ಸೈನಿಕರ ಕೆಲಸವೇ ಅಂತ ಎಚ್ಚರಿಕೆ ಗಂಟೆ ಮೊಳಗಿದ್ದು ಆವಾಗಲೇ. ಆ ಹಂತದಲ್ಲಿ ಸಹ ಇವರು ಎಷ್ಟು ಸಂಖ್ಯೆಯಲ್ಲಿ ಬಂದು ಕುಳಿತಿದ್ದಾರೆ, ಇವರ ತಯಾರಿ ಎಂಥಾದ್ದು ಎಂಬ ಯಾವ ಅಂದಾಜುಗಳೂ ನಮಗೆ ಸಿಕ್ಕಿರಲಿಲ್ಲ.

– ತೋಡಾದ ಅರಣ್ಯ ಭಾಗದಲ್ಲಿ ದುರ್ಗಮ ಕಾರ್ಯಾಚರಣೆ ಒಂದನ್ನು ಮುಗಿಸಿ ಹಿಂತಿರುಗುವ ಹಂತದಲ್ಲಿ ನಾನಿದ್ದೆ. ಪುಣೆಗೆ ಮರಳಿ ಎರಡು ತಿಂಗಳ ರಜೆಯಲ್ಲಿ ಏನೆಲ್ಲ ಮಾಡಬೇಕು ಎಂಬ ಯೋಜನೆಗಳು ರೂಪುತಾಳುತ್ತಿದ್ದ ಸಮಯ ಅದು. ಹಾಗೆ ರಜಾ ಮಜಾದ ಸನ್ನಾಹದಲ್ಲಿದ್ದಾಗಲೇ ಕರ್ತವ್ಯದ ಕರೆ ಬಂತು. ಗೂರ್ಖಾ ರೈಫಲ್ಸ್ ಕಮಾಂಡ್ ತೆಗೆದುಕೊಳ್ಳುತ್ತೀಯಾ ಅಂತ ನನ್ನನ್ನು ಕೇಳಲಾಯಿತು. ಆಗ ನನಗೆ ಆ ಪಡೆಯ ವ್ಯಕ್ತಿಗಳು ಗೊತ್ತಿರಲಿಲ್ಲ. ಕಾರ್ಯಾಚರಣೆ ಪ್ರದೇಶದ ಭೂಲಕ್ಷಣಗಳೂ ಅಪರಿಚಿತ. ಆದರೆ ಹಿಂದೇಟು ಹಾಕುವುದು ನನ್ನ ಜಾಯಮಾನವಲ್ಲ. ಅಲ್ಲದೇ, ನನಗಿದ್ದ ಒಂದು ಭಾವನಾತ್ಮಕ ಒತ್ತಾಸೆ ಎಂದರೆ ಈ ಹಿಂದೆ ನನ್ನ ತಂದೆ ಈ ಬಟಾಲಿಯನ್ ಅನ್ನು ಮುನ್ನಡೆಸಿದ್ದರು. ಅದನ್ನು ನೆನಪಿಸಿಕೊಳ್ಳುತ್ತ ಯೆಸ್ ಅನ್ನುತ್ತಲೇ ಹೆಲಿಕಾಪ್ಟರ್ ನಲ್ಲಿ ಎತ್ತಿ ಬಟಾಲಿಯನ್ ಒಳಗೆ ನಿಲ್ಲಿಸಲಾಯಿತು. ಅದುವರೆಗೆ ತಾತ್ಕಾಲಿಕವಾಗಿ ಬಟಾಲಿಯನ್ ನೇತೃತ್ವ ವಹಿಸಿಕೊಂಡಿದ್ದ ವ್ಯಕ್ತಿ ಅತಿ ಬಿಗಿಯಾಗಿ ನನ್ನನ್ನು ಅಪ್ಪಿಕೊಂಡು, ‘ಅಬ್ಬಾ, ನೀನು ಬಂದು ನನ್ನ ತಲೆಭಾರ ಇಳಿಸಿದೆ’ ಎಂದ. ಹೀಗೆ ಬಟಾಲಿಯನ್ ನನಗೆ ಸ್ವಾಗತ ಕೋರಿ, ನನ್ನೊಂದಿಗೆ ಬೆರೆಯುವುದಕ್ಕೆ ಪ್ರಾರಂಭಿಸಿತ್ತಷ್ಟೇ… ನಾನಲ್ಲಿಗೆ ಹೋಗಿ ಆರೇಳು ನಿಮಿಷಗಳಾಗಿರಬಹುದು, ಪಾಕಿಸ್ತಾನಿಯರ ಕಡೆಯಿಂದ ತೀವ್ರ ಶೆಲ್ ದಾಳಿ ಶುರುವಾಯಿತು. ಅಲ್ಲಿಗೆ ನನ್ನ ಸ್ವಾಗತ ಕಾರ್ಯಕ್ರಮ ಮೊಟಕಾಗಿ ಬಂಕರ್ ಗಳಿಗೆಗೆ ಹಾರಿದೆವು!

– ಕಾರ್ಗಿಲ್ ನಲ್ಲಿ ನಾವು 3 ಬಗೆಯ ಶತ್ರುಗಳನ್ನು ಎದುರಿಸಬೇಕಿತ್ತು. ಮೊದಲನೆ ವೈರಿ ವಾತಾವರಣ. ಮೈನಸ್ 32 ಡಿಗ್ರಿ ಸೆಲ್ಶಿಯಸ್ ನಲ್ಲಿ ಶಸ್ತ್ರಕ್ಕೆ ನಿಮ್ಮ ಬರಿಗೈ ಸೋಕಿಸಿದರೂ ಅದು ಅಲ್ಲಿಯೇ ಅಂಟಿಬಿಡುತ್ತದೆ. ಹಿಮಹುಣ್ಣು, ಶ್ವಾಸಕೋಶ ಸಮಸ್ಯೆ… ಹೀಗೆ ಸಾಕಷ್ಟು ಅನಾರೋಗ್ಯ ನಿಮ್ಮನ್ನು ಕಾಡುತ್ತದೆ. ನಿಮಗೊಂದು ಉದಾಹರಣೆ ಹೇಳುವುದಾದರೆ… ಯೋಧನೊಬ್ಬ ಅಂಥ ಮರಗಟ್ಟುವ ಚಳಿಯಲ್ಲೂ ತುಸುವೂ ವಿಶ್ರಮಿಸದೇ ಗುಂಡಿ ತೋಡುತ್ತಿದ್ದ. ಭೇಷ್… ಎಂಥ ಕರ್ತವ್ಯಪರತೆ, ಸಂಗಾತಿಗಳಿಗೆ ಸುರಕ್ಷಿತ ಅಡಗುತಾಣಕ್ಕೆ ಹೀಗೆ ಗುಂಡಿ ತೋಡುತ್ತಿದ್ದಾನೆ ಅಂತ ನನ್ನಿಂದ ಪ್ರಶಂಸೆಯೂ ವ್ಯಕ್ತವಾಯಿತು. ಆತ ಗುಂಡಿ ತೋಡುವುದನ್ನು ಬಿಡಲೇ ಇಲ್ಲ! ಆಗ ಗೊತ್ತಾಗಿದ್ದು… ಆತನಿಗೆ ಮಿದುಳಿನ ನರಮಂಡಲದ ರಕ್ತಹೀನತೆ ಉಂಟಾಗಿದೆ ಅಂತ. ಹೀಗಾದಾಗ ವ್ಯಕ್ತಿಗೆ ಏನು ಮಾಡುತ್ತಿರುವೆ ಎಂಬುದರ ಪರಿವೆಯೇ ಇರುವುದಿಲ್ಲ. ಅತಿಹುಚ್ಚಿನಿಂದ ಕೆಲಸವೊಂದರಲ್ಲಿ ತೊಡಗಿಸಿಕೊಂಡುಬಿಡುತ್ತಾನೆ.

ಎರಡನೇ ವೈರಿ ಎಂದರೆ ಅತಿ ಎತ್ತರ. ಇಲ್ಲಿ ಆಮ್ಲಜನಕದ ಅತಿ ಕೊರತೆ ಇರುತ್ತದೆ. ಅಲ್ಲದೇ ಕಾರ್ಯಾಚರಣೆಯಲ್ಲಿ ವೈರಿ ಸನ್ನದ್ಧನಾಗಿ ಶಿಖರದಲ್ಲಿ ಕುಳಿತಿದ್ದರೆ, ನಮಗೆ ಮೇಲೆ ಏರುವ ಸವಾಲಿತ್ತು. ಮಾಮೂಲಿಯಾಗಿ ಬೆಟ್ಟ ಏರುವಾಗಲೇ ಭಾರ ಹೊರಲಾಗುವುದಿಲ್ಲ. ಈ ಅತಿ ಎತ್ತರದ ಭೂ ಸಂರಚನೆಯಲ್ಲಿ ಮನುಷ್ಯನ ಸಾಮರ್ಥ್ಯ ಶೇ. 42- 50ರವರೆಗೂ ಕುಸಿದಿರುತ್ತದೆ.

ಮೂರನೇ ವೈರಿ ಎಂದರೆ ಆಫ್ಕೋರ್ಸ್, ಎಲ್ಲ ಪೂರೈಕೆ- ಸಾಮಗ್ರಿಗಳೊಂದಿಗೆ ಬಂದು ಕುಳಿತಿರುವ ಪಾಕಿಸ್ತಾನದ ವೈರಿ.

– ಬಟಾಲಿಕ್ ವಿಭಾಗದ ಕಾಲುಬರ್ ಪರ್ವತಶ್ರೇಣಿಯನ್ನು ನಾವು ವಶಪಡಿಸಿಕೊಂಡಿದ್ದೇ ಹೌದಾದರೆ ಎರಡು ಮಹಾಕಾರ್ಯಗಳು ಈಡೇರಿಬಿಡುತ್ತಿದ್ದವು. ಮೊದಲನೆಯದಾಗಿ ಪಾಕಿಸ್ತಾನಿಯರಿಗೆ ಪೂರೈಕೆ ತಪ್ಪಿ ಹೋಗುತ್ತಿತ್ತು. ಹಾಗೂ ಇತರೆಡೆಯ ಆಕ್ರಮಣಗಳಿಂದ ಹಿಂತೆಗೆಯಬೇಕಾಗಿ ಬಂದಾಗ ತಿರುಗಿಹೋಗುವ ದಾರಿ ಇದೇ ಆಗಿತ್ತು. ಹೀಗಾಗಿ ಹಿಂದಕ್ಕೆ ಸಹ ಅಡಿಯಿಡಲಾಗದ ಸಂಕಷ್ಟಕ್ಕೆ ಅವರು ಸಿಲುಕುತ್ತಿದ್ದರು. ಆದರೆ.. ಬೆಕ್ಕಿಗೆ ಗಂಟೆ ಕಟ್ಟೋರ್ಯಾರು? ಮೊದಲೇ ಹೇಳಿದಂತೆ ಗೂರ್ಖಾ ರೈಫಲ್ಸ್ ಅನ್ನು ಮೊದಲ ಬಾರಿಗೆ ಮುನ್ನಡೆಸುತ್ತಿದ್ದೆ. ನನ್ನ ಜತೆ ಯಾವತ್ತೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಹುಡುಗರಾಗಿದ್ದರೆ ಅದಾಗಲೇ ಒಂದು ಬಾಂಡ್ ಬೆಳೆದಿರುತ್ತದೆ. ನಾನು ಒಂದು ಹಂತದವರೆಗೆ ಮಾತ್ರ ಪ್ರಯಾಣಿಸಿ, ನೀಲನಕ್ಷೆ ಬಿಚ್ಚಿಟ್ಟು, ಹೀಗೆ ಮಾಡಿ ಎಂದರೆ ಸಾಕು. ಆದರೆ ಇಲ್ಲಿ ನಾನೇ ಮುಂಚೂಣಿಯಲ್ಲಿ ನಿಲ್ಲದಿದ್ದರೆ ಯೋಧರ ಸ್ಥೈರ್ಯ ಹೆಚ್ಚುವುದು ಸಾಧ್ಯವಿರಲಿಲ್ಲ. ಕಲುಭಾಗ್ ಗೆ ನಾನೇ ಹೋಗುತ್ತೇನೆ ಎಂದಾಗ ಸೇನೆಯ ಹಿರಿಯರೆಲ್ಲ ದಿಗ್ಭ್ರಾಂತಿಯಿಂದ ನೋಡಿದರು. ಈಗಲೂ ತಮಾಷೆ ಮಾಡುತ್ತಿರುತ್ತಾರೆ, ನೀನವತ್ತು ಆ ನಿರ್ಧಾರ ತೆಗೆದುಕೊಂಡಾಗ ನಿನಗೂ ಮಿದುಳಿನ ನರಮಂಡಲದ ರಕ್ತಹೀನತೆ ಆಗಿದೆ ಎಂದೆಣಿಸಿದ್ದೆವು ಅಂತ!

– ಬೇಸ್ ಕ್ಯಾಂಪಿನಿಂದ ಫಿರಂಗಿಗಳ ಭೋರ್ಗರೆತ ಮಾಡಿ, ಮೇಲಿನವರಿಗೆ ತಲೆ ಎತ್ತದಂತೆ ಮಾಡುವುದು. ಇತ್ತ ನಾವು ಬೆಟ್ಟ ಏರುವುದು. ಹಿಮಪರ್ವತದ ಒಂದು ತೊಂದರೆ ಎಂದರೆ ಇಲ್ಲಿ ರಾತ್ರಿಯಾದಾಗಲೂ ಹೊಳಪು ಇದ್ದೇ ಇರುತ್ತದೆ. ಇದರರ್ಥ, ಕತ್ತಲಿನ ಲಾಭ ಪಡೆದು ನಾವು ಮೇಲೇರಿ ವೈರಿಯನ್ನು ಸಮೀಪಿಸುವ ಸಾಧ್ಯತೆ ಕ್ಷೀಣವಾಗಿತ್ತು. ನಾವು ಬರುತ್ತಿರುವುದು ಅವರಿಗೂ ತಿಳಿದಿತ್ತು. ಆ ಕಡೆಯಿಂದಲೂ ಗುಂಡಿನ ದಾಳಿ ಪ್ರಾರಂಭವಾಯಿತು. ಜಿಗ್ ಜಾಗ್ ಕ್ರಮದಲ್ಲಿ ನಾವು ಚದುರಿಕೊಂಡು ಮುನ್ನಡೆಯುತ್ತಿದ್ದೆವು. ಆಗಲೇ ನನ್ನ ಪಾದಕ್ಕೆ ಗುಂಡು ಸವರಿತ್ತು. ಅಷ್ಟಾಗಿಯೂ ಗುರಿಯತ್ತ ಓಡುತ್ತಿದ್ದೆವು… ನಂಬಿ, ಜೀವಕ್ಕೇ ಅಪಾಯ ಬಂದಿದೆ ಎಂದಾದಾಗ ನೀವು ಸಹ ಅತ್ಯುತ್ತಮ ರನ್ನರ್ ಆಗಬಲ್ಲಿರಿ! ನಮ್ಮ ರೆಡಿಯೋ ಆಪರೇಟರ್, ಕವರಿಂಗ್ ಕಾರ್ಯದಲ್ಲಿ ನಿರತರಾದವರು ಕೆಲವರು ಆಗಲೇ ಮೃತಪಟ್ಟರು.

– ಬಟಾಲಿಯನ್ ನ ಪ್ಲಟೂನ್ ಒಂದರ ಕ್ಯಾಪ್ಟನ್ ಆಗಿದ್ದ ಮನೋಜ್ ಪಾಂಡೆ ತುಂಬ ಧೈರ್ಯದಿಂದ ಮುನ್ನಡೆಯುತ್ತಿದ್ದ. ಇಪ್ಪತ್ನಾಲ್ಕರ ಈ ಹುಡುಗನಲ್ಲಿ ಭಯಕ್ಕೆ ತುಸುವಾದರೂ ಜಾಗವಿರಲಿಲ್ಲ. ನಮ್ಮೆದುರಿಗೀಗ ಬೇರೆ ಬೇರೆ ದೂರಗಳಲ್ಲಿ ವೈರಿಗಳ ಆರು ಬಂಕರುಗಳಿದ್ದವು. ಇವುಗಳಲ್ಲಿ ಎರಡನ್ನು ನೀನು ಧ್ವಂಸ ಮಾಡಬೇಕು ಎಂದೆ ಪಾಂಡೆಯ ಬಳಿ. ‘ನಾನೇ ಖುದ್ದು ಮಾಡಿ ನಿಮಗೆ ರಿಪೋರ್ಟ್ ಒಪ್ಪಿಸುತ್ತೇನೆ’ ಅಂದವನೇ ಹೊರಟೇಬಿಟ್ಟ. ಈ ಹುಡುಗ ಸತ್ವ ಎಂಥಾದ್ದು ನೋಡಿ. ಸರ್ವೀಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಎಲ್ಲರಿಗೂ ‘ನೀವೇಕೆ ಸೇನೆ ಸೇರುತ್ತಿದ್ದೀರಿ’ ಎಂದು ಕೇಳುತ್ತಾರೆ. ಬಹಳಷ್ಟು ಜನ ಅದೊಂದು ದಿನ ಸೇನಾ ಮುಖ್ಯಸ್ಥನಾಗುತ್ತೇನೆ ಎಂದು, ಇಲ್ಲವೇ ಮತ್ಯಾವುದಾದರೂ ಹುದ್ದೆಗೆ ಹೋಗುತ್ತೇನೆ ಎಂದು ಉತ್ತರಿಸುತ್ತಾರೆ. ಈ ಹುಡುಗ ಮಾತ್ರ ಅವತ್ತು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ- ‘ನಾನು ಸೇನೆ ಸೇರುತ್ತಿರುವುದೇ ಪರಮವೀರಚಕ್ರ ಪಡೆಯುವುದಕ್ಕೆ..’

manoj pandeyಸಾಮಾನ್ಯವಾಗಿ ಬಂಕರ್ ಒಂದರಲ್ಲಿ ಒಂದು ಮಷಿನ್ ಗನ್ ಇರುತ್ತದೆ. ಇಲ್ಲಿ ಎರಡಿತ್ತು. ಗೊತ್ತಿರಲಿ, ಪ್ರತಿ ಮಿನಿಟಿಗೆ 600 ಗುಂಡುಗಳನ್ನು ಕಕ್ಕುವ ಮಷಿನ್ ಗನ್ ಗಳು ಅವು. ಅವುಗಳ ನಡುವೆಯೇ ಆತ ಒಂದು ಮತ್ತು ಎರಡನೇ ಬಂಕರುಗಳನ್ನು ಗ್ರೆನೇಡಿನಲ್ಲಿ ಉಡಾಯಿಸಿಯೇಬಿಟ್ಟ. ಆಗ ಆತನ ತೋಳಿಗೆ ಮತ್ತು ಕಾಲಿಗೆ ಗುಂಡುಗಳು ಬಿದ್ದವು. ಜತೆಯಲ್ಲಿದ್ದ ಹುಡುಗರು ಹೇಳಿದರು- ‘ಇಲ್ಲೇ ನಿಲ್ಲಿ ಸಾಹೆಬ್.. ನಾವು ಮುಂದುವರಿಯುತ್ತೇವೆ..’ ಆತ ಹೇಳಿದ- ‘ಕರ್ನಲ್ ಗೆ ನಾನು ಮಾತು ಕೊಟ್ಟಿದ್ದೇನೆ. ನಾನೇ ಹೋರಾಟ ಮುಗಿಸುತ್ತೇನೆ..’ ಹಾಗನ್ನುತ್ತಲೇ ಮೂರನೇ ಬಂಕರನ್ನೂ ಉಡಾಯಿಸಿದ.  ನಾಲ್ಕನೆಯದರ ಬಳಿ ಸಾರಿದಾಗ ಅದಾಗಲೇ ಸುಸ್ತಾಗಿದ್ದ. ಸ್ಥಿರತೆ ಸಹಜವಾಗಿಯೇ ತಪ್ಪಿತ್ತು. ಅಷ್ಟಾಗಿಯೂ ನಾಲ್ಕನೇ ಬಂಕರ್ ಗುರಿಯಾಗಿಸಿ ಗ್ರೈನೆಡ್ ಮುಚ್ಚಳ ಜಗ್ಗಿದ. ಆಗಲೇ ನನ್ನ ಕಣ್ಣೆದುರು ಪಾಕಿಸ್ತಾನಿ ಮಷಿನ್ ಗನ್ನುಗಳು ಆತನ ತಲೆಯನ್ನು ಸೀಳಿಬಿಟ್ಟವು. ಆ ಕ್ಷಣದಲ್ಲೇ ಸಾವು ಬಂತು. ಆದರೆ ಅಚ್ಚರಿ ನೋಡಿ. ಅಂಥ ಸಂದರ್ಭದಲ್ಲೂ ಆತ ಎಸೆದ ಗ್ರೆನೆಡ್ ಗುರಿ ತಲುಪಿ ನಾಲ್ಕನೇ ಬಂಕರನ್ನು ಉಡಾಯಿಸಿತು. ಇನ್ನೆರಡು ಬಂಕರುಗಳನ್ನು ಜತೆಗಿದ್ದ ಹವಾಲ್ದಾರ್ ಉಡಾಯಿಸಿ ಕೊನೆಯಲ್ಲಿ ತಾನೂ ಪ್ರಾಣತ್ಯಾಗ ಮಾಡಿದ.

ಮನೋಜ್ ಪಾಂಡೆಗೆ ಪರಮವೀರ ಚಕ್ರ ಮರಣೋತ್ತರವಾಗಿ ಲಭಿಸಿದ್ದು ಹಾಗೂ ನಮ್ಮ ಬಟಾಲಿಯನ್ ಅನ್ನು ಶೂರರಲ್ಲೇ ಶೂರರು ಅಂತ ಗುರುತಿಸಿದ್ದು ನನಗೆ ತುಂಬ ಸಂತೃಪ್ತಿಯ ಸಂಗತಿ.

(ಮುಂದುವರಿಯುತ್ತದೆ….)

1 COMMENT

Leave a Reply