ಡಿಜಿಟಲ್ ಕನ್ನಡ ಟೀಮ್:
ಇಂದು ದೇಶದೆಲ್ಲೆಡೆ ಕಾರ್ಗಿಲ್ ವಿಜಯ ದಿವಸದ ಆಚರಣೆಯ ಸಂಭ್ರಮವಿದೆ. ಅದರಲ್ಲೂ ಟ್ವಿಟರ್ ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಎಂಬ ಹ್ಯಾಶ್ ಟ್ಯಾಗ್ ಮೂಲಕ ಭಾರತೀಯ ಸೈನಿಕರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರ್ತಿದೆ.
ಅಲ್ಲದೇ, ಈ ಸಂಭ್ರಮದ ದಿನಾಚರಣೆ ವೇಳೆಯಲ್ಲೇ ಕುಪ್ವಾರಾದಲ್ಲಿ ನಾಲ್ವರು ಪಾಕಿಸ್ತಾನಿ ನುಸುಳುಕೋರ ಉಗ್ರರನ್ನು ಕೊಂದಿರುವ ಭದ್ರತಾ ಪಡೆ, ಒಬ್ಬನನ್ನು ಜೀವಂತ ಹಿಡಿದಿರುವುದು ಒಂದರ್ಥದಲ್ಲಿ ವೀರ ಸಂಭ್ರಮಕ್ಕೆಮೆರುಗು ನೀಡಿದೆ.
ಕಾರ್ಗಿಲ್ ಹುತಾತ್ಮರಿಗೆ ನಮನ ಪ್ರಯುಕ್ತ ದ್ರಾಸ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ನಾರ್ದನ್ ಕಮಾಂಡ್’ನ ಲೆಫ್ಟಿನೆಂಟ್ ಜನರಲ್ ಜಿ. ಎಸ್. ಹೂಡಾ ಮಾತುಗಳು ಗಮನಾರ್ಹ. ‘ಜಮ್ಮು-ಕಾಶ್ಮೀರದ ಆಂತರಿಕ ಜಗಳಗಳಲ್ಲಿ ಪಾಕಿಸ್ತಾನವು ಕೈಯಾಡಿಸುತ್ತಿರುವುದು ಸ್ಪಷ್ಟ. ಒಳನುಸುಳುವಿಕೆ ಪ್ರಯತ್ನಗಳು ನಿಂತಿಲ್ಲ. ಇನ್ನೊಂದೆಡೆ ಕಣಿವೆಯ ಯುವಕರನ್ನು ಮೂಲಭೂತವಾದಕ್ಕೆ ರೂಪುಗೊಳಿಸುತ್ತಿರುವುದೂ ಅಷ್ಟೇ ಸ್ಪಷ್ಟ. ಈ ಬಗ್ಗೆ ನಾವೆಲ್ಲ ಸೇರಿ ಏನಾದರೂ ಮಾಡಲೇಬೇಕು ಎಂಬ ಗಟ್ಟಿ ನಿರ್ಧಾರ ಎಲ್ಲರಲ್ಲಿ ಒಡಮೂಡಬೇಕು.’ ಎಂದಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಗೆದ್ದ ಸಂಭ್ರಮವನ್ನು ಟ್ವೀಟ್ ಮೂಲಕ ಆಚರಿಸುತ್ತಿರುವ ಆಯ್ದ ಭಾಗಗಳು ಹೀಗಿವೆ…
- ಕಾರ್ಗಿಲ್ ವಿಜಯ ದಿವಸದಂದು ದೇಶಕ್ಕಾಗಿ ಕೊನೆ ಉಸಿರಿನವರೆಗೂ ಹೋರಾಡಿದ ಪ್ರತಿಯೊಬ್ಬ ಪರಾಕ್ರಮಿ ಯೋಧರಿಗೂ ತಲೆಬಾಗುತ್ತೇನೆ. ಅವರ ತ್ಯಾಗ ನಮ್ಮ ಸ್ಫೂರ್ತಿ. ಎದುರಾಳಿಗಳಿಗೆ ನಮ್ಮ ಕೆಚ್ಚೆದೆಯ ಯೋಧರು ನೀಡುವ ಪ್ರತಿಯೊಂದು ಉತ್ತರವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಮತ್ತೊಮ್ಮೆ ಈ ಹೆಮ್ಮೆಯ ಕ್ಷಣವನ್ನು ನೆನೆಯೋಣ. ಹಾಗೂ 1999 ರಲ್ಲಿ ಕಾರ್ಗಿಲ್ ಯುದ್ಧದ ಗೆಲುವಿಗೆ ಕಾರಣವಾದ ರಾಜಕೀಯ ನಾಯಕತ್ವವನ್ನು ಸ್ಮರಿಸೋಣ: ನರೇಂದ್ರ ಮೋದಿ
- ಇಂದು ದೇಶದ ಯಶಸ್ವಿ ಗೆಲುವಿನ ದಿನ. ಈ ದಿನವನ್ನು ಸ್ಮರಿಸುತ್ತಾ ನಮ್ಮ ಯುದ್ಧದ ಹೀರೋಗಳಿಗೆ ಗೌರವದ ನಮನ ಸಲ್ಲಿಸೋಣ. ಜೈಹಿಂದ್: ಅರುಣ್ ಜೇಟ್ಲಿ
- 17ನೇ ಕಾರ್ಗಿಲ್ ವಿಜಯ ದಿವಸದಂದು ನಮ್ಮ ಯೋಧರ ನಿಸ್ವಾರ್ಥ ತ್ಯಾಗವನ್ನು ಸ್ಮರಿಸುತ್ತಾ ಅವರಿಗೆ ನಮಿಸೋಣ: ಪ್ರಫುಲ್ ಪಟೇಲ್
- ನಮ್ಮ ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಈ ಋಣವನ್ನು ನಾವೆಂದೂ ತೀರಿಸಲು ಸಾಧ್ಯವಿಲ್ಲ: ನವೀನ್ ಜಿಂದಾಲ್
ಇವೆಲ್ಲ ರಾಜಕೀಯ ವಲಯದವರ ಟ್ವೀಟುಗಳಾದರೆ, ಸಾರ್ವಜನಿಕರಂತೂ ಕಾರ್ಗಿಲ್ ಪರ್ವತದ ಫೋಟೋಗಳು, ಹುತಾತ್ಮ ಸೈನಿಕರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತ ವಿಜಯ ದಿನವನ್ನು ಆಚರಿಸುತ್ತಿದ್ದಾರೆ. ದ್ರಾಸ್ ನಲ್ಲಿರುವ ವೀರಭೂಮಿ ಸ್ಮಾರಕದ ಚಿತ್ರಗಳು ಹಲವರ ಸಾಮಾಜಿಕ ತಾಣದ ಗೋಡೆಗಳನ್ನಿಂದು ಅಲಂಕರಿಸಿವೆ. ಕೆಲವೇ ಬುದ್ಧಿಜೀವಿ ಮತ್ತು ಮಾಧ್ಯಮ ಮಂದಿಯ ವರ್ಗವು ಇಂದು ಸಂಘರ್ಷದಲ್ಲಿರುವ ಜಮ್ಮು-ಕಾಶ್ಮೀರದಲ್ಲಿ ಸೇನೆ ಇರಬೇಕೆ ಬೇಡವೆ ಎಂದೆಲ್ಲ ಚರ್ಚೆಗಿಳಿದಿರುವಾಗ, ಸಾಮಾನ್ಯರಿಗೆ ತಮ್ಮ ಅಭಿಮತವನ್ನು ಸ್ಪಷ್ಟಪಡಿಸುವುದಕ್ಕೂ ಕಾರ್ಗಿಲ್ ವಿಜಯ ದಿನದ ನೆನಕೆ ವರವಾಗಿದೆ.
‘ಸೇನೆ ಎಂಥ ವಿಷಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದರ ಅರಿವಿರದೇ ಉಗ್ರನನ್ನು ಜೀವಂತವಾಗಿ ಹಿಡಿಯಬೇಕಿತ್ತು ಎಂದೆಲ್ಲ ಉಪದೇಶ ಕೊಡುವವರು ಇನ್ನಾದರೂ ಅಂಥದ್ದನ್ನು ಬಿಡಬೇಕು.’ ಅಂತ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತ ಎಚ್ಚರಿಸಿದರು.
ಜನರ ಭಾವನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೋಡುವುದಾದರೆ…
- ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದರು ಜನರು ಅಲುಗಾಡದೆ ಕಾರ್ಗಿಲ್ ವಿಜಯ ದಿವಸ ಆಚರಿಸುತ್ತಿದ್ದಾರೆ: ಶಾರದಾ ಡೈಮಂಡ್
- ಪಾಕಿಸ್ತಾನ ಸೇನೆಯ ಬೆಂಬಲಿತ ಪಾಕ್ ಉಗ್ರರನ್ನು ಹಿಮ್ಮೆಟ್ಟಿಸಿ, ಹತರಾಗಿ ಮತ್ತೆ ಮರಳಿ ಬಾರದ ಯೋಧರಿಗೆ ನನ್ನ ನಮನಗಳು: ತ್ರಿಪಾಟಿ ಸತೀಶ್
- ನಮ್ಮಲ್ಲಿ ಧೈರ್ಯಶಾಲಿ ಸೇನೆ ಇದೆ. ಹಾಗೆಯೇ ಕಳಪೆ ಗುಪ್ತಚರ ಇಲಾಖೆ ಇದೆ. ಇದು ಕಾರ್ಗಿಲ್ ಯುದ್ಧದ ಪಾಠ: ಲಲಿತ್ ಅಡ್ವಾಣಿ
- ಕಾಶ್ಮೀರಿಗರನ್ನು ಆವರಿಸಿದ ಹಾಗೂ ಭಾರತದವರ ಮೇಲೆ ಕ್ರೂರಿಯಾದ ಮಾತ್ರಕ್ಕೆ ಪಾಕಿಸ್ತಾನ ಶಕ್ತಿಶಾಲಿಯಾಗುವುದಿಲ್ಲ ಎಂಬುದಕ್ಕೆ ಕಾರ್ಗಿಲ್ ಯುದ್ಧವೇ ಸಾಕ್ಷಿ: ಸಂಗೀತ ಶ್ರೀವಾಸ್ತವ್
- ಕಾರ್ಗಿಲ್ ವಿಜಯ ದಿವಸದಂದು ನಮ್ಮ ದೇಶದ ರಕ್ಷಣೆಗಾಗಿ ನಿಂತ ಪ್ರತಿಯೊಬ್ಬ ಯೋಧರನ್ನು ಗೌರವಿಸಿ. ನೀವೆಲ್ಲರು ನಮ್ಮ ಹೆಮ್ಮೆಯ ಯೋಧರು: ಪ್ರಿಯಾಂಕ
- ನಮ್ಮ ದೇಶದ ನಿಸ್ವಾರ್ಥ ಹೀರೋಗಳಿಗೆ ಕಾರ್ಗಿಲ್ ವಿಜಯ ದಿವಸದಂದು ಎಲ್ಲರೂ ತಲೆಬಾಗೋಣ. ನಾವು ಇಂದು ಸುರಕ್ಷಿತವಾಗಿರಲು ನಮ್ಮ ಸೈನಿಕರೆ ಕಾರಣ. ಜೈಹಿಂದ್: ಕಲ್ಪನಾ ಚೌಧರಿ