‘ಜೈ ಮಹಾಕಾಳಿ’ ಎನ್ನುತ್ತಲೇ ಪಾಕಿಸ್ತಾನಿಯರ ರುಂಡಗಳುರುಳಿದ್ದವು, ಉಳಿದ ಎರಡೇ ಗುಂಡುಗಳ ಪೈಕಿ ಒಂದನ್ನು ತನಗೇ ಎತ್ತಿಟ್ಟುಕೊಂಡರು ಕರ್ನಲ್ ರೈ…

ಚೈತನ್ಯ ಹೆಗಡೆ

-ಪಾರ್ಟ್ 2-

ಅತ್ತ ಮನೋಜ್ ಪಾಂಡೆ ಬಂಕರ್ ಧ್ವಂಸಗೊಳಿಸುವುದರಲ್ಲಿ ತೊಡಗಿಕೊಂಡಿದ್ದಾಗ, ವೈರಿಗಳು ಅತ್ತಲೇ ದೃಷ್ಟಿ ಹರಿಸಿದ್ದಾಗ, ಇನ್ನೊಂದೆಡೆಯಿಂದ ನಮ್ಮ ನಲ್ವತ್ತು ಮಂದಿ ಗುಂಪು ಶತ್ರುಗಳನ್ನು ಸಮೀಪಿಸಿತು. ಅದು ತೀರ ಏರುಗತಿಯಲ್ಲಿದ್ದ ಸ್ಥಳ. ಅಲ್ಲಿ ಒಮ್ಮೆ ಗುಂಡು ಹಾರಿಸಿ ಇನ್ನೊಮ್ಮೆ ಗುರಿ ತೆಗೆದುಕೊಳ್ಳುವುದಕ್ಕೆ ಸಮಯ ವ್ಯಯವಾಗುತ್ತಿತ್ತು.

ಆಗ ನನ್ನ ಗೂರ್ಖಾ ಹುಡುಗರು ಮಾಡಿದ ಕಾರ್ಯ ಈ ಕ್ಷಣಕ್ಕೂ ಕಣ್ಣಿಗೆ ಕಟ್ಟಿದಂತಿದೆ. ರೈಫಲ್ ಬಾನೆಟ್ ನ ಚಾಕುವನ್ನೇ ಬಳಸಿಕೊಂಡು ನೆಗೆ ನೆಗೆದು ಶತ್ರುಗಳ ರುಂಡ ಚೆಂಡಾಡತೊಡಗಿದರು! ಬೆಟ್ಟದಿಂದ ರುಂಡಗಳು ಉರುಳುರುಳಿ ಬರುವ ದೃಶ್ಯಕ್ಕೆ ನಾನೇ ಅಚ್ಚರಿಯ ಸಾಕ್ಷಿಯಾಗಿದ್ದೇನೆ! ಪಾಕಿಸ್ತಾನಿಯರೋ ಆರಡಿಯ ಪಠಾಣರು. ನನ್ನ ಹುಡುಗರೆಲ್ಲ ಐದಡಿಯವರು. ಹಾಗಿದ್ದೂ ಆ ಪರ್ವತದ ಕಡಿದಾದ ಜಾಗದಲ್ಲಿ ಹಾರಿ ಹಾರಿ ರುಂಡಗಳನ್ನು ಚೆಂಡಾಡಿದ ರೀತಿ ಇದೆಯಲ್ಲ… ‘ಜೈ ಜೈ ಮಹಾಕಾಳಿ’ ಎಂದು ನನ್ನ ಹುಡುಗರು ಅಂದು ಮೊಳಗಿಸಿದ್ದ ವೀರಾವೇಶ ಈ ಕ್ಷಣಕ್ಕೂ ನನ್ನ ಕಿವಿಯಲ್ಲಿ ಅನುರಣಿಸುತ್ತಲೇ ಇದೆ.

ಪಾಕಿಸ್ತಾನಿಯರ ಜಂಘಾಬಲವೇ ಉಡುಗಿಹೋಗಿದ್ದು ಆಗಲೇ. ನಿಮಗೆ ಗೊತ್ತಲ್ಲ… ಅವರು ಮಾಂಸಕ್ಕಾಗಿ ತಿನ್ನುವ ಪ್ರಾಣಿಯ ತಲೆಯನ್ನೂ ಏಕಾಏಕಿ ಕತ್ತರಿಸುವುದಿಲ್ಲ. ಏಕೆಂದರೆ ಹಾಗೆ ಮಾಡುವುದು ಅವರಿಗೆ ಹರಾಮ್. ಇಲ್ಲಿ ನೋಡಿದರೆ ಕ್ಷಣ ಕ್ಷಣಕ್ಕೂ ತಮ್ಮರುಂಡವೇ ಹಾರಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಲಾಗದೇ, ಅವರ ಜನ್ನತ್ ಸೇರುವ ಕಲ್ಪನೆಯೇ ಬುಡಮೇಲಾಗಿ ಅಳುದುಳಿದವರೆಲ್ಲಾ ಎದ್ದೆನೋ ಬಿದ್ದೆನೋ ಎಂಬಂತೆ ಓಟ ಕಿತ್ತರು.

– ಪಾಕಿಸ್ತಾನಿಯರನ್ನು ಒಂದು ಹಂತಕ್ಕೆ ಹಿಮ್ಮೆಟ್ಟಿಸಿದೆವು ನಿಜ. ಆದರೆ ನಮ್ಮಲ್ಲೂ ಅಪಾರ ಜೀವಹಾನಿ ಆಗಿತ್ತು. ಗಾಯಾಳುಗಳಾಗಿದ್ದರು. ಮೊದಲ ಬಾರಿಗೆ ನನ್ನ ಹುಡುಗರ ಆಕ್ರಂದನ ಕಿವಿಗೆ ಬಿದ್ದು ಕಲಕಿತು. ಕಾಲು-ತೋಳು ಹೀಗೆ ಎಲ್ಲಿಗೆ ಗುಂಡು ಬಿದ್ದರೂ ತುಟಿ ಕಚ್ಚಿ ಸಹಿಸುವ ಅಗಾಧ ನೋವುಣ್ಣುವ ಶಕ್ತಿ ನಮ್ಮ ಸೈನಿಕರಿಗಿದೆ. ಆದರೆ ಗುಂಡು ದೇಹದೊಳಗೆ ಹೊಕ್ಕದೇ ಅವಯವಗಳನ್ನು ಚಕ್ಕೆ ಎಬ್ಬಿಸಿ ಹೋಗುತ್ತದಲ್ಲ… ಆ ನೋವು ಮಾತ್ರ ಯಾರಿಂದಲೂ ಸಹಿಸಲಾಗದಂಥದ್ದು. ಇಷ್ಟಾಗಿಯೂ ನಾವು ಮುಂದಕ್ಕೆ ಚಲಿಸಲೇಬೇಕಿತ್ತು. ಇಷ್ಟು ಗೆದ್ದಿದ್ದು ಸಾಕೆಂದು ನಿಂತರೆ ಮರುದಿನ ಮತ್ತಷ್ಟು ಬಲ ಸೇರಿಸಿಕೊಂಡು ಬಂದು ಪಾಕಿಗಳು ನಮ್ಮನ್ನು ಕೊಚ್ಚಿ ಹಾಕುವುದು ಖಚಿತವಿತ್ತು. ಅಸಾಧ್ಯ ನೋವು, ಸುಸ್ತು ಇದ್ದರೂ ನನ್ನ ಹುಡುಗರಿಗೆ ಹುರಿದುಂಬಿಸಿದೆ. ಇಲ್ಲೇ ಕುಳಿತು ಪಾಕಿಸ್ತಾನಿಯರಿಂದ ಸಾಯುವುದಕ್ಕಿಂತ ಮುಂದೆ ಹೋಗಿ ಏನಾದರೂ ಎದುರಿಸಿ ಸಾಯೋಣ ಎಂಬ ಸ್ಫೂರ್ತಿಯೊಂದಿಗೆ ಎದ್ದು ನಿಂತಾಗ ನಾವು ಲೆಕ್ಕ ಮಾಡಿ 8 ಮಂದಿ ಉಳಿದಿದ್ದೆವು. ಪಾಕಿಸ್ತಾನಿಯರು ಬಿಟ್ಟುಹೋದ ಶಸ್ತ್ರಗಳನ್ನು ಎತ್ತಿಕೊಂಡು ಹಲವರನ್ನು ಹುಡುಕಿ ಸಂಹರಿಸಿದೆವು..

kargil kashmir

– ಇವೆಲ್ಲ ಆಗುತ್ತಿರಬೇಕಾದರೆ ಆಗಾಗ ನನಗೆ ಅರ್ಜೆಂಟ್…ಅರ್ಜೆಂಟ್ ಅಂತ ರೆಡಿಯೋ ಮೆಸೇಜ್ ಬರುತ್ತಿತ್ತು. ಹಲವು ಸಾರಿ ಅದನ್ನು ಕಿರಿಕಿರಿಯಿಂದ ಉಪೇಕ್ಷಿಸಿದೆ. ಏಕೆಂದರೆ ಅಲ್ಲಿಗೆ ಆ ಕ್ಷಣಕ್ಕೆ ಸಹಾಯ ಕಳುಹಿಸುವುದೇನೂ ಸಾಧ್ಯವಿರಲಿಲ್ಲ. ಬೇರೇನೋ ಆರ್ಡರ್ ತೆಗೆದುಕೊಳ್ಳುವುದಕ್ಕೆ ನಮಗೆ ಇದ್ದ ಗುರಿ ಪೂರೈಸುವುದು ಬಿಟ್ಟರೆ ಬೇರೆ ಅವಕಾಶಗಳಿರಲಿಲ್ಲ. ಕೊನೆಗೊಮ್ಮೆ ಮೆಸೇಜ್ ಸ್ವೀಕರಿಸಿ ಕಿರಿಕಿರಿಯಿಂದಲೇ ಏನೆಂದು ಕೇಳಿದೆ. ಅತ್ತ ಕಡೆಯಿಂದ ಮೇಜರ್ ಹೇಳುತ್ತಿದ್ದರು- ‘ಸರ್.. ನಾನಿರುವ ಬೆಟ್ಟದಿಂದ ಬೈನಾಕುಲರ್ ನಲ್ಲಿ ನಿಮ್ಮ ಪ್ರದೇಶದ ಚಲನವಲನಗಳೆಲ್ಲ ಕಾಣುತ್ತಿವೆ. ಪಾಕಿಸ್ತಾನಿಯರು ಯಾವೆಡೆಯಿಂದ ನಿಮ್ಮ ಕಡೆ ಬರುತ್ತಿದ್ದಾರೆ ಎಂದೂ ಕಾಣಿಸುತ್ತಿದೆ. ನಾನು ಅವರ ದಿಕ್ಕು ಮತ್ತು ಸಮೀಪಿಸಿದ ಹತ್ತಿರವೆಷ್ಟು ಅಂತ ಹೇಳ್ತೇನೆ. ಅವರನ್ನಷ್ಟೇ ಹೊಡೆಯಿರಿ…’ ಇದನ್ನು ಕೇಳುತ್ತಲೇ ಆನೆಬಲ ಬಂತು. ಮೊದಲೇ ಹೇಳೋಕೇನಾಗಿತ್ತು ಅಂತ ಗದರಿದೆ. ‘ಆಗಿಂದ ಹೇಳೋಕೆ ಪ್ರಯತ್ನಿಸ್ತಿದೀನಿ. ನೀವೆಲ್ಲಿ ಕೇಳಿಸ್ಕೋತೀರಿ ಸರ್’ ಅಂದರವರು! ಈ ಮಾರ್ಗ ಅನುಸರಿಸಿ ಹಲವರನ್ನು ಕೊಂದೆವು. ಇಷ್ಟು ಸುಲಭವಾಗಿ ತಮ್ಮನ್ನು ಹೇಗೆ ಆಹುತಿ ತೆಗೆದುಕೊಳ್ಳುತ್ತಿದ್ದಾರೆ ಅಂತ ಪಾಕಿಸ್ತಾನಿಯರಿಗೆ ಈವರೆಗೂ ಗೊತ್ತಿರಲಿಕ್ಕಿಲ್ಲ!

– ಇದೇನೇ ಇದ್ದರೂ ನಮ್ಮ ಬಳಿಯ ಮದ್ದುಗುಂಡು ಖಾಲಿಯಾಗುತ್ತಿತ್ತು. ಪಾಕಿಸ್ತಾನಿಯರು ಆಗೀಗ ಸಮೀಪಿಸುತ್ತಲೇ ಇದ್ದರು. ‘ಹಿಂದುಸ್ತಾನಿ ಕುತ್ತೋ… ಹಮ್ ಕಾಠ್ ದೇಂಗೆ… ನೀವು ಹೆಚ್ಚು ಮಂದಿ ಉಳಿದಿಲ್ಲ ಅನ್ನೋದು ಗೊತ್ತು’ ಎನ್ನುತ್ತ ಕೆಟ್ಟ ಬಯ್ಗುಳಗಳಲ್ಲಿ ಸಮೀಪಿಸುತ್ತಿದ್ದರು. ನಾನೂ ಸಹ ಬನ್ರೋ, ಸ್ವಾಗತಕ್ಕಾಗಿ ಕಾದಿದೀವಿ ಕುತ್ತಾಗಳೇ ಅಂತೆಲ್ಲ ಬಯ್ದುಕೊಂಡಿದ್ದೆ. ಈ ಹಂತದಲ್ಲಿ ನನ್ನ ಹುಡುಗರ ಅಂತಃಸತ್ವವನ್ನು ಉದ್ದೀಪಿಸಲೇಬೇಕಿತ್ತು. ಯುದ್ಧರಂಗದಲ್ಲಿ ಸಹ ಸೆನ್ಸ್ ಆಫ್ ಹ್ಯೂಮರ್ ತುಂಬ ಮುಖ್ಯ. ‘ಏನ್ರೋ, ನಿಮ್ಮ ಕಮಾಂಡರನನ್ನು ಪಾಕಿಸ್ತಾನದವರೆಲ್ಲ ಬಯ್ಯುತ್ತಿದ್ದರೆ, ತಿರುಗಿ ನಾನು ಮಾತ್ರ ಬಯ್ಯಬೇಕಾ? ನಾನು ಆದೇಶ ಕೊಡ್ತಿದೀನಿ, ಬಯ್ರಿ ನೀವು…’

ಪಾಪ… ಗೂರ್ಖಾಗಳನ್ನು ಶಿಸ್ತಿನಲ್ಲಿ ಮೀರಿಸುವವರು ಯಾರಿಲ್ಲ. ಆದರೆ ಸಮಸ್ಯೆ ಎಂದರೆ ಅವರಿಗೆ ಬಯ್ಗುಳ ಬರುವುದೇ ಇಲ್ಲ.ಆದರೆ ಕಮಾಂಡರ್ ಹೇಳಿದ ಮೇಲೆ ಮುಗೀತು. ಅವರೆಲ್ಲ ಸೇರಿ ನನ್ನ ಪರವಾಗಿ ಪಾಕಿಗೆ ಬಯ್ಗುಳ ರವಾನಿಸುವ ಹೊಣೆಯನ್ನು ಒಬ್ಬನಿಗೆ ನೀಡಿದರು. ಸರಿ, ಅತ್ತ ಕುತ್ತೇ… ಅಂತ ಯಾರೋ ಪಾಕಿಸ್ತಾನಿ ಕೂಗಿಕೊಂಡ. ಈತ ಈ ಕಡೆಯಿಂದ, ‘ಬಾ.. ಬಾ ಪಾಕಿಸ್ತಾನಿ ನಾಯಿಯೇ. ನಿನ್ನ ಮೀಸೆ ಬೋಳಿಸುತ್ತೇನೆ’ ಎಂದ! ಈತನ ಬಯ್ಯುವ ಮಾದರಿಗೆ ನಾವೆಲ್ಲ ನಗತೊಡಗಿದೆವು. ಅದು ಆ ಸುಸ್ತಿನ ಒತ್ತಡ ಪರಿಸ್ಥಿತಿಯನ್ನು ತುಸು ಸುಧಾರಿಸಿತು.

– ಅದೊಂದು ಕ್ಷಣ ಬಂದೇ ಬಿಟ್ಟಿತು. ಎರಡೆರಡೇ ಗುಂಡುಗಳು ಉಳಿದುಕೊಂಡವು. ಒಂದು ಬುಲೆಟ್ ಅನ್ನು ನನಗಾಗಿ ಉಳಿಸಿಕೊಳ್ಳುವುದಕ್ಕೆ ನಿರ್ಧರಿಸಿದೆ! ಏಕೆಂದರೆ ಸೇನೆಯಲ್ಲಿ ಕಮಾಂಡಿಂಗ್ ಆಫೀಸರ್ ಸೆರೆ ಸಿಗುವುದೆಂದರೆ ಅದು ತೀರ ಅವಮಾನಕಾರಿ ಘಟ್ಟ. ಅದಕ್ಕಿಂತ ಸಾಯುವುದೇ ಒಳಿತು. ಹಾಗೆಂದೇ ತೀರ್ಮಾನಿಸಿದೆ. ನಿಧಾನಕ್ಕೆ ಪಾಕಿಸ್ತಾನಿಯರು ಹತ್ತಿರವಾಗುತ್ತ ಬಂದು 35ದು ಗಜಗಳಷ್ಟು ದೂರ ನಿಂತಿದ್ದರು. ‘ಗುಂಡು ಖಾಲಿ ಆಗಿದೆ ಅಂತ ಗೊತ್ತು ಕುನ್ನಿಗಳೇ..’ ಅಂತೆಲ್ಲ ಅಬ್ಬರಿಸಿ ಹತ್ತಿರವಾಗುತ್ತಿದ್ದರು. ಇನ್ನು 30 ಸೆಕೆಂಡಿಗೆ ನಾನು ಸಾಯಲಿದ್ದೇನೆ ಎಂಬ ಭೀಕರ ಸ್ಥಿತಿ ಅದು. ಆಗ ಏನೋ ಜ್ಞಾಪಕಕ್ಕೆ ಬಂದು ರೆಡಿಯೋ ಮೂಲಕ ಎದುರಿನ ಪೋಸ್ಟ್ ಸಂಪರ್ಕಿಸಿದೆ. ಅಲ್ಲಿ ಬೋಫೋರ್ಸ್ ಫಿರಂಗಿಗಳಿವೆ ಎಂದು ಹೊಳೆಯುತ್ತಲೇ ತಕ್ಷಣಕ್ಕೆ ತಲೆಯಲ್ಲೊಂದು ವ್ಯೂಹ ರಚನೆಯಾಯಿತು. ಆರ್ಟಿಲರಿಯವನಿಗೆ ರೆಡಿಯೋದಲ್ಲಿ ಕೇಳಿದೆ- ‘ನಮ್ಮ ಜಾಗ ಸ್ಪಷ್ಟವಾಗಿ ಕಾಣುತ್ತಿದೆಯಾ? ನಾನು ಒಕೆ ಎಂದಕೂಡಲೇ ನಮ್ಮ ತಲೆ ಮೇಲೆ ಫಿರಂಗಿ ಹಾರಿಸಬೇಕು…’ ಆತನಿಗೆ ನಂಬಲಾಗಲಿಲ್ಲ.. ‘ನೀವಿರುವ ಜಾಗವೇನೋ ಸ್ಪಷ್ಟ. ಆದರೆ ಫಿರಂಗಿ ಚಲಾಯಿಸಬೇಕಾ?’ ಎಂದ. ‘ಇಂಗ್ಲಿಷ್ ನಲ್ಲಿ ಹೇಳಿದ್ದು ಅರ್ಥವಾಗ್ತಿಲ್ಲವಾ, ಹೇಳಿದಷ್ಟು ಮಾಡು. ಆರು ಸುತ್ತುಗಳ ತ್ವರಿತ ಫೈರ್ ಆಗಲಿ’ ಎಂದೆ. ಆರ್ಟಿಲರಿಯವರ ಅನುಮಾನಕ್ಕೂ ಕಾರಣವಿತ್ತು. ಅಲ್ಲಿ 18 ಬೋಫೋರ್ಸ್ ಫಿರಂಗಿಗಳಿದ್ದವು. ಆರು ಸುತ್ತು ಎಂದರೆ ಎಲ್ಲವುಗಳಿಂದ ಸೇರಿ 108 ಬಾರಿ ಫೈರ್ ಆಗುತ್ತದೆ. ಒಂದು ಫಿರಂಗಿ ಶಾಟ್ ಅಂತಂದ್ರೆ ಒಂದು ಸಭಾಭವನವನ್ನೇ ನೆಲಸಮ ಮಾಡುವಷ್ಟು ಬಲಶಾಲಿ ಇರುತ್ತದೆ. ಹಾಗಿರುವಾಗ ಇವನಿಗೇನು ಹುಚ್ಚು ಹಿಡಿದಿದೆ ಅಂತ ಅವರ ಯೋಚನೆಯಾಗಿತ್ತು. ಆದರೆ ನಮಗೆ ಬೇರೆ ದಾರಿ ಇರಲಿಲ್ಲ. ನನ್ನ ಹುಡುಗರಿಗೆಲ್ಲ ಗಟ್ಟಿ ಬಂಡೆಗಳ ಕೆಳಗೆ ಅವಿತು ಕೊಳ್ಳಲು ಆದೇಶಿಸಿ, ಸುರಕ್ಷಿತವಾಗುತ್ತಿದ್ದಂತೆ ಫೈರ್ ಮಾಡಲು ರೆಡಿಯೋ ಸಂದೇಶ ನೀಡಿದೆ. ಅಷ್ಟೇ.. ಏನಾಗುತ್ತಿದೆ ಅಂತ ತಿಳಿಯುವುದರ ಒಳಗೆ ಪಾಕಿಸ್ತಾನಿಗಳು ನಮ್ಮ ಕಣ್ಣಮುಂದೆಯೇ ಛಿದ್ರ ಛಿದ್ರವಾಗಿಹೋದರು. ಹಾಗೆ ಅವತ್ತು ಶೆಲ್ ಸಮೀಪಿಸುತ್ತಿರುವ ಸುಯ್ಯೆಂಬ ಶಬ್ದ ಇದೆಯಲ್ಲ… ಅದು ನನ್ನ ಜೀವನದ ಅತಿ ಮಧುರ ಸ್ವರ!

– ಇಷ್ಟೆಲ್ಲ ಆಗುವಾಗ ತೊಟ್ಟು ನೀರೂ ಬಾಯಿಗೆ ಹಾಕದೇ 36 ತಾಸುಗಳು ಕಳೆದುಹೋಗಿದ್ದವು. ಮೈನಸ್ 32 ಡಿಗ್ರಿ ವಾತಾವರಣದಲ್ಲಿ ಹಿಂಜಿ ಹೋಗಿದ್ದೆವು. ಅಷ್ಟಾಗಿಯೂ ದೂರದಿಂದ ಸ್ನಿಪರ್ ರೈಫಲ್ ಮೂಲಕ ಗುರಿ ಇಡಲಾಗುತ್ತಿತ್ತು. ನಾನು ಏನಾಗುತ್ತಿದೆ ಅಂತ ಕಲ್ಲಿನ ಮರೆಯಿಂದ ತುಸು ಹೊರಬಂದು ಬೈನಾಕುಲರ್ ಮೂಲಕ ನೋಡುತ್ತಿದ್ದಂತೆ ಗುಂಡು ತೂರಿಯೇ ಬಿಟ್ಟಿತು. ಎದೆಗೆ ನಾಟಬೇಕಿದ್ದದ್ದು ಬೈನಾಕುಲರಿನ ಒಂದು ಪಕ್ಕೆ ತೂತಾಗಿಸಿತು. ಜೀವ ಉಳಿಸಿದ ಆ ಬೈನಾಕುಲರ್ ಅನ್ನು ಈಗಲೂ ಜತೆಗಿರಿಸಿಕೊಂಡಿದ್ದೇನೆ. ಸನಿಹದಲ್ಲೇ ಇದ್ದ ಒಬ್ಬ ಯೋಧ ಹೀಗೆಯೇ ನೋಡಲು ಹೋಗಿ ಪಟ್ ಪಟ್ ಎಂದು ಗುಂಡು ತಿಂದ. ಬಿಳಿಹಿಮವನ್ನು ರಕ್ತ ಆವರಿಸುತ್ತಿದ್ದಂತೆ ಆತನಿಗೆ ಸಾವು ಪಕ್ಕಾ ಆಗಿಹೋಯಿತು. ಬಿದ್ದಲ್ಲಿಂದಲೇ, ‘ಸಾಬ್.. ಒಂಚೂರು ನೀರು ಕೊಡಿ’ ಎಂದ. ಎಲ್ಲಿಂದ ತರಲಿ ನೀರನ್ನು? ತುಸುವೇ ತಲೆ ಎತ್ತಿದರೂ ನಾನೇ ಇಲ್ಲವಾಗುತ್ತೇನೆ. ಆಗ ಕುಳಿತಲ್ಲಿಂದಲೇ ಆತನ ಬಾಯಿಗೆ ಐಸ್ ಮುದ್ದೆ ಬರಗಿ ಎಸೆಯತೊಡಗಿದೆ. ಐದನೇ ಬಾರಿ ಎಸೆಯುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು…

kargil kashmir1

ಮರುಪಡೆ ನಮ್ಮನ್ನು ಬಂದು ಸೇರಿಕೊಳ್ಳುವವರೆಗೆ ಫಿರಂಗಿ ದಾಳಿಯೇ ಎಲ್ಲವನ್ನು ನಿಭಾಯಿಸಿತು. ಹೊಸಪಡೆ ಬರುತ್ತಲೇ ಉಳಿದೆಲ್ಲವನ್ನೂ ಗೆದ್ದುಕೊಂಡೆವು.

(ಮುಕ್ತಾಯ)

ವೀರಗಾಥೆಯ ಮೊದಲ ಭಾಗ ಇಲ್ಲಿದೆ..

ಕರ್ನಲ್ ರೈ ಅವರ ಮೂಲ ಉಪನ್ಯಾಸ ಇಲ್ಲಿ ನೋಡಬಹುದು. ಅಲ್ಲದೇ ಜೀವ ಉಳಿಸಿದ ಬೈನಾಕುಲರ್ ಸಹ ಕೊನೆಯಲ್ಲಿ ಪ್ರದರ್ಶಿಸಿದ್ದಾರೆ. ಹಾಗೆಯೇ ಯೂಟ್ಯೂಬಿನಲ್ಲಿ ಅವರ ಹೆಸರು ನಮೂದಿಸಿದರೆ ಭಾರತೀಯ ಸೇನೆಯ ಅನನ್ಯ ಮುಖಗಳನ್ನು ಪರಿಚಯಿಸುವ ಇನ್ನೂ ಅನೇಕ ಭಾಷಣಗಳು ಸಿಗುತ್ತವೆ.

2 COMMENTS

  1. […] ಈ ಜಯ ಸಿಕ್ಕಿ 18 ವಸಂತಗಳು ತುಂಬಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸೇನೆಯ ಸಾಹಸಗಾಥೆಯನ್ನು ನಾವು ತಿಳಿಯಲೇಬೇಕು. ಈ ಹಿಂದೆ ಡಿಜಿಟಲ್ ಕನ್ನಡದಲ್ಲಿ ಮನೋಜ್ ಪಾಂಡೆ ಎಂಬ ಸಾಹಸಿ ಯೋಧನ ವೀರಗಾಥೆಯ ಕುರಿತು, ಕಾರ್ಗಿಲ್ ಯುದ್ಧದಲ್ಲಿ ಗೂರ್ಖಾ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿದ್ದ ಕರ್ನಲ್ ಲಲಿತ್ ರೈ ಹೇಳಿದ ಮಾತುಗಳನ್ನು ಭಾಗ-1 ಹಾಗೂ ಭಾಗ-2 ವರದಿಗಳಲ್ಲಿ ವಿಸ್ತೃತವಾಗಿ ಪ್ರಕಟಿಸಿತ್ತು. ಈ ಕುರಿತ ವರದಿಗಳನ್ನು ಈ ಲಿಂಕ್ ಗಳ ಮೂಲಕ ಓದಿಕೊಳ್ಳಬಹುದು. ಭಾಗ-1ರ ವರದಿ ಹಾಗೂ ಭಾಗ-2ರ ವರದಿ. […]

  2. […] ಈ ಜಯ ಸಿಕ್ಕಿ 18 ವಸಂತಗಳು ತುಂಬಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸೇನೆಯ ಸಾಹಸಗಾಥೆಯನ್ನು ನಾವು ತಿಳಿಯಲೇಬೇಕು. ಈ ಹಿಂದೆ ಡಿಜಿಟಲ್ ಕನ್ನಡದಲ್ಲಿ ಮನೋಜ್ ಪಾಂಡೆ ಎಂಬ ಸಾಹಸಿ ಯೋಧನ ವೀರಗಾಥೆಯ ಕುರಿತು, ಕಾರ್ಗಿಲ್ ಯುದ್ಧದಲ್ಲಿ ಗೂರ್ಖಾ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿದ್ದ ಕರ್ನಲ್ ಲಲಿತ್ ರೈ ಹೇಳಿದ ಮಾತುಗಳನ್ನು ಭಾಗ-1 ಹಾಗೂ ಭಾಗ-2 ವರದಿಗಳಲ್ಲಿ ವಿಸ್ತೃತವಾಗಿ ಪ್ರಕಟಿಸಿತ್ತು. ಈ ಕುರಿತ ವರದಿಗಳನ್ನು ಈ ಲಿಂಕ್ ಗಳ ಮೂಲಕ ಓದಿಕೊಳ್ಳಬಹುದು. ಭಾಗ-1ರ ವರದಿ ಹಾಗೂ ಭಾಗ-2ರ ವರದಿ. […]

Leave a Reply