ಸರ್ಕಾರದಿಂದ ರೇಷನ್ ಕಿಟ್ ಭಾಗ್ಯ, ರಾಹುಲ್ ಕಾಲೆಳೆದ್ರು ಸ್ವಾಮಿ, ಜಪಾನಿನಲ್ಲಿ ಹಿಂಗೊಂದು ವಿಕೃತಿ, ಟೆಸ್ಟ್ ಬೌಲರ್ ಪಟ್ಟಿಯಲ್ಲಿ ಅಶ್ವಿನ್ ನಂಬರ್ 1

ಹೀಗೆ ಎಲ್ಲ ಕಲೆತಾಗ..
ಎಸ್ ಎಂ ಕೃಷ್ಣ, ದೊರೆಸ್ವಾಮಿ, ಚಂದ್ರಶೇಖರ ಕಂಬಾರರು, ನಾಗತಿಹಳ್ಳಿ ಚಂದ್ರಶೇಖರ, ಮುಖ್ಯಮಂತ್ರಿ ಚಂದ್ರು ಹೀಗೆ ಗಣ್ಯರೆಲ್ಲ ಒಂದೆಡೆ ಸೇರಿ ಬೆಳಗಿನ ತಿಂಡಿ ತಿಂದರೆ ಸುದ್ದಿಯಾಗದಿರುವುದು ನ್ಯಾಯವೇ..?

ಡಿಜಿಟಲ್ ಕನ್ನಡ ಟೀಮ್:

ಬಿಪಿಎಲ್ ಹೆಣ್ಣುಮಕ್ಕಳಿಗೆ ರೇಷನ್ ಕಿಟ್ ಭಾಗ್ಯ

ರಾಜ್ಯ ಸರ್ಕಾರ ಜನರಿಗೆ ಈಗ ಮತ್ತೊಂದು ಭಾಗ್ಯವನ್ನು ನೀಡಲು ಮುಂದಾಗಿದೆ. ಅದೇನಂದ್ರೆ, ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಹೆಣ್ಣು ಮಕ್ಕಳಿಗೆ ಮದುವೆ ವೇಳೆ ‘ರೇಷನ್ ಕಿಟ್’ ನೀಡುವುದು. ಶಾದಿ ಭಾಗ್ಯ ಯೋಜನೆಯಡಿ ಅಲ್ಪಸಂಖ್ಯಾತರ ಕುಟುಂಬಗಳಿಗೆ ₹ 50 ಸಾವಿರ ಸಹಾಯ ಧನ ಸಿಕ್ಕರೆ ಇತರೆ ಧರ್ಮದ ಬಡ ಕುಟುಂಬಗಳಿಗೆ ರೇಷನ್ ಭಾಗ್ಯ ದೊರೆಯಲಿದೆ.

ಈ ರೇಷನ್ ಕಿಟ್ ನಲ್ಲಿ 50 ಕೆಜಿ ಅಕ್ಕಿ, ಹತ್ತು ಕೆಜಿ ಸಕ್ಕರೆ, 5 ಕೆಜಿ ಎಣ್ಣೆ, 10 ಕೆಜಿ ಉಪ್ಪು ಸೇರಿದಂತೆ ಆಹಾರ ಧಾನ್ಯಗಳ ಕಿಟ್ ನೀಡಲಾಗುವುದು. ಮುಖ್ಯಮಂತ್ರಿಯವರ ಜನತಾದರ್ಶನ ಕಾರ್ಯಕ್ರಮದಲ್ಲಿ ಬಡ ಕುಟುಂಬಗಳ ಮಹಿಳೆಯರು ಹೆಣ್ಣು ಮಕ್ಕಳ ಮದುವೆಗೆ ಸಹಾಯ ಕೋರಿ ಸಲ್ಲಿಸುವ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಂತಹ ಕುಟುಂಬಗಳಿಗೆ ಕನಿಷ್ಠ 100 ಮಂದಿಗೆ ಊಟ ಹಾಕಿಸಿ ಮದುವೆ ಮಾಡಲು ಅನುಕೂಲವಾಗುವಂತೆ ಈ ಯೋಜನೆ ಜಾರಿಗೆ ತರಲು ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.

ರೈತರಿಗೆ ಬಾಡಿಗೆ ಕೃಷಿ ಯಂತ್ರಗಳು

ಕೃಷಿ ಕಾರ್ಮಿಕರ ಕೊರತೆ ಹಾಗೂ ದುಬಾರಿ ವೆಚ್ಚ ಸದ್ಯ ರೈತರ ಪ್ರಮುಖ ಸಮಸ್ಯೆ. ಇದರಿಂದ ಹಲವು ರೈತರು ಕೃಷಿ ಚುಟುವಟಿಕೆಯಿಂದಲೇ ಹಿಂದೆ ಸರಿಯುವಂತಾಗಿದೆ. ಇದನ್ನು ತಪ್ಪಿಸಲು ಸರ್ಕಾರ ಕೃಷಿ ಯಂತ್ರಗಳನ್ನು ಬಾಡಿಗೆಗೆ ನೀಡಲು ಮುಂದಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 175 ಯಂತ್ರಗಳ ಬಾಡಿಗೆ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರಸಕ್ತ ವರ್ಷ 325 ಕೇಂದ್ರಗಳನ್ನು ಆರಂಭಿಸಲಿದೆಯಂತೆ.

ಈ ಬಗ್ಗೆ ಮಾಹಿತಿ ನೀಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದಿಷ್ಟು:

‘ರೈತರು ಅತ್ಯಂತ ಕಡಿಮೆ ದರದಲ್ಲಿ ತಮಗೆ ಬೇಕಾದ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಶೇ 30 ರಿಂದ 50 ರಷ್ಟು ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ. ಉಳುಮೆ, ಭತ್ತ ನಾಟಿ, ಇತರೆ ಬೆಳೆಗಳ ಬಿತ್ತನೆ, ಹಾಗೂ ಕಟಾವು ಸಂಸ್ಕರಣೆಯವರೆಗೂ ಈ ಯಂತ್ರಗಳನ್ನು ಬಳಸಿಕೊಳ್ಳಬಹುದು. ಅದೇ ರೀತಿ ಕಬ್ಬು ಕೃಷಿಗೂ ಆಧುನಿಕ ಯಂತ್ರಗಳನ್ನು ಬಳಕೆ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಿದೆ. ಈಗಾಗಲೇ 50 ಯಂತ್ರಗಳನ್ನು ತರಿಸಿದ್ದು, ಅವುಗಳ ಬಳಕೆಯ ಪ್ರಯೋಜನವನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸಲಾಗುವುದು.’

ರಾಹುಲ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ರು ಸ್ವಾಮಿ

ಮಹಾತ್ಮ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಸದ್ಯ ಎದ್ದಿರುವ ವಿವಾದವನ್ನು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ರು. ಆ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ಕೊಟ್ರು.

ಆರಂಭದಲ್ಲಿ ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಸ್ವಾಮಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸಭೆ ಉಪ ಸಭಾಪತಿ ಪಿ.ಗೆ ಕುರಿಯನ್, ವಿಷಯವನ್ನು ಚರ್ಚಿಸುವ ಮುನ್ನ ನೊಟೀಸ್ ನೀಡುವಂತೆ ತಿಳಿಸಿದ್ರು.

ಮಹಾತ್ಮ ಗಾಂಧಿ ಅವರು ಹತ್ಯೆಯಾದ ನಂತರ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಿಲ್ಲ ಎನ್ನುವ ಮೂಲಕ ಸ್ವಾಮಿ ಈ ವಿಷಯವನ್ನು ಆರಂಭಿಸಿದರು. ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಕಾಂಗ್ರೆಸ್ ನಿಂದ ವ್ಯಾಪಕ ವಿರೋಧ ವ್ಯಕ್ತವಾಯ್ತು. ಸಂಸತ್ತಿನ ಸದಸ್ಯನೊಬ್ಬ ಈ ಬಗ್ಗೆ ಮಾತನಾಡಿ ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ಚರ್ಚೆ ಅಗತ್ಯವಿದೆ ಎಂದು ಸ್ವಾಮಿ ಕಾಂಗ್ರೆಸ್ ವಿರೋಧಕ್ಕೆ ಉತ್ತರಿಸಿದ್ರು.

ಈ ಚರ್ಚೆಯಲ್ಲಿ ನಾನು ಕೇವಲ ಮಹಾತ್ಮ ಗಾಂಧಿ ಅವರ ಹೆಸರು ಹೇಳುತ್ತೇನೆ ಹೊರತು, ಇನ್ಯಾವುದೇ ಗಾಂಧಿಯ ಹೆಸರು ಬಳಸಲ್ಲ ಎಂದು ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ರು ಸ್ವಾಮಿ.

ಜಪಾನ್ ನಲ್ಲಿ ಮಾನಸಿಕ ಅಸ್ವಸ್ಥನ ದಾಳಿ, 19 ಸಾವು

ಮಾನಸಿಕ ಅಸ್ವಸ್ಥನೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದು 19 ಜನರು ಹತ್ಯೆಯಾಗಿದ್ದು, 25 ಜನರು ಗಾಯಗೊಂಡ ಘಟನೆ ಜಪಾನ್ ನಲ್ಲಿ ಮಂಗಳವಾರ ನಡೆದಿದೆ. ಜಪಾನ್ ನಲ್ಲಿ ಕಳೆದ ಒಂದು ದಶಕದಲ್ಲಿ ನಡೆದ ಅತಿ ದೊಡ್ಡ ಸಾಮೂಹಿಕ ಹತ್ಯೆ ಇದಾಗಿದೆ.

ಸತೋಷಿ ಉಮಾಟ್ಸು ಎಂಬ ಮಾನಸಿಕ ಅಸ್ವಸ್ಥ ಈ ದಾಳಿ ನಡೆಸಿದ. ಅದೆಂಥ ವಿಕೃತಿ ನೋಡಿ.. ಈತನಿಗೆ ವಿಕಲಾಂಗರನ್ನು ಕಂಡರೆ ಸಹಿಸಲಾಗುತ್ತಿರಲಿಲ್ಲ. ‘ನಾನು ನೂರಾರು ವಿಕಲಾಂಗರನ್ನು ಕೊಲ್ಲುತ್ತೇನೆ’ ಎಂದು ಈತ ಬೆದರಿಕೆ ಹಾಕಿದ್ದು, ಈ ಘಟನೆ ನಂತರ ‘ನಾನು ಹೇಳಿದ್ದನ್ನು ಮಾಡಿದ್ದೇನೆ’ ಎಂದು ಹೇಳಿರುವುದಾಗಿ ವರದಿಯಾಗಿವೆ.

ಜಲ್ಲಿಕಟ್ಟು ಬಗ್ಗೆ ಆ.30ಕ್ಕೆ ಅಂತಿಮ ವಿಚಾರಣೆ: ಸುಪ್ರೀಂ

ಜಲ್ಲಿಕಟ್ಟನ್ನು ಸಂವಿಧಾನಾತ್ಮಕಗೊಳಿಸಿ ಆಚರಣೆಗೆ ಅವಕಾಶ ನೀಡುವ ಬಗ್ಗೆ ಅಂತಿಮ ವಿಚಾರಣೆಯನ್ನು ಆಗಸ್ಟ್ 30 ರಂದು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಮಂಗಳವಾರ ನಡೆದ ವಿಚಾರಣೆಯಲ್ಲಿ, ಜಲ್ಲಿಕಟ್ಟು ಹಳೇಯ ಸಂಪ್ರದಾಯವಾಗಿದ್ದು, ಇದನ್ನು ಕ್ರೀಡೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಸ್ಪಷ್ಟನೆ ನೀಡಿದೆ.

ಈ ತರ್ಕವನ್ನು ನೋಡುತ್ತಾ ಹೋದ್ರೆ, ಹಲವು ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಬಾಲ್ಯವಿವಾಹಕ್ಕೂ ನ್ಯಾಯಾಲಯ ಅನುಮತಿ ನೀಡಬೇಕಾಗುತ್ತದೆ. ಸಂಪ್ರದಾಯದ ಹೆಸರಿನಲ್ಲಿ ಆಚರಣೆಗಳನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದಿದೆ ಕೋರ್ಟ್.

ಫ್ಲಿಪ್ ಕಾರ್ಟ್ ತೆಕ್ಕೆಗೆ ಜಬಾಂಗ್

ಭಾರತದ ದೊಡ್ಡ ಆನ್ ಲೈನ್ ವ್ಯಾಪಾರ ಸಂಸ್ಥೆಯಾಗಿರೋ ಫ್ಲಿಪ್ ಕಾರ್ಟ್, ಮತ್ತೊಂದು ಸಂಸ್ಥೆ ಜಬಾಂಗ್ ಅನ್ನು ಖರೀಸುತ್ತಿದೆ. ಗ್ಲೋಬಲ್ ಫ್ಯಾಶನ್ ಗ್ರೂಪ್ ನಿಂದ 70 ಮಿಲಿಯನ್ ಅಮೆರಿಕನ್ ಡಾಲರ್ ಗೆ ಈ ಡೀಲ್ ಕುದುರಿದ್ದು, ಸದ್ಯದಲ್ಲೇ ಜಬಾಂಗ್ ಅನ್ನು ಫ್ಲಿಪ್ ಕಾರ್ಟ್ ನ ಭಾಗವಾಗಿರುವ ಫ್ಯಾಶನ್ ಮಳಿಗೆ ಮಿಂತ್ರಾ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ಜಬಾಂಗ್ ಮತ್ತು ಮಿಂತ್ರಾದ ಪ್ರತಿ ತಿಂಗಳ ಒಟ್ಟು ಬಳಕೆದಾರರ ಸಂಖ್ಯೆ ಒಂದೂವರೆ ಕೋಟಿ ಇದೆ.

ಅಂತಾರಾಷ್ಟ್ರೀಯ ನ್ಯಾಯಾಧಿಕರಣದಲ್ಲಿ ಭಾರತ ಸರ್ಕಾರಕ್ಕೆ ಹಿನ್ನಡೆ

ಇಸ್ರೊ ಹಾಗೂ ಬೆಂಗಳೂರು ಮೂಲದ ದೆವಾಸ್ ಮಲ್ಟಿಮಿಡಿಯಾ ಸಂಸ್ಥೆ ನಡುವಣ, ವಾಣಿಜ್ಯ ಅಂಗ ಸಂಸ್ಥೆ ಅಂತ್ರಿಕ್ಸ್ ಗೆ ಸಂಬಂಧಿಸಿದ ಒಪ್ಪಂದ ರದ್ದು ಮಾಡುವಲ್ಲಿ ಭಾರತ ಸರ್ಕಾರ ಪಕ್ಷಪಾತ ಮಾಡಿದೆ ಎಂದು ಹೆಗ್ ನಲ್ಲಿರುವ ಶಾಶ್ವತ ನ್ಯಾಯಾಧಿಕರಣ ತೀರ್ಪು ನೀಡಿದೆ. ವಿದೇಶಿ ಬಂಡವಾಳದಾರರನ್ನು ಹೊಂದಿರುವ ದೆವಾಸ್ ಸಂಸ್ಥೆಗೆ ಭಾರತ ಸರ್ಕಾರದ ನಿರ್ಧಾರದಿಂದ ಅನ್ಯಾಯವಾಗಿದೆ ಎಂದು ಹೇಳಿರುವ ನ್ಯಾಯಾಧಿಕರಣ, 672 ಮಿಲಿಯನ್ ಡಾಲರ್ (₹ 4,432 ಕೋಟಿ) ಪರಿಹಾರ ನೀಡುವಂತೆ ಸೂಚಿಸಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ ಆರ್.ಅಶ್ವಿನ್ ನೂತನ ಐಸಿಸಿ ಬೌಲರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ 7 ವಿಕೆಟ್ ಕಬಳಿಸಿದ ಅಶ್ವಿನ್, ಈಗ 876 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಜೇಮ್ಸ್ ಆಂಡರ್ಸನ್ (875) ದ್ವಿತೀಯ ಸ್ಥಾನದಲ್ಲಿದ್ದಾರೆ. ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಚೊಚ್ಚಲ ದ್ವಿಶತಕ ದಾಖಲಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಸ್ಥಾನದಲ್ಲಿ ಬಡ್ತಿ ಪಡೆದು ಈಗ 12ನೇ ಸ್ಥಾನದಲ್ಲಿದ್ದಾರೆ.
  • ಕಳೆದ ತಿಂಗಳಷ್ಟೇ ಪುನಶ್ಚೇತನಗೊಂಡು ಲೋಕಾರ್ಪಣೆಯಾಗಿದ್ದ ಪನಾಮ ಕಾಲುವೆಯ ಗೋಡೆಗೆ ಚೀನಾದ ಕಂಟೇನರ್ ಹಡಗು ಡಿಕ್ಕಿ ಹೊಡೆದಿದೆ. ಕಳೆದ ಒಂದೂವರೆ ತಿಂಗಳಲ್ಲಿ ಮೂರನೇ ಬಾರಿಗೆ ಈ ರೀತಿಯ ಘಟನೆ ಸಂಭವಿಸಿದೆ. ಇದನ್ನು ಮತ್ತೆ ಸರಿಮಾಡುವುದು ದೊಡ್ಡ ಸಮಸ್ಯೆಯಾಗಲಿದ್ದು, ಇಲ್ಲಿನ ಹೊಸ ಲಾಕ್ ವ್ಯವಸ್ಥೆ ಚಿಕ್ಕದಾದ್ದರಿಂದ ಸುರಕ್ಷಿತ ಕಾರ್ಯಾಚರಣೆ ಕಷ್ಟ ಎಂದು ಅಲ್ಲಿನ ನೌಕರರು ಅಭಿಪ್ರಾಯಪಟ್ಟಿದ್ದಾರೆ.

Leave a Reply