ಕರುನಾಡ ಸ್ವಚ್ಛ ಭಾರತೀಯ ವಿಲ್ಸನ್, ಚೆನ್ನೈನ ಸ್ವರಬಂಡಾಯ ಕೃಷ್ಣ… ಈ ಬಾರಿಯ ಮ್ಯಾಗ್ಸೆಸೆ ಪುರಸ್ಕೃತರಿಬ್ಬರಲ್ಲೂ ಸಮಾನತೆಯದ್ದೇ ರಿಂಗಣ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಮೂಲದ ಬೆಜ್ವಾಡ ವಿಲ್ಸನ್ ಮತ್ತು ಚೆನ್ನೈನ ಟಿ.ಎಂ.ಕೃಷ್ಣ ಅವರಿಗೆ ಈ ವರ್ಷದ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿ ಒಲಿದಿದೆ.

ಬೆಜ್ವಾಡ ವಿಲ್ಸನ್ ಭಾರತದಲ್ಲಿ ದಲಿತರು ಮಲ ಹೋರುವ ಸಂಪ್ರದಾಯ ನಿರ್ಮೂಲನೆಗಾಗಿ ಹೋರಾಟ ನಡೆಸುತ್ತಿದ್ರೆ, ಕೃಷ್ಣ ಅವರು ಜಾತಿ ಅಸಮಾನತೆ ತೊಡೆದು ಹಾಕಲು ಸಂಗೀತವನ್ನು ಒಂದು ಅಸ್ತ್ರವನ್ನಾಗಿ ಬಳಸುತ್ತಿರುವವರು.  ಜಾತಿ ವ್ಯವಸ್ಥೆಯ ವಿರುದ್ಧದ ಧ್ವನಿಯಾಗುವುದರಲ್ಲಿ ಇವರಿಬ್ಬರೂ  ಸಾಮ್ಯತೆ ಹೊಂದಿದ್ದಾರೆ.

‘ವಿಲ್ಸನ್ ಅವರ ನೈತಿಕ ಸ್ಥೈರ್ಯ, ಭಾರತದಲ್ಲಿ ಮಲ ಹೊರುವಂತಹ ಪದ್ಧತಿ ನಿರ್ಮೂಲನೆ ಮಾಡಲು ತಳಮಟ್ಟದಲ್ಲಿ ನಡೆಸುತ್ತಿರುವ ಇವರ ಹೋರಾಟ, ದಲಿತರ ಮಾನವೀಯ ಘನತೆ ಮತ್ತು ಹಕ್ಕಿಗಾಗಿರುವ ಇವರ ಶ್ರಮಕ್ಕೆ ಈ ಪ್ರಶಸ್ತಿಗೆ ನೀಡಲಾಗುತ್ತಿದೆ’ ಎಂದಿದೆ ಪ್ರಶಸ್ತಿ ಆಯ್ಕೆ ಸಮಿತಿ.

‘ಸಂಗೀತ ವೈಯಕ್ತಿಕ ಜೀವನ ಮತ್ತು ಸಮಾಜದ ಬದಲಾವಣೆಗೆ ಒಂದು ಅಸ್ತ್ರ ಎಂಬುದನ್ನು ಕೃಷ್ಣ ಅವರು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.’ ಎನ್ನುವುದು ಟಿ. ಎಂ. ಕೃಷ್ಣ ವಿಷಯದಲ್ಲಿ ಸಮಿತಿ ಹೇಳಿರುವಂಥದ್ದು.

50 ವರ್ಷದ ವಿಲ್ಸನ್ ಕೋಲಾರದ ದಲಿತ ಕುಟುಂಬದಲ್ಲಿ ಜನಿಸಿದವರು. ಇವರದು ಸಹ ಮಲ ಹೊರುವ ಕಾಯಕ ಮಾಡುತ್ತಿದ್ದ ಕುಟುಂಬ. ಚಿಕ್ಕ ವಯಸ್ಸಿನಲ್ಲೇ ಶಾಲೆಯಲ್ಲಿ ಜಾತಿ ವ್ಯವಸ್ಥೆಯ ಅಸಮಾನತೆಯನ್ನು ಅನುಭವಿಸಿದ್ದ ವಿಲ್ಸನ್, ಓದನ್ನು ಮುಂದುವರಿಸಿ ತನ್ನ ಕುಟುಂಬದಲ್ಲೇ ಉನ್ನತ ಶಿಕ್ಷಣ ಪಡೆದ ಮೊದಲಿಗನಾದ್ರು. ನಂತರ ಜಾತಿ ವ್ಯವಸ್ಥೆಯಲ್ಲಿ ಅಸಮಾನತೆಗೆ ಕಾರಣವಾಗಿರುವ ಮಲ ಹೊರುವಂತಹ ಕಾಯಕವನ್ನು ಮಾಡಬೇಡಿ ಎಂದು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾದವರು ವಿಲ್ಸನ್. ಇವರ ಹೋರಾಟ ಕೇವಲ ಮಾಧ್ಯಮ, ಭಾಷಣಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಜಾತಿ ವ್ಯವಸ್ಥೆಯಲ್ಲಿ ಅಸಮಾನತೆಗೆ ದಾರಿ ಮಾಡಿಕೊಡುವ ಮಲ ಹೊರುವಂತಹ ಕೆಟ್ಟ ಕಾಯಕವನ್ನು ಮಾಡದಿರುವಂತೆ ಅಂಬೇಡ್ಕರ್ ಅವರು ಹೇಳಿದ್ದ ವಾದವನ್ನು ಜನ ಸಾಮಾನ್ಯನಿಗೆ ಮುಟ್ಟಿಸುವ ಪ್ರಯತ್ನ ಇವರದ್ದು. ಅದರೊಂದಿಗೆ ಇವರ ಹೋರಾಟ ಸಮಾಜದ ಬೇರುಮಟ್ಟಕ್ಕೆ ತಲುಪಿತ್ತು.

ಈ ಹಿಂದೆ ‘ಸತ್ಯಮೇವ ಜಯತೇ’ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಮ್ಮ ಬದುಕಿನ ಕತೆ ಹಾಗೂ ತಮ್ಮ ಸಮುದಾಯ ಹೇಗೆ ಅದೇ ಅಮಾನವೀಯ ಕಾರ್ಯಕ್ಕೆ ಹೋಗುವ ಒತ್ತಡದಲ್ಲಿದೆ ಎಂಬ ಕತೆಯನ್ನು ಬಿಚ್ಚಿಟ್ಟಿದ್ದರು. ‘ನಾನು ಉದ್ಯೋಗ ಕೇಂದ್ರದಲ್ಲಿ ಹೆಸರು ದಾಖಲು ಮಾಡಲು ಹೋದಾಗಲೂ ‘ನಿನ್ನ ಸಮುದಾಯದ ಕೆಲಸ ಹೊಲಸು ತೆಗೆಯುವುದೇ ಅಲ್ಲವಾ’ ಅಂತ ಅವರಾಗಿಯೇ ನಮೂದು ಮಾಡಿಕೊಂಡುಬಿಟ್ಟಿದ್ದರು. ನಾನದನ್ನು ಪ್ರತಿಭಟಿಸಿದೆ. ನನ್ನ ಸಹೋದರ ಹೊಂದಾಣಿಕೆ ಮಾಡಿಕೋ ಎಂದ. ಯಾವುದರ ಕುರಿತಾದರೂ ಹೊಂದಾಣಿಕೆ ಮಾಡಿಕೊಳ್ಳಬಹುದು, ಆದರೆ ಆತ್ಮಗೌರವದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದೇ?’ ಎಂದು ಹೇಳುವಾಗ ವಿಲ್ಸನ್ ಮತ್ರವಲ್ಲದೇ ಒಂದಿಡೀ ಸಮುದಾಯದ ನೋವು ಅಲ್ಲಿ ಧ್ವನಿಸುತ್ತದೆ.

ಇನ್ನು ಟಿ.ಎಂ. ಕೃಷ್ಣ ಅವರ ಕತೆ ವಿಭಿನ್ನ. ಟಿ.ಎಂ. ಕೃಷ್ಣಾ ಅವರಿಗೆ ಈ ಪ್ರಶಸ್ತಿ ಬಂದಿರುವುದು ಸಂಗೀತ ಕ್ಷೇತ್ರಕ್ಕಾಗಿಯೇ ಆದರೂ, ಸಂಗೀತದ ಮೂಲಕ ಇವರ ಹೋರಾಟ ಗಮನಾರ್ಹ.

40 ವರ್ಷದ ಕೃಷ್ಣ ಅವರು ಚೆನ್ನೈನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಮ್ಮ 6ನೇ ವಯಸ್ಸಿನಿಂದಲೇ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿದರು. ಆರ್ಥಶಾಸ್ತ್ರದಲ್ಲಿ ಪದವಿ ಪಡೆದರು ಸಂಗೀತಕ್ಕೆ ತಮ್ಮ ಆದ್ಯತೆ ನೀಡಿದ್ರು. ಕೇವಲ ಸಂಗೀತವನ್ನು ಆರಿಸಿಕೊಳ್ಳುವುದಕ್ಕಷ್ಟೇ ಇವರು ಸೀಮಿತವಾಗಲಿಲ್ಲ. ಸಮಾಜದಲ್ಲಿ ಕರ್ನಾಟಕ ಸಂಗೀತ ಎಂಬ ಕಲೆ ಹೇಗೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಸೀಮಿತವಾಗುತ್ತಿದೆ ಎಂಬುದನ್ನು ಗಟ್ಟಿಯಾಗಿ ಹೇಳಿದವರು. ಅಷ್ಟೇ ಅಲ್ಲದೆ ಈ ಕಲೆ ಕೇವಲ ಒಂದು ಜಾತಿಗೆ ಮಾತ್ರ ಸೀಮಿತವಾಗುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಅವರು ಹೇಳೋದು ಹೀಗೆ:

‘ಕರ್ನಾಟಕ ಸಂಗೀತ ಜಾತಿ ವ್ಯವಸ್ಥೆಯ ಪ್ರತೀಕವಾಗುತ್ತಿದೆ. ಈ ಸಂಗೀತ ಸಭೆಗಳು ಖಾಸಗಿ ಕೂಟಗಳಾಗಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗುತ್ತಿದೆ. ಈ ಕಲೆಯನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳುತ್ತಿಲ್ಲ. ಈ ಕಲೆಯನ್ನು ಬ್ರಾಹ್ಮಣರದ್ದು ಎನ್ನುವಂತಾಗಿದೆ. ಇತರೆ ಜಾತಿಯವರೂ ಸಹ ಇದನ್ನು ಕಲಿಯುವ ಅಗತ್ಯವಿದೆ.’

ಈ ಪ್ರತಿಪಾದನೆಯೊಂದಿಗೆ ಶಾಲೆ- ಕಾಲೇಜುಗಳಿಗೆ ಸಂಗೀತವನ್ನು ತಲುಪಿಸುವಲ್ಲಿ ತೊಡಗಿಕೊಂಡ ಶ್ರೇಯಸ್ಸು ಕೃಷ್ಣರದ್ದು.

Leave a Reply