ದೇವರೆದುರು ಎಲ್ಲರು ಒಂದೇ ಎಂಬುದು ಕಾನೂನಿನೆದುರು ಎಲ್ಲರು ಸಮಾನರು ಎನ್ನುವಷ್ಟೇ ಕ್ಲೀಷೆಯ ಮಾತು

author-geetha‘ನಂಗೆ ಪರಿಚಯದವರು ಇದ್ದಾರೆ ಹೇಳ್ತೀನಿ ಸುಲಭವಾಗಿ ದರ್ಶನವಾಗುತ್ತದೆ.’

‘ಪರ್ವಾಗಿಲ್ಲ ನಾಲ್ಕು ಜನರಿಗೆ ಹೇಗೋ ನಂಗೂ ಹಾಗೆ ಆಗುತ್ತದೆ. ಯಾರಿಗೂ ಹೇಳೋದು ಬೇಡ..’

‘ಅಯ್ಯೊ, ಸಂಕೋಚ ಬೇಡ. ದೇವಸ್ಥಾನದ ಕ್ಯೂನಲ್ಲಿಯೇ ಅರ್ಧ ದಿನ ಕಳೆಯಬೇಕಾಗುತ್ತದೆ. ನಮ್ಮ ಭಾವನವರ ಅಣ್ಣ, ಸಿಎಂ ಗೆ ಪರ್ಸನಲ್ ಸೆಕ್ರೆಟರಿ ಇದ್ದಾರಲ್ಲಾ.. ಅವರ ಅಕ್ಕನ ಗಂಡ.. ಹೇಳಿಸ್ತೀನಿ. ನೀವು ಯಾವತ್ತು, ಎಷ್ಟು ಜನ ಹೋಗ್ತೀರಿ ಹೇಳಿ.. ಒಳ ಪ್ರಾಂಗಣಕ್ಕೆ ಬಿಡ್ತಾರೆ.. ದೇವರನ್ನು ಹತ್ತಿರದಿಂದ ನೋಡಬಹುದು..’

‘ಇಲ್ಲ.. ಬೇರೆ ಎಲ್ಲರೂ ಕ್ಯೂನಲ್ಲಿ ಹೋಗುತ್ತಿರುವಾಗ ಅವರನ್ನೆಲ್ಲಾ ದಾಟಿ ಸ್ಪೆಷಲ್ ಆಗಿ ಹೋಗೋಕ್ಕೆ ಇಷ್ಟ ಆಗೋಲ್ಲ..’

‘ನಿಮಗೆ ಬುದ್ಧಿ ಇಲ್ಲ.. ದುಡ್ಡಿದ್ದು, ದೇವರಿಗೆ ಬಂಗಾರ, ಬೆಳ್ಳಿ ಕೊಟ್ಟಿದ್ದರೆ ದರ್ಶನ ಸುಲಭ. ರಾಜಕೀಯ ವಶೀಲಿಯಿದ್ದರೆ, ಅಧಿಕಾರಿಗಳ ಸಂಪರ್ಕವಿದ್ದರೆ ದರ್ಶನ ಮತ್ತಷ್ಟು ಸುಲಭ.. ನೀವೇ ಸೆಲಿಬ್ರಿಟಿ ಆಗಿಬಿಟ್ಟರಂತೂ ಯೋಚನೆಯೇ ಇಲ್ಲ..’

‘ಹೂಂ.. ದೇವರನ್ನೇ ನಮ್ಮ ಮನೆಗೆ ಕರೆದುಕೊಂಡು ಬಂದು ನಿಲ್ಲಿಸಿಬಿಡ್ತಾರೆ! ಅಲ್ಲವೇ?’

‘ನಿಮಗೆ ಎಲ್ಲಾ ವ್ಯಂಗ್ಯ! ಹೇಗೆ ಬೇಕಾದರೂ ಹೋಗಿ.. ಅಥವಾ ಹೋಗದೆಯೇ ಇರಿ.. ನಂಗೇನು? ಏನೋ ವಯಸಾಗಿರೋ ನಿಮ್ಮ ತಾಯಿನ ಕರ್ಕೊಂಡು ಹೋಗ್ತಿದೀರಲ್ಲ ಅಂತ ಹೇಳಿದೆ.. ಸರಿ ಬಿಡಿ ಫೋನ್ ಇಡ್ತೀನಿ..’ ಮೊಬೈಲ್ ಫೋನ್ ಕೈಗೆ ಬಂದಿದ್ದರೂ ನಾವು ‘ಫೋನ್ ಇಡ್ತೀನಿ’ ಅತಲೇ ಹೇಳ್ತಿವಲ್ಲಾ ಎಂದು ನಗುತ್ತಾ ನನ್ನ ಫೋನನ್ನು ಸ್ವಸ್ಥಾನಕ್ಕೆ ಸೇರಿಸಿ ಕುಳಿತೆ.

ಒಂದು ಮದುವೆ ಮನೆಯಲ್ಲಿ ಕೂಡ ವಿಐಪಿ ಕ್ಯೂ ಬೇರೆ. ಬಂದಿರುವುದೇ ಮದುವೆ ಮನೆಗೆ! ಅಲ್ಲಿ ನೆಮ್ಮದಿಯಾಗಿ ಎಲ್ಲರೊಂದಿಗೆ ಕುಳಿತು, ನಿಂತು.. ಮಾತನಾಡಿ, ಹುಡುಗ ಹುಡುಗಿಗೆ ಹಾರೈಸಿ, ಊಟ ಮಾಡಿ ಹೋಗಬಹುದು. ಇಲ್ಲ, ಆತುರ. ನಿಂತವರು ನಿಂತೇ ಇರುತ್ತಾರೆ. ಎಲ್ಲರನ್ನು ದಾಟಿ ಹೋಗಿ ವಿಷ್ ಮಾಡಿ ಗಡಿಯಾರ ನೋಡಿಕೊಳ್ಳುತ್ತಾ ತೆರಳಿಬಿಡ್ತಾರೆ, ತಲೆ ಮೇಲೆ ಸೂರ್ಯ ಹೊತ್ತುಕೊಂಡವರಂತೆ.

ತಿರುಪತಿ ದೇವಸ್ಥಾನವಂತೂ ಫೇಮಸ್. ಯಾವುದಕ್ಕೆ ಅಂದಿರಾ? ತಾರತಮ್ಯ ನೀತಿಗೆ! ರಾಷ್ಟ್ರಪತಿ, ಪಿ.ಎಂ, ಸಿಎಂಗಳು, ರಾಜ್ಯಪಾಲರು, ಸಿನಿಮಾ ಸ್ಟಾರ್ ಗಳು (ನಾನು ಹೋದಾಗ ಒಮ್ಮೆ ಶ್ರೀದೇವಿ ಬಂದಿದ್ದಳು.. ಜನರು ಕೂಡ ದೇವರನ್ನು ಬಿಟ್ಟು ಅವಳತ್ತ ತಿರುಗಿದರು ಎಂಬುದು ಇನ್ನೊಂದು ಕಥೆ!) ಭಾರಿ ಉದ್ಯಮಿಗಳು, ವಜ್ರದ ಕಿರೀಟಗಳನ್ನಿತ್ತವರು.. ಅವರುಗಳಿಗೆ ಸ್ಪೆಷಲ್ ದರ್ಶನ.. ಹಲವೊಮ್ಮೆ ಸುಪ್ರಭಾತವನ್ನು ಮುಂಚಿತವಾಗಿ ಮಾಡಿದ್ದಿದೆ.. ಅಥವಾ ಶಯನೋತ್ಸವ ಸೇವೆಯನ್ನು ಹೊತ್ತಾಗಿ ಮಾಡಿದ್ದಿದೆ. ಈ ವಿವಿಐಪಿಗಳು ದೇವರ ದರ್ಶನ ಮಾಡಲು ಈ ಬಗೆಯ ತಾರತಮ್ಯ ನಡೆಯುತ್ತಿರುವಾಗ ದೇವರು ಅಲ್ಲಿ ಕೂತು ಇದನ್ನೆಲ್ಲಾ ಹೇಗೆ ಸಹಿಸಿಕೊಳ್ಳುತ್ತಿದ್ದಾನೆ ಎನ್ನಿಸುತ್ತದೆ. ಅವನಿಗೆ ಎಲ್ಲರೂ ಒಂದೇ ಅಲ್ಲವೇ?

ಎರಡೋ ಮೂರೋ ವರ್ಷಗಳ ಹಿಂದೆ ನಮ್ಮ ಮಾಜಿ ಮುಖ್ಯಮಂತ್ರಿಗಳ ಎರಡನೇ ಪತ್ನಿ, ಪಾಪ.. ಸಿಂಗಾರ ಬಂಗಾರವಾಗಿ ಚಾಮುಂಡಿ ತಾಯಿಗೆ ನೆಕ್ಲೇಸ್ ಕೊಡಲು ಹೋಗಿ, ಆ ದೇವಸ್ಥಾನದ ಆರ್ಚಕರು ಆಕೆಯನ್ನಾಗಲೀ, ನೆಕ್ಲೇಸ್ಸನ್ನಾಗಲೀ ಸರಿಯಾಗಿ ನೋಡದೆಯೋ ಅಥವಾ ಗುರುತು ಹಿಡಿಯದೆಯೋ ಆಕೆಗೆ ಅವಮಾನವಾಗಿ, ಜೊತೆಯಲ್ಲಿದ್ದವರು ಬಂದಿರುವವರು ಯಾರು ಗೊತ್ತೇನ್ರಿ ಎಂದು ಧಮಕಿ ಹಾಕಿದ್ದು ಭಾರಿ ಸುದ್ದಿಯಾಗಿತ್ತು.

ಮೊನ್ನೆ ಮೊನ್ನೆ ನಮ್ಮ ಹಾಲಿ ಮುಖ್ಯಮಂತ್ರಿಗಳ ಪತ್ನಿ ಅದೇ ಚಾಮುಂಡಿ ಬೆಟ್ಟಕ್ಕೆ ಪೂಜೆಗೆ ಹೋಗಿ (ಸಾಮಾನ್ಯರಂತೆ ದರ್ಶನಕ್ಕೆ ಕ್ಯೂನಲ್ಲಿ ನಿಂತಿದ್ದರು ಅನ್ನುತ್ತೆದೆ ವರದಿ) ಗುರುತು ಹಿಡಿದ ಜನ ಹಾಗೂ ವರದಿಗಾರರು ಫೋಟೋಗಳನ್ನು ತೆಗೆದರಂತೆ. ಆಗ ಅವರ ಜೊತೆಯಲ್ಲಿದ್ದ ಪೊಲೀಸ್ಸಿನವರು, ಅವರುಗಳ ಕ್ಯಾಮೆರಾ ಇಸಿದುಕೊಂಡು ಫೋಟೋಗಳನ್ನು ಡಿಲೀಟ್ ಮಾಡಿದರಂತೆ. ಜೊತೆಯಲ್ಲಿ ಪೊಲೀಸ್ಸಿನವರು ಇದ್ದರು ಅಂದರೆ ಸಾಮಾನ್ಯರಂತೆ ಬಂದಿರಲಿಲ್ಲ ಅಂತಾಯಿತಲ್ಲವೇ?

‘ನನಗೆ ಜಂಭವೇ ಇಲ್ಲ’ ಎಂದು ಮೂರು ಹೊತ್ತು ಹೇಳಿಕೊಂಡು ತಿರುಗುವುದು ಅತೀ ಜಂಭದ ಸಂಕೇತವಂತೆ!

ಚಾಮುಂಡಿ ಬೆಟ್ಟದ ವಿಷಯಕ್ಕೆ ಬಂದಾಗ ಇದನ್ನು ಹೇಳಲೇಬೇಕು. ಚಾಮುಂಡೇಶ್ವರಿ ನನ್ನ ಅತ್ತೆಯವರ ಇಷ್ಟ ದೈವ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು, ನನ್ನ ಗಂಡ ಮೈಸೂರಿಗೆ ಹೋದಾಗ, ಚಾಮುಂಡಿ ಬೆಟ್ಟಕ್ಕೆ ಹೋಗಲೇಬೇಕು ಎಂದು ಹೇಳಿ, ಆರತಿಗೆ ಹಾಕು ಎಂದು ಸಾವಿರ ರುಪಾಯಿ ಕೊಟ್ಟರು. ಸರಿ ಹೋದೆವು. ವಿಪರೀತ ಜನಸಂದಣಿ. ಸರದಿಯಲ್ಲಿ ಹೋಗಿತ್ತಿದ್ದರೂ ಬೇಗ ನಡೆಯಿರಿ ಎಂದು ಭುಜ ಮುಟ್ಟಿ ನೂಕುತ್ತಿದ್ದ ಕಾವಲಿನವರು. ನನ್ನ ಗಂಡ ಮುಂದೆ ನಾನು ಹಿಂದೆ. ಇವರಿಗೆ ಅವರೆಲ್ಲಿ ಮುಟ್ಟುತ್ತಾರೋ ಎಂಬ ಟೆನ್ಷನ್! ದೇವರನ್ನೂ ನೋಡದೆ ಸರಸರ ಮುಂದೆ ನಡೆದರು. ನಾನು ನಮ್ಮತ್ತೆ ಕೊಟ್ಟ ಸಾವಿರ ರುಪಾಯಿ ತಟ್ಟೆಗೆ ಹಾಕಿ, ಕೈ ಮುಗಿದೆ. ಮುಂದೆ ಹೋಗಿದ್ದ ಇವರ ಕೈ ಹಿಡಿದು ಹಿಂದಕ್ಕೆಳೆದು, ‘ಯಾಕೆ ಹಾಗೇ ಹೋಗ್ತಾ ಇದೀರಿ ಸರ್? ದೇವರನ್ನು ನೋಡಿ’ ಎಂದರು ಕಾವಲಿನವರು!

ಇಬ್ಬರೂ ನಗುತ್ತಾ ಹೊರಬಂದೆವು. ಏನೂ ಕೇಳದ ದೇವರು, ಕೈಚೆಲ್ಲಿ ಕಲ್ಲಾಗಿ ನಿಂತಾಗಿದೆ. ಪೀತಾಂಬರವಾಗಲಿ, ವಜ್ರವೈಡೂರ್ಯವಾಗಲೀ.. ದೇವರಿಗೆ ಅರ್ಪಿಸುವುದು ಅದರ ವ್ಯಾಮೋಹ ಕಳೆದುಕೊಳ್ಳಲು.. ಅದನ್ನೇ ಇನ್ನೂ ಹೆಚ್ಚು ಕೊಡು ಎಂದು ಬೇಡುವುದಕ್ಕಲ್ಲ.. (ಅವನಿಗೆ ಏನೂ ಬೇಕಿಲ್ಲ) ಅಥವಾ ಅದರಿಂದ ಸಿಗುವ ಗೌರವಾದರಕ್ಕಾಗಿಯೂ ಅಲ್ಲ. ಆದರೆ ಅಧಿಕಾರ ಕೈಗೆ ಬಂದೊಡನೆ ಅದರ ದುರುಪಯೋಗ ಮಾಡಿಕೊಳ್ಳದವರು ಕಡಿಮೆ.

ಕೆಂಪು ಗೂಟದ ಕಾರು ಸಿಕ್ಕರೆ ಸಾಕು, ಸೈರನ್ ಹೊಡೆದುಕೊಳ್ಳುತ್ತಾ ಹೋಗುತ್ತಾರೆ.. ಆ್ಯಂಬುಲೆನ್ಸಿಗೆ ಕೂಡ ದಾರಿ ಬಿಡುವುದಿಲ್ಲ.

ವಿದ್ಯೆ, ಅಧಿಕಾರ, ಅಂತಸ್ತು, ಹಣ, ವಿನಯವನ್ನು ಕಲಿಸಬೇಕು. ಅದಾಗುತ್ತಿಲ್ಲ, ಅಹಂಕಾರ ಹಾಗೂ ನಾನೇ ಮೊದಲು ಎಂಬ ಪ್ರವೃತ್ತಿಯನ್ನು ಕಲಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿಯಂತೂ ಜನರ ಮತದ ಮೂಲಕ ಅಧಿಕಾರ ಸಿಕ್ಕುವುದರಿಂದ ಮುಖಂಡರು ಜನ ಸೇವಕರು, ಜನ ನಾಯಕರಲ್ಲ. ಆದರೆ ನಾಯಕರು ಅನ್ನುವುದು ಕೂಡ ಹೋಗಿ ರಾಜರಾಗಿ ಕೂತಿದ್ದಾರೆ. ಆಗ ರಾಜ್ಯಕ್ಕೆ ಒಬ್ಬ ರಾಜನಿದ್ದ. ಈಗ ಕಾರ್ಪೊರೇಟರ್ ಗಳು ಪುಡಿ ರಾಜರು. ಎಂ.ಎಲ್.ಎ, ಎಂ.ಪಿ, ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರು.. ಅದೆಷ್ಟು ಮಂದಿ ರಾಜರು!

ರಸ್ತೆ ಗೆಸ್ಟ್ ಹೌಸ್ (ಕಬಿನಿ ಜಂಗಲ್ ಲಾಡ್ಜಸ್ ನಲ್ಲಿ ಎರಡು ಕಾಟೇಜ್ಗಳು ದಿಢೀರನೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಬಂದರೆ ಇರಬೇಕು ಎಂದು ಸದಾ ಖಾಲಿ!) ದೇವಸ್ಥಾನಗಳನ್ನೆಲ್ಲಾ ಅವರಿಗೆ ಬಿಟ್ಟುಕೊಡಬೇಕು.. ಅಂದರೆ ಮೊದಲ ಆದ್ಯತೆ ಅವರಿಗೆ. ಜನತೆಯ ಭದ್ರತೆಗೆ ಇರುವ ಪೊಲೀಸ್ ಸಿಬ್ಬಂದಿಯ ಕೆಲಸ ಅವರುಗಳನ್ನು ರಕ್ಷಿಸುವುದು.. Z catogary ರಕ್ಷಣೆ ಎಂದು ಮುಕೇಶ್ ಅಂಬಾನಿ ಹಾಗೂ ಅವರ ಹೆಂಡತಿಯ ರಕ್ಷಣೆಗಾಗಿ ಸರ್ಕಾರದ CRPF ಸಿಬ್ಬಂದಿಯನ್ನು ಹಾಕುತ್ತಾರೆ. ಯಾಕೆ? ಖಾಸಗಿ ರಕ್ಷಣಾ ಸಂಸ್ಥೆಯಿಂದ ಅವರ ರಕ್ಷಣೆ ಅವರು ಮಾಡಿಕೊಳ್ಳಬಹುದಲ್ಲವೇ?

ಈ ರೀತಿ, some people are above law, some people are very special ಎಂಬಂತೆಯೇ ಮುಂದುವರಿದರೆ, ಸಾಮಾನ್ಯ ಜನರು ರೋಸಿ ಹೋಗುವ ದಿನ ದೂರವಿಲ್ಲ. ಅಭಿಮಾನವಿದೆ, ತಾಳ್ಮೆಯಿದೆ, ಸಹೃದಯತೆ ಇದೆ. ಆದರೆ ಎಲ್ಲದಕ್ಕೂ ಒಂದು ಮಿತಿಯಿದೆ.

Leave a Reply