
ಡಿಜಿಟಲ್ ಕನ್ನಡ ಟೀಮ್:
ಪ್ರತಿಷ್ಠಿತ ರಿಯೋ ಒಲಿಂಪಿಕ್ಸ್ ಗೆ ಬಾಕಿ ಇರೋದು ಬೆರಳೆಣಿಕೆ ದಿನಗಳು ಮಾತ್ರ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸುತ್ತಿರೋದು ಭಾರತದ ಪಾಳೆಯದಲ್ಲಿನ ಉತ್ಸಾಹ. ಇಂತಹ ಉತ್ಸಾಹವನ್ನು ಕುಂದಿಸಿರೋದು ಡೋಪಿಂಗ್ ಎಂಬ ಅನಿಷ್ಟ.
ಸದ್ಯ ಈ ಡ್ರಗ್ಸ್ ಸೇವನೆ ಎಂಬ ಕಳಂಕ ಹೊತ್ತಿರೋರು ಕುಸ್ತಿಪಟು ನರಸಿಂಗ್ ಯಾದವ್ ಹಾಗೂ ಶಾಟ್ ಪುಟ್ ಪಟು ಇಂದರ್ ಜೀತ್ ಸಿಂಗ್. ಇವರಿಬ್ಬರೂ ಪದಕ ನಿರೀಕ್ಷೆ ಹುಟ್ಟಿಸಿದ ಸ್ಪರ್ಧಿಗಳೇ. ಈ ಪ್ರಕರಣದ ನಂತರ ಇವರ ಒಲಿಂಪಿಕ್ಸ್ ಬಾಗಿಲು ಬಹುತೇಕ ಮುಚ್ಚಿದೆ. ತಮ್ಮ ವೃತ್ತಿ ಜೀವನದ ಹಾದಿಯಲ್ಲಿ ಕಪ್ಪುಚುಕ್ಕೆ ಬಾರದಂತೆ ನೋಡಿಕೊಂಡಿದ್ದ ಇವರಿಬ್ಬರ ಹೆಸರು ಡೋಪಿಂಗ್ ಕೇಳಿಬಂದಿರುವುದು ನಿಜಕ್ಕೂ ಆಘಾತಕಾರಿ.
ಇಷ್ಟು ದಿನಗಳ ಕಾಲ ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿ, ಇದೇ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಪಾಸ್ ಆದವರು ಒಲಿಂಪಿಕ್ಸ್ ಹೊಸ್ತಿಲಲ್ಲಿ ಸಿಕ್ಕಿ ಬಿದ್ದಿರುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತಿದೆ. ನರಸಿಂಗ್ ಹಾಗೂ ಇಂದರ್ ಜೀತ್ ಹೇಳಿರುವ ಪ್ರಕಾರ ಇವರಿಬ್ಬರು ನಿರಂತರವಾಗಿ ಅವರು ಉದ್ದೀಪನ ಮದ್ದು ಪರೀಕ್ಷೆ ಮಾಡಿಸುತ್ತಲೇ ಬಂದಿದ್ದಾರೆ. ಈ ಹಿಂದಿನ ಪರೀಕ್ಷೆಗಳಲ್ಲಿ ಪಾಸಗಿದ್ದ ನಾವು ಇಲ್ಲಿ ಸಿಕ್ಕಿ ಬೀಳಲು ಹೇಗೆ ಸಾಧ್ಯ ಎಂದು ಕೇಳುತ್ತಿದ್ದಾರೆ.
ವರ್ಷಗಟ್ಟಲೆ ತಪಸ್ಸಿನಂತೆ ಅಭ್ಯಾಸ ನಡೆಸಿದ ಕ್ರೀಡಾಪಟುವಿಗೆ ಒಲಿಂಪಿಕ್ಸ್ ಹೊಸ್ತಿಲಲ್ಲಿದ್ದಾಗ ಇಂತಹ ಆಘಾತ ಅರಗಿಸಿಕೊಳ್ಳುವುದು ನಿಜಕ್ಕೂ ಅಸಾಧ್ಯ. ನರಸಿಂಗ್ ಮತ್ತು ಇಂದರ್ ಜೀತ್ ಗೆ ಸಹ ಕ್ರೀಡಾಪಟುಗಳು, ಸರ್ಕಾರ ಹಾಗೂ ಕ್ರೀಡಾ ಸಂಸ್ಥೆಗಳೂ ಬೆಂಬಲ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಇಂತಹವರೇ ಇವರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಹೇಳಲಾಗದು.
ಈ ಪ್ರಕರಣದ ನಂತರ ಇವರಿಬ್ಬರೂ ಹೇಳುತ್ತಿರುವುದು ನಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಅಂತಾ. ನನ್ನ ಆಹಾರದಲ್ಲಿ ಯಾರೋ ಗೋಲ್ ಮಾಡಿದ್ದಾರೆ ಅಂತಾ ನರಸಿಂಗ್ ಹೇಳಿದ್ದಾರೆ. ಅದಕ್ಕೆ ಪುಷ್ಠಿ ಎಂಬಂತೆ ಮಾಧ್ಯಮಗಳು ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿನ ವ್ಯವಸ್ಥೆಯನ್ನು ಬೆಳಕಿಗೆ ತಂದಿವೆ. ಅಲ್ಲಿನ ಅಡುಗೆ ಕೋಣೆಗೆ ಯಾರು ಬೇಕಾದರೂ ಹೋಗಬಹುದು. ಹೀಗಾಗಿ ನರಸಿಂಗ್ ವಿರುದ್ಧ ಪಿತೂರಿ ನಡೆದಿರುವ ಬಗ್ಗೆ ಅನುಮಾನಗಳು ಹೆಚ್ಚುತ್ತಲೇ ಇದೆ.
ಇನ್ನು ಇಂದರ್ ಜೀತ್ ಹೇಳೋ ಪ್ರಕಾರ, ಆತನ ಮಾದರಿಯನ್ನು ಪರೀಕ್ಷೆ ಸಂದರ್ಭದಲ್ಲಿ ತಿರುಚಲಾಗಿದೆ ಅಂತಾ. ಇಂದರ್ ಜೀತ್ ಬಿ ಸ್ಯಾಂಪಲ್ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದ್ದು, ಅದರ ಫಲಿತಾಂಶದ ಮೇಲೆ ಈ ಪ್ರಕರಣಕ್ಕೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.
ಒಟ್ಟಾರೆ ಈ ಎರಡೂ ಪ್ರಕರಣದಲ್ಲಿ ಕೇಳಿಬಂದಿರುವ ಪ್ರಮುಖ ಅಂಶ, ತಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು. ಹಾಗಾದರೆ ಇವರ ವಿರುದ್ಧ ಪಿತೂರಿ ನಡೆಸಿದವರಾರು ಇದಕ್ಕೆ ಉನ್ನತ ಮಟ್ಟದ ತನಿಖೆಯಿಂದಲೇ ಉತ್ತರ ಕಂಡುಕೊಳ್ಳಬೇಕು.
ನರಸಿಂಗ್ ಹೇಳೋ ಪ್ರಕಾರ, ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾಗಿದ್ದಾರೆ. ಜೂನ್ ನಲ್ಲಿ ನಡೆದ ಎರಡೂ ಪರೀಕ್ಷೆಯಲ್ಲೂ ಈತ ಕ್ಲೀನ್ ಚಿಟ್ ಪಡೆದಿದ್ದ. ಆದ್ರೆ ಕಡೆಯದಾಗಿ ನಡೆಸಿರುವ ಪರೀಕ್ಷೆಯಲ್ಲಿ ನರಸಿಂಗ್ ಪಾಸ್ ಆಗಿಲ್ಲ. ಅಷ್ಟೇ ಅಲ್ಲದೆ ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿ ನರಸಿಂಗ್ ರೂಮ್ ಮೆಟ್ ಸಹ ಪರೀಕ್ಷೆ ವೇಳೆ ಸಿಕ್ಕಿ ಬಿದ್ದಿದ್ದಾನೆ.
ನರಸಿಂಗ್ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಇವರು ಇಂತಹ ಕೆಲಸಕ್ಕೆ ಕೈಹಾಕಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದನ್ನೇ ಯೋಗೀಶ್ವರ್ ದತ್ ಹಾಗೂ ಇತರೆ ಆಟಗಾರರು ಹೇಳ್ತಿರೋದು. ಈ ಎಲ್ಲ ಅಂಶಗಳು ಪ್ರಕರಣವನ್ನು ಗೊಂದಲದ ಗೂಡಾಗಿಸಿದೆ.
ಈ ಪ್ರಕರಣದಿಂದ ಇವರಿಬ್ಬರ ಒಲಿಂಪಿಕ್ಸ್ ಭಾಗವಹಿಸುವಿಕೆ ಬಹುತೇಕ ಮುಚ್ಚಿಕೊಂಡಿದೆ. ಇಂದರ್ ಜೀತ್ ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಫಲಿತಾಂಶ ಬದಲಾದರೆ ಒಂದು ಅವಕಾಶ ಸಿಗಬಹುದು.
ಯಾವುದೇ ಒಬ್ಬ ಜವಾಬ್ದಾರಿಯುತ ಅಥ್ಲೀಟ್ ವರ್ಷಗಳ ಕಠಿಣ ಪರಿಶ್ರಮ ಫಲಿಸುವ ಹೊಸ್ತಿಲಲ್ಲಿ ಇಂತಹ ಕಾರ್ಯಕ್ಕೆ ಕೈಹಾಕಲು ಮುಂದಾಗುವುದಿಲ್ಲ. ಒಂದುವೇಳೆ ಕಠಿಣ ಕ್ರಮ ಜರುಗಲಿ. ಇನ್ನು ಇವರ ವಿರುದ್ಧ ಪಿತೂರಿ ನಡೆದಿದ್ದೇ ನಿಜ ಎಂಬುದು ಗೊತ್ತಾದರೆ, ಅದಕ್ಕೆ ಖಂಡಿತವಾಗಿಯೂ ಶಿಕ್ಷೆ ಆಗಲೇಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಇನ್ನಷ್ಟು ಕ್ರೀಡಾಪಟುಗಳನ್ನು ಬಲಿ ಪಡೆಯುವುದರಲ್ಲಿ ಅನುಮಾನವಿಲ್ಲ.
ಒಟ್ಟಿನಲ್ಲಿ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಇದೊಂದು ಗಂಭೀರ ಪ್ರಕರಣ. ಇವರ ವಿರುದ್ಧ ಪಿತೂರಿ ನಡೆದಿದ್ದು ನಿಜವೇ? ಅಥವಾ ಭಾರತೀಯ ಕ್ರೀಡಾ ವ್ಯವಸ್ಥೆಯಲ್ಲಿನ ಲೋಪ ಕಾರಣವೋ? ಅಥವಾ ಇವರು ನಿಜಕ್ಕೂ ತಪ್ಪಿತಸ್ಥರೋ ಎಂಬುದು ಬೆಳಕಿಗೆ ಬರಲೇಬೇಕಿದೆ. ಈ ಬಗ್ಗೆ ಕ್ರೀಡಾ ಸಂಸ್ಥೆಗಳು ಮತ್ತು ಸರ್ಕಾರ ಒಟ್ಟಿಗೆ ಶ್ರಮಿಸುವ ಅಗತ್ಯವಿದೆ. ಕಾಂಸ್ಪಿರಸಿ ಥಿಯರಿಯ ಸುತ್ತಾ ಸುತ್ತುತ್ತಿರುವ ಈ ಪ್ರಕರಣಗಳು ಸ್ಪಷ್ಟ ಚಿತ್ರಣ ಪಡೆಯಲೇಬೇಕು. ಇಲ್ಲವಾದರೆ, ಭಾರತೀಯ ಕ್ರೀಡಾ ಕ್ಷೇತ್ರ ಅಭಿವೃದ್ಧಿ ಹಾದಿ ಹಿಡಿಯುವ ಬದಲು ಇಂತಹ ವಿವಾದದ ಸುಳಿಯಲ್ಲೇ ಸಿಲುಕಿ ಕುಸಿದು ಹೋಗಲಿದೆ.