ರೈತರ ನಿರೀಕ್ಷೆಗೆ ತಣ್ಣೀರೆರೆಚಿತು ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು, ಕುಡಿಯೋ ನೀರಿಗೂ ಈ ಪರಿ ಚೌಕಾಶಿಯೇ?

RaithaSena Karnataka members protesting for Mahadayi-Kalasabanduri issue at Freedom Park in Bengaluru on Thursday.

ಸಾಂದರ್ಭಿಕ ಚಿತ್ರ.

ಡಿಜಿಟಲ್ ಕನ್ನಡ ಟೀಮ್:

ಮಹಾದಾಯಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 7.5 ಟಿಎಂಸಿ ನೀರು ಬಳಕೆಗೆ ಅವಕಾಶ ನೀಡಬೇಕೆಂಬ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದೆ. ಕಳೆದ ಒಂದು ವರ್ಷದಿಂದ ನಡೆಸಿದ ಹೋರಾಟಕ್ಕೆ ತಕ್ಕಮಟ್ಟದ ಫಲ ಸಿಗುತ್ತದೆ ಎಂಬ ಆಶಾವಾದದಲ್ಲಿದ್ದ ಉತ್ತರ ಭಾಗದ ರೈತರಿಗೆ ಈ ತೀರ್ಪು ಬರ ಸಿಡಿಲಿನಂತೆ ಅಪ್ಪಳಿಸಿದೆ.

ನ್ಯಾ.ಜೆ.ಎಂ.ಪಾಂಚಲ್, ನ್ಯಾ.ವಿನಯ್ ಮಿತ್ತಲ್, ನ್ಯಾ.ಪಿ.ಎಸ್ ನಾಯಾಯಣ್ ಅವರನ್ನೊಳಗೊಂಡ ಮಹದಾಯಿ ನ್ಯಾಯಾಧಿಕರಣದ ನಿರ್ಧಾರ ರಾಜ್ಯಕ್ಕೆ ತೀವ್ರ ಹಿನ್ನಡೆಯುಂಟು ಮಾಡಿದೆ. ಇದರೊಂದಿಗೆ ಕರ್ನಾಟಕ ಪರ ವಕೀಲರಾದ ಫಾಲಿ ಎಸ್ ನಾರಿಮನ್ ಅವರ ಪ್ರಬಲ ವಾದ ಯಾವುದೇ ಫಲ ನೀಡದಂತಾಗಿದೆ. ಈ ತೀರ್ಪುಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ರೈತರು, ಕನ್ನಡ ಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿವೆ.

ಒಂದು ವರ್ಷದಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಭಾಗದ ಜಿಲ್ಲೆಗಳ ಜನರು ಮಹದಾಯಿ ನೀರಿಗಾಗಿ ನಿರಂತರವಾಗಿ ವಿವಿಧ ರೀತಿಯ ಹೋರಾಟವನ್ನೇ ಮಾಡಿಕೊಂಡು ಬಂದಿದ್ದರು. ನಮ್ಮ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಧಿಕರಣ ಕುಡಿಯುವ ನೀರು ಬಳಕೆಗೆ ಅನುಮತಿ ನೀಡಲಿದೆ ಎಂಬ ಆಸೆಯಿಂದ ಕಾದು ಜನ ಕಾದು ಕುಳಿತಿದ್ದರು. ಬುಧವಾರ ಮಧ್ಯಾಹ್ನ ಬಂದ ತೀರ್ಪು ಈ ಜನರಿಗೆ ಆಘಾತ ತಂದಿದೆ. ಪರಿಣಾಮ ಪ್ರತಿಭಟನೆಗಳು ಮತ್ತೆ ಕಾವುಪಡೆಯುತ್ತಿವೆ. ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದ್ದು, ಮುಂದಿನ ದಿನಗಳಲ್ಲಿ ಶಾಂತಿಯ ಹಾದಿ ಬಿಟ್ಟು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಧಾರವಾಡದ ನರಗುಂದ ಹಾಗೂ ಇತರೆ ಪ್ರದೇಶಗಳಲ್ಲಿ ಕಲ್ಲುತೂರಾಟ ಮಾಡಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಹೋರಾಟ ಮಾಡಲಾಗುತ್ತಿದೆ. ಬೆಳಗಾವಿಯ ಬೈಲಹೊಂಗಲದಲ್ಲಿ ಸ್ವರೇಪಿತ ಬಂದ್ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಗಂಭೀರ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ.

ಈ ಮಧ್ಯಂತರ ತೀರ್ಪು ನ್ಯಾಯಾಧಿಕರಣದ್ದಾಗಿದ್ದರೂ ಈ ಸಮಸ್ಯೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದೆಬರಲಿಲ್ಲ ಎಂದು ಜನರು ಕೇಂದ್ರ ಸರ್ಕಾರದ ವಿರುದ್ಧ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಅಲ್ಲದೆ ಈ ತೀರ್ಪಿನ ನಂತರ ರಾಜ್ಯ ರಾಜಕೀಯ ನಾಯಕರ ವಿರುದ್ಧ ತಮ್ಮ ಸಿಟ್ಟು ವ್ಯಕ್ತಪಡಿಸುತ್ತಿದ್ದಾರೆ.

Leave a Reply