ಸಾರಿಗೆ ಮುಷ್ಕರ ಅಂತ್ಯ, ಉತ್ತರಾಖಂಡದಲ್ಲಿ ಚೀನಿ ಸೇನೆ ಪ್ರವೇಶ?, ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯನ್ನು ಥಳಿಸಿದ ಗೋರಕ್ಷಕರು, ಸಿಎಂ ಪುತ್ರ ಸೇಫ್…

ಜಮ್ಮು-ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡಿಕೊಂಡಿದ್ದ ಪಾಕಿಸ್ತಾನದ ಬುಡ ಬಿಗಿಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಜನರೀಗ ಪಾಕಿಸ್ತಾನದ ವಿರುದ್ಧ ಬೀದಿಗಿಳಿದಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ನವಾಜ್ ಷರೀಫರ ‘ಪಾಕಿಸ್ತಾನ ಮುಸ್ಲಿಂ ಲೀಗ್ ‘ ಈ ಪ್ರಾಂತ್ಯದಲ್ಲಿ 41 ಸ್ಥಾನಗಳ ಪೈಕಿ 32 ಸ್ಥಾನ ಗೆದ್ದಿತ್ತು. ಆದರೆ ಚುನಾವಣಾ ಅಕ್ರಮಗಳ ಮೂಲಕ ಈ ಫಲಿತಾಂಶ ಸಾಧಿಸಲಾಗಿದ್ದು, ತಮ್ಮ ಮೇಲೆ ಐಎಸ್ಐ (ಪಾಕಿಸ್ತಾನ ಗುಪ್ತಚರ ಸಂಸ್ಥೆ) ವ್ಯವಸ್ಥೆ ಹೇರುವುದು ಸಲ್ಲ ಎಂದು ಸ್ಥಳೀಯರು ವಿರೋಧಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ, ಮೋದಿ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಮತ್ತು ಭೂಕಂಪ ಪರಿಸ್ಥಿತಿಗಳನ್ನು ನಿಭಾಯಿಸಿದ ರೀತಿಗೆ ಪ್ರಶಂಸಿಸಿದ್ದ ಅಲ್ಲಿನ ಜನ, ತಾವೂ ಭಾರತದ ಭಾಗವಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ನೆನೆಯಬಹುದು. (ಎಎನ್ಐ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಶೇ 12.5 ವೇತನ ಹೆಚ್ಚಳಕ್ಕೆ ಒಪ್ಪಿಗೆ

ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ.ಬಸ್ ಮುಷ್ಕರ ಅಂತ್ಯಗೊಂಡಿದೆ.

ವೇತನ ಹೆಚ್ಚಳವೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕಿಳಿದಿದ್ದ ಸಾರಿಗೆ ನೌಕರರಿಗೆ ಶೇಕಡಾ 12.5 ರಷ್ಟು ವೇತನ ಹೆಚ್ಚಳ ಮಾಡಲು ಸರ್ಕಾರ ಒಪ್ಪಿಕೊಂಡ ಬೆನ್ನಲ್ಲಿಯೇ ಮುಷ್ಕರವನ್ನು ಹಿಂಪಡೆಯಲಾಗಿದೆ.

ಆದರೆ ಇಂದು ಬೆಳಿಗ್ಗೆ 11:30 ಕ್ಕೆ ಸಾರಿಗೆ ಭವನದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನೌಕರರ ಉಳಿದ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಂಟಿ ಕ್ರಿಯಾ ಸಮಿತಿಯ ಪ್ರಮುಖ ಅನಂತಸುಬ್ಬರಾವ್, ತಕ್ಷಣದಿಂದಲೇ ಸಾರಿಗೆ ಮುಷ್ಕರವನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದರು. ನಮ್ಮ ಬೇಡಿಕೆಯನ್ನು ಸರ್ಕಾರ ಒಂದು ಮಟ್ಟದಲ್ಲಿ ಒಪ್ಪಿಕೊಂಡಿದೆ. ಅದೇ ರೀತಿ ನಾವು ಮುಂದಿಟ್ಟಿರುವ ಹಲವು ಬೇಡಿಕೆಗಳನ್ನು ಪರಿಶೀಲಿಸಿ ಆದಷ್ಟು ಬೇಗ ಪರಿಹರಿಸುವುದಾಗಿ ಹೇಳಿದೆ ಎಂದರು.

ಮುಖ್ಯಮಂತ್ರಿ ಪುತ್ರನ ಆರೋಗ್ಯ ಸ್ಥಿರ

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಅವರಿಗೆ ಜರ್ಮನಿಯ ಅಂಟ್ರೆಪ್ ಎಂಬ ನಗರದಲ್ಲಿ ತುರ್ತು ಶಸ್ತ್ರ ಚಿಕಿತ್ಸೆಯಾಗಿದ್ದು, ಆರೋಗ್ಯದಲ್ಲಿ ಚೇತರಿಗೆ ಕಂಡು ಬಂದಿದೆ.

ಸ್ನೇಹಿತರ ಜತೆಗೂಡಿ ಜರ್ಮನಿ ಪ್ರವಾಸ ಕೈಗೊಂಡಿದ್ದ ರಾಕೇಶ್ ಅವರಿಗೆ ಹಠಾತ್ ಆಗಿ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ರಾಕೇಶ್, ಪ್ಯಾಂಕ್ರಿಯಾಸ್‍ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಚಿಕಿತ್ಸೆ ಪಡೆದು ಅವರ ಅರೋಗ್ಯ ಸ್ಥಿತಿ ಸುಧಾರಣೆಯಾಗಿತ್ತು.

ಆದರೆ ಜರ್ಮನಿಗೆ ತೆರಳಿದ ಸಂದರ್ಭದಲ್ಲೇ ಅನಾರೋಗ್ಯ ಮರುಕಳಿಸಿದೆ. ಪರಿಣಿತ ವೈದ್ಯರು ಅವರ ಆರೋಗ್ಯ ಪರಿಶೀಲಿಸಿದ ನಂತರ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಲ್ಲದೆ ಅವರ ಪರಿಸ್ಥಿತಿ ಮಾಹಿತಿಯನ್ನು ಅವರ ಆರೋಗ್ಯ ಸ್ಥಿತಿ ಕುರಿತು ಅಲ್ಲಿನ ರಾಯಭಾರಿ ಮೂಲಕ ಭಾರತದ ರಾಯಭಾರಿಗೆ ರವಾನೆ ಮಾಡಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದೆಹಲಿ ಪ್ರವಾಸ ರದ್ದು ಮಾಡಿ ತಮ್ಮ ಪತ್ನಿ ಹಾಗೂ ಮತ್ತೊಬ್ಬ ಪುತ್ರ ಡಾ.ಯತೀಂದ್ರ ತಮ್ಮ ಕುಟುಂಬದ ವೈದ್ಯಕೀಯ ಸಲಹೆಗಾರ ಡಾ.ರವಿ ಹಾಗೂ ಮತ್ತೊಬ್ಬ ತಜ್ಞರನ್ನು ಜರ್ಮನಿಗೆ ಕಳುಹಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆ ಹಾಗೂ ಪುತ್ರನ ಆರೈಕೆಗಾಗಿ ಕೇಂದ್ರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನುಮುಖ್ಯಮಂತ್ರಿ ಸಂಪರ್ಕಿಸಿದಾಗ ಸ್ಪಂದಿಸಿದ ಸಚಿವರು ತಕ್ಷಣವೇ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಜತೆ ಸಂಪರ್ಕ ಬೆಳೆಸಿ ಆರೋಗ್ಯ ಸೇವೆ ಮತ್ತು ಕುಟುಂಬ ವರ್ಗ ತಕ್ಷಣ ಅಲ್ಲಿ ತೆರಳಲು ಅಗತ್ಯವಾದ ನೆರವು ಕಲ್ಪಿಸಿದರು.

ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದರೆ ಸಿಂಗಪುರದ ಎಲಿಜಬೆತ್ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ ಇದೆ.

 ಗೋಮಾಂಸ ಹೊಂದಿದ್ದ ಆರೋಪದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ

ಗೋ ಮಾಂಸವನ್ನು ಅಕ್ರಮವಾಗಿಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ರೈಲ್ವೇ ನಿಲ್ದಾಣವೊಂದರಲ್ಲಿ ನಡೆದಿದೆ. ಪೊಲೀಸರ ಸಮ್ಮುಖದಲ್ಲೇ ಗೋ ರಕ್ಷಣಾ ಕಾರ್ಯಕರ್ತರ ಗುಂಪು ಈ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿ ನಂತರ ಈ ವಿಡಿಯೋ ವ್ಯಾಪಕವಾಗಿ ಹರಿಡಿದೆ. ಸುಮಾರು ಅರ್ಧ ತಾಸು ಹಲ್ಲೆ ನಡೆದ ನಂತರ ಪೊಲೀಸರು ಈ ಮಹಿಳೆಯರನ್ನು ವಶಕ್ಕೆ ಪಡೆದರು. ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಅದು ಎಮ್ಮೆಯ ಮಾಂಸ ಎಂದು ತಿಳಿದು ಬಂದಿದೆ.

ಈ ಘಟನೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದ್ದು, ಬಿಎಸ್ಪಿ ನಾಯಕಿ ಕೆಂಡಾಮಂಡಲವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಉತ್ತರಾಖಂಡದಲ್ಲಿ ಚೀನಾ ಅಕ್ರಮವಾಗಿ ಒಳನುಸುಳುವಿಕೆ ಮಾಡಿದೆ: ಹರೀಶ್ ರಾವತ್

ಇತ್ತೀಚೆಗೆ ಚೀನಾದ ಸೇನಾಪಡೆಗಳು ಉತ್ತರಾಖಂಡದ ಚಿಮೋಲಿ ಜಿಲ್ಲೆಯಲ್ಲಿ ಅಕ್ರಮವಾಗಿ ನುಸುಳುವಿಕೆ ಮಾಡಿವೆ ಎಂಬ ವರದಿಗಳು ನಿಜ ಎಂದಿದ್ದಾರೆ ಮುಖ್ಯಮಂತ್ರಿ ಹರೀಶ್ ರಾವತ್. ಈ ಬಗ್ಗೆ ಹರೀಶ್ ರಾವತ್ ಬುಧವಾರ ಹೇಳಿದ್ದಿಷ್ಟು:

‘ಚೀನಾ ಸೇನಾ ಪಡೆಗಳು ಗಡಿ ದಾಟಿ ಬಂದಿದ್ದು ನಿಜ. ಆದರೆ, ಅಲ್ಲಿದ್ದ ಕಾಲುವೆಯನ್ನು ಮುಟ್ಟಿಲ್ಲ. ನಮ್ಮ ಗಡಿ ಭಾಗ ಶಾಂತಿಯುತವಾಗಿದ್ದು, ಈ ಘಟನೆ ಆತಂಕದ ವಿಚಾರವಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಕೇಳಿಕೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ.’

ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು, ಇದು ಅಕ್ರಮ ಒಳನುಸುಳುವಿಕೆಯೋ ಅಥವಾ ಅಲ್ಲವೊ ಎಂಬುದನ್ನು ಸರ್ಕಾರ ಪರಿಶೀಲಿಸುತ್ತದೆ. ಈ ಬಗ್ಗೆ ವರದಿ ಪಡೆಯಲಾಗುವುದು ಎಂದರು.

Leave a Reply