ಮೋದಿ ಅವರನ್ನು ಕೊಲ್ಲಲು ಬಂದಿದ್ದ ಜುಂದಲ್ ಅಪರಾಧಿ ಎಂದು ಘೋಷಿಸಿದ ಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ಲಷ್ಕರೆ ತೊಯ್ಬಾ ಕಾರ್ಯನಿರ್ವಾಹಕ ಮತ್ತು 26/11 ಉಗ್ರರ ದಾಳಿಯ ರೂವಾರಿ ಸೈಯದ್ ಜಬಿವುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ 2006 ರ ಔರಂಗಬಾದ್ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ತಪ್ಪಿತಸ್ಥ ಎಂದಿದೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ ವಿಶೇಷ ನ್ಯಾಯಾಲಯ (ಎಂಸಿಒಸಿಎ).

‘2002 ರ ಗುಜರಾತ್ ಗಲಭೆ ಪ್ರಕರಣದ ನಂತರ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ವಿಎಚ್ಪಿ ನಾಯಕ ಪ್ರವೀಣ್ ತೊಗಾಡಿಯಾ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಈ ಪ್ರಕರಣದಲ್ಲಿ ಜುಂದಾಲ್ ಜತೆಗೆ ಇತರೆ 11 ಮಂದಿ ತಪ್ಪಿತಸ್ಥರಾಗಿದ್ದಾರೆ’ ಎಂಬುದು ನ್ಯಾಯಾಲಯದ ತೀರ್ಪು. ಉಳಿದ 10 ಮಂದಿಯನ್ನು ನ್ಯಾಯಾಲಯ ನಿರಪರಾಧಿ ಎಂದಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟಿಸಬೇಕಿದೆ.

ಪ್ರಕರಣ ಹಿನ್ನೆಲೆ..

2006 ರ ಮೇ 8 ರಂದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಪಡೆ ಶಂಕಿತ ಉಗ್ರರ ಮಾಹಿತಿ ಮೇರೆಗೆ ಔರಂಗಬಾದ್ ಸಮೀಪದಲ್ಲಿರುವ ಚಂದ್ವಾಡ್ – ಮನ್ಮದ್ ಹೈವೇಯಲ್ಲಿ ಟಾಟಾ ಸುಮೋ ಹಾಗೂ ಇಂಡಿಕಾ ಕಾರುಗಳನ್ನು ಬೆನ್ನಟ್ಟಿತ್ತು. ನಂತರ ಮೂವರು ಶಂಕಿತ ಉಗ್ರರನ್ನು ಬಂಧಿಸಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳು 30 ಕೆ.ಜಿ ಆರ್ ಡಿ ಎಕ್ಸ್, 10 ಎಕೆ47 ಬಂದೂಕು, 3,200 ಬುಲೆಟ್ ಗಳನ್ನು ವಶಪಡಿಸಿಕೊಂಡಿದ್ದರು. ಇಂಡಿಕಾ ಕಾರನ್ನು ಸ್ವತಃ ಜುಂದಲ್ ಚಲಾಯಿಸುತ್ತಿದ್ದ ಎಂಬುದು ಸಾಬೀತಾಗಿದೆ.

ಪ್ರಕರಣದ ಕೆಲ ದಿನಗಳ ನಂತರ ತಪ್ಪಿಸಿಕೊಂಡ ಜುಂದಾಲ್, ಮಾಲೆಗಾಂವ್ ಮೂಲಕ ಬಾಂಗ್ಲಾದೇಶಕ್ಕೆ ತೆರಳಿದ್ದ. ಅಲ್ಲಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. 2012ರಲ್ಲಿ ಸೌದಿ ಅರೆಬಿಯಾದಲ್ಲಿ ಈತನನ್ನು ಹಿಡಿದು ಭಾರತಕ್ಕೆ ಹಸ್ತಾಂತರಿಸಲಾಯಿತು. 2013ರಲ್ಲಿ ವಿಶೇಷ ನ್ಯಾಯಾಲಯವನ್ನು ರಚಿಸಿ 22 ಬಂಧಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿ ವಿಚಾರಣೆ ನಡೆಸಲಾಗಿತ್ತು.

Leave a Reply