ಹೌದೇನು ಇದು ಬರಿಯ ಕಲ್ಲು ತೂರಾಟ? ಹಾಗೆಂದು ನಂಬಿದೊಡನೆ ಜಮ್ಮು-ಕಾಶ್ಮೀರವನ್ನು ಕಳೆದುಕೊಳ್ಳಲಿದೆ ಭಾರತ!

(ಚಿತ್ರಕೃಪೆ- ರಾಯಿಟರ್ಸ್)

author-chaitanya‘ಬಹುಶಃ ಬುರ್ಹನ್ ವಾನಿ ಎಂಬ ಉಗ್ರನನ್ನು ಕೊಲ್ಲುವುದಕ್ಕಿಂತ ಜೀವಂತ ಹಿಡಿದಿದ್ದರೆ ಕಣಿವೆಯಲ್ಲಿ ಹಿಂಸಾಚಾರ ಆಗುತ್ತಿರಲಿಲ್ಲವೇನೋ…’

‘ನಾವು ಕಾಶ್ಮೀರಿ ಮುಸ್ಲಿಮರ ಹೃದಯ ಗೆಲ್ಲುವುದಕ್ಕೆ ನೋಡಬೇಕು. ಅದರ ಮೊದಲ ಭಾಗವಾಗಿ ಜಮ್ಮು-ಕಾಶ್ಮೀರದಲ್ಲಿ ಸೇನೆಯ ಉಪಸ್ಥಿತಿ ಕಡಿಮೆ ಮಾಡಬೇಕು..’

ಹಿಂಗೆಲ್ಲ ಸುದ್ದಿವಾಹಿನಿಗಳಲ್ಲಿ ಕುಳಿತು ಮೂರ್ಖತನದ ಪರಮಾವಧಿಯನ್ನು ಹೆಮ್ಮೆಯಿಂದ ಪ್ರದರ್ಶಿಸಿಕೊಳ್ಳುವ, ಇದನ್ನೇ ಉದಾರವಾದ ಎಂದು ಲೇಬಲ್ ಮಾಡಿಕೊಳ್ಳುತ್ತಿರುವವರ ನಡುವೆ ನಿಜಕ್ಕೂ ಆಗುತ್ತಿರುವುದೇನು?

– ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಚೀನಾ ಮತ್ತು ಪಾಕಿಸ್ತಾನಗಳು ಜಂಟಿಯಾಗಿ ಸಮರಾಭ್ಯಾಸ ನಡೆಸುತ್ತಿರುವ ವರ್ತಮಾನ ವಾರದ ಹಿಂದಷ್ಟೇ ಚೀನಾದ ‘ಪೀಪಲ್ಸ್ ಡೈಲಿ’ಯಲ್ಲಿ ವರದಿಯಾಗಿದೆ.

– ಉಗ್ರ ಬುರ್ಹನ್ ನನ್ನು ಅಕಸ್ಮಾತ್ ದಾರಿ ತಪ್ಪಿದವ ಎಂಬಂತೆ ಬಿಂಬಿಸುವ ಸರ್ಕಸ್ಸಿನಲ್ಲಿ ಈ ಮೇಲಿನಂತೆ ನಮ್ಮ ಮಾಧ್ಯಮದ ಒಂದು ವರ್ಗ ಪ್ರಶ್ನೆ ಮಾಡಿಕೊಂಡಿದ್ದರೆ, ಅತ್ತ ಪಾಕಿಸ್ತಾನಕ್ಕೆ ಮಾತ್ರ ಈ ವಿಷಯದಲ್ಲಿ ಯಾವ ಮುಜುಗರವೂ ಇಲ್ಲ. ಒಂದು ಕಡೆ ಪಾಕಿಸ್ತಾನ ವಾನಿಯ ಹತ್ಯೆ ಖಂಡಿಸಿ ಅಧಿಕೃತವಾಗಿ ಕರಾಳ ದಿನ ಆಚರಿಸಿದರೆ, ಮುಂಬೈ ದಾಳಿ ಸಂಚುಕೋರ ಎಂದು ಭಾರತಕ್ಕೆ ವಿಚಾರಣೆಗೆ ಬೇಕಿರುವ ಹಫೀಜ್ ಸಯೀದ್ ವಿಡಿಯೋ ಒಂದರಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ- ‘ಎನ್ಕೌಂಟರ್ ನಲ್ಲಿ ಹತ್ಯೆಗೀಡಾಗುವ ಮೊದಲು ಬುರ್ಹಾನ್ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ. ಜಮ್ಮು-ಕಾಶ್ಮೀರದಲ್ಲಿ ಸಕ್ರಿಯವಾಗಿರುವ ದುಖ್ತರನ್ ಮಿಲ್ಲತ್ ಸಂಘಟನೆಯ ಆಸಿಯಾ ಅಂದ್ರಾಬಿ ಜತೆಗೂ ನಿಕಟ ಸಂಪರ್ಕವಿದೆ.’

ಅಂದಹಾಗೆ ಯಾರೀ ಅಸಿಯಾ ಅಂದ್ರಾಬಿ? ಆಗಸ್ಟ್ 14ರಂದು ಕಾಶ್ಮೀರದ ನಾನಾ ಕಡೆ ಪಾಕಿಸ್ತಾನದ ಧ್ವಜಾರೋಹಣ ಮಾಡುತ್ತ, ಬುರ್ಖಾ ಹಾಕದ ಮಹಿಳೆಗೆ ಆ್ಯಸಿಡ್ ದಾಳಿ ಮಾಡುವುದೂ ತಪ್ಪಲ್ಲ ಎಂಬ ಮೂಲಭೂತವಾದವನ್ನು ಪ್ರತಿಪಾದಿಸುತ್ತಿರುವಾಕೆ.

ಹೀಗೆ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ತನ್ನ ಸೇನೆಯ ಉಪಸ್ಥಿತಿ ಇಲ್ಲದೆಯೂ ಪರೋಕ್ಷವಾಗಿ ಯುದ್ಧ ಸಾರಿರುವ ಸಂದರ್ಭದಲ್ಲಿ, ಅದರ ಬೆನ್ನಿಗೆ ಚೀನಾದಂಥ ಮಿಲಿಟರಿ ಶಕ್ತ ರಾಷ್ಟ್ರ ನಿಂತಿರುವ ವಿಷಯ ಕಣ್ಣಿಗೆ ರಾಚುತ್ತಿದ್ದಾಗಲೂ ಇಲ್ಲಿ ನಮ್ಮ ಮಾಧ್ಯಮದ ಒಂದು ವರ್ಗ ಹಾಗೂ ತಥಾಕಥಿತ ಬುದ್ಧಿಜೀವಿಗಳದ್ದು ಕಲ್ಲು ತೂರುತ್ತಿರುವ ಪಡೆಗೆ ಕಬಾಬು ತಿನ್ನಿಸಿ ಅವರನ್ನು ಪ್ರೀತಿಸಿ ಸಮಸ್ಯೆ ಬಗೆಹರಿಸಬೇಕು ಎಂಬ ಘನಘೋರ ಆಶಯ. ನಾಳೆ ಪಾಕಿಸ್ತಾನ ನಮ್ಮ ಮೇಲೆ ದಂಡೆತ್ತಿ ಬಂದರೂ, ‘ಛೇ, ಛೆ, ಅಷ್ಟು ಪುಟ್ಟ ದೇಶದ ಮೇಲೆ ಭಾರತದಂಥ ಜವಾಬ್ದಾರಿಯುತ ಪ್ರಜಾಪ್ರಭುತ್ವ ರಾಷ್ಟ್ರ ಯುದ್ಧ ಮಾಡೋದು ಸರಿ ಅಲ್ಲ’ ಎನ್ನುತ್ತಾರೇನೋ ಈ ಮಹಾನುಭಾವರು.

ಸಿಲ್ಲಿ ಪ್ರಶ್ನೆಗಳಿಗೊಂದು ಮಿತಿ ಬೇಡವೇ? ‘ದೆಹಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗಳಾದಾಗ ಅಶ್ರುವಾಯು ಪ್ರಯೋಗವಾಗುತ್ತದೆ. ಆದರೆ ಕಾಶ್ಮೀರಿಗಳ ಮೇಲೇಕೆ ಸೀಸಯುಕ್ತ ಪೆಲ್ಲೆಟ್ ಗನ್ ಪ್ರಯೋಗ?’ ಎನ್ನುವವರಿಗೆ ‘ದೆಹಲಿ, ಮುಂಬೈಗಳಲ್ಲಿ ಪ್ರತಿಭಟನೆ ನಡೆಸುವವರೆಲ್ಲ ಬ್ಯಾಗುಗಟ್ಟಲೇ ಕಲ್ಲುಗಳನ್ನು ತುಂಬಿಕೊಂಡು ಬಂದು ಭದ್ರತಾ ಪಡೆಗಳ ತಲೆ ಒಡೆಯುವಂತೆ ಸುರಿಮಳೆಗರೆಯುವುದಿಲ್ಲ…ಇಲ್ಲಿನ ಪ್ರತಿಭಟನಕಾರರೂ ಹಾಗೆ ಮಾಡಿದ್ದರೆ ಪ್ರತಿಕ್ರಿಯೆ ಪೆಲ್ಲೆಟ್ ಗನ್ನುಗಳೇ ಆಗಿರುತ್ತಿದ್ದವು’ ಎಂಬ ಉತ್ತರ ಗೊತ್ತಿಲ್ಲ ಎಂದುಕೊಳ್ಳಬೇಡಿ. ಇದೊಂಥರ ಗೊತ್ತಿದ್ದೂ ಗೊತ್ತಿದ್ದೂ ‘ಮಾನವ ಹಕ್ಕು’ಗಳ ಹೆಸರಲ್ಲಿ ನಡೆಸುವ ವಿಕೃತಿ.

ಕಣಿವೆಯಲ್ಲಿ ಅಬ್ಬಬ್ಬಾ ಎಂದರೆ ನೂರು ಉಗ್ರರಿದ್ದಿರಬೇಕು. ಅವರನ್ನು ನಿಯಂತ್ರಿಸಲು ಸಾವಿರಗಟ್ಟಲೇ ಸಂಖ್ಯೆಯಲ್ಲಿ ಸೈನ್ಯದ ಉಪಸ್ಥಿತಿ ಬೇಕೇ ಎನ್ನುತ್ತ ತಾವೇನೋ ಮಹಾ ತಾರ್ಕಿಕ ಪ್ರಶ್ನೆ ಕೇಳಿಬಿಟ್ಟೆವು ಅಂತ ಎದೆ ಹಿಗ್ಗಿಸಿಕೊಳ್ಳುವವರು, ಇತಿಹಾಸದ ನೆನಪಲ್ಲಿ ತಮ್ಮ ತಲೆಯನ್ನೂ ಸ್ವಲ್ಪವಾದರೂ ಹಿಗ್ಗಿಸಿಕೊಳ್ಳುವ ಅಗತ್ಯವಿದೆ.

ಸ್ವಾತಂತ್ರ್ಯ ಘೋಷಣೆಯಾಗಿ ದೇಶವಿಭಜನೆ ಆದ ಬೆನ್ನಲ್ಲೇ ಪಾಕಿಸ್ತಾನದ ಕಡೆಯಿಂದ ದಾಳಿಯಾಯಿತಲ್ಲ.. ಆಗೇನು ಪಾಕಿಸ್ತಾನದವರು ಸೇನಾ ಕಾರ್ಯಾಚರಣೆ ಮಾಡಿದ್ದರು ಎಂದುಕೊಂಡಿರಾ? ಪಾಕಿಸ್ತಾನದ ಪುಂಡರಿಗೆ ಅಂದು ಅವರ ಸೇನೆ ಇಷ್ಟೇ ಹೇಳಿತ್ತು- ‘ಸಿಕ್ಕಷ್ಟು ಆಸ್ತಿ ದೋಚಿಕೊಳ್ಳಿ. ಸಿಕ್ಕ ಹೆಣ್ಣುಗಳನ್ನೆಲ್ಲ ಹೇಗೆಬೇಕೋ ಹಾಗೆ ಭೋಗಿಸಿ..’ ಅವತ್ತು ಅತ್ಯಾಚಾರ ಮತ್ತು ರಕ್ತಪಾತಗಳಲ್ಲಿ ಪುಂಡರು ನೆನೆಸಿದ್ದ ಜಾಗಗಳನ್ನೇ ಇಂದು ಆಜಾದ್ ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳೆಂದು ಗುರುತಿಸಲಾಗುತ್ತಿದೆ. ‘ಸ್ಲೆಂಡರ್ ವಾಸ್ ದಿ ಥ್ರೆಡ್’ ಪುಸ್ತಕದಲ್ಲಿ, 1947ರ ಯುದ್ಧದಲ್ಲಿ ಭಾಗವಹಿಸಿದ್ದ ಲೆಫ್ಟಿನೆಂಟ್ ಜನರಲ್ ಎಲ್. ಪಿ. ಸೆನ್ ವಿವರಿಸುತ್ತಾರೆ- ‘ಸೇನಾ ನಮೂನೆಯಲ್ಲೇ ಪಾಕಿಸ್ತಾನವೇನಾದರೂ ಆ ಕಾರ್ಯಾಚರಣೆ ನಡೆಸಿದ್ದರೆ, ಅವತ್ತಿನ ಸ್ಥಿತಿಯಲ್ಲಿ ಭಾರತೀಯ ಸೇನೆ ಕಾಶ್ಮೀರ ತಲುಪುವಷ್ಟರಲ್ಲಿ ಶ್ರೀನಗರ ಅವರ ವಶವಾಗಿರುತ್ತಿತ್ತು. ಆದರೆ ಬಂದವರು ದಾಳಿಕೋರರು. ಸಿಕ್ಕ ಹೆಂಗಸರನ್ನೆಲ್ಲ ನಿರ್ದಯವಾಗಿ ಭೋಗಿಸಿ, ಒಂದು ಹಂತದಲ್ಲಿ ಶೇಖರಿಸಿದ್ದ ಸಂಪತ್ತನ್ನೆಲ್ಲ ಇಟ್ಟು ಬರುವುದಕ್ಕೆ ಹಿಂತಿರುಗಿದ್ದರು. ಹಾಗಲ್ಲದಿದ್ದರೆ ನಕ್ಷೆ- ಮಾಹಿತಿಗಳ್ಯಾವವೂ ಇಲ್ಲದ ಅಂದಿನ ಸ್ಥಿತಿಯಲ್ಲಿ ಸೇನೆ ಅಲ್ಲಿಗೆ ತಲುಪುವುದರಲ್ಲಿಯೇ ಎಲ್ಲ ಮುಗಿದಿರುತ್ತಿತ್ತು…’

ಸೇನಾಯುದ್ಧವನ್ನಲ್ಲದೇ ಜನರು ಹಾಗೂ ಮತಾಂಧರನ್ನು ಅಸ್ತ್ರವಾಗಿಸಿಕೊಂಡು ಜಮ್ಮು-ಕಾಶ್ಮೀರವನ್ನು ವಶಪಡಿಸಿಕೊಳ್ಳುವುದಕ್ಕೆ ಪಾಕಿಸ್ತಾನದ ಯತ್ನ ಅದು ಮೊದಲಿನದ್ದೂ ಅಲ್ಲ, ಕೊನೆಯೂ ಇಲ್ಲ. ಈ ಬಗ್ಗೆ ಕುರುಡಾಗಿದ್ದುಕೊಂಡು- ‘ಅಯ್ಯೋ ನಮ್ಮವರೇ ಆದ ಕಾಶ್ಮೀರಿಗರ ಮೇಲೆ ಪೆಲ್ಲೆಟ್ ಗನ್ ಪ್ರಯೋಗ ಬೇಡ’ ಎನ್ನುವುದಾದರೆ ಭಾರತ ಇನ್ನೊಂದಿಷ್ಟು ಅತ್ಯಾಚಾರ- ಅನಾಚಾರಕ್ಕೆ ಮೈ ಒಡ್ಡಿಕೊಳ್ಳಬೇಕೇ?

ಪಂಡಿತ ಸಮುದಾಯದ ಮೇಲೆ ಅತ್ಯಾಚಾರ- ಹತ್ಯೆಗಳನ್ನೆಸಗಿ ಅವರನ್ನು ನಿರಾಶ್ರಿತರನ್ನಾಗಿಸಿದ್ದರಲ್ಲೂ ಇದ್ದದ್ದು ಧರ್ಮಕಾರಣವೇ. ಪಾಕಿಸ್ತಾನಿ ಸೇನೆ ಬಂದು ಆ ಕಾರ್ಯ ಎಸಗಿತೇನು? ‘ಪಂಡಿತರ ಹೊರತಾಗಿ, ಅವರ ಹೆಂಡಿರೊಂದಿಗೆ ಪಾಕಿಸ್ತಾನ ಸೇರುವೆವು’ ಅಂತ ಉನ್ಮಾದ ಮೆರೆದವರು ಇದೇ ‘ಮುಗ್ಧ ಮನೋಹರ’ ಕಾಶ್ಮೀರಿಗಳೇ ಅಲ್ಲವೇ?

ಪಾಕಿಸ್ತಾನದ ಇನ್ನೊಂದು ವಿಫಲ ಪ್ರಯತ್ನವಾದ ‘ಆಪರೇಷನ್ ಜಿಬ್ರಾಲ್ಟರ್’ ವಿವರಗಳನ್ನು ಓದಿದರೂ ಇದೇ ಮನದಟ್ಟಾಗುತ್ತದೆ. ಅಲ್ಲಿಯೂ ಧರ್ಮಕ್ಕಾಗಿ ಸತ್ತು ಸ್ವರ್ಗದಲ್ಲಿ 72 ಕನ್ಯೆಯರನ್ನು ಪಡೆಯುವ ಉನ್ಮಾದದಲ್ಲಿದ್ದ 30 ಸಾವಿರ ಮುಜಾಹಿದೀನ್ ಗಳನ್ನು ಒಟ್ಟುಗೂಡಿಸಿ ಅವರಲ್ಲಿ ಹಲವರನ್ನು ಗಡಿ ಒಳಕ್ಕೆ ನುಸುಳಿಸಿತು. ಇವರೆಲ್ಲ ನಂತರ ಒಟ್ಟಾಗಿ ವಿಧ್ವಂಸಗಳನ್ನು ಸೃಷ್ಟಿಸುವುದು, ಇದಕ್ಕೆ ಸ್ಥಳೀಯ ಮುಸ್ಲಿಮರ ಸಹಾಯ ಪಡೆಯುವುದು.. ಮುಖ್ಯವಾಗಿ ಜಮ್ಮುವಿನಿಂದ ಹೊರಟು ಶ್ರೀನಗರ ಮಾರ್ಗವಾಗಿ ಲೇಹ್ ಕಲುಪುವ ಹೆದ್ದಾರಿ ವಶಪಡಿಸಿಕೊಂಡುಬಿಟ್ಟರೆ, ಶಾಂತಿಪ್ರಿಯರ ನೆಲ ಲಢಾಕಿನಲ್ಲೂ ಅಂತಃಕಲಹ ಹುಟ್ಟುಹಾಕಬಹುದು ಎಂಬುದವರ ಎಣಿಕೆಯಾಗಿತ್ತು. ಆದರೆ ಸೇನೆಗೆ ಈ ಸುಳಿವು ಮೊದಲೇ ಸಿಕ್ಕು ಮುಜಾಹಿದೀನ್ ಗಳನ್ನು ಹುಡುಕಿ ಹೊಡೆಯಲಾಯಿತು, ಹಲವರನ್ನು ಹಿಂದಕ್ಕೆ ಅಟ್ಟಲಾಯಿತು.

ಇವೆಲ್ಲ ಅನುಭವಗಳ ಮೇಲೆ ನಿಂತು ಯೋಚಿಸಿದ್ದೇ ಆದರೆ ಇವತ್ತಿಗೆ ಜಮ್ಮು-ಕಾಶ್ಮೀರದಲ್ಲಿ ಅದಾಗಲೇ ಯುದ್ಧ ಶುರುವಾಗಿದೆ ಎಂಬ ವಾಸ್ತವ ಗೊತ್ತಾಗುತ್ತದೆ. ಅಲ್ಲಿ ಪಾಕಿಸ್ತಾನಿ ಸೇನೆಯ ಉಪಸ್ಥಿತಿ ಇಲ್ಲದೇ ಇರಬಹುದು. ಆದರೆ ಭಾರತದ ಸಮಗ್ರತೆ, ಸಾರ್ವಭೌಮತ್ವಕ್ಕೆ ಸವಾಲು ಹಾಕಿರುವ ಸಮರವಂತೂ ಹೌದಿದು. ಇಂಥ ಸಂದರ್ಭದಲ್ಲಿ ಸೇನೆಗೆ, ಸರ್ಕಾರಕ್ಕೆ ಆತುಕೊಂಡು ಆತ್ಮಬಲ ಹೆಚ್ಚಿಸಬೇಕಿರುವ ಹೊಣೆ ಎಲ್ಲ ಪ್ರಜೆಗಳದ್ದು. ಜಮ್ಮು-ಕಾಶ್ಮೀರವೆಂಬ ಮುಕುಟವನ್ನೇ ಸೆಳೆಯಲು ಪಾಕಿಸ್ತಾನ ಹೊರಟಿರುವಾಗ, ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಹಲ್ಲು ಕಿಸಿದುಕೊಂಡು, ಕಾಶ್ಮೀರಿಗಳನ್ನು ಪ್ರೀತಿಸಬೇಕೆಂಬ ಉಪದೇಶ ನೀಡುತ್ತಿರುವವರನ್ನು ಇತಿಹಾಸ ಹೇಗೆ ನೆನಪಿಡಲಿದೆ?

ವಿಸ್ತಾರ- ಜನಸಂಖ್ಯೆಗಳಲ್ಲಿ ತುಲನಾತ್ಮಕವಾಗಿ ಕಡಿಮೆ ಇದ್ದರೂ ಕೇಂದ್ರದ ಅತಿ ಹೆಚ್ಚಿನ ಅನುದಾನ ತಿಂದುಕೊಂಡಿರುವ ರಾಜ್ಯ ಜಮ್ಮು-ಕಾಶ್ಮೀರ. ಅದರಲ್ಲೂ ಶ್ರೀನಗರ ಕೇಂದ್ರಿತ ಕಾಶ್ಮೀರಿಗಳು. ಅಂದಮೇಲೆ ಇವರ ಮೇಲೆ ಪ್ರೀತಿ ಸಾಬೀತುಪಡಿಸುವ ಭಾರವನ್ನು ಇತರೇ ಭಾರತೀಯರಿಗೇಕೆ ಹೊರೆಸುತ್ತೀರಿ? ತಾವು ಪಾಕಿಸ್ತಾನಿಯರ ಆಟಕ್ಕೆ ದಾಳವಾಗುತ್ತೇವೆ ಎಂದಾದರೆ ಅದಕ್ಕೆ ತಕ್ಕ ಪರಿಣಾಮವನ್ನೂ ಎದುರಿಸಲೇಬೇಕಾಗುತ್ತದೆ. ಪೆಲ್ಲೆಟ್ ಗಾಯ ತೋರಿ ಅನುಕಂಪಕ್ಕಾಗಿ ಚೀರಿದರೇನು ಬಂತು? ಭದ್ರತಾ ಪಡೆಯೇನು ಇವರ ಮನೆಗಳಿಗೆ ಹೊಕ್ಕಿ ಹೊಡೆದಿಲ್ಲ. ರಸ್ತೆಯಲ್ಲಿ ನಿಂತು ಕಲ್ಲು ತೂರಿ ಭದ್ರತಾ ಪಡೆಯ ತಲೆ ಒಡೆಯುವವರಿಗೆ ಇನ್ನೇನು ಗುಲಾಬಿ ಹೂವು ಕೊಡಲಾಗುವುದೇ?

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಸ್ವತ್ತು, ಜಾಗ ಖಾಲಿ ಮಾಡಿ ಅಂತ ಪಾಕಿಸ್ತಾನದ ವಿರುದ್ಧ ಇಷ್ಟು ಹೊತ್ತಿಗೆಲ್ಲ ಭಾರತದಲ್ಲಿ ಜನಾಭಿಪ್ರಾಯವೊಂದು ರೂಪುಗೊಳ್ಳಬೇಕಿತ್ತು. ಆದರೆ ಜಮ್ಮು-ಕಾಶ್ಮೀರವೆಂಬುದು ಅದೇನೋ ಕಾನೂನು ಪಾಲನೆ ಸಮಸ್ಯೆ ಎದುರಿಸುತ್ತಿದೆ ಅಷ್ಟೆ ಎಂಬ ರೀತಿಯಲ್ಲಿ ಭಾರತವನ್ನಿರಿಸುವ ಪ್ರಯತ್ನ ಉದಾರವಾದಿ ಅಭಿಪ್ರಾಯ ನಿರೂಪಕರದ್ದು. ಇದಕ್ಕೆ ಸರಿಯಾಗಿ ಭಾರತದಲ್ಲಿದ್ದುಕೊಂಡೇ ಕಾಶ್ಮೀರದ ಆಜಾದಿಗೆ ಆಗ್ರಹಿಸುತ್ತಿರುವ ಪೊಳ್ಳು ವೈಚಾರಿಕರಿಗೆ ಮಾಧ್ಯಮದ ಪ್ರಚಾರ ವೈಭೋಗ. ಲಢಾಕಿನ ಬೌದ್ಧರು, ಜಮ್ಮುವಿನ ಹಿಂದುಗಳು ಇವರನ್ನೆಲ್ಲ ಕಸದಂತೆ ಕಂಡು, ‘ಅಯ್ಯೋ, ಕಾಶ್ಮೀರಿ ಮುಸ್ಲಿಮರನ್ನು ಭಾರತ ಹತ್ತಿಕ್ಕುತ್ತಿದೆ’ ಎಂಬ ಬೊಬ್ಬೆಯನ್ನೇ ನಿಜವಾಗಿಸಿಬಿಡುವ ಹಂತಕ್ಕೆ ಹೋಗಿಬಿಟ್ಟಿತ್ತು ಈ ಗುಂಪು. ಆದರೀಗ ಮಾಹಿತಿ ಪರ್ವದ ಯುವ ಭಾರತದಲ್ಲಿ ಹೊಸ ವ್ಯಾಖ್ಯಾನ- ಹೊಸ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ‘ಈ ಅತಿ ರಾಷ್ಟ್ರೀಯವಾದ ಬೇಕೇನ್ರಿ ನಮಗೆ’ ಅಂತ ಆಕ್ರೋಶಕ್ಕೆ ಬಿದ್ದಿರುವ ಉದಾರವಾದಿಗಳ ಸಂಕಟ ನಯನಮನೋಹರವಾಗಿದೆ.

ಮೊದಲೆಲ್ಲ ಜನಮತಗಣನೆ ಎಂಬ ಪಂದಪುಂಜಕ್ಕೆ ಪ್ರಜಾಪ್ರಭುತ್ವವಾದದ ಅಂಗಿ ತೊಡಿಸಿ ಹೌದ್ಹೌದು ಎನ್ನಿಸಿಬಿಡುವಲ್ಲಿ ಜೆಎನ್ಯು ಉದಾರ ಸಂತಾನಗಳು ಒಂದು ಹಂತಕ್ಕೆ ಯಶಸ್ವಿಯಾಗಿದ್ದವು. ಈಗ ಚಿದಂಬರಂ, ಜ್ಯೋತಿರಾದಿತ್ಯ ಸಿಂಧಿಯಾ ಇತ್ಯಾದಿ ರಾಜಕೀಯ ಆಟಗಾರರು ಕಾಶ್ಮೀರದಲ್ಲಿ ಜನಮತಗಣನೆ ಅಂತೆಲ್ಲ ವಿವಾದ ತೇಲಿಬಿಟ್ಟರೂ ತಲೆಯಾಡಿಸುವವರು ಯಾರಿಲ್ಲ.

ವಿಶ್ವಸಂಸ್ಥೆ ಪ್ರಸ್ತಾವದಲ್ಲಿ ಜನಮತಗಣನೆ ಆಗಬೇಕಾದರೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಪಾಕಿಸ್ತಾನವು ಸಂಪೂರ್ಣ ಹಿಂತೆಗೆಯಬೇಕು, ನಂತರ ಭಾರತವಲ್ಲಿ ಅಗತ್ಯ ಭದ್ರತಾ ಪಡೆಗಳನ್ನಿರಿಸಬೇಕು ಎಂಬ ಷರತ್ತಿತ್ತು. ಅಲ್ಲದೇ ಅದಕ್ಕೊಂದು ಸಮಯಮಿತಿ ಇತ್ತು. ಹಾಗಲ್ಲದೇ ಹಿಂದುಗಳನ್ನೆಲ್ಲ ಇಲ್ಲವಾಗಿಸಿ, ಜನಸಂಖ್ಯಾರಚನೆಯನ್ನೇ ಬದಲಿಸಿರುವ ಈ ಹೊತ್ತಿನಲ್ಲಿ ಅದ್ಯಾವ ಜನಮತ?- ಇಂಥ ಪ್ರಶ್ನೆಗಳಿಗೆಲ್ಲ ಉದಾರವಾದಿಗಳು ಉತ್ತರಿಸುವುದಿಲ್ಲ.

ಪಾಕಿಸ್ತಾನದ ಜತೆ ಚೀನಾ ಕೈಜೋಡಿಸಿ ಭಾರತದ ಮೇಲೆ ಮಿಲಿಟರಿ ಒತ್ತಡ ರೂಪುಗೊಳಿಸುತ್ತಿರುವುದು, ಕಾಶ್ಮೀರಿ ಮುಸ್ಲಿಮರ ದೊಡ್ಡವರ್ಗವು ಪಾಕಿಸ್ತಾನದ ಪರವಾಗಿಯೇ ಬೀದಿಗಿಳಿದಿರೋದು ಹಾಗೂ ಜಗತ್ತಿನೆದುರು ಪಾಕಿಸ್ತಾನ ತನ್ನ ಬೆಂಬಲವನ್ನು ಮುಕ್ತವಾಗಿ ಸಾರುತ್ತಿರುವುದು ಇವೆಲ್ಲವನ್ನು ನೋಡಿಯೂ ಭಾರತೀಯ ಸೇನೆಯ ವಿರುದ್ಧ, ಉಗ್ರರ ಪರ ಮಾತನಾಡುವವರಿಗೆ ದೇಶದ್ರೋಹಿ ಎಂಬ ಪದವೂ ತುಂಬ ಸೌಮ್ಯವಾಯಿತೇನೋ ಎನಿಸುತ್ತದೆ.

ಅವರ ಕತೆ ಹಾಗಿರಲಿ. ಜಮ್ಮ-ಕಾಶ್ಮೀರದ ಇಂದಿನ ಕುದಿತದ ಎದುರು ನಾವೆಲ್ಲ ನೆನಪಿಡಬೇಕಾದ ಇತಿಹಾಸದ ಚಿತ್ರಗಳು-ಪಾಠಗಳು ತುಂಬ ಸ್ಪಷ್ಟ.

  • ‘ಸಿಕ್ಕಷ್ಟು ಆಸ್ತಿ ದೋಚಿಕೊಳ್ಳಿ. ಸಿಕ್ಕ ಹೆಣ್ಣುಗಳನ್ನೆಲ್ಲ ಹೇಗೆಬೇಕೋ ಹಾಗೆ ಭೋಗಿಸಿ..’ ಸೂತ್ರ ಅನುಸರಿಸಿ 1947ರ ಯುದ್ಧವನ್ನು ಪಾಕ್ ಸೇನೆಯ ಪರ ಮಾಡಿದ ದಾಳಿಕೋರರು.
  • ಜಮ್ಮು-ಕಾಶ್ಮೀರದ ಅಂತಃಕಲಹಕ್ಕೆ ಯತ್ನಿಸಿದ್ದ ಆಪರೇಷನ್ ಜಿಬ್ರಾಲ್ಟರ್.
  • 90ರ ದಶಕದಲ್ಲಿ ‘ಪಂಡಿತರೇ ಕಾಶ್ಮೀರ ಬಿಟ್ಟು ತೊಲಗಿ. ನಾವು ನಿಮ್ಮ ಹೆಂಡತಿಯರ ಜತೆಗೆ ಪಾಕಿಸ್ತಾನ ಸೇರುತ್ತೇವೆ’ ಎಂದು ಮಸೀದಿಗಳ ಮೈಕುಗಳಿಂದ ಹೊರಟ ಫರ್ಮಾನು..

ವಿಷಾದದಿಂದಲೇ ಹೇಳಬೇಕಿದೆ… ಇವತ್ತು ಕಾಶ್ಮೀರದಲ್ಲಿ ಕಲ್ಲು ಹಿಡಿದು ರಕ್ತದೋಕುಳಿಯಾಡುತ್ತಿರುವ ಯುವಕರು ಈ ಮೇಲಿನ ಎಲ್ಲ ವಿಕೃತಿಗಳ ವಾರಸುದಾರಿಕೆ ಹಿಡಿಯಹೊರಟವರು.

Leave a Reply