ಇದು ಆಧಾರ: ತಿರಸ್ಕರಿಸಿದವರಿಂದ ಪುರಸ್ಕಾರ, ಬೇಕೆಂದಿದ್ದವರಿಂದ ಈಗ ಅಪಸ್ವರ!

ಡಿಜಿಟಲ್ ಕನ್ನಡ ಟೀಮ್:

ಮುಂಗಾರು ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಗುರುವಾರ ಹೆಚ್ಚು ಸದ್ದು ಮಾಡಿದ್ದು ಆಧಾರ್ ರಾಜಕೀಯ. ‘ಆಧಾರ್ ಬಿಲ್ ನಮಗೆ ಬೇಡ’ ಎನ್ನುತ್ತಾ ಪ್ರತಿಪಕ್ಷಗಳು ಕೂಗಿ ಗದ್ದಲ ಎಬ್ಬಿಸಿದ ಪರಿಣಾಮ ಕಲಾಪ ಸ್ವಲ್ಪ ಸಮಯಕ್ಕೆ ಮುಂದೂಡಲಾಯ್ತು.

ಆರಂಭದಲ್ಲಿ ಆಧಾರ್ ಪರಿಚಯಿಸಿದಾಗ ವಿಪಕ್ಷದಲ್ಲಿದ್ದ ಬಿಜೆಪಿ ಇದನ್ನು ವಿರೋಧಿಸಿತ್ತಾದರೂ ಅಧಿಕಾರಕ್ಕೆ ಬಂದ ನಂತರ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರೋದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಯುಪಿಎ ಜತೆ ಈ ಯೋಜನೆಯನ್ನು ಜಾರಿಗೆ ತಂದ ತ್ರಿಣಮೂಲ ಕಾಂಗ್ರೆಸ್, ಜೆಡಿಯು, ಸಮಾಜವಾದಿ ಪಕ್ಷ ಹಾಗೂ ಬಿಜೆಡಿ ಪಕ್ಷಗಳು ಈಗ ‘ಆಧಾರ್ ಬಿಲ್ ಬೇಡ’ ಎನ್ನುತ್ತಿವೆ.

‘ಆಧಾರ್ ಕಾರ್ಡ್ ಇಲ್ಲದವರಿಗೆ ಸಬ್ಸಿಡಿಗಳನ್ನು ನೀಡಬೇಡಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡುತ್ತಿದೆ. ದೇಶದಲ್ಲಿ ಶೇ.40 ರಷ್ಟು ಜನ ಆಧಾರ್ ಕಾರ್ಡ್ ಹೊಂದಿಲ್ಲ. ಆಧಾರ್ ಕಾರ್ಡ್ ನಿಂದಾಗಿ ಬಡವರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.’ ಎಂದು ವಾದಿಸಿದ್ರು ಜಿಡಿಯುನ ಶರದ್ ಯಾದವ್. ಇದಕ್ಕೆ ಇತರೆ ಪಕ್ಷಗಳ ನಾಯಕರು ಧ್ವನಿಗೂಡಿಸಿದ್ರು.

ಇದಕ್ಕೆ ಉತ್ತರಿಸಿದ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಹೇಳಿದಿಷ್ಟು:

‘ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿಲ್ಲ. ಪ್ರತಿಯೊಬ್ಬರು ಆಧಾರ್ ಕಾರ್ಡ್ ಪಡೆಯುವವರೆಗೂ ಇದನ್ನು ಕಡ್ಡಾಯವಾಗಿಸಲು ಸಾಧ್ಯವಿಲ್ಲ. ಈ ಬಗ್ಗೆ ಉತ್ತರ ಪಡೆಯಲು ಈ ವಿಷಯ ಪ್ರಸ್ತಾಪಿಸಿದೆವು. ನಮ್ಮ ಪ್ರಕಾರ ಈವರೆಗೂ ಯಾರಿಗೂ ತೊಂದರೆಯಾಗಿಲ್ಲ. ನೇರ ಲಾಭ ವರ್ಗಾವಣೆಗೆ ಆಧಾರ್ ಮುಖ್ಯವಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಹಾಗೂ ಸಂಪನ್ಮೂಲ ಸೋರಿಕೆ ತಡೆಗಟ್ಟಬಹುದು.’

ನಾಯ್ಡು ಅವರ ಉತ್ತರಕ್ಕೆ ಅಸಮಾಧಾನ ತೋರಿದ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದವು. ಪರಿಣಾಮ ಉಪಸಭಾಪತಿ ಪಿ.ಜೆ ಕುರಿಯನ್ ಕಲಾಪವನ್ನು ಮಧ್ಯಾಹ್ನ 12 ಗಂಟೆವರೆಗೂ ಮುಂದೂಡಿದರು.

ಈ ಆಧಾರ್ ಯೋಜನೆಗೆ ಸಂಬಂಧಿಸಿದಂತೆ ಯುಪಿಎ ಅಧಿಕಾರದಲ್ಲಿ ಇದ್ದಾಗ ಎನ್ ಡಿಎ, ಎನ್ ಡಿಎ ಅಧಿಕಾರದಲ್ಲಿರುವಾಗ ಯುಪಿಯ ಪಕ್ಷಗಳು ವಿರೋಧಿಸುತ್ತಿವೆ. ಆರಂಭದಲ್ಲಿ ವಿರೋಧಿಸಿದವರು ಅಧಿಕಾರಕ್ಕೆ ಬಂದ ನಂತರ ಬಿಲ್ ಪಾಸ್ ಮಾಡಿದ್ದಾರೆ. ಇನ್ನು ಈ ಯೋಜನೆ ಹುಟ್ಟಿ ಹಾಕಿದವರೇ ಈಗ ತಗಾದೆ ಎತ್ತಿರುವುದು ವ್ಯಂಗ್ಯವಾಗಿ ಕಾಣುತ್ತಿದೆ.

ಇನ್ನು ಲೋಕಸಭೆಯಲ್ಲಿ, ಕೆಲ ದಿನಗಳ ಹಿಂದೆ ನಾಪತ್ತೆಯಾದ ಭಾರತೀಯ ವಾಯು ಸೇನೆಯ ಎಎನ್-32 ವಿಮಾನದ ಸುಳಿವು ಈವರೆಗೂ ಸಿಕ್ಕಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವರು ಮಾಹಿತಿ ನೀಡಿದರು.

ಉತ್ತರಾಖಂಡದ ಗಡಿಭಾಗದಲ್ಲಿ ಚೀನಾ ಸೇನೆಯ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆಯು ಚರ್ಚೆಯಾಗಿದ್ದು, ಸಮಾಜವಾದಿ ಪಕ್ಷ ಮುಖಂಡ ಮುಲಾಯಮ್ ಸಿಂಗ್ ಯಾದವ್ ಹೇಳಿದ್ದು ಹೀಗೆ:

‘ಚೀನಾದ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು. ಪಾಕಿಸ್ತಾನದ ಜತೆಗಿನ ಸಂಬಂಧ ನಿಭಾಯಿಸಬಹುದು. ಆದರೆ, ಚೀನಾ ಜತೆಗಿನ ಸಂಬಂಧ ನಿಭಾಯಿಸುವುದು ಕಷ್ಟ. ಚೀನಾ ವಿಶ್ವಾಸದ್ರೋಹ ಮಾಡುತ್ತಲೇ ಇರುತ್ತದೆ. ಅವರು ನಮ್ಮ ನೆಲವನ್ನು ಬಿಟ್ಟುಕೊಡುವವರೆಗೂ ನಾವು ಅವರೊಂದಿಗೆ ಮಾತುಕತೆ ನಡೆಸಬಾರದು. ಪಾಕಿಸ್ತಾನವನ್ನು ಬಳಸಿ ಗಡಿ ಪ್ರದೇಶಗಳಲ್ಲಿ ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ. ನಮ್ಮ ಸೇನೆ ದುರ್ಬಲವಾಗಿಲ್ಲ. ಒಂದು ವೇಳೆ ಚೀನಾ ನಮ್ಮನ್ನು ಬೆದರಿಸಿದರೆ, ನಾವು ಎರಡು ಪಟ್ಟು ಹೆಚ್ಚಾಗಿ ಬೆದರಿಸಬೇಕು. ಹೀಗಾಗಿ ಚೀನಾವನ್ನು ಗಂಭೀರವಾಗಿ ಸ್ವೀಕರಿಸಿ.’

Leave a Reply