ಕೇಂದ್ರದ ನಾಲ್ಕನೇ ಚಿನ್ನದ ಬಾಂಡ್ ಹೇಗೆ ಭಿನ್ನ? ಏನಿದರ ವಿಶೇಷ, ಇಡಬಹುದೇ ವಿಶ್ವಾಸ?

authors-rangaswamyಭಾರತ ಸರಕಾರ ಸೆಂಟ್ರಲ್ ಬ್ಯಾಂಕ್ ನ ಸಹಯೋಗದೊಂದಿಗೆ ನಾಲ್ಕನೇ ಬಾರಿ ಚಿನ್ನದ ಬಾಂಡ್ ಬಿಡುಗಡೆ ಮಾಡಿದೆ. ಹಿಂದಿನ ಮೂರು ವಿತರಣೆಗಿಂತ ಹೆಚ್ಚು ಯಶಸ್ಸು ಪಡೆಯುವ ಹುಮ್ಮಸ್ಸು ಸರಕಾರದ್ದು. ಅದು ಸಾಕಾರವಾಗುತ್ತ ? ವಿತರಣೆ ನಂತರದ ಬೆಳವಣಿಗೆಗಳೇನು? ಕಳೆದ ಮೂರು ಬಿಡುಗಡೆಗಳಿಗಿಂತ ಇದು ಹೇಗೆ ವಿಶೇಷ  ಎಂದು  ಸ್ವಲ್ಪ ನೋಡೋಣ.
ಕಳೆದ ಮೂರು ಬಿಡುಗಡೆಯಲ್ಲಿ ಕನಿಷ್ಠ ಹೂಡಿಕೆ 2 ಗ್ರಾಂ , ಈ ಬಾರಿ ಅದು ಒಂದು ಗ್ರಾಂ!  ಹೂಡಿಕೆ ಮೇಲೆ ಸಿಗುವ ಬಡ್ಡಿ 2.75 ಪ್ರತಿಶತ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಥಮ ಬಾರಿಗೆ ಇವನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ಷೇರು ಖರೀದಿಸಿದಂತೆ ಡಿಮ್ಯಾಟ್ ಖಾತೆಯ ಮೂಲಕ ಪಡೆಯಬಹುದಾಗಿದೆ. ಹೂಡಿಕೆಗೆ ಮತ್ತೊಂದು ಪೂರಕ ಅಂಶವೆಂದರೆ 8 ವರ್ಷ ಹೂಡಿಕೆ ಅವಧಿ ಮುಗಿದ ನಂತರ ಲಾಭಾಂಶದ ಮೇಲೆ ಹಾಕುವ ‘ ಕ್ಯಾಪಿಟಲ್ ಗೈನ್ ‘ ತೆರಿಗೆಯಿಂದ ವಿನಾಯತಿ ಕೊಟ್ಟಿರುವುದು.  ಉದಾಹರಣೆ ನೋಡಿ… ಇಂದು ನಿಮ್ಮ ಹೂಡಿಕೆ 10 ಗ್ರಾಂ ಅಂದರೆ 31 ಸಾವಿರದ 200 ರೂಪಾಯಿ , 8 ವರ್ಷದ ನಂತರ  10 ಗ್ರಾಂ ಚಿನ್ನದ ಬೆಲೆ 45 ಸಾವಿರ ರೂಪಾಯಿ ಎಂದು  ಕೊಳ್ಳಿ. ಕ್ಯಾಪಿಟಲ್ ಗೈನ್ 13800 ( 45000-31200) ಅಂದರೆ 13800 ರೂಪಾಯಿಯ ಮೇಲೆ ಕಟ್ಟಬೇಕಾಗಿದ್ದ ತೆರಿಗೆ ಇದೀಗ ಕಟ್ಟಬೇಕಿಲ್ಲ.
ಈ ಬಾಂಡ್ ಖರೀದಿಸಲು ಸರಕಾರ ಜುಲೈ 18 ರಿಂದ 22 ರವರೆಗೆ ಕಾಲಾವಕಾಶ ನೀಡಿತ್ತು. ಒಟ್ಟು ಎಷ್ಟು ಹಣ ಸಂಗ್ರಹ ಆಯ್ತು ? ಎಷ್ಟು ಕಿಲೋ ಚಿನ್ನದ ಮೇಲೆ ಎಷ್ಟು ಜನ ಹೂಡಿಕೆ ಮಾಡಿದರು ಎನ್ನುವದರ ನಿಖರ ಅಂಕಿಅಂಶ ಸರಕಾರ ಇನ್ನೂ ಬಿಡುಗಡೆ ಮಾಡಬೇಕಿದೆ. ಆದರೆ ಸ್ಟಾಕ್ ಮಾರ್ಕೆಟ್ ತನ್ನ ಅಂಕಿಅಂಶ ಬಿಚ್ಚಿಟ್ಟಿದೆ. ಅದರ ಪ್ರಕಾರ nse ಮತ್ತು bse  ಎರಡೂ ಸ್ಟಾಕ್ ಮಾರ್ಕೆಟ್ಗಳ ಮೂಲಕ ಒಟ್ಟು 11932  ಜನ 500 ಕಿಲೋ ಚಿನ್ನದ ಬಾಂಡ್ ಖರೀದಿಸಿದ್ದಾರೆ. ಇದರ ಮೌಲ್ಯ 156 ಕೋಟಿ ರೂಪಾಯಿ. ನೆನಪಿರಲಿ ಬ್ಯಾಂಕ್ ಗಳ ಮೂಲಕ , ಪೋಸ್ಟ್ ಆಫೀಸ್ ಮೂಲಕ ಮತ್ತು ಇತರೆ ಮಧ್ಯವರ್ತಿಗಳ ಮೂಲಕ ಖರೀದಿಸಿದ ಒಟ್ಟು ಮೌಲ್ಯ ಎಷ್ಟು ಎನ್ನುವುದರ ಮಾಹಿತಿ ಇನ್ನೂ ಬಾಕಿ ಇದೆ. ಕಳೆದ ಮೂರು ಚಿನ್ನದ ಬಾಂಡ್ ನಿಂದ ಸರಕಾರ 1325 ಕೋಟಿ ರೂಪಾಯಿ ಸಂಗ್ರಹಿಸಿತ್ತು.

‘ಈ ಬಾರಿ ಇದಕ್ಕೆ ಸಿಕ್ಕ ಪ್ರತಿಕ್ರಿಯೆ ತುಂಬಾ ಚನ್ನಾಗಿತ್ತು ‘ ಎಂದಿದ್ದಾರೆ ಕೋಟಕ್ ಮಹಿಂದ್ರ ಬ್ಯಾಂಕ್ ನ ಜಾಗತಿಕ ವ್ಯವಹಾರ ಹಾಗು ಅಮೂಲ್ಯ ಲೋಹದ ಬಿಸಿನೆಸ್ ಹೆಡ್ ಶೇಖರ ಭಂಡಾರಿ. ಮುಂದುವರಿದು ‘ ಈ ಬಾರಿ ಆನೇಕ ಮಧ್ಯವರ್ತಿಗಳು ಇದ್ದಾರೆ ಹಾಗೂ ಅವರು ಇದನ್ನ  ಚಿಲ್ಲರೆ (ರಿಟೇಲ್ ) ಹೂಡಿಕೆದಾರರ ಬಳಿಗೆ ಕೊಂಡೊಯ್ದಿದ್ದಾರೆ ಹಾಗಾಗಿ ಪ್ರತಿಕ್ರಿಯೆ ಚನ್ನಾಗಿದೆ ‘  ಎಂದು ವಿಶ್ಲೇಷಿಸಿದ್ದಾರೆ.

ನಾಲ್ಕನೇ ಗೋಲ್ಡ್ ಬಾಂಡ್ ಖರೀದಿಯಿಂದ ಗ್ರಾಹಕನಿಗೆ/ ಹೂಡಿಕೆದಾರನಿಗೆ ಆಗುವ ಲಾಭಗಳೇನು ?

– ಮುಖ್ಯವಾಗಿ ಇದು  ಷೇರು ಮಾರುಕಟ್ಟೆಯಲ್ಲಿ ‘ಟ್ರೇಡೆಬಲ್’  ಅಂದರೆ ನಿಮಗೆ  ಬೇಡ ಅನಿಸಿದರೆ ಇದನ್ನ ಷೇರು ಮಾರಿದಂತೆ ಡಿಮ್ಯಾಟ್ ಖಾತೆಯ ಮೂಲಕ ಮಾರಿಬಿಡಬಹುದು . ಹೀಗೆ ಎಂದಿನಿಂದ ಮಾರಬಹುದು ಎನ್ನುವ ದಿನಾಂಕ ಸರಕಾರ ಇನ್ನು ನಿಗದಿ ಮಾಡಿಲ್ಲ . ಇನ್ನೊಂದೆರಡು ತಿಂಗಳಿನಲ್ಲಿ ಇದನ್ನ ಮಾರುವ ಅವಕಾಶ ಕಲ್ಪಿಸಲಾಗುವುದು .
– ಮಾರಲು ಇಚ್ಛಿಸದೆ ಇರುವ ಹೂಡಿಕೆದಾರ ಅಕಸ್ಮಾತ್ ಹಣದ ಅವಶ್ಯಕತೆ ಬಿದ್ದರೆ ಇದನ್ನ ಅಡವಿಟ್ಟು ಸಾಲ ಪಡೆಯುವ ಅವಕಾಶ ಕೂಡ ಇದೆ.
– ಇದು ಪೇಪರ್ ನಲ್ಲಿ ಇರುವ ಚಿನ್ನ ಹಾಗಾಗಿ ಸಾಂಪ್ರದಾಯಿಕವಾಗಿ ಚಿನ್ನದ ಖರೀದಿಯಲ್ಲಿ ಆಗುವ ಚಿನ್ನದ ಸುರಕ್ಷತೆಯ  ಚಿಂತೆ ಇರುವುದಿಲ್ಲ.
– ಹೂಡಿಕೆದಾರ ಹೂಡಿಕೆಯ ಪೂರ್ಣಾವಧಿ 8 ವರ್ಷ ಪೂರೈಸಿದರೆ ‘ ಕ್ಯಾಪಿಟಲ್ ಗೈನ್ ‘ ಟ್ಯಾಕ್ಸ್ ನಿಂದ ವಿನಾಯತಿ ಪಡೆಯಬಹುದು.
-ಸಾಂಪ್ರದಾಯಿಕ ಚಿನ್ನದ ಮೇಲಿನ ಹೂಡಿಕೆ ಬಡ್ಡಿ ನೀಡುವುದಿಲ್ಲ ಮಾರುವ ಸಮಯದಲ್ಲಿ ಹೆಚ್ಚಿರುವ ಬೆಲೆ ಮಾತ್ರವೇ ಇಲ್ಲಿನ ಲಾಭ . ಗೋಲ್ಡ್ ಬಾಂಡ್ ಮೂಲ ಹೂಡಿಕೆಯ ಮೇಲೆ 2.75 ಪ್ರತಿಶತ ಬಡ್ಡಿ ಪ್ರತಿ ಆರು ತಿಂಗಳಿಗೆ ಒಮ್ಮೆ ನೀಡುತ್ತದೆ.
-ಪೂರ್ಣ ಹೂಡಿಕೆ ಅವಧಿ ಪೂರೈಸಿದ್ದೆ ಆದರೆ ಹೂಡಿಕೆಯ ಮೇಲೆ 20 ರಿಂದ 25 ಪ್ರತಿಶತ ಲಾಭಾಂಶ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.
ಡಿಜಿಟಲ್ ಕನ್ನಡದಲ್ಲಿ ನಾವು ಹೂಡಿಕೆಯ ಮೇಲಿನ ಎಲ್ಲಾ ರೀತಿಯ ಸಾಧಕ ಭಾದಕಗಳ ಅವಲೋಕಿಸಿ ಹೂಡಿಕೆ ಮಾಡಬಹುದೇ, ಇಲ್ಲವೇ ಎನ್ನುವುದರ ಬಗ್ಗೆ ನಮ್ಮ ನಿಲುವ ನೀಡುತ್ತಾ ಬಂದಿದ್ದೇವೆ. ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ ಸುರಕ್ಷಿತ , ಸರಕಾರದ ಅಭಯ ಬೇರೆ ಇದೆ. ಸರಕಾರ ಒಂದು ಗ್ರಾಂ ಚಿನ್ನದ ಬೆಲೆ 3119 ರೂಪಾಯಿ ಎಂದು ನಿರ್ಧರಿಸಿದೆ. ಇಂದಿನ ಮಾರುಕಟ್ಟೆಯ ಚಿನ್ನದ ಬೆಲೆ 100 ರಿಂದ 150 ರೂಪಾಯಿ ಸರಕಾರ ನಿಗದಿ ಮಾಡಿರುವ ಬೆಲೆಗಿಂತ ಕಡಿಮೆ ಇದೆ. ವಸ್ತು ಸ್ಥಿತಿ ಹೀಗಿದ್ದೂ ಚಿನ್ನದ ಬಾಂಡ್ ಖರೀದಿಸಿ ಎಂದು ಹೇಳಲು ಪ್ರಮುಖ ಕಾರಣವೇನು ?

– ಅಂತಾರಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸ್ಥಿರತೆಯ ಕೊರತೆ.

– ಆರ್ಥಿಕವಾಗಿ  ಕಂಗೆಟ್ಟಿರುವ ಯೂರೋಪಿನ ಮೇಲೆ ಆಗುತ್ತಿರುವ ಭಯೋತ್ಪಾದಕ ದಾಳಿಗಳು.

– ಮೇಲೇರದ ಅಮೆರಿಕ ಆರ್ಥಿಕತೆ.

– ಬ್ರಿಕ್ಸಿಟ್ ನಿಂದ ಚೇತರಿಸಿ ಕೊಳ್ಳಲು ಆಗದೆ ಕುಸಿದಿರುವ ಬ್ರಿಟನ್ ರಿಯಲ್ ಎಸ್ಟೇಟ್ ಉದ್ಯಮ.

– ನಾಗಾಲೋಟದಲ್ಲಿ ಓಡುತಿದ್ದ ಚೀನಾ ಎನ್ನುವ ಓಟಗಾರ ದಣಿದು ಸುಧಾರಿಸಿಕೊಳ್ಳಲು ಕೂತಿರುವುದು.

– ಕಣ್ಣಾಮುಚ್ಚಾಲೆ ಆಡುತ್ತಿರುವ ತೈಲದ ಬೆಲೆ.

ಇವೆಲ್ಲಾ ಅಳೆದು ತೂಗಿ ನೋಡಿದರೆ ಮುಂಬರುವ ದಿನಗಳಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಆಕಸ್ಮಾತ್ ನಮ್ಮ ಲೆಕ್ಕಾಚಾರ ತಪ್ಪಾಯ್ತು ಅಂದುಕೊಳ್ಳಿ ಹಾಗಾದರೂ ಹೂಡಿಕೆದಾರ ಕಳೆದು ಕೊಳ್ಳುವುದಿಲ್ಲ! ಹೇಗೆ ? ಹಣದುಬ್ಬರ ಇಲ್ಲಿ ಕೆಲಸ ಮಾಡುತ್ತೆ . ಹಾಗಾಗಿ ಕನಿಷ್ಠ ಹಣದುಬ್ಬರದ ಜೊತೆ ಜೊತೆಯಾಗಿ ನಡೆಯಲು ಚಿನ್ನದ ಮೇಲಿನ ಹೂಡಿಕೆ ಎಲ್ಲಾ ತರದಲ್ಲೂ ಸೂಕ್ತ .

Leave a Reply