ಭುಗಿಲೆದ್ದ ಮಹದಾಯಿ ಜನಾಕ್ರೋಶ, ಮೋದಿಯತ್ತ ಕೈತೋರಿದ ಕಾಂಗ್ರೆಸ್- ಜೆಡಿಎಸ್, ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ರೋಷ

Members of Karnataka Rakshana Vedike stage protest against the Verdict on Mahdayai issue at SBM circle in Bengaluru on Thursday.

ಮಹದಾಯಿ ನೀರಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನ ವಿರುದ್ಧ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ  ಗುರುವಾರ ಪ್ರತಿಭಟನೆ ನಡೆಸಿದ ಪರಿ.

ಡಿಜಿಟಲ್ ಕನ್ನಡ ಟೀಮ್:

ಮಹದಾಯಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ತೀರ್ಪಿನ ವಿರುದ್ಧದ ಪ್ರತಿಭಟನೆಗಳು ಗುರುವಾರ ತೀವ್ರವಾಗಿವೆ. ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಪಿಠೋಪಕರಣಗಳ ಧ್ವಂಸ, ಕಡತಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನಾಕಾರರು ತಮಗಾದ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ನವಲಗುಂದ ತಾಲೂಕು ಕಚೇರಿ, ಪುರಭವನದ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು ಪೀಠೋಪಕರಣ, ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದಷ್ಟೇ ಅಲ್ಲದೆ, 2 ಸರ್ಕಾರಿ ಜೀಪ್ ಗಳಿಗೆ ಬೆಂಕಿ ಹಚ್ಚಿದ್ರು. ಇನ್ನು ಕೋರ್ಟ್ ಹಾಲ್ ಗೆ ನುಗ್ಗಿದ ಪ್ರತಿಭಟನಕಾರರು ಗಲಭೆ ಮಾಡಿದರು. ಈ ವೇಳೆ ಮಚ್ಚು ಲಾಂಗು ಹಿಡಿದಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದ ಹಂತದಲ್ಲಿ ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿಯನ್ನೂ ಪ್ರಯೋಗಿಸಿದ್ರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಇನ್ನು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಇನ್ನು ಜುಲೈ 30ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಈ ಬಂದ್ ಗೆ ಬೆಂಬಲ ಸೂಚಿಸಿವೆ.

ಒಂದೆಡೆ ತೀರ್ಪಿನಿಂದ ನೊಂದ ಜನರು ಪ್ರತಿಭಟನೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ರೆ. ಮತ್ತೊಂದೆಡೆ ರಾಜ್ಯ ರಾಜಕೀಯ ನಾಯಕರು ಮಾತ್ರ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಯತ್ನದಲ್ಲಿ ಮುಳುಗಿದ್ದಾರೆ.

ಕಾಂಗ್ರೆಸ್ ರಾಷ್ಟ್ರ ನಾಯಕರ ವಿರೋಧವೇ ಕಾರಣ ಅಂತಿದೆ ಬಿಜೆಪಿ..

ಈ ಸಮಸ್ಯೆ ಬಗೆಹರಿಸುವಲ್ಲಿ ಕಾಂಗ್ರೆಸ್ ರಾಷ್ಟ್ರ ನಾಯಕರ ನಿರ್ಲಕ್ಷ, ರಾಜ್ಯಕ್ಕೆ ಮುಳುವಾಗಿದೆ ಅಂತಾ ಬಿಜೆಪಿ ಆರೋಪಿಸಿದೆ. ಗುರುವಾರ ವಿಧಾನಸೌಧದಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸಿ.ಟಿ ರವಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಹೀಗೆ:

‘1988 ರಿಂದಲೂ ಮಹದಾಯಿ ವಿವಾದ ಇದೆ. ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಯಲಿಲ್ಲ. ಮಹದಾಯಿಯ ಒಂದು ಹನಿ ನೀರು ಕರ್ನಾಟಕ್ಕೆ ಕೊಡಲ್ಲ ಎಂದು ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಹೇಳಿದ್ದರು.

ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿದ್ದಾಗ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದರು. ಆದ್ರೆ, ಅಲ್ಲಿನ ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿ 1 ವಾರ ಸದನ ನಡೆಯಲು ಬಿಟ್ಟಿರಲಿಲ್ಲ. ನ್ಯಾಯಾಧಿಕರಣ ಮೂಲಕವೇ ವಿವಾದ ಇತ್ಯರ್ಥವಾಗಬೇಕು ಎಂದು ನಿರ್ಣಯ ಮಾಡಿಸಿದ್ದರು.

ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದ ವಕೀಲರ ನಿಯೋಗ ಗೋವಾಗೆ ತೆರಳಿ ಅಲ್ಲಿನ ಮುಖ್ಯಮಂತ್ರಿಗೆ ಮನವಿ ಮಾಡಿದಾಗಲೂ ವಿರೋಧ ವ್ಯಕ್ತವಾಗಿದ್ದು ಕಾಂಗ್ರೆಸ್ ನಿಂದ. ಹೀಗಾಗಿ, ಕಾಂಗ್ರೆಸ್ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು.

ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣವು ಸಹ ಸರಿಯಾಗಿ ಕೆಲಸ ಮಾಡಿಲ್ಲ. ಮಹಾದಾಯಿ ಯಲ್ಲಿ ನೀರಿನ ಲಭ್ಯತೆ ಕುರಿತು ಆಧ್ಯಯನಕ್ಕೆ ನ್ಯಾಯಾಧಿಕರಣವೇ ರಚಿಸಿದ್ದ ಸಮಿತಿ ನಾಲ್ಕು ವರ್ಷವಾದರೂ ವರದಿ ಕೊಟ್ಟಿಲ್ಲ. ಹೀಗಾಗಿ, ನ್ಯಾಯಾಧಿಕರಣದ ವಿಫಲತೆಯೂ ಇರುವುದರಿಂದ ಸುಪ್ರಿಂ ಕೋರ್ಟ್ ಗೆ ಹೋಗಬಹುದು. ಪ್ರಧಾನಿ ಮಧ್ಯಪ್ರವೇಶಕ್ಕೂ ಇನ್ನೂ ಕಾಲ ಮಿಂಚಿಲ್ಲ. ಆದರೆ, ಅದಕ್ಕೆ ಕಾಂಗ್ರೆಸ್ ನವರು ಅಲ್ಲಿನ ಪ್ರತಿಪಕ್ಷದವರನ್ನು ಮನವೊಲಿಸಬೇಕು.’

ಪ್ರಧಾನಿ ಮಧ್ಯಸ್ಥಿಕೆ ಒಂದೇ ಮಾರ್ಗ ಅಂತು ಜೆಡಿಎಸ್..

ಬಿಜೆಪಿ ಕಾಂಗ್ರೆಸ್ ಮೇಲೆ ಆರೋಪ ಹೊರಿಸಿದರೆ, ಇತ್ತ ಜೆಡಿಎಸ್ ಸಮಸ್ಯೆ ಬಗೆಹರಿಸಲು ಇರೋದು ಒಂದೇ ಮಾರ್ಗ. ಅದು ಪ್ರಧಾನಿ ಮಧ್ಯಪ್ರವೇಶ ಅಂತಿದ್ದಾರೆ ಜೆಡಿಎಸ್ ಶಾಸಕ ಕೋನರೆಡ್ಡಿ.

‘ಉತ್ತರ ಕರ್ನಾಟಕ ಭಾಗದ ಜನರು ನೋವಿನಲ್ಲಿದ್ದಾರೆ. ಸಮಸ್ಯೆ ಬಗೆಹರಿಯಲು ಪ್ರಧಾನಿ ಮಧ್ಯಪ್ರವೇಶವೊಂದೇ ದಾರಿ. ದಯವಿಟ್ಟು ಬಿಜೆಪಿಯವರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು ಸಮರ್ಥವಾಗಿ ನಿಭಾಯಿಸಲಿ. ನನ್ನ ರಾಜಕೀಯ ಜೀವನದಲ್ಲಿ ಪ್ರಧಾನಿಯೊಬ್ಬರು ಪ್ರತಿಪಕ್ಷಗಳನ್ನು ಒಪ್ಪಿಸಿ ಬನ್ನಿ ಎಂದು ಹೇಳಿದ್ದು ನೋಡಲಿಲ್ಲ. ರಾಜ್ಯದಲ್ಲಿ 18 ಬಿಜೆಪಿ ಸಂಸದರಿದ್ದಾರೆ. ಸಂಸತ್ತಿನಲ್ಲಿ ಪ್ರತಿಭಟಿಸಲಿ. ರಾಜ್ಯದ ಎಲ್ಲ ಸಂಸದರೂ ರಾಜಕೀಯ ಬಿಟ್ಟು ತಮಿಳುನಾಡು, ಆಂಧ್ರಪ್ರದೇಶದ ನಾಯಕರ ರೀತಿಯಲ್ಲಿ ಒಗ್ಗಟ್ಟಿನ ಹೋರಾಟ ಮಾಡಬೇಕು. ಕೇಂದ್ರದಿಂದ ನಿಯೋಜಿಸಿದ ವಕೀಲರು ಗೋವಾ ಪರ ಮಾತನಾಡಿದರೆ ನಮಗೆ ನ್ಯಾಯ ಸಿಗುವುದಾದರು ಹೇಗೆ. ಕೇಂದ್ರವು ಕರ್ನಾಟಕದ ವಿರುದ್ಧ ಇದೆ ಎಂಬ ಅಭಿಪ್ರಾಯಕ್ಕೆ ನ್ಯಾಯಾಧಿಕರಣ ಬರುವುದಿಲ್ಲವೇ? ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಇದೀಗ ನೋವಾಗಿದೆ ಆಂತಾರೆ. ಆದರೆ, ಆ ನೋವು ಯಾರ ಬಳಿ ವ್ಯಕ್ತಪಡಿಸಬೇಕು. ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಲೋಕಸಭೆಯಲ್ಲೂ ಆಗಿದ್ದು ಇದೇ…

ಲೋಕಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಯಿತಾದರೂ ಅಲ್ಲಿಯೂ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಮಾತ್ರ ಸೀಮಿತವಾಯ್ತು. ಬಿಜೆಪಿ ಸಂದಸ ಸುರೇಶ್ ಅಂಗಡಿ ಈ ವಿಷಯ ಪ್ರಸ್ತಾಪಿಸಿ, ‘ನ್ಯಾಯಾಧಿಕರಣದ ತೀರ್ಪು ಕರ್ನಾಟಕದ ವಿರುದ್ಧವಾಗಿದೆ. ಹಲವು ಜಿಲ್ಲೆಯ ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ರಾಜ್ಯದ ವಿರುದ್ಧ ಹೇಳಿಕೆ ನೀಡಿದ್ರು. ಹೀಗಾಗಿ ರಾಜ್ಯಕ್ಕೆ ಈ ಪರಿಸ್ಥಿತಿ ಬಂದಿದೆ’ ಎಂದರು. ಸೋನಿಯಾ ಅವರ ಹೆಸರು ಪ್ರಸ್ತಾಪಕ್ಕೆ ಕಾಂಗ್ರೆಸ್ ನಾಯಕರಿಗೆ ಆಕ್ರೋಶ ಬಂತು. ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ, ‘ಸುರೇಶ್ ಅಂಗಡಿ ಅವರು ವಿನಾಕಾರಣ ಸೋನಿಯಾ ಗಾಂಧಿ ಅವರ ಹೆಸರು ತರುತ್ತಿದ್ದಾರೆ. ಇಲ್ಲಿ ರಾಜಕೀಯ ಮಾಡದೇ ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸಬೇಕು’ ಎಂದರು.

‘ಸಮಸ್ಯೆ ತೀರಾ ಗಂಭೀರವಾಗಿದೆ. ಹೀಗಾಗಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು’ ಎಂಬುದು ಜೆಡಿಎಸ್ ಸಂಸದ ಪುಟ್ಟರಾಜು ಅವರ ವಾದವಾಗಿತ್ತು.

Leave a Reply