
ಅತಿಯಾದ ಮಳೆಯಿಂದ ಸಂಪೂರ್ಣವಾಗಿ ಜಲಾವೃತಗೊಂಡಿರುವ ಕೋಡಿಚಿಕ್ಕನಹಳ್ಳಿ ಪ್ರದೇಶ..
ಡಿಜಿಟಲ್ ಕನ್ನಡ ಟೀಮ್:
ಹಲವೆಡೆ ಮರಗಳು ಉರುಳಿವೆ.. ಮತ್ತೆ ಕೆಲವೆಡೆ ಗೋಡೆ ಕುಸಿದಿವೆ.. ಇನ್ನು ಅರಕೆರೆಯ ಕೋಡಿಚಿಕ್ಕನಹಳ್ಳಿ ಹಾಗೂ ಹೆಬ್ಬಗೋಡಿ ಪ್ರದೇಶಗಳು ಜಲಾವೃತಗೊಂಡರೆ, ಮಡಿವಾಳ ಕೆರೆ ತುಂಬಿ ನೀರು ರಸ್ತೆಯಲ್ಲಿ ಹರಿಯುತ್ತಿದೆ.. ಇವಿಷ್ಟೂ ರಾತ್ರಿಯಿಡೀ ಧಾರಾಕಾರವಾಗಿ ಸುರಿದ ಮಳೆಗೆ ತತ್ತರಿಸಿದ ಬೆಂಗಳೂರಿನ ಚಿತ್ರಣ.
ಅತಿಯಾದ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳು ಮುಳುಗಿವೆ. ಜನರು ಹೊರಬರಲು ಸಾಧ್ಯವಾಗದ ಪರಿಣಾಮ ಅಗ್ನಿಶಾಮಕ ಸಿಬ್ಬಂದಿ ಆಹಾರ ಪೂರೈಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮತ್ತೆ ಕೆಲವೆಡೆ ಬೋಟ್ ಗಳ ಮೂಲಕ ರಕ್ಷಣಾಕಾರ್ಯ ಸಾಗುತ್ತಿದೆ. ಅಪಾರ್ಟ್ ಮೆಂಟ್ ಗಳ ಕೆಳಮಾಳಿಗೆಯಲ್ಲಿ ನೀರು ತುಂಬಿಕೊಂಡು ವಾಹನಗಳು ಜಲಾವೃತವಾಗಿವೆ. ರಸ್ತೆಯಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿರುವುದರಿಂದ ಹಳ್ಳ ದಿಣ್ಣೆಗಳ ಗುರುತು ಸಿಗದೆ ವಾಹನ ಸಂಚಾರ ಸವಾಲಾಗಿದೆ. ಪರಿಣಾಮ ಸಂಚಾರ ದಟ್ಟಣೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.
ಹಾಗೆಂದು ಇಡೀ ಬೆಂಗಳೂರೇ ಮುಳುಗಿದೆ ಎಂಬ ಚಿತ್ರಣ ಉತ್ಪ್ರೇಕ್ಷೆಯದ್ದು. ತಗ್ಗು ಪ್ರದೇಶಗಳಲ್ಲಿ, ಈ ಹಿಂದಿನ ಕೆರೆ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ವಸತಿ ಪ್ರದೇಶಗಳಲ್ಲೇ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಕೇವಲ ಒಂದು ರಾತ್ರಿ ಸುರಿದ ಮಳೆ ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಹಾಗೂ ಅವೈಜ್ಞಾನಿಕ ಲೇಔಟ್ ನಿರ್ಮಾಣದ ಕೆಟ್ಟ ಪರಿಸ್ಥಿತಿಯನ್ನು ಜಗಜ್ಜಾಹೀರಗೊಳಿಸಿದೆ.
ಇನ್ನು ಮೂರು ದಿನ ಬೆಂಗಳೂರಿನಲ್ಲಿ ಮಳೆ ಕಡಿಮೆ ಎಂಬ ಹವಾಮಾನ ಇಲಾಖೆ ಲೆಕ್ಕಾಚಾರ ನಿಜವಾಗಿದ್ದೇ ಹೌದಾದಲ್ಲಿ ಅಷ್ಟರಮಟ್ಟಿಗೆ ನಿಟ್ಟುಸಿರು ಬಿಡಬಹುದಾಗಿದೆ.
ಬೆಂಗಳೂರಿನ ಹಲವೆಡೆ ಮಳೆಯಿಂದಾದ ಪರಿಣಾಮಗಳನ್ನು ಈ ಚಿತ್ರಗಳಲ್ಲಿ ನೋಡಬಹುದು…
ಬೊಮ್ಮನಹಳ್ಳಿಯಲ್ಲಿ ವೃದ್ಧೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ..
ಹಲಸೂರು ಕೆರೆ ರಸ್ತೆಯ ಬಳಿ ಮರವೊಂದು ನೆಲಕ್ಕುರುಳಿದೆ..
ಮಳೆಯಿಂದಾಗಿ ಬೆಂಗಳೂರು ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದು..
ಮಾರತಹಳ್ಳಿಯ ಸಮೀಪವಿರುವ ಸಂಜಯ್ ನಗರದಲ್ಲಿ ಮಳೆಯಿಂದಾಗಿ ಗೋಡೆ ಕುಸಿದು ಆಟೋ ಮತ್ತು ಕಾರುಗಳಿಗೆ ಹಾನಿಯಾಗಿರುವುದು..
ಜಲಾವೃತಗೊಂಡಿರುವ ಅರಕೆರೆಯ ನಿವಾಸಿಗಳಿಗೆ ಬೋಟ್ ಗಳ ಮೂಲಕ ಅಗತ್ಯ ವಸ್ತು ಪೂರೈಸುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ..
ಇದು ಬೆಂಗಳೂರಿನ ಕತೆಯಾದ್ರೆ, ದೇಶದ ನಾನಾ ಭಾಗಗಳಲ್ಲೂ ಮುಂಗಾರಿನ ಅಬ್ಬರ ವ್ಯತಿರಿಕ್ತ ಪರಿಣಾಮವನ್ನೇ ಬೀರಿದೆ. ನಿನ್ನೆಯಷ್ಟೇ ಅತಿಯಾದ ಮಳೆಯಿಂದ ಗುರ್ಗಾಂವ್ ನ ರಾಷ್ಟ್ರೀಯ ಹೆದ್ದಾರಿ 8 ಸೇರಿದಂತೆ ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಸಾಧ್ಯವಾಗದೇ ಉಂಟಾದ ಟ್ರಾಫಿಕ್ ಜಾಮ್ ಸಾಕಷ್ಟು ಸುದ್ದಿಯಾಗಿತ್ತು. ಇನ್ನು ಅಸ್ಸಾಂ ಸೇರಿದಂತೆ ಈಶಾನ್ಯ ಭಾಗ ರಾಜ್ಯಗಳು ಪ್ರವಾಹದಿಂದ ತತ್ತರಿಸಿವೆ.
ಇನ್ನು ಸ್ಕೈಮೆಟ್ ಹವಾಮಾನ ಸಂಸ್ಥೆಯ ವರದಿಗಳ ಪ್ರಕಾರ, ದೇಶದ ಇತರೆ ಪ್ರಮುಖ ನಗರಗಳಾದ ದೆಹಲಿ, ಮುಂಬೈ ಪ್ರದೇಶಗಳಲ್ಲೂ ಮಳೆಯ ಅಬ್ಬರ ಹೆಚ್ಚಾಗಿದೆ. ಮುಂಬೈನಲ್ಲಿ ಜುಲೈ ತಿಂಗಳ ಸರಾಸರಿ ಮಳೆಗಿಂತ ಹೆಚ್ಚಿನ ಮಳೆಯಾಗಿದೆ. ಪ್ರತಿವರ್ಷ ಜುಲೈ ತಿಂಗಳಲ್ಲಿ 799.7 ಎಂಎಂ ನಷ್ಟು ಸರಾಸರಿ ಮಳೆಯಾದರೆ, ಈ ಬಾರಿ 819.6 ಎಂ.ಎಂ ನಷ್ಟು ಮಳೆಯಾಗಿದೆ. ಚೆನ್ನೈ ಸೇರಿದಂತೆ ಇತರ ಕಡೆಗಳಲ್ಲೂ ಮುಂದಿನ ಎರಡು ಮೂರು ದಿನಗಳ ಕಾಲ ಮಳೆ ಅಬ್ಬರ ಹೆಚ್ಚಾಗಲಿದೆ ಅಂತಲೂ ಮಾಹಿತಿ ನೀಡಿದೆ. ಉತ್ತರ ಭಾಗದ ರಾಜ್ಯಗಳಲ್ಲೂ ಮಳೆ ಪ್ರಮಾಣ ಹೆಚ್ಚಲಿದ್ದು, ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.