ಕಡಿಮೆ ಬೆಲೆಯ ಔಷಧ ಒದಗಿಸುವ ಪ್ರಯತ್ನದಲ್ಲಿ ಸರ್ಕಾರ, ಅನಂತ್ ಕುಮಾರ್ ನೀಡಿರುವ ವಿವರ

ಡಿಜಿಟಲ್ ಕನ್ನಡ ಟೀಮ್:

ವೈದ್ಯರು ರೋಗಿಗಳಿಗೆ ದುಬಾರಿ ಔಷಧಗಳ ಬದಲಿಗೆ ಜೆನರಿಕ್ ಔಷಧಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಬೇಕು, ಅಲ್ಲದೆ ಈ ಜೆನರಿಕ್ ಔಷಧಗಳನ್ನು ಮೆಡಿಕಲ್ ಸ್ಟೋರ್ ಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು.. ಹೀಗಂತ ಹೇಳಿರೋದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತ ಕುಮಾರ್.

ರಾಜ್ಯಸಭೆಯಲ್ಲಿ ಗುರುವಾರ ಔಷಧಗಳ ದುಬಾರಿ ಬೆಲೆ ಹಾಗೂ ಬ್ರ್ಯಾಂಡ್ ಔಷಧಿಗಳು ಮತ್ತು ಅದಕ್ಕೆ ಪರ್ಯಾಯ ಜೆನರಿಕ್ ಔಷಧಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ರಾಮನರೇಶ್ ಅಗರ್ವಾಲ್ ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಅನಂತ ಕುಮಾರ್, ಈ ಕುರಿತಂತೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಜತೆ ಚರ್ಚಿಸಿ ಪರಿಷ್ಕೃತ ಬೆಲೆ ನಿಗದಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಜೆನರಿಕ್ ಔಷಧಗಳಿಗೆ ಪ್ರಾಶಸ್ತ್ಯ ನೀಡುವ ಬಗ್ಗೆ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿಕೊಂಡ್ರು.

ಎಂಸಿಐಗೆ ಪ್ರಸ್ತಾಪಿಸಿರುವ ನಿಬಂಧನೆಗಳು ಹೀಗಿದೆ:

‘ಇಷ್ಟು ದಿನಗಳ ಕಾಲ ವೈದ್ಯರು ಸಾಧ್ಯವಾದಷ್ಟು ಜೆನರಿಕ್ ಔಷಧ ಶಿಫಾರಸ್ಸು ಮಾಡಬೇಕು ಎಂದು ಹೇಳಲಾಗುತ್ತಿತ್ತು. ಈಗ ಪ್ರತಿಯೊಬ್ಬ ದೈಹಿಕ ತಜ್ಞನೂ ಡ್ರಗ್ಸ್ ಅನ್ನು ಜೆನರಿಕ್ ಹೆಸರಿನ ಮೂಲಕವೇ ನೀಡಬೇಕಿದ್ದು, ಅದನ್ನು ಸ್ಪಷ್ಟವಾಗಿ ಬರೆದು ಕೊಡಬೇಕು. ಅದರಲ್ಲಿ ಡ್ರಗ್ಸ್ ಪ್ರಮಾಣದ ಕುರಿತು ಸ್ಪಷ್ಟ ಮಾಹಿತಿ ಹೊಂದಿರಬೇಕು.’

ಸೀಮಿತ ಬೆಲೆಗೆ ಅತ್ಯುತ್ತಮ ಔಷಧಗಳನ್ನು ನೀಡುವ ಹಿನ್ನೆಲೆಯಲ್ಲಿ ಸಚಿವಾಲಯ ಈ ಪ್ರಯತ್ನಕ್ಕೆ ಮುಂದಾಗಿದೆ. 2015ರ ಅಗತ್ಯ ಔಷಧಗಳ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದ್ದು ಮತ್ತಷ್ಟು ಔಷಧಗಳ ಸೇರಿಸಲಾಗುತ್ತಿದೆ. ಜನ ಔಷಧ ಯೋಜನೆ ಮೂಲಕ ಅಗತ್ಯ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ನಿರ್ದಿಷ್ಟ ಔಷಧ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಡವರಿಗಾಗಿ ಈ ರೀತಿಯ 3 ಸಾವಿರ ಔಷಧ ಕೇಂದ್ರ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

Leave a Reply