ಹೊಸ ಕಬೀರ ಆಗಮನದ ಸಂಭ್ರಮದಲ್ಲಿ ಹಳೆ ಕಬೀರನ ನೆನವು!

ಕಬೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುಬ್ಬಯ್ಯ ನಾಯ್ಡು..

author-ssreedhra-murthyಬಹು ನಿರೀಕ್ಷಿತ ಇಂದ್ರಬಾಬು ನಿರ್ದೇಶನದ ‘ಸಂತೆಯಲಿ ನಿಂತ ಕಬೀರ್’ ಇಂದು ತೆರೆ ಕಂಡಿದೆ. ಭೀಷ್ಮ ಸಾಹ್ನಿಯವರ ನಾಟಕವನ್ನು ಆಧರಿಸಿದ  ಚಿತ್ರಕ್ಕೆ ಸಾಹಿತ್ಯವನ್ನು ಆ ನಾಟಕವನ್ನು ಕನ್ನಡಕ್ಕೆ ತಂದ ಗೋಪಾಲ ವಾಜಪೇಯಿಯವರೇ ನೀಡಿದ್ದಾರೆ. ಹಿಂದೆ ‘ನಾಗಮಂಡಲ’ ಚಿತ್ರದ ಗೀತೆಗಳ ಯಶಸ್ಸು ತಾಂತ್ರಿಕ ಕಾರಣಗಳಿಂದ ಗೋಪಾಲ ವಾಜಪೇಯಿಯವರಿಗೆ ಸಿಕ್ಕದೇ ಹೋಗಿತ್ತು. ಈ ಚಿತ್ರದ ಗೀತೆಗಳು ಇಸ್ಮಾಯಿಲ್ ದರ್ಬಾರ್ ಅವರ ಸಂಗೀತದಲ್ಲಿ ವಿಭಿನ್ನವಾಗಿ ಮೂಡಿ ಬಂದಿದ್ದು ಕನ್ನಡ ಚಿತ್ರಸಂಗೀತಕ್ಕೆ ಹೊಸತನ ನೀಡುವ ಎಲ್ಲಾ ಸಾಧ್ಯತೆ ಹೊಂದಿವೆ. ಗೋಪಾಲ ವಾಜಪೇಯಿಯವರಿಗೆ ಈ ಸಲ ಮನ್ನಣೆ ದೊರಕಲಿ. ಜೊತೆಗೆ  ಶಿವರಾಜ್ ಕುಮಾರ್ ಅವರಂತಹ ಜನಪ್ರಿಯ ಕಲಾವಿದರು ಈ ಸವಾಲಿನ ಪಾತ್ರ ನಿರ್ವಹಿಸುತ್ತಿರುವುದು ರೀಮೇಕ್ ಬರಾಟೆಯಲ್ಲಿ ಮುಳುಗಿರುವ  ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತಮ ಬೆಳವಣಿಗೆ ಕೂಡ ಹೌದು.

ಕಬೀರನ ಕಥೆ 1962ರಲ್ಲಿ ‘ಮಹಾತ್ಮ ಕಬೀರ್’ ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿತ್ತು ಎನ್ನುವುದನ್ನು ಕೆಲವರಾದರೂ ನೆನಪಿಸಿಕೊಂಡಿದ್ದಾರೆ. ರಾಜ್ ಕುಮಾರ್, ಕೃಷ್ಣಕುಮಾರಿ, ಉದಯಕುಮಾರ್ ಅವರ ತಾರಾಗಣದಲ್ಲಿ ಮೂಡಿ ಬಂದಿದ್ದ  ಚಿತ್ರವನ್ನು ಪಿ.ಶ್ರೀನಿವಾಸ್ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಸಂಗೀತ ನೀಡದ್ದ ಅನುಸೂಯ ದೇವಿ ಕನ್ನಡದ ಮೊದಲ ಸಂಗೀತ ನಿರ್ದೇಶಕಿ ಎನ್ನಿಸಿಕೊಂಡಿದ್ದಾರೆ. ಎಂ.ನರೇಂದ್ರ ಬಾಬು ಈ ಚಿತ್ರದ ಗುಣಾತ್ಮಕತೆಗೆ ಕಾರಣರಾಗಿದ್ದರು. ಇದಕ್ಕೂ ಹಿಂದೆ ಕೂಡ ಕಬೀರ್ ಕನ್ನಡ ಬೆಳ್ಳಿತೆರೆಯ ಮೇಲೆ ಬಂದಿದ್ದ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿ. ಮೊದಲ ಸಲ ಕಬೀರನನ್ನು ಬೆಳ್ಳಿತೆರೆಯ ಮೂಲಕ ಕನ್ನಡಿಗರಿಗೆ ಪರಿಚಯಿಸಿದ  ‘ಮಹಾತ್ಮ ಕಬೀರ್’ ಎನ್ನುವ ಹೆಸರಿನ ಈ ಚಿತ್ರ ಮೂಡಿ ಬಂದಿದ್ದು ಕೂಡ ಒಂದು ವಿಶಿಷ್ಟ ಸನ್ನಿವೇಶದಲ್ಲಿ. 1947ರಲ್ಲಿ ಭಾರತ ಸ್ವಾತಂತ್ರ್ಯವಾಗುವುದರ ಜೊತೆಗೆ ದೇಶ ವಿಭಜನೆ ಕೂಡ ಆಯಿತು. ಈ ಹಿನ್ನೆಲೆಯಲ್ಲಿ ಮತೀಯ ಗಲಭೆಗಳು ಆರಂಭವಾದವು. ಇದಕ್ಕೆ ಸಿನಿಮಾ ಮೂಲಕ ಪರಿಹಾರ ಕಂಡು ಕೊಳ್ಳುವ ಸದಾಶಯದೊಂದಿಗೆ ಆರ್.ನಾಗೇಂದ್ರರಾಯರು ನಿರ್ಮಿಸಿ ನಿರ್ದೇಶಿಸಿದ ಚಿತ್ರ ಇದು. ನಾಗೇಂದ್ರ ರಾಯರು ‘ವಸಂತ ಸೇನ’ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ತಂದಿದ್ದರು. ಅವರಿಗೆ ಸಿನಿಮಾದ ಸಾಂಸ್ಕೃತಿಕ ಸಾಧ್ಯತೆ ಕುರಿತು ಅಪಾರ ನಂಬಿಕೆ ಇತ್ತು. ಜಾತಿಯ ಗಡಿಗಳನ್ನು ದಾಟಿ ಮಾನವೀಯ ನೆಲೆಯಲ್ಲಿ ಅವರು ‘ಮಹಾತ್ಮ ಕಬೀರ್’ ಚಿತ್ರವನ್ನು ರೂಪಿಸಿದ್ದರು.

ಆಗ ದಕ್ಷಿಣ ಭಾರತದ ಎಲ್ಲಾ ಚಿತ್ರಗಳು ಮದ್ರಾಸಿನಲ್ಲಿಯೇ ಸೆನ್ಸಾರ್ ಆಗ ಬೇಕಿತ್ತು. ಸಂಬಂಧಮ್ ಮೊದಲಿಯಾರ್ ಆಗ ಸೆನ್ಸಾರ್ ಆಫೀಸರ್ ಆಗಿದ್ದರು. ಬ್ರಿಟೀಷರ ಕಾಲದ ನಿಯಮಗಳೇ ಆಗಿನ್ನೂ ಜಾರಿಯಲ್ಲಿದ್ದವು.  ಅವರು ದೇಶದ ಬಹುಭಾಗ  ಕೋಮುಗಲಭೆಯಲ್ಲಿ ಹತ್ತಿ ಉರಿಯುತ್ತಿರುವಾಗ ಇಂತಹ ಚಿತ್ರಕ್ಕೆ ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ನಾಗೇಂದ್ರ ರಾಯರು ಚಿತ್ರದ ಸದಾಶಯದ ಕುರಿತು ಸಾಕಷ್ಟು ವಿನಂತಿಸಿದ ಮೇಲೆ ಹೈದರಾಬಾದಿನಿಂದ ಮುಸ್ಲಿಂ ಮುಖಂಡರನ್ನು ಕರೆಸಿ ಅವರಿಗೆ ಚಿತ್ರ ತೋರಿಸಿದರು. ಆಗ ಹೈದರಾಬಾದ್ ಉಗ್ರಚಿಂತನೆಯ ರಜಾಕರ ಆಕ್ರಮಣದಲ್ಲಿತ್ತು. ಅಲ್ಲಿನ ಮುಸ್ಲಿಂ ಮುಖಂಡರು ಉಗ್ರವಾದದ ಪ್ರತಿಪಾದಕರೇ ಆಗಿದ್ದರು. ಆದರೆ  ಅವರು ‘ಕಬೀರ್’ ಚಿತ್ರವನ್ನು ನೋಡಿ ‘ನಮ್ಮ ಸಣ್ಣತನಗಳು ಚಿತ್ರದಿಂದ ದೂರವಾದವು, ದಯಾಮಯನಾದ ಅಲ್ಲಾಹ್‍  ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲೆಂದೇ ಈ ಸಿನಿಮಾ ತೋರಿಸಿರ ಬೇಕು, ಹೈದರಾಬಾದಿನಲ್ಲಿ ಕೂಡ  ಈ ಚಿತ್ರ ತೋರಿಸಿ’ ಎಂದು ಪ್ರಶಂಸಿಸಿದರು. ನಂತರ ಕೂಡ ಮೊದಲಿಯಾರರು ಹಲವು ಶರತ್ತುಗಳ ಮೂಲಕ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದರು.

1947ರ ನವೆಂಬರ್ 4ರಂದು ‘ಮಹಾತ್ಮ ಕಬೀರ್’ ತೆರೆ ಕಂಡಿತು. ನಂತರ ಪವಾಡವೇ ಸಂಭವಿಸಿತು. ಚಿತ್ರದುರ್ಗಾ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ 17ರಂದು ನೀಡಿರುವ ತೀರ್ಪಿನಲ್ಲಿ ವಿಶೇಷವಾಗಿ ಉಲ್ಲೇಖಿಸಿರುವಂತೆ ಈ ಚಿತ್ರ ತೆರೆ ಕಂಡ ಬೆಂಗಳೂರು, ಮೈಸೂರು, ಉಡುಪಿ, ಶಿವಮೊಗ್ಗ, ಹಾಸನ, ರಾಣಿಬೆನ್ನೂರು, ಹುಬ್ಬಳ್ಳಿ, ಗದಗ ಮತ್ತು ಸೇಲಂಗಳಲ್ಲಿ ಕೋಮುಗಲಭೆಗಳು ಸಂಪೂರ್ಣ ನಿಂತು ಹೋಗಿದ್ದವು.  ಭಾರತೀಯ ಚಿತ್ರರಂಗ ಇತಿಹಾಸದಲ್ಲಿಯೇ ಚಲನಚಿತ್ರವೊಂದು ಇಂತಹ ಪರಿಣಾಮ ಬೀರಿದ ಉದಾಹರಣೆ ಸಿಗುವುದು ವಿರಳ. ಚರಿತ್ರೆಕಾರರು ಗುರುತಿಸಿರುವಂತೆ ಇದು  ಸೆಕ್ಯುಲರಿಸಂ ಹೇಳಿರಲಿಲ್ಲ. ಧರ್ಮದ ಮಿತಿಗಳನ್ನೂ ಹೇಳಿರಲಿಲ್ಲ. ಜಾತಿ-ಮತಗಳ ಗಡಿಯನ್ನು ದಾಟಿದ ಮಾನವೀಯತೆಯ ಅಗತ್ಯವನ್ನು ಹೇಳಿತ್ತು. ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ಉಗ್ರವಾದಗಳನ್ನು ಬಿಂಬಿಸುವಂತಹ ಪಾತ್ರಗಳು ಚಿತ್ರದಲ್ಲಿದ್ದವು. ಆದರೆ ಅವುಗಳಿಂದ ಆಗುವ ಅನಾಹುತಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿತ್ತು. ಶಿಕ್ಷೆಗೆ ಒಳಗಾದ ಕಬೀರನನ್ನು ಶ್ರೀರಾಮನು ರಕ್ಷಿಸುವ ಕೊನೆಯ ದೃಶ್ಯವನ್ನು ನೋಡಿ ಕಣ್ಣಿರು ಸುರಿಸದವರೇ ಇರಲಿಲ್ಲ.  ಈ ದೃಶ್ಯವೇ ಅವರೊಳಗಿನ ಕಲ್ಮಶಗಳೆಲ್ಲವನ್ನೂ ತೊಳೆದು ಹಾಕುತ್ತಿತ್ತು. ಕಬೀರನ ಪಾತ್ರದಲ್ಲಿ ಸುಬ್ಬಯ್ಯ ನಾಯ್ಡು, ಮಡದಿ ಲೋಯಿಯ ಪಾತ್ರದಲ್ಲಿ ಲಕ್ಷ್ಮಿದೇವಿ, ಕಬೀರನ ವಿರುದ್ದ ಜನರನ್ನು ಎತ್ತಿಕಟ್ಟುವ ಖಳ ಧರ್ಮದಾಸನಾಗಿ ಸ್ವತಃ ಆರ್.ನಾಗೇಂದ್ರ ರಾಯರು ಮಿಂಚಿದ್ದರು. ಎ.ವಿ.ಎಂ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿತವಾದ ಚಿತ್ರ ಮೈಸೂರಿನ ರಾಜ್‍ ಕಮಲ್ ಚಿತ್ರಮಂದಿರದಲ್ಲಿ ಶತದಿನೋತ್ಸವವನ್ನು ಕಂಡಿತು. ಆಗೆಲ್ಲಾ ಕನ್ನಡ ಚಿತ್ರಗಳು 3-4 ವಾರಗಳ ಪ್ರದರ್ಶನವನ್ನು ಕಾಣುವುದೇ ವಿಶೇಷವಾಗಿತ್ತು. ಈ ಚಿತ್ರ ಶತದಿನ ಕಂಡು ಆ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ ಎನ್ನಿಸಿಕೊಂಡಿತು. ಕರ್ನಾಟಕ ಏಕೀಕರಣಗೊಳ್ಳದಿದ್ದ  ಆ ಕಾಲದಲ್ಲಿ ಕನ್ನಡ ಮಾತನಾಡುವ ಎಲ್ಲಾ ಭಾಗಗಳಲ್ಲು ಯಶಸ್ಸು ಪಡೆದ ಚಿತ್ರ ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಕೂಡ ಜನ ಮನ್ನಣೆ ಪಡೆದಿತ್ತು.

ರಾಷ್ಟ್ರೀಯ ಭಾವೈಕ್ಯತೆ, ಪ್ರಗತಿಪರ ಎನ್ನುವ ಹೆಸರಿನಲ್ಲಿ ಹುಸಿ ತಾತ್ವಿಕತೆಯ ಚಿತ್ರಗಳು ತೆರೆ ಕಾಣುತ್ತಿರುವ ದಿನಗಳಲ್ಲಿ ‘ಮಹಾತ್ಮ ಕಬೀರ್’ ಒಂದು ಮಹತ್ವದ ಮೈಲಿಗಲ್ಲಾಗಿದೆ. ಸಿನಿಮಾದಿಂದ ಸಮಾಜದಲ್ಲಿ ಆಗುತ್ತಿರುವ ಅನಾಹುತಗಳ ಉದಾಹರಣೆಗಳು ಕೇಳಿ ಬರುತ್ತಿರುವಾಗ ಸಿನಿಮಾದಿಂದ ಇಂತಹ ಪರಿಣಾಮ ಕೂಡ ಸಾಧ್ಯ ಎಂದು ತೋರಿಸಿಕೊಟ್ಟ ಎಪ್ಪತ್ತು ವರ್ಷ ಹಿಂದಿನ ಮೊದಲ ‘ಕಬೀರ’ನ ಮಾದರಿಯನ್ನು ಹೊಸ ‘ಕಬೀರ’ನೂ ಮುಂದುವರೆಸಿದರೆ ಕನ್ನಡ ಚಿತ್ರರಂಗಕ್ಕೆ ಕೂಡ ಹೊಸತನದ ತಿರುವು ದೊರಕೀತು.

2 COMMENTS

  1. 1947ರಲ್ಲಿ ತೆರೆಕಂಡ ಮಹಾತ್ಮ ಕಬೀರ್ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದವರು ನಾಗೇಂದ್ರ ರಾಯರು ಎಂದಿದೆ. ಈ ಚಿತ್ರವನ್ನು ಸುಬ್ಬಯ್ಯ ನಾಯ್ಡು ಮತ್ತು ನಾಗೇಂದ್ರ ರಾಯರು ಸೇರಿ ನಿರ್ಮಿಸಿದ್ದಲ್ಲವೇ?
    ಶತದಿನೋತ್ಸವ ಕಂಡ ಮೊದಲ ಚಿತ್ರ ಇದು ಎಂದಿದೆ. 1943ರಲ್ಲಿ ತೆರೆಕಂಡ ಸತ್ಯ ಹರಿಶ್ಚಂದ್ರ ಶತದಿನೋತ್ಸವ ಕಂಡ ಮೊದಲ ಚಿತ್ರ ಇರಬೇಕು. ಅಲ್ಲವೇ?

  2. ಲೇಖಕರೇ, “ಕಬೀರನ ಕಥೆ 1962ರಲ್ಲಿ ‘ಮಹಾತ್ಮ ಕಬೀರ್’ ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿತ್ತು” ಎಂದು ಹೇಳಿದ್ದೀರಿ… ಆದರೆ ನಂತರದ ಸಾಲುಗಳಲ್ಲಿ ೧೯೪೭ ನವೆಂಬೆರ್ ೪ ರಂದು ತೆರೆ ಕಂಡಿತು ಅಂತ ಹೇಳಿದ್ದೀರಿ… ಇದರಲ್ಲಿ ಯಾವುದು ಸರಿ?

Leave a Reply