ರಾಜ್ಯಾದ್ಯಂತ ನಾಳೆ ಬಂದ್: ಹೊಟೇಲ್, ಚಿತ್ರಮಂದಿರ, ಮಾಲ್ ಇರಲ್ಲ… ಹಾಲು, ಔಷಧಕ್ಕೆ ತೊಂದರೆಯಾಗಲ್ಲ…

(ಸಂಗ್ರಹ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಮಹಾದಾಯಿ ನ್ಯಾಯಾಧಿಕರಣ ತೀರ್ಪು ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದು, ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಗಿ ಬಂದ್ ಆಗುವ ಸೂಚನೆಗಳಿವೆ.

ಇನ್ನು ಉತ್ತರ ಭಾಗದ ರಾಜ್ಯಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ನರಗುಂದ ಹಾಗೂ ನವಲಗುಂದದಲ್ಲಿ ಹೆಚ್ಚಿನ ಗಲಭೆಯಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕೇಂದ್ರ ಸರ್ಕಾರದಿಂದ ಎರಡು ಆರ್‍ಎಎಫ್ ಹಾಗೂ ಎರಡು ಬಿಎಸ್‍ಎಫ್ ತುಕಡಿಗಳನ್ನು ಕರೆಸಲಾಗಿದೆ. ಕನ್ನಡ ಪರ ಸಂಘಟನೆಗಳ ಬಂದ್ ಗೆ ಕರೆಗೆ ಬೆಂಗಳೂರಿನ ಮಾಲ್, ಆಟೋ, ಟ್ಯಾಕ್ಸಿ ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಅಷ್ಟೇ ಅಲ್ಲದೇ ಕನ್ನಡ ಚಿತ್ರರಂಗ, ಖಾಸಗಿ ಶಾಲೆಗಳ ಒಕ್ಕೂಟ, ಹೋಟೆಲ್ ಮಾಲೀಕರ ಸಂಘ, ರೆಸ್ಟೋರೆಂಟ್, ಆಟೋ, ಟ್ಯಾಕ್ಸಿ ಚಾಲಕರ ಸಂಘ, ಹೋಟೆಲ್ ಸೇರಿದಂತೆ ಎಲ್ಲವೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. ಇನ್ನು ಖಾಸಗಿ ಶಾಲೆಗಳಿಗೆ ರಜೆ ಘೋಷಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಸೂಚನೆ ನೀಡಿದೆ. ನಾಳೆಯ ಪರಿಸ್ಥಿತಿ ನೋಡಿಕೊಂಡು ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ನಾಳೆ ಬೆಳಗ್ಗೆ 6ರಿಂದ ಸಂಜೆ 6ಗಂಟೆ ತನಕ ಬಂದ್ ಬಿಸಿ ತೀವ್ರವಾಗಿ ತಟ್ಟಲಿದೆ.

ಇವುಗಳು ಸಿಗಲ್ಲ: ಆಟೋ, ಟ್ಯಾಕ್ಸಿ, ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ, ಏರ್ ಪೋರ್ಟ್ ನಲ್ಲಿ ಟ್ಯಾಕ್ಸಿ ಸೇವೆ.

ಇವುಗಳು ಸಿಗುತ್ತವೆ: ಹಾಲು, ಮೆಡಿಕಲ್ ಶಾಪ್, ಪೇಪರ್, ಮೆಟ್ರೋ ರೈಲು ಸಂಚಾರ.

ಆದರೆ, ಮತ್ತೊಂದೆಡೆ ಸರ್ಕಾರಿ ಇಲಾಖೆ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿರುವುದಿಷ್ಟು:

‘ಸಂಘಟನೆಗಳ ಭಾವನೆಗೆ ನಮ್ಮ ವಿರೋಧವಿಲ್ಲ. ಆದರೆ, ಕಾನೂನು ಸುವ್ಯವಸ್ಥೆ ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರ್ಕಾರ ಬಂದ್ ಗೆ ಬೆಂಬಲ ನೀಡುತ್ತಿಲ್ಲ. ಆದರೆ, ನೆಲ ಜಲ ವಿಚಾರದಲ್ಲಿ ನಮ್ಮ ಪಕ್ಷ ಜನರ ಭಾವನೆಗಳಿಗೆ ಸ್ಪಂದಿಸುತ್ತದೆ. ಹಾಗೆಂದು ಸರ್ಕಾರಿ ಇಲಾಖೆ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಬಂದ್ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಸೂಕ್ಷ್ಮ ಜಿಲ್ಲೆಗಳಾದ ಮುಂಬೈ ಕರ್ನಾಟಕ ಭಾಗದಲ್ಲಿ ಕೇಂದ್ರ ಪಡೆ ನಿಯೋಜಿಸಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಹೊಣೆಗಾರಿಕೆ ಆಯಾ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಹಿಸಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಎಲ್ಲಿಯೂ ಅಹಿತಕರ ಘಟನೆ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಎಲ್ಲ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು ಸುಮಾರು 235 ಮಂದಿಯನ್ನು ಬಂಧಿಸಲಾಗಿದೆ.’

Leave a Reply