ಶುಕ್ರವಾರದ ಬ್ಯಾಂಕ್ ಮುಷ್ಕರಕ್ಕೆ 80 ಸಾವಿರ ಶಾಖೆಗಳು ಬಂದ್, ₹ 15 ಸಾವಿರ ಕೋಟಿ ವಹಿವಾಟಿಗೆ ಪೆಟ್ಟು

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಸ್ಟೇಟ್ ಬ್ಯಾಂಕ್ ಜತೆಗೆ ಇತರೆ ಬ್ಯಾಂಕ್ ಗಳ ವಿಲೀನ ಹಾಗೂ ಇತರೆ ನಿರ್ಧಾರಗಳನ್ನು ವಿರೋಧಿಸಿ ಶುಕ್ರವಾರ ಸಾರ್ವಜನಿಕ ವಲಯ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ರು. ಇದರ ಪರಿಣಾಮವಾಗಿ ದೇಶದ 80 ಸಾವರಿ ಬ್ಯಾಂಕ್ ಶಾಖೆಗಳ ಕಾರ್ಯ ಬಂದ್ ಆಗಿದ್ದವು.

ಈ ಮುಷ್ಕರದಿಂದ ಖಾಸಗಿ ವಲಯ ಬ್ಯಾಂಕ್ ಗಳು ದೂರ ಉಳಿದಿದ್ದ ಪರಿಣಾಮ ಐಸಿಐಸಿಐ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ ಗಳು ಎಂದಿನಂತೆ ಕಾರ್ಯಾ ನಿರ್ವಹಿಸಿದವು. ಸಾರ್ವಜನಿಕ ವಲಯ ಬ್ಯಾಂಕ್ ಗಳ ಮುಷ್ಕರದಿಂದ ಹಣ ಠೇವಣಿ, ಚೆಕ್ ಪಾಸ್ ಮತ್ತು ಹಣ ಪಡೆಯುವಿಕೆ, ಸರ್ಕಾರಿ ಬಾಂಡ್ ಗಳ ಹರಾಜು ಸೇರಿದಂತೆ ಒಟ್ಟು ₹ 15 ಸಾವಿರ ಕೋಟಿ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ಬಂದಿವೆ.

ದೇಶದ ವಿವಿಧ ಬ್ಯಾಂಕುಗಳ ಸಂಘದ ಕೇಂದ್ರವಾಗಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ಸ್ ಯೂನಿಯನ್ಸ್ (ಯುಎಫ್ ಬಿಯು) ಈ ಮುಷ್ಕರ ಕರೆದಿತ್ತು. ಇದರಲ್ಲಿ ಸುಮಾರು 9 ಸಂಸ್ಥೆಗಳಿಂದ 8 ಲಕ್ಷ ಬ್ಯಾಂಕ್ ನೌಕರರು ಸೇರಿದ್ದು, ಹೀಗಾಗಿ ಮುಷ್ಕರ ಕಾವು ಹೆಚ್ಚಿತ್ತು. ಆದರೂ ಎಸ್ ಬಿ ಐ ಸೇರಿದಂತೆ ಇತರೆ ಬ್ಯಾಂಕ್ ಗಳು ಸಾರ್ವಜನಿಕರಿಗೆ ಮುಷ್ಕರದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು.

‘ಸಾರ್ವಜನಿಕ ವಲಯ ಬ್ಯಾಂಕ್ ಗಳು ಈಗಾಗಲೇ ಕಡಿಮೆ ಆದಾಯದಲ್ಲಿವೆ. ಇನ್ನು ಖಾಸಗಿ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ, ಈ ಬ್ಯಾಂಕುಗಳಲ್ಲಿ ಜಡ ಮೊತ್ತದ ಪ್ರಮಾಣವು ಹೆಚ್ಚಿದೆ. ಈ ಮಧ್ಯೆ ಯುಎಫ್ ಬಿಯು ಈ ರೀತಿಯ ಮುಷ್ಕರ ನಡೆಸಿರುವುದರಿಂದ ಮತ್ತಷ್ಟು ಹೆಚ್ಚಿನ ನಷ್ಟವಾಗಲಿದೆ’ ಎಂದಿದ್ದಾರೆ ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ಡಿ.ಎಸ್ ರಾವತ್.

Leave a Reply