ಪ್ರತಿವರ್ಷವೂ ಹೆಚ್ಚುತ್ತಿದೆ ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ, ನೀವು ನಿಲ್ಲೋದು ಯಾರ ಪರ?

ಭಾಗ -1

author-ananthramuಅಂತೂ ಬಾಲಿವುಡ್ ನಟ ಸಲ್ಮಾನ್ ಖಾನ್ ಜೋದಪುರ ಬಳಿ ಕೃಷ್ಣಮೃಗದ ಹತ್ತಿರ ಸಂಬಂಧಿ ಚಿಂಕಾರವನ್ನು ಕೊಂದ ಆರೋಪದಿಂದ ಮುಕ್ತರಾಗಿದ್ದಾರೆ. 1998ರಲ್ಲಿ ರಾಜಸ್ಥಾನದ ಭವಾಲ್ ಗ್ರಾಮದ ಬಳಿಯ ಕಾಡಿನಲ್ಲಿ `ಹಂ ಸಾಥ್ ಸಾಥ್ ಹೈ’ ಚಿತ್ರೀಕರಣಕ್ಕೆ ಹೋದ ಈ ನಟ ಅಲ್ಲಿ ಒಂದು ಕೃಷ್ಣಮೃಗವನ್ನು ಗುಂಡಿಟ್ಟು ಕೊಂದ ಆರೋಪ ಹೊತ್ತು ಹದಿನೆಂಟು ವರ್ಷ ಕೋರ್ಟಿನ ಕಟಕಟೆ ಹತ್ತಬೇಕಾಯಿತು. 2007ರಲ್ಲಿ ಒಂದು ವಾರ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. ಇದೀಗ ರಾಜಸ್ಥಾನದ ಹೈಕೋರ್ಟ್ ಆತ ಅಪರಾಧಿ ಎನ್ನಲು ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ಹೇಳಿ ಖುಲಾಸೆ ಮಾಡಿದೆ. ಆದರೆ ಕೃಷ್ಣಮೃಗಗಳನ್ನು ಕೊಂದ ಆರೋಪ ಕೋರ್ಟಿನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ ಜೊತೆಗೆ ಲೈಸೆನ್ಸ್ ಮುಗಿದಿದ್ದರೂ ಬಂದೂಕನ್ನು ಉಪಯೋಗಿಸಿದ ಅಪರಾಧವೂ ಆತನ ಮೇಲಿದೆ.

ಇದಾದ ನಂತರ ನಾಟಕೀಯವೆಂಬಂತೆ ತಲೆ ಮರೆಸಿಕೊಂಡಿದ್ದ ಸಲ್ಮಾನ್ ಖಾನ್‍ನ ಡ್ರೈವರ್ ಹರೀಶ್ ದುಲಾನಿ, ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ `ಖಾನ್ ಕೃಷ್ಣಮೃಗವನ್ನು ಕೊಂದದ್ದು ನಿಜ. ಅಷ್ಟೇ ಅಲ್ಲ, ಅದರ ಕತ್ತು ಸೀಳಲೂ ಹೊರಟಿದ್ದ’ ಎಂದು ಹೇಳಿದ್ದಾನೆ. ತನಗೆ ರಕ್ಷಣೆ ಬೇಕೆಂದು ಕೇಳಿಕೊಂಡಿದ್ದಾನೆ. ಈ ಕೇಸ್ ಇಲ್ಲಿಗೇ ಮುಕ್ತಾಯವಾದಂತೆ ಕಾಣುವುದಿಲ್ಲ. ರಾಜಸ್ಥಾನದ ಕಾನೂನು ಮಂತ್ರಿ ರಾಜೇಂದ್ರ ರಾಥೋಡ್ ಸುಪ್ರೀಂ ಕೋರ್ಟ್‍ಗೆ ಕೇಸ್ ಒಯ್ಯಲು ತೀರ್ಮಾನಿಸಿದ್ದಾರೆ.

ಈ ಹದಿನೆಂಟು ವರ್ಷಗಳಲ್ಲಿ ಒಂದು ವೇಳೆ ಆ ಕೃಷ್ಣಮೃಗಗಳು ಸತ್ತಿರದಿದ್ದರೆ ಈ ಹೊತ್ತಿಗೆ ಕನಿಷ್ಠ ನೂರು ಕೃಷ್ಣಮೃಗಗಳು ಹುಟ್ಟಿ ಬೆಳೆದು ನಲಿದಾಡುತ್ತಿದ್ದವು. ಕೃಷ್ಣಮೃಗಗಳ ಸಾಧಾರಣ ಆಯಸ್ಸು 15 ವರ್ಷ. ಹೆಣ್ಣಾದರೆ ಎರಡು ವರ್ಷದ ನಂತರ ಬೆದೆಗೆ ಬರುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಮರಿಹಾಕುತ್ತದೆ. ತೀರ್ಪೇನೋ ಬಂದಾಯಿತು ಆದರೆ ಸಾರ್ವಜನಿಕರ ಬಾಯಿ ಮುಚ್ಚಿಸುವುದು ಸುಲಭವಲ್ಲ. ಹಾಗಾದರೆ ಕೃಷ್ಣಮೃಗಗಳನ್ನು ಕೊಂದವರು ಯಾರು? ಎಂದು ನಟಿ ರೇಣುಕಾ ಶಾಹನೆ ಕೇಳುತ್ತಿದ್ದಾರೆ. ಪಾಟೀ ಸವಾಲಿಗೆ ಬರಬೇಕಾಗಿದ್ದ ಡ್ರೈವರ್ ಹರೀಶ್ ದುಲಾನಿ ನಾಪತ್ತೆಯಾಗಿದ್ದ. ಕೇಸ್ ಖುಲಾಸ್? ಕೃಷ್ಣಮೃಗಗಳ ಬೇಟೆ ನಿಷಿದ್ಧ ಎಂದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಸ್ಪಷ್ಟವಾಗಿಯೇ ಹೇಳಿದೆ. ಅಪರಾಧಿ ಯಾರೇ ಇರಲಿ, ಒಂದಂತೂ ಸ್ಪಷ್ಟ. ಕೈ ಕಡಿತಕ್ಕೆ ಕೋವಿ ಬಳಸಿ ವನ್ಯಜೀವಿಗಳನ್ನು ಕೊಲ್ಲುವ ಪರಿಪಾಟಕ್ಕೆ ಕಾನೂನು ಎಂದೋ ತಡೆಹಾಕಿದೆ ಎಂದು ನಿಟ್ಟುಸಿರಿಟ್ಟವರಿಗೆ ಕೃಷ್ಣಮೃಗಗಳ ವಧೆ ನೋವು ತಂದಿದೆ.

2

ಇದಕ್ಕೆ ವಿರುದ್ಧವಾಗಿ ಇನ್ನೊಂದು ಸಂಗತಿ ಇಲ್ಲಿದೆ ನೋಡಿ. ಕಳೆದ ತಿಂಗಳಲ್ಲಿ ಕರ್ನಾಟಕ ಒಂದರಲ್ಲೇ ಹತ್ತು ಚಿರತೆಗಳನ್ನು ಕೊಲ್ಲಲಾಗಿದೆ. ಬಂಡೀಪುರ ಅರಣ್ಯ ಭಾಗದಲ್ಲೇ ಇರುವ ಹಂಚೀಪುರ ಎಂಬ ಗ್ರಾಮದಲ್ಲಿ ಚಿರತೆ ದಾಳಿಗೆ ಪ್ರತಿದಾಳಿ ಎಂಬಂತೆ ವಿಷ ಹಾಕಿದ ನಾಯಿಯನ್ನು ತಿಂದು ಎರಡು ಚಿರತೆಗಳು ಸತ್ತವು. ಈ ಪೈಕಿ ಒಂದು ಅಪರೂಪದ ಕರಿ ಚಿರತೆ. ಕಳೆದ ವಾರವಷ್ಟೇ ದಾವಣಗೆರೆ ಜಿಲ್ಲೆಯ ಮೈದೂರಿನ ಬಳಿ ಜನರ ಮೇಲೆ ಹಲ್ಲೆ ಮಾಡೀತೆಂಬ ಭೀತಿಯಿಂದ ಗ್ರಾಮಸ್ಥರು ದೊಣ್ಣೆಯಲ್ಲಿ ಬಡಿದು ಚಿರತೆಯ ಕಥೆ ಮುಗಿಸಿದರು. ಸತ್ತ ಚಿರತೆಯ ಜೊತೆ ನಿಂತು ಪತ್ರಿಕೆಗಳಿಗೆ ಪೋಸ್ ಕೊಟ್ಟರು. ಚಿರತೆಯನ್ನು ಕೊಲ್ಲದಿದ್ದರೆ ಅದು ನಮ್ಮನ್ನು ಕೊಲ್ಲುತ್ತಿತ್ತು ಎನ್ನುವ ಸಮಜಾಯಿಷಿ ಅವರದು. ಇಲ್ಲೇ ಕಾನೂನಿನ ತಾಕಲಾಟ, ಪಿರಿಪಿರಿ ಹುಟ್ಟುವುದು. ಮನುಷ್ಯ-ವನ್ಯಜೀವಿ ಸಂಘರ್ಷ ಈಗೀಗ ಸಾಧಾರಣ ಸಂಗತಿಯಂತಾಗಿದೆ. ಪ್ರತಿವರ್ಷ ಏರುತ್ತಲೇ ಇದೆ.

ತಮಿಳುನಾಡಿನ ಮಧುಕರೈ ಎಂಬ ಪಟ್ಟಣ ಇರುವುದು  693 ಚದರ ಕಿಲೋ ಮೀಟರ್ ವ್ಯಾಪ್ತಿಯ ಕೊಯಮತ್ತೂರು ಅರಣ್ಯ ವಿಭಾಗದಲ್ಲಿ. ಇಲ್ಲಿಯದು ಇನ್ನೊಂದು ಬಗೆಯ ಆತಂಕ. 1999-2016ರ ಮಧ್ಯೆ ಅಲ್ಲಿನ ಕೃಷಿಕರ ಮೇಲೆ ಆನೆಗಳು ಎರಗಿ ಕನಿಷ್ಠ 109 ಮಂದಿ ಸತ್ತಿದ್ದಾರೆ. 24 ಆನೆಗಳು ಪವರ್ ಲೈನಿಗೆ ಸಿಕ್ಕಿ ಸತ್ತಿವೆ. 5 ಆನೆಗಳನ್ನು ರೈಲಿನ ಎಂಜಿನ್ ಕಚಕ್ ಎನ್ನಿಸಿದೆ. ಐದು ವರ್ಷಗಳಲ್ಲಿ ವನ್ಯಜೀವಿಗಳು ಮಾಡಿದ ಹಾನಿಗಾಗಿ ಅಲ್ಲಿನ ಅರಣ್ಯ ಇಲಾಖೆಗೆ ಪರಿಹಾರಕ್ಕಾಗಿ 1,828 ಅರ್ಜಿಗಳು ಹೋಗಿವೆ. ಪಟಾಕಿ ಸಿಡಿಸಿದರೂ ಹೋಗುವುದಿಲ್ಲ, ಟ್ರೆಂಚ್ ತೆಗದರೂ ಪ್ರಯೋಜನವಿಲ್ಲ, ಬೆಳೆ ನಾಶವಂತೂ ಪ್ರತಿವರ್ಷದ ಚಟುವಟಿಕೆಯೆಂಬಂತೆ ಸಾಗಿದೆ ಎನ್ನುತ್ತಾರೆ ಅಲ್ಲಿನ ರೈತರು.

ಇದರ ಅಧ್ಯಯನ ಮಾಡಿದ ತಜ್ಞರು ಇತ್ತ ಮನುಷ್ಯರ ಕಡೆಗೇ ಬೆರಳು ತೋರಿಸುತ್ತಿದ್ದಾರೆ. ಮಧುಕರೈ ಸುತ್ತ ಆವಾಸ (ಹ್ಯಾಬಿಟ್ಯಾಟ್) ಛಿದ್ರವಾಗಿದೆ ಅಂದರೆ ಮೂಲನೆಲೆಗೇ ಕುತ್ತುಬಂದಿದೆ. ಮೆಟ್ಟುಪಾಳ್ಯಂ-ಊಟಿ ಹೆದ್ದಾರಿ ಈ ಕಾಡಿನ ಮಧ್ಯೆಯೇ ಹಾಯುತ್ತದೆ. ಸದಾ ವಾಹನಗಳು ಗಿಜಿಗುಟ್ಟುತ್ತವೆ. ಆನೆಗಳ ಎಂದಿನ ಚಲನೆಯ ಮಾರ್ಗಕ್ಕೆ ಇದು ಅಡ್ಡಬಂದಿದೆ. ದೊಡ್ಡ ಆನೆಗಳು ಸತ್ತಾಗ ಮರಿ ಆನೆಗಳಿಗೆ ಮಾರ್ಗದರ್ಶನವೇ ಸಿಕ್ಕುತ್ತಿಲ್ಲ. ಅವು ಮನಸ್ಸು ಬಂದ ಕಡೆಗೆ ಹಾಯುತ್ತವೆ. ಈ ಎಲ್ಲ ನಿಜಾಂಶಗಳನ್ನು ಬಚ್ಚಿಟ್ಟು ವನ್ಯಜೀವಿಗಳನ್ನು ದೂಷಿಸಿದರೆ ಹೇಗೆ? ಇದು ಸಂರಕ್ಷಕರ ಅಳಲು.

1

ನೀಲ್ ಗಾಯ್ ಹಣ್ಣುಗಾಯಿ..

ದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಎಂಬ ಸರ್ಕಾರೇತರ ಸಂಸ್ಥೆ ಪ್ರಕಟಿಸುತ್ತಿರುವ `ಡೌನ್ ಟು ಅರ್ಥ್’ ಎಂಬ ಪಾಕ್ಷಿಕ ಪತ್ರಿಕೆ ಭಾರತದಲ್ಲಿ ವನ್ಯಜೀವಿಗಳ ಹತ್ಯೆ ಕುರಿತು ಭಯಂಕರ ಅಂಶಗಳನ್ನು ಇತ್ತೀಚೆಗೆ ಪ್ರಕಟಿಸಿದೆ. ವಿಶೇಷವಾಗಿ ನೀಲ್ ಗಾಯ್ ಮೃಗಗಳ ಹತ್ಯೆ ಕುರಿತು ದೀರ್ಘವಾಗಿ ಪ್ರಸ್ತಾಪಿಸಿದೆ. ನೀಲ್ ಗಾಯ್ ಸರಿಸುಮಾರು ಮಧ್ಯಮ ಗಾತ್ರದ ದನದಷ್ಟು ಎತ್ತರವಿರುವ ಜೀವಿ. ಜಿಂಕೆಯ ಸಂಬಂಧಿಯಂತೆ ಕಂಡರೂ ವಿಜ್ಞಾನಿಗಳು ಅದನ್ನು ದನದ ಗುಂಪಿಗೇ ಸೇರಿಸಿದ್ದಾರೆ. ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರದ ಹುಲ್ಲುಗಾವಲುಗಳಲ್ಲಿ ಇದರ ನೆಲೆ.

ಕಾಡಲ್ಲಿರುವುದು ಕಡಿಮೆ. ನೀಲ್ ಗಾಯ್ ಅರ್ಥಶಃ ನೀಲಿ ಹಸು. ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಅವುಗಳ ಬೇಟೆಯಾಡಿ ಶಾಶ್ವತವಾಗಿ ಅಲ್ಲಿ ಒಂದೂ ಇರದಂತೆ ಕೊಂದಿದ್ದಾರೆ. ಆದರೆ ಈ ಜೀವಿ ಅಳಿವಿನಂಚಿಗೆ ಎಲ್ಲಿ ಹೋಗುತ್ತದೋ ಎಂಬ ಭಾವಿಸಿ, ಟೆಕ್ಸಾಸ್ ಅದರ ಸಂರಕ್ಷಣೆ ಮಾಡಿದ್ದರಿಂದ ಈಗ ಅಲ್ಲಿ ಅವುಗಳ ಸಂಖ್ಯೆ 37,000ಕ್ಕೆ ಏರಿದೆ. ಆದರೆ ಅಲ್ಲೂ ಸಂತಾನ ಜಾಸ್ತಿಯಾಗಿ ಬೆಳೆ ನಾಶಮಾಡುತ್ತದೆಂಬ ಕಾರಣಕ್ಕೆ ಗುಂಡಿಟ್ಟು ಕೊಲ್ಲುತ್ತಿದ್ದಾರೆ. ಒಂದು ನೀಲ್ ಗಾಯ್ ಕೊಂದರೆ 500 ಡಾಲರ್ ಬಹುಮಾನ.

ನೀಲ್ ಗಾಯ್ ಗಳಿಗೆ ಪೈರೆಂದರೆ ಇಷ್ಟ. ಅವು ಸಹಜವಾಗಿ ನುಗ್ಗುತ್ತವೆ. ಬಿಹಾರದಲ್ಲಿ ಅವುಗಳ ದಾಂಧಲೆ ಎಷ್ಟಾಗಿತ್ತೆಂದರೆ ಬರದ ಕಷ್ಟದಲ್ಲಿ ನಲುಗಿದ್ದ ರಾಜ್ಯಗಳಲ್ಲಿ ಒಂದಾದ ಅಲ್ಲಿ ಹೇಗೋ ಅಷ್ಟಷ್ಟು ಬೆಳೆ ಬೆಳೆಯುತ್ತಿದ್ದ ರೈತರ ಜಮೀನಿಗೆ ನುಗ್ಗಿ ಚಿಗುರನ್ನೆಲ್ಲ ತಿಂದುಹಾಕುತ್ತಿದ್ದವು, ಅದೂ ಗುಂಪಿನಲ್ಲಿ ನುಗ್ಗಿ. ರೈತರು ಸರ್ಕಾರದ ಮೊರೆಹೋದರು, ನೀಲ್ ಗಾಯ್ ಗಳನ್ನು ಕೊಲ್ಲಲ್ಲು ಅನುಮತಿ ಕೇಳಿದರು.

ಸರ್ಕಾರಕ್ಕೋ ರೈತರ ಬಗ್ಗೆ ಮಾತ್ರ ಕಾಳಜಿ. ಪರ್ಮಿಷನ್ ಬೇಕಲ್ಲ. ಒತ್ತಡ ಹೇರುತ್ತಲೇ ರಾಜ್ಯ ಸರ್ಕಾರ, ಕೇಂದ್ರವನ್ನು ಕೇಳಿಕೊಂಡಿತು. ಕೇಂದ್ರಕ್ಕೂ ಪಜೀತಿ. ಅಂತಿಮವಾಗಿ ನೀಲ್ ಗಾಯ್ ಪರ ಯಾರೂ ವಕೀಲಿ ಮಾಡಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಕೇಂದ್ರ ಸರ್ಕಾರ 1972ರ ವನ್ಯಜೀವಿ ಸಂರಕ್ಷಣೆಯ ಕಾಯ್ದೆ (ಕಾಯ್ದೆ 11, ಸೆಕ್ಷನ್ 30) ಬಳಸಿತು. ವನ್ಯಜೀವಿಗಳು ಹೆಚ್ಚು ಹಿಂಸೆ ಮಾಡುವುದಾದರೆ ರೈತರಿಗೆ ನಷ್ಟವಾದರೆ ಅವನ್ನು ಕೊಲ್ಲಲು ಅರಣ್ಯ ಇಲಾಖೆಯ ಮುಖ್ಯಸ್ಥರು ಕಾನೂನು ಬಳಸಬಹುದು ಎಂದಿತು. ಸರ್ಕಾರ, 2015ರ ಡಿಸೆಂಬರ್ ನಲ್ಲೇ ಪರಿಸರ ಮತ್ತು ಅರಣ್ಯ ಸಚಿವಾಲಯದ ಮೂಲಕ ಬಿಹಾರದಲ್ಲಿ ನೀಲ್ ಗಾಯ್, ಉತ್ತರಾಕಾಂಡದಲ್ಲಿ ಕಾಡುಹಂದಿ, ಹಿಮಾಚಲದಲ್ಲಿ ರ್ಹೀಸಸ್ ಕೋತಿಗಳನ್ನು ಮಾರಕ ವನ್ಯಜೀವಿಗಳೆಂದು ಘೋಷಿಸಿತು.

ಬಿಹಾರ ತಡಮಾಡಲಿಲ್ಲ, ತರಬೇತಿ ಪಡೆದಿದ್ದ ಶೂಟರ್ಸ್ ಗಳನ್ನು ಹೈದರಾಬಾದಿನಿಂದ ಕರೆಸಿತು. ಕಳೆದ ಜೂನ್ ತಿಂಗಳ ಮೊದಲ ವಾರದಲ್ಲಿ ಕೇವಲ ಮೂರೇ ದಿನದಲ್ಲಿ 250 ನೀಲ್ ಗಾಯ್ ಗಳನ್ನು ಕೊಂದು ಅವುಗಳ ಮೇಲೆ ಬಂದೂಕು ಇಟ್ಟು ವೀರಾವೇಶದ ಪೋಸ್ ಕೊಟ್ಟರು ಶೂಟರ್ ಗಳು. ಮನೇಕಾ ಗಾಂಧಿ ಪ್ರಾಣಿಪ್ರಿಯೆ ಜೊತೆಗೆ ಕೇಂದ್ರದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಸಚಿವೆ. ಅರಣ್ಯ ಇಲಾಖೆಯ ಖಾತೆ ವಹಿಸಿಕೊಂಡಿದ್ದ ಪ್ರಕಾಶ್ ಜಾವಡೇಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. `ನಿರ್ದಯವಾಗಿ ಪ್ರಾಣಿಗಳನ್ನು ಕೊಲ್ಲಲು ಇಷ್ಟೊಂದು ಸಂಭ್ರಮವೇ. ನಿಮ್ಮ ಲೆಕ್ಕದಲ್ಲಿ ನಮ್ಮ ಅನುಕೂಲತೆ ತಕ್ಕಂತೆ ಒಂದು ವನ್ಯಜೀವಿ ಕೆಟ್ಟದ್ದೂ ಆಗಬಹುದು, ಕೆಟ್ಟದ್ದೂ ಆಗಬಹುದು’ ಎಂದು ದೊಡ್ಡ ದನಿ ತೆಗೆದರು. ಮತ್ತೆ ವನ್ಯಜೀವಿ ಮತ್ತು ಮನುಷ್ಯ ಸಂಘರ್ಷ ಮತ್ತೆ ಮುನ್ನಲೆಗೆ ಬಂತು. ಬಿಸಿಬಿಸಿ ಚರ್ಚೆಗೆ ಅನುವು ಮಾಡಿಕೊಟ್ಟಿತು.

(ಮುಂದುವರಿಯುವುದು..)

Leave a Reply