ಸಿಎಂ ಸಿದ್ದರಾಮಯ್ಯ ಅವರಿಗೆ ಪುತ್ರ ವಿಯೋಗ

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯ ಶನಿವಾರ ವಿಧಿವಶರಾಗಿದ್ದಾರೆ.

ರಾಕೇಶ್ ಮೂಲತಃ ವೈದ್ಯರಾಗಿದ್ದವರು. 14 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದ ನಂತರ ಇವರು ಪ್ಯಾನ್ ಕ್ರಿಯಾಸ್ ಎಂಬ ಸಮಸ್ಯೆಗೆ ಸಿಲುಕಿದ್ದರು. ಇತ್ತೀಚೆಗೆ ತಮ್ಮ 39ನೇ ಹುಟ್ಟುಹಬ್ಬ ಆಚರಿಸಿದ ನಂತರ ಸ್ನೇಹಿತರೊಂದಿಗೆ ಬೆಲ್ಜಿಯಂಗೆ ತೆರಳಿದ್ದ ರಾಕೇಶ್ ಅವರಿಗೆ ಈ ಸಮಸ್ಯೆ ಮತ್ತೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಬ್ರುಸೆಲ್ಸ್ ನ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಮಸ್ಯೆ ಉಲ್ಬಣದಿಂದ ಬಹು ಅಂಗಾಗ ವೈಫಲ್ಯವೂ ಕಾಣಿಸಿಕೊಂಡಿತು. ಪರಿಣಾಮ ರಾಕೇಶ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.

ಮಗನ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳು ಸಹ ಬೆಲ್ಜಿಯಂಗೆ ತೆರಳಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಮುಖ್ಯಮಂತ್ರಿಗಳು ಹಿಂದಿರುಗುವ ಬಗ್ಗೆ ಮಾಹಿತಿಗಳು ಬಂದಿದ್ದವು. ಆದರೆ, ಶನಿವಾರದ ವೇಳೆಗೆ ಚಿಕಿತ್ಸೆ ಫಲಿಸದೇ ರಾಕೇಶ್ ಮೃತಪಟ್ಟ ಸುದ್ದಿ ಬಂದಿದೆ.

ರಾಕೇಶ್ ಅವರು ಸಿದ್ದರಾಮಯ್ಯನವರ ತವರು ಕ್ಷೇತ್ರದಲ್ಲಿ ಸಾಕಷ್ಟು ಬಾರಿ ರಾಜಕೀಯವಾಗಿ ಕಾಣಿಸಿಕೊಂಡಿದ್ದವರು. ಜನತಾದರ್ಶನ ಹಾಗೂ ಇತರೆ ಕಾರ್ಯಕ್ರಮದ ವೇಳೆ ಕಾಣಿಸಿಕೊಂಡಿದ್ದ ರಾಕೇಶ್ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ಸಿದ್ದರಾಮಯ್ಯನವರ ಉತ್ತರಾಧಿಕಾರಿಗುವ ನಿರೀಕ್ಷೆಗಳು ಇದ್ದವು. ಆದರೆ ದುರಾದೃಷ್ಟದಿಂದ ರಾಕೇಶ್ ಅಕಾಲಿಕ ಮರಣ ಹೊಂದಿದ್ದಾರೆ.

ಇನ್ನು ರಾಕೇಶ್ ಅವರ ನಿಧನಕ್ಕೆ ರಾಜಕೀಯ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದು, ಮುಖ್ಯಮಂತ್ರಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Leave a Reply