ನೀರು ಕೇಳಿದ ರೈತರಿಗೆ ಸಿಕ್ತು ಪೊಲೀಸ್ ಲಾಠಿಯ ಬಾಸುಂಡೆ..

ಡಿಜಿಟಲ್ ಕನ್ನಡ ಟೀಮ್:

ಒಂದೆಡೆ ನ್ಯಾಯಾಧಿಕರಣ ಕುಡಿಯಲು ನೀರು ಕೊಡ್ತಿಲ್ಲ… ಮತ್ತೊಂದೆಡೆ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸಲು ಪೊಲೀಸರು ಬಿಡ್ತಿಲ್ಲ… ಇಂತಹ ಪರಿಸ್ಥಿತಿಯಲ್ಲಿರುವ ಉತ್ತರ ಕರ್ನಾಟಕ ಜಿಲ್ಲೆಯ ಜನರ ಕೂಗು ಕೇಳುವರಾರು? ಗೊತ್ತಿಲ್ಲ…

ತಮಗಾಗುತ್ತಿರುವ ಅನ್ಯಾಯವನ್ನು ರಾಜ್ಯ ಸರ್ಕಾರವೂ ಕೇಳುತ್ತಿಲ್ಲ. ಕೇಂದ್ರ ಸರ್ಕಾರವೂ ಕೇಳುತ್ತಿಲ್ಲ. ಇವರ ಮತದಿಂದ ಅಧಿಕಾರ ಪಡೆದ ನಾಯಕರಂತೂ ಕೈಲಾಗದವರಂತೆ ಬೇರೊಬ್ಬರ ಮೇಲೆ ಆರೋಪ ಹೊರಿಸುತ್ತಾ ಕೂತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಗೋಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಗೊತ್ತಾಗದೇ ಕಂಗಾಲಾಗಿ ಕೂತಿದ್ದಾರೆ ರೈತರು.

ಅದರಲ್ಲೂ ಧಾರವಾಡದ ಯಮನೂರು, ಅಳಗವಾಡಿ, ನರಗುಂದ ಪ್ರದೇಶಗಳ ಜನರ ಸ್ಥಿತಿ ದೇವರಿಗೆ ಪ್ರೀತಿ. ಕಾರಣ, ಹಿಂಸಾಚಾರದ ಪ್ರತಿಭಟನೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಬೀದಿ ಬೀದಿಯಲ್ಲಿ ಮಕ್ಕಳು, ಮಹಿಳೆಯರು, ವಯಸ್ಕರು, ಹಿರಿಯರು ಎಂಬುದನ್ನು ನೋಡದೇ ಮನಸೋಇಚ್ಛೆ ಥಳಿಸಿದ್ದಾರೆ. ಕೇವಲ ಬೀದಿಯಷ್ಟೇ ಅಲ್ಲದೆ, ಮನೆ ಮನೆಗೆ ನುಗ್ಗಿ ಅವರನ್ನು ಹೊರಗೆಳೆದು ಹಲ್ಲೆ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ತಮಗಾಗುತ್ತಿರುವ ಅನ್ಯಾಯವನ್ನು ಜನರು ಹೇಳಿಕೊಂಡು ಗೋಳಾಡುತ್ತಿರುವುದು ಮನಸ್ಸಿಗೆ ಹಿಂಸೆಯಾಗುವಂತಿದೆ.

Police official Atrocities to Farmers at Navalunda Taluk Dharawad District Yamanur on Saturday.

50ಕ್ಕೂ ಹೆಚ್ಚು ವರ್ಷದ ವೃದ್ಧನ ಮೇಲೆ ಹಲ್ಲೆಯಾಗಿ ಕೈ ಮುರಿದು ಊತ ಬಂದಿದೆ. ಬೆನ್ನಿನ ಮೇಲೆ ಲಾಠಿ ಏಟಿನ ಕೆಂಪನೆ ಗುರುತು ಎದ್ದು ಕಾಣುತ್ತಿದೆ. ಇನ್ನು ಮಹಿಳೆಯರ ಕಾಲು, ತೊಡೆ, ಬೆನ್ನುಗಳ ಮೇಲೆ ಅಂಗೈಯಗಲ ಗಾತ್ರದಲ್ಲಿ ಬಾಸುಂಡೆಗಳು ಎದ್ದಿವೆ. ರಕ್ತ ನೀಲಿಗಟ್ಟಿವೆ. ಜನರು ಅಯ್ಯೋ ಅಪ್ಪೋ ಅನ್ನುತ್ತಿದ್ದರೂ ಬಿಡದೆ, ಇಟ್ಟಾಡಿಸಿಕೊಂಡು ಪೊಲೀಸರು ಬಾರಿಸಿದ ದೃಶ್ಯಗಳು ವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ ಇದೆ. ಇವು ಪೊಲೀಸರ ದರ್ಪ ಎಷ್ಟರ ಮಟ್ಟಿಗೆ ಇತ್ತು ಎಂಬುದಕ್ಕೆ ಸಾಕ್ಷಿ.

ಈ ಸಂದರ್ಭದಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಮತ್ತೆ ಕೆಲವರು ಭಯದಿಂದ ಊರು ಬಿಟ್ಟು ಹೋಗಿದ್ದಾರೆ. ಮನೆಯಲ್ಲಿ ಗಂಡು ದಿಕ್ಕಿಲ್ಲದೇ ಆತಂಕದಿಂದ ಸಮಯ ಕಳೆಯುವ ಪರಿಸ್ಥಿತಿ ಇಲ್ಲಿನ ಮಹಿಳೆಯರದ್ದಾಗಿದೆ.

‘ನಾವು ಏನು ಮಾಡಿದ್ವಿ ಸ್ವಾಮಿ, ಹಣ, ಆಸ್ತಿ ಕೇಳಲಿಲ್ಲ. ಕುಡಿಯಲು ನೀರು ಕೋಡಿ ಅಂತಾ ಕೇಳ್ತಿದ್ದೀವಿ. ಅದಕ್ಕೆ ಈ ರೀತಿಯಾಗಿ ದೌರ್ಜನ್ಯ ನಡೆಸುವುದೇ’ ಎಂದು ಇಲ್ಲಿನ ಮಹಿಳೆಯರು ಕೇಳುತ್ತಿದ್ದಾರೆ.

ಪೊಲೀಸರ ಈ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ‘ಮಹಿಳೆ, ವೃದ್ಧರು, ಮಕ್ಕಳ ಮೇಲೆ ಹಲ್ಲೆ ನಡೆದಿರುವುದನ್ನು ಮಾಧ್ಯಮಗಳ ಮೂಲಕ ನಾನು ನೋಡಿದ್ದೇನೆ. ಈ ಘಟನೆ ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಪೊಲೀಸರು ಸಂಯಮ ಮೀರಿ ವರ್ತಿಸಿದರೆ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದ್ದಾರೆ.

ಆದರೆ, ಎಲ್ಲರನ್ನು ಇಟ್ಟಾಡಿಸಿಕೊಂಡು ಹೊಡೆದ ಮೇಲೆ ಯಾರ ವಿರುದ್ಧ ಕ್ರಮ ಕೈಗೊಂಡರೆ ಏನು? ಅವರಿಗಾದ ನೋವನ್ನು ಸರಿಪಡಿಸಲು ಸಾಧ್ಯವೇ? ಅಥವಾ ನಿಮ್ಮ ಸಾಂತ್ವಾನದ ಮಾತು ಅವರ ಸಮಸ್ಯೆಯನ್ನು ಬಗೆ ಹರಿಸುತ್ತದೆಯೇ? ಮೇಲಾಧಿಕಾರಿಗಳ ಸೂಚನೆ ಇಲ್ಲದೆ ಸುಖಾಸುಮ್ಮನೆ ಪೊಲೀಸರು ಇಷ್ಟು ದೊಡ್ಡ ಮಟ್ಟದಲ್ಲಿ ದೌರ್ಜನ್ಯ ನಡೆಸಲು ಸಾಧ್ಯವೇ? ಈ ಎಲ್ಲ ಪ್ರಶ್ನೆಗಳಿಗೂ ಗೃಹ ಸಚಿವರೇ ಉತ್ತರಿಸಲೇಬೇಕು.

ಈ ಪರಿಸ್ಥಿತಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಖಂಡಿಸಿರೋದು ಹೀಗೆ:

‘ಪೊಲೀಸರು ಸಂಪೂರ್ಣವಾಗಿ ಮಾನವೀಯತೆಯನ್ನು ಮರೆತಿದ್ದಾರೆ. ಜಿಲ್ಲಾಧಿಕಾರಿಗೆ ಬಹಿರಂಗವಾಗಿ ಧಮ್ಕಿ ಹಾಕಿದ ಮರಿಗೌಡನನ್ನು ಬಂಧಿಸಲು ಸಾಧ್ಯವಾಗದಿದ್ದ ಸರ್ಕಾರ, ರೈತರು, ಮಕ್ಕಳು, ಮಹಿಳೆಯರ ಮೇಲೆ ಹಲ್ಲೆ ನಡೆಸಿದೆ. ಇನ್ನು ನಾನು ಕಾಯುವುದಿಲ್ಲ. ಹೀದಿಗಿಳಿದು ಹೋರಾಟ ನಡೆಸುತ್ತೇನೆ. ಅಗತ್ಯ ಬಿದ್ದರೆ, ರಾಜಕೀಯ ನಿವೃತ್ತಿ ಹೊಂದಿ ಹೋರಾಟ ನಡೆಸಲು ಸಿದ್ಧ. ಜನರು ದಂಗೆ ಎದ್ದು ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು. ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಭಾಗದ ಜನರ ಕ್ಷಮೆ ಕೋರಬೇಕು.’

Leave a Reply