ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡು ಹಸಿದು ಕುಳಿತವರ ಸಂಖ್ಯೆ ಸಾವಿರ, ಸಹಾಯ-ಸಂಧಾನಗಳಲ್ಲಿ ತೊಡಗಿಸಿಕೊಂಡಿದೆ ಸರ್ಕಾರ

ಡಿಜಿಟಲ್ ಕನ್ನಡ ಟೀಮ್:

ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ದಾರಿಕಾಣದಂತಹ ಪರಿಸ್ಥಿತಿಯಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಸೌದಿ ಅರೆಬಿಯಾ ಹಾಗೂ ಕುವೈತ್ ನಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿರುವ ಸುಮಾರು 10 ಸಾವಿರಕ್ಕೂ ಹೆಚ್ಚಿನ ಭಾರತೀಯರನ್ನು ರಕ್ಷಿಸಿ ಅಲ್ಲಿಂದ ವಾಪಸ್ ಕರೆತರುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

ಕೆಲದಿನಗಳ ಹಿಂದೆ ದಕ್ಷಿಣ ಸುಡಾನಿನ ಯುದ್ಧಗ್ರಸ್ಥ ಪ್ರದೇಶದಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಲಾಗಿತ್ತು. ಅದಕ್ಕೂ ಮೊದಲು ಇಂಥದೇ ಸ್ಥಿತಿಗೆ ಸಿಲುಕಿದ್ದ  ಯೆಮನ್ ನಿಂದಲೂ ಅಪಾಯಕ್ಕೆ ಸಿಲುಕಿದ್ದ ಭಾರತೀಯರನ್ನು ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ.ಕೆ ಸಿಂಗ್ ನೇತೃತ್ವದಲ್ಲಿ ಭಾರತಕ್ಕೆ ಮರಳಿ ಕರೆತರಲಾಗಿತ್ತು. ಈ ಕಾರ್ಯಗಳಿಗೆ ಸಾಕಷ್ಟು ಪ್ರಶಂಸೆಯೂ ವ್ಯಕ್ತವಾಗಿತ್ತು.

ಈಗ ಸೌದಿ ಅರೇಬಿಯಾ ಹಾಗೂ ಕುವೈತ್ ನಲ್ಲಿ ಕೆಲಸ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಭಾರತೀಯರ ರಕ್ಷಣೆಗೆ ಭಾರತ ಮುಂದಾಗಿದೆ. ಕೇವಲ ಯುದ್ಧಗ್ರಸ್ಥ ರಾಷ್ಟ್ರಗಳಲ್ಲಿನ ಭಾರತೀಯರಿಗಷ್ಟೇ ಅಲ್ಲ, ಯಾವುದೇ ದೇಶದಲ್ಲಿರುವ ಭಾರತೀಯರ ರಕ್ಷಣೆಗೆ ಬದ್ಧ ಎಂದು ಸಾಬೀತುಪಡಿಸಿದೆ.

ಸಧ್ಯಕ್ಕೆ ಸೌದಿ ಅರೇಬಿಯಾ, ಕುವೈತ್ ಗಳಲ್ಲಿ ಈ ಸ್ಥಿತಿ ಉಂಟಾಗಿರುವುದು ತೈಲ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮವಾಗಿ. ತೈಲ ಮಾರುಕಟ್ಟೆ ಕುಸಿತದಿಂದ ಸೌದಿ ಅರೆಬಿಯಾ ಸೇರಿದಂತೆ ಇತರೆ ಗಲ್ಫ್ ರಾಷ್ಟ್ರಗಳ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅದರ ಬಿಸಿ ತಟ್ಟಿರೋದು ಭಾರತ ಸೇರಿದಂತೆ ಅಲ್ಲಿರುವ ವಿದೇಶಿ ನೌಕರರ ಮೇಲೆ. ಸದ್ಯ ಆರ್ಥಿಕ ಕುಸಿತದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ನಿರ್ಮಾಣ ಹಂತದಲ್ಲಿನ ಕಾಮಗಾರಿಗಳಲ್ಲಿನ ವೆಚ್ಚವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಕೇವಲ ಸರ್ಕಾರ ಅಷ್ಟೇ ಅಲ್ಲದೆ ಕೆಲವು ಖಾಸಗಿ ಕಂಪನಿಗಳು ಸಹ ವಿದೇಶಿ ನೌಕರರಿಗೆ ವೇತನ ನೀಡಿಲ್ಲ. ಈ ಎಲ್ಲದರ ಪರಿಣಾಮ ಭಾರತೀಯರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಅವರ ಭವಿಷ್ಯ ಅಸ್ಥಿರವಾಗಿದೆ. ಊಟಕ್ಕೆ ಹಾಗೂ ಭಾರತಕ್ಕೆ ಮರಳಲು ಪ್ರಯಾಣದ ದರವನ್ನು ಹೊಂದಿಸಲು ಸಾಧ್ಯವಾಗದಿರುವಷ್ಟರ ಮಟ್ಟಿಗೆ ಅಲ್ಲಿನ ಭಾರತೀಯರ ಪರಿಸ್ಥಿತಿ ಹದಗೆಟ್ಟಿದೆ.

ಮಾಧ್ಯಮಗಳ ವರದಿ ಪ್ರಕಾರ ಸೌದಿ ಒಗೆರ್ ಲಿ. ಕಟ್ಟಡ ನಿರ್ಮಾಣ ಕಂಪನಿ ಸುಮಾರು 800 ಭಾರತೀಯರನ್ನು ಕೆಲಸದಿಂದ ತೆಗೆದು ಹಾಕಿದೆ. ಕಳೆದ 7 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ನೀಡುವಂತೆ ಈ ನೌಕರರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅವರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಕಳೆದ ಶನಿವಾರವಷ್ಟೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೂಲಕ ಸೌದಿಯಲ್ಲಿ ಭಾರತೀಯರ ಸಮಸ್ಯೆಯನ್ನು ತಿಳಿಸಿದ್ದರು. ‘ಸಾವಿರಾರು ಭಾರತೀಯರು ಊಟಕ್ಕೂ ಪರದಾಡುವಂತದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಲಿರುವ ಇತರೆ ಭಾರತೀಯರು ಅವರ ನೆರವಿಗೆ ಬರಬೇಕು’ ಎಂದು ಮನವಿ ಮಾಡಿದ್ದರು. ಈಗ ಸಮಸ್ಯೆಗೆ ಸಿಲುಕಿರುವವರನ್ನು ಭಾರತಕ್ಕೆ ವಾಪಸ್ ಕರೆತರುವ ಬಗ್ಗೆ ಚಿಂತಿಸುತ್ತಿದೆ ವಿದೇಶಾಂಗ ಸಚಿವಾಲಯ.

ಇದೀಗ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಅವರ ಟ್ವೀಟುಗಳ ಮೂಲಕ ತಿಳಿದುಬರುತ್ತಿರುವ ಸಂಗತಿಗಳಿಷ್ಟು.

  • ಸೌದಿ ಅರೆಬಿಯಾ ಒಂದರಲ್ಲೇ ಸುಮಾರು 30 ಲಕ್ಷ ಭಾರತೀಯರಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡು ಆಹಾರಕ್ಕೂ ಪರದಾಡುತ್ತಿರುವವರ ಸಂಖ್ಯೆ 10 ಸಾವಿರ.
  • ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಕೆ. ಸಿಂಗ್ ಸೌದಿ ಅರೆಬಿಯಾಗೆ ತೆರಳಿ ಮಾತುಕತೆ ನಡೆಸಲಿದ್ದಾರೆ. ಇನ್ನೊಬ್ಬ ರಾಜ್ಯ ಸಚಿವ ಎಂಜೆ ಅಕ್ಬರ್ ಅವರು ಕುವೈತ್ ಮತ್ತು ಸೌದಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ.
  • ಉದ್ಯೋಗ ಕಳೆದುಕೊಂಡು ಹೊಟ್ಟೆಗೆ ಹಿಟ್ಟಿಲ್ಲದ ಸ್ಥಿತಿಯಲ್ಲಿರುವವರನ್ನು ಅಲ್ಲಿಂದ ಭಾರತಕ್ಕೆ ಕರೆತರಲಾಗುವುದು ಎಂದು ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಹೇಳಿದ್ದಾರೆ.

Leave a Reply