ಡಿಜಿಟಲ್ ಕನ್ನಡ ಟೀಮ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಸಂಜೆ ಮೈಸೂರಿನ ಟಿ.ಕಾಟೂರಿನಲ್ಲಿರುವ ಫಾರಂಹೌಸ್ನಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಸ್ಥರು ಮಾತ್ರ ಉಪಸ್ಥಿತರಿದ್ದು, ಹಾಲು ಮತಸ್ಥ ಸಂಪ್ರದಾಯದ ಪ್ರಕಾರ ಅಂತಿಮ ವಿಧಿ ವಿಧಾನ ನೆರವೇರಿತು. ಅಂತ್ಯಕ್ರಿಯೆ ಪ್ರಕ್ರಿಯೆಗೆ ಕುಟುಂಬ ಸದಸ್ಯರಿಗೆ ಮಾತ್ರ ಪ್ರವೇಶವಿದ್ದು, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಅವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಅನಾರೋಗ್ಯ ಪೀಡಿತರಾಗಿ ಬೆಲ್ಜಿಯಂನಲ್ಲಿ ಮೃತಪಟ್ಟ ರಾಕೇಶ್ ಪಾರ್ಥಿವ ಶರೀರ ಸೋಮವಾರ ಬೆಳಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನಕ್ಕೆ ಬಂತು. ಬೆಳಗ್ಗೆ 9 ಗಂಟೆ ವೇಳೆಗೆ ದುಬೈ ಎಮಿರೇಟ್ಸ್ ವಿಶೇಷ ವಿಮಾನದಲ್ಲಿ ಪುತ್ರನ ಪಾರ್ಥಿವ ಶರೀರದ ಜತೆ ಆಗಮಿಸಿದ ಸಿದ್ದರಾಮಯ್ಯ ಸ್ಥಳೀಯ ಪ್ರಕ್ರಿಯೆಗಳಿಗಾಗಿ ಒಂದು ಗಂಟೆ ಕಾಲ ವಿಮಾನ ನಿಲ್ದಾಣದಲ್ಲೇ ಇರಬೇಕಾಯಿತು.
ಪ್ರಕ್ರಿಯೆ ಮುಗಿದು ಪುತ್ರನ ಪಾರ್ಥಿವ ಶರೀರ ಹಸ್ತಾಂತರವಾದಾಗ ಬಂದಿದ್ದ ಸಂಪುಟ ಸಹೋದ್ಯೋಗಿಗಳು ಹಾಗೂ ಶಾಸಕರ ಬಳಿ ತಮ್ಮ ಪುತ್ರನ ಪಾರ್ಥಿವ ಶರೀರ ತೋರಿಸಿ ಅಳುತ್ತಾ ನಿಂತಿದ್ದರು. ಅವರನ್ನು ಸಂತೈಸಲು ಸಚಿವರು ಹಾಗೂ ಶಾಸಕರು ನಡೆಸಿದ ಯತ್ನ ಫಲ ಕೊಡಲಿಲ್ಲ. ಇದರಿಂದ ಅವರ ಕಣ್ಣಂಚಿನಲ್ಲೂ ನೀರು ತುಂಬಿಕೊಂಡಿತು.ತೀವ್ರ ಬಸವಳಿದಿದ್ದ ಮುಖ್ಯಮಂತ್ರಿಯವರನ್ನು ವಿಐಪಿ ಲಾಂಚ್ಗೆ ಕರೆತಂದು ಸಚಿವರು ಶಾಸಕರು ಆರೈಕೆ ಮಾಡಿ 30 ನಿಮಿಷಗಳ ವಿಶ್ರಾಂತಿ ನಂತರ ಮತ್ತೆ ಮೈಸೂರಿಗೆ ತೆರಳಲು ಸಿದ್ಧವಾಗಿದ್ದ ವಿಮಾನಕ್ಕೆ ಕರೆದೊಯ್ದರು.
ಮೈಸೂರಿನ ದಸರಾ ವಸ್ತು ಪ್ರಾಧಿಕಾರದ ಆವರಣದದಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಉದ್ದಗಲಕ್ಕೂ ಜನ ಸೇರಿ ಅಂತಿಮ ನಮನ ಸಲ್ಲಿಸಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಸಹ ಮುಖ್ಯಮಂತ್ರಿಯಾಗುವ ಮುನ್ನ ತಮ್ಮ ಪುತ್ರನನ್ನು ಕಳೆದುಕೊಂಡ ದುಃಖವನ್ನು ಮರೆಯಲಾಗದೆ, ಅದೇ ಸ್ಥಿತಿಯಲ್ಲಿ ದುಃಖಿತರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಅತ್ತ ದೃಶ್ಯ ನೋಡುವವರ ಕರುಳು ಹಿಂಡಿತು.
ಬೆಳಗ್ಗೆ 12 ರಿಂದ ಮಧ್ಯಾಹ್ನ 2 ಗಂಟೆವೆರೆಗೆ ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯಪಾಲ ವಜೂಬಾಯ್ ವಾಲಾ,ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕೇರಳದ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ, ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್, ಕಾಂಗ್ರೆಸ್ ಪಕ್ಷದ ರಾಷ್ಟೀಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ್, ವಿಧಾನಮಂಡಲದ ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಕೇಂದ್ರದ ಮಾಜಿ ಸಚಿವರಾದ ರೆಹಮಾನ್ ಖಾನ್, ಸಿ.ಎಂ.ಇಬ್ರಾಹಿಂ, ರಾಜ್ಯದ ಸಚಿವರು, ಮಾಜಿ ಸಚಿವರು, ಶಾಸಕರು , ಪಕ್ಷಾತೀತವಾಗಿ ರಾಜಕೀಯ ಮುಖಂಡರು ಅಂತಿಮ ನಮನ ಸಲ್ಲಿಸಿದರು.
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರವೇ ಸೋಮವಾರ ಹರಿದು ಬಂದಿದ್ದರಿಂದ ನೂಕು ನುಗ್ಗಲು ಲಘು ಲಾಟಿ ಪ್ರಹಾರವೂ ನಡೆಯಿತು.