ರಾಜನಾಥ ಸಿಂಗ್ ಭೇಟಿಗೆ ಪಾಕ್ ಉಗ್ರರ ವಿರೋಧ, ನರಸಿಂಗ ಯಾದವ್ ಮೇಲಿನ ಉದ್ದಿಪನ ಆರೋಪ ತೆರವು, ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ರಾಜಿನಾಮೆ, ಮೈಸೂರಲ್ಲಿ ಕಚ್ಚಾಬಾಂಬ್ ಸ್ಫೋಟ…

ಐವೇರ್ ಹ್ಯಾಂಡ್ಲೂಮ್… ಅರ್ಥಾತ್ ನಾನು ಕೈಮಗ್ಗದ ಬಟ್ಟೆ ಧರಿಸುವೆ. ಇದು ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಟ್ವಿಟ್ಟರಿನಲ್ಲಿ ಸೃಷ್ಟಿಸಿದ ಟ್ರೆಂಡ್. ತಾವು ಕೈಮಗ್ಗದ ಸೀರೆ ಧರಿಸಿ, ಉಳಿದವರೂ ಈ ಅಭಿಯಾನದಲ್ಲಿ ಭಾಗವಹಿಸಿ ನೇಕಾರರಿಗೆ ಸ್ಥೈರ್ಯ ತುಂಬುವಂತೆ ಕರೆ ನೀಡಿದರು. ಇದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಸೃಷ್ಟಿಸಿತು. ಪತ್ರಕರ್ತರು, ರಾಜತಾಂತ್ರಿಕರು, ರಾಜಕಾರಣಿಗಳು… ಹೀಗೆ ದೊಡ್ಡ ಸಮೂಹವೇ ಕೈಮಗ್ಗದ ಬಟ್ಟೆ ಧರಿಸಿರುವ ತಮ್ಮ ಫೋಟೊಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿತು…

ಡಿಜಿಟಲ್ ಕನ್ನಡ ಟೀಮ್:

ರಾಜನಾಥ್ ಸಿಂಗ್ ಪಾಕ್ ಪ್ರವಾಸಕ್ಕೆ ಹಫೀಜ್ ಸಯೀದ್ ವಿರೋಧ

ಕಾಶ್ಮೀರದ ಮುಗ್ಧ ಜನರ ಹತ್ಯೆಗೆ ಕಾರಣವಾಗಿರುವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಆಗಮಿಸಲು ಅವಕಾಶ ನೀಡಬಾರ್ದು.. ಇದು ಸಾರ್ಕ್ ರಾಷ್ಟ್ರಗಳ ಸಚಿವರ ಸಭೆಗಾಗಿ ಭಾರತ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರ ಪಾಕ್ ಪ್ರವಾಸಕ್ಕೆ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ವಿರೋಧ.

ಈತ ಮುಂಬೈ ದಾಳಿ ಸಂಬಂಧ ಭಾರತಕ್ಕೆ ವಿಚಾರಣೆಗೆ ಬೇಕಿರುವ ಉಗ್ರ ನಾಯಕ.

‘ಕೆಲ ದಿನಗಳ ಹಿಂದೆ ನಡೆದ ಕಾಶ್ಮೀರದ ಮುಗ್ಧ ಜನರ ಹತ್ಯೆಗೆ ರಾಜನಾಥ್ ಸಿಂಗ್ ಅವರೇ ಕಾರಣ. ಅವರನ್ನು ಪಾಕಿಸ್ತಾನ ಸ್ವಾಗತಿಸಿದರೆ, ನೊಂದಿರುವ ಕಾಶ್ಮೀರದ ಜನತೆಗೆ ಅಪಮಾನ ಮಾಡಿದಂತಾಗಲಿದೆ. ಒಂದೆಡೆ ಕಾಶ್ಮೀರ ಜನರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿರೋಧಿಸುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ರಾಜನಾಥ್ ಸಿಂಗ್ ಅವರಿಗೆ ಸ್ವಾಗತ ಕೋರುವುದು ತಪ್ಪು ಸಂದೇಶ ರವಾನಿಸುತ್ತದೆ. ಹೀಗಾಗಿ ಆಗಸ್ಟ್ 3 ರಂದು ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಆಗಮಿಸಲು ಅವಕಾಶ ನೀಡಬಾರದು. ಒಂದುವೇಳೆ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಆಗಮಿಸಿದರೆ, ದೇಶದಾದ್ಯಂತ ನಮ್ಮ ಸಂಘಟನೆ ಪ್ರತಿಭಟನೆ ನಡೆಸಲಿದೆ’ ಎಂಬುದು ಸಯೀದ್ ಎಚ್ಚರಿಕೆ.

ಇದಕ್ಕೆ ಪ್ರತಿಕ್ರಿಯೆ ನೀಡಿರೋ ಗೃಹ ಸಚಿವಾಲಯ ರಾಜ್ಯ ಸಚಿವ ಕಿರಣ್ ರಿಜಿಜು, ‘ರಾಜನಾಥ್ ಸಿಂಗ್ ಅವರು ಸಾರ್ಕ್ ಗೃಹ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಪಾಕಿಸ್ತಾನದ ಜತೆಗಿನ ಮಾತುಕತೆ ಅಲ್ಲ. ಸಾರ್ಕ್ ಸದಸ್ಯ ರಾಷ್ಟ್ರಗಳ ನಡುವಿನ ಬಹು ಆಯಾಮದ ಮಾತುಕತೆ. ಈ ಸಭೆಯಲ್ಲಿ ಭಯೋತ್ಪಾದನೆ ವಿಷಯದ ಕುರಿತು ಚರ್ಚೆ ನಡೆಯಲಿದೆ. ಈ ವೇಳೆ ಪಾಕಿಸ್ತಾನದಲ್ಲಿ ಭದ್ರತಾ ಸಮಸ್ಯೆ ಎದುರಾದರೆ ಅದನ್ನು ನಿಭಾಯಿಸುವ ಜವಾಬ್ದಾರಿ ಪಾಕಿಸ್ತಾನದ್ದು’ ಎಂದಿದ್ದಾರೆ.

ಅಮಿತ್ ಶಾರ ಕ್ಲೀನ್ ಚಿಟ್ ಪ್ರಶ್ನಿಸಿದ್ದ ಅರ್ಜಿ ವಜಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದಲ್ಲಿ ಸಿಕ್ಕ ನಿರ್ದೋಷಿತ್ವದ  ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಮುಂಬೈ ಸೆಷನ್ಸ್ ನ್ಯಾಯಾಲಯ 2014 ರಲ್ಲಿ ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದಾರ್ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ‘ಅಮಿತ್ ಶಾ ಅವರನ್ನು ನಿರ್ದೋಷಿ ಎಂಬ ತೀರ್ಪನ್ನು ಪ್ರಶ್ನಿಸಲು ಅರ್ಜಿದಾರರ ಬಳಿ ಸ್ಪಷ್ಟ ನಿಲುವಿಲ್ಲ’ ಎಂದು ತಿಳಿಸಿದೆ.

ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಆನಂದಿಬೆನ್ ರಾಜಿನಾಮೆ

ದಲಿತರ ಮೇಲಿನ ಹಲ್ಲೆ ಪ್ರಕರಣಗಳನ್ನು ವಿರೋಧಿಸಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಸ್ಪರ್ಧಿಸಿದ ನಂತರ ಆನಂದಿಬೆನ್ ಪಟೇಲ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ‘ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಹೊಸ ನಾಯಕರು ಉತ್ತಮ ತಯಾರಿ ಮಾಡಿಕೊಳ್ಳಲು ಕಾಲಾವಕಾಶ ನೀಡುವ ಉದ್ದೇಶದಿಂದ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಅಲ್ಲದೆ ಕೆಲವು ಸಮಯದಿಂದ 75 ವರ್ಷ ಪೂರೈಸುತ್ತಿದ್ದಂತೆ ನಾಯಕರು ಈ ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಅದೇ ಹಾದಿಯಲ್ಲಿ ನಾನು ಸಾಗುತ್ತೇನೆ. ಎರಡು ತಿಂಗಳ ಹಿಂದೆಯೇ ಈ ಸ್ಥಾನದಿಂದ ನನ್ನನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದೆ. ಈ ಪತ್ರದ ಮೂಲಕ ಮತ್ತೆ ಕೇಳಿಕೊಳ್ಳುತ್ತಿದ್ದೇನೆ’ ಎಂದು ವಿವರಣೆ ನೀಡಿದ್ದಾರೆ ಆನಂದಿಬೆನ್. ಇವರ ರಾಜಿನಾಮೆಯನ್ನು ಬಿಜೆಪಿ ಅಂಗೀಕರಿಸಿದೆ.

ಆನಂದಿಬೆನ್ ಪಟೇಲ್ ಅವರ ರಾಜಿನಾಮೆಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರೋದು ಹೀಗೆ: ‘ಆನಂದಿಬೆನ್ ಪಟೇಲ್ ಅವರು ಎಎಪಿ ಪಕ್ಷದ ಹೋರಾಟಕ್ಕೆ ಹೆದರಿ ರಾಜಿನಾಮೆ ನೀಡಿದ್ದಾರೆ. ಗುಜರಾತ್ ನಲ್ಲಿ ಭ್ರಷ್ಟಾಚಾರ ವಿರುದ್ಧದ ನಮ್ಮ ಹೋರಾಟಕ್ಕೆ ಸಿಕ್ಕ ಜಯವಿದು.’

ನರಸಿಂಗ್ ಯಾದವ್ ನಿರ್ದೋಷಿ, ರಿಯೋಗೆ ತೆರಳಲು ಗ್ರೀನ್ ಸಿಗ್ನಲ್

ಉದ್ದೀಪನ ಮದ್ದು ಸೇವನೆ ವಿವಾದಕ್ಕೆ ಸಿಲುಕಿದ್ದ ಕುಸ್ತಿಪಟು ನರಸಿಂಗ್ ಯಾದವ್ ನಿರ್ದೋಷಿಯಾಗಿದ್ದು, ಪ್ರತಿಷ್ಠಿತ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ) ತನಿಖಾ ಸಮಿತಿ, ನರಸಿಂಗ್ ಅವರ ವಾದವನ್ನು ಪುರಸ್ಕರಿಸಿದೆ. ಅಷ್ಟೇ ಅಲ್ಲದೇ, ‘ಈ ಪ್ರಕರಣದಲ್ಲಿ ನರಸಿಂಗ್ ಉದ್ದೇಶಿತವಾಗಿ ಡ್ರಗ್ಸ್ ಸೇವಿಸಿಲ್ಲ. ಈತನನ್ನು ಬಲಿಪಶು ಮಾಡುವ ಪ್ರಯತ್ನ ನಡೆಸಲಾಗಿದೆ. ಅಲ್ಲದೆ ಈ ಪ್ರಕರಣದಲ್ಲಿ ಪಿತೂರಿ ನಡೆದಿರುವುದರಿಂದ ನರಸಿಂಗ್ ವಿರುದ್ಧ ನಿರ್ಲಕ್ಷ್ಯದ ಆಧಾರದ ಮೇಲೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿ ಕ್ಲೀನ್ ಚಿಟ್ ನೀಡಿದೆ. ಇದರೊಂದಿಗೆ ನರಸಿಂಗ್ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ಮತ್ತೆ ತೆರೆದುಕೊಂಡಿದೆ.

‘ನನ್ನ ಪರವಾಗಿ ನಿಂತ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಕೊನೆಗೂ ಸತ್ಯಾಂಶ ಹೊರ ಬಂದಿದೆ’ ಎಂದು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ ನರಸಿಂಗ್ ಯಾದವ್.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲು..

– ಮೈಸೂರಿನ ನ್ಯಾಯಾಲಯದಲ್ಲಿ ಸೋಮವಾರ ಬಾಂಬ್ ಸ್ಫೋಟಗೊಂಡಿದೆ. ಸಂಜೆ 4.30 ರ ಸುಮಾರಿಗೆ ಕೋರ್ಟ್ ಆವರಣದಲ್ಲಿರುವ ಶೌಚಾಲಯದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ. ಈ ಸ್ಫೋಟದಲ್ಲಿ ಶೌಚಾಲಯದ ಕಿಟಕಿ ಗಾಜುಗಳು ಛಿದ್ರವಾಗಿದ್ದು, ಗೋಡೆ ಕುಸಿದಿದೆ. ಇಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಈ ಸ್ಥಳಕ್ಕೆ ಪೋಲಿಸ್ ಹಾಗೂ ತನಿಖಾ ಸಿಬ್ಬಂದಿ ಸೇರಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಆಗಮಿಸಿ ಪರಿಶೀಲನೆ ನಡೆಸಿದರು.

Leave a Reply