ಜಯಲಲಿತಾಗೆ ಬೇಡವಾದ ಶಶಿಕಲಾ, ಕಪಾಳಮೋಕ್ಷದಾಚೆಗೂ ಇದ್ದಂತಿದೆ ಬೇರೇನೋ ಕತೆ…

ಡಿಜಿಟಲ್ ಕನ್ನಡ ಟೀಮ್:

ಪಿ. ಶಶಿಕಲಾ ಎಂಬ ಎಐಎಡಿಎಂಕೆ ರಾಜ್ಯಸಭೆ ಸದಸ್ಯೆಯನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಸೋಮವಾರ ರಾಜ್ಯಸಭೆಯಲ್ಲಿ ತೆರೆದುಕೊಂಡಿದ್ದು ಇದರದ್ದೇ ಭಾವ ಕೋಲಾಹಲ. ‘ನಾನು ಒತ್ತಡಕ್ಕೆ ಒಳಗಾಗಿ ಪಕ್ಷದ ನಿರ್ದೇಶನದಂತೆ ರಾಜಿನಾಮೆ ಕೊಡಬೇಕಾಗಿದೆ. ಆದರೆ ನನ್ನ ಜೀವಕ್ಕೆ ಅಪಾಯವಿದೆ.  ಮಹಿಳೆಯರಿಗೆ ಎಲ್ಲಿ ರಕ್ಷಣೆ?’ ಅಂತ ಕೇಳಿದರು ಶಶಿಕಲಾ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕುರಿಯನ್, ಮೇಲ್ಮನೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದು, ಈ ಬಗ್ಗೆ ರಾಜ್ಯಸಭೆ ಮುಖ್ಯಸ್ಥ ಹಾಗೂ ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅವರಿಗೆ ಪತ್ರ ಬರೆಯುವಂತೆ ಸಲಹೆ ನೀಡಿದ್ರು.

ಇವಳು ಅವಳಲ್ಲ…

ಜೆ. ಜಯಲಲಿತಾ ಎಂಬ ತಮಿಳು ರಾಜಕಾರಣದ ಅಗ್ರ ಹೆಸರಿನೊಂದಿಗೆ ಶಶಿಕಲಾ ಎಂಬ ಹೆಸರೂ ತಳುಕು ಹಾಕಿಕೊಂಡೇ ಇದೆ. ಆದರೆ ಈ ಪುಷ್ಪ ಶಶಿಕಲಾ ಬೇರೆ. ಜಯಲಲಿತಾ ಅಂತರಂಗ ಸಖಿ ಎಂಬಷ್ಟರಮಟ್ಟಿಗೆ ಖ್ಯಾತಿಯಾಗಿರೋರು ಶಶಿಕಲಾ ನಟರಾಜನ್. ಇದೀಗ ಶಶಿಕಲಾ ಪುಷ್ಪ ಆರೋಪಿಸುತ್ತಿರುವ ಪ್ರಕಾರ, ಜಯಾರ ಪೋಸ್ ಗಾರ್ಡನ್ ನಿವಾಸಕ್ಕೆ ಕರೆಸಿಕೊಂಡು ಬಲವಂತದಿಂದ ರಾಜಿನಾಮೆ ಬರೆಸಿಕೊಂಡಿದ್ದು ಮುಖ್ಯಮಂತ್ರಿ ಜಯಾ ಮತ್ತು ಶಶಿಕಲಾ ನಟರಾಜನ್ ಸಮಕ್ಷಮದಲ್ಲೇ ಆಗಿದೆ. ‘ರಾಜಿನಾಮೆ ಬರೆದುಕೊಡದಿದ್ದರೆ ನಾನು ಹೊರಗೆ ಬರುವುದೇ ಸಾಧ್ಯವಿರಲಿಲ್ಲ. ಇನ್ಮುಂದೆಯೂ ಗಂಡ-ಮಕ್ಕಳು ಹಾಗೂ ನನಗೇನಾದರೂ ಸಂಭವಿಸಿದರೆ ಅದಕ್ಕೆ ಇವರೇ ಕಾರಣರಾಗಿರುತ್ತಾರೆ’ ಎಂದಿದ್ದಾರೆ ಶಶಿಕಲಾ.

ಕಪಾಳಮೋಕ್ಷ ಪ್ರಕರಣ

ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಶಶಿಕಲಾ ಅವರು ಡಿಎಂಕೆ ನಾಯಕ ಹಾಗೂ ರಾಜ್ಯಸಭೆ ಸಂಸದ ತಿರುಚಿ ಶಿವ ಅವರಿಗೆ ಹೊಡೆದ ಪ್ರಕರಣವನ್ನು ಇರಿಸಿಕೊಂಡು, ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿರುವ ಕಾರಣಕ್ಕೆ ಈ ಕ್ರಮ ಎಂಬುದು ಎಐಎಡಿಎಂಕೆ ಹೇಳುತ್ತಿರುವ ಮಾತು. ಅಂದಹಾಗೆ ತಿರುಚಿ ಅವರ ಕಾಲರ್ ಹಿಡಿದಿದ್ದು ಅವರು ಜಯಲಲಿತಾ ವಿರುದ್ಧ ನಿರಂತರವಾಗಿ ಕೆಟ್ಟದಾಗಿ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಎಂಬುದು ಶಶಿಕಲಾ ವಿವರಣೆ.  ಆದರೆ ಈ ಪ್ರಕರಣಕ್ಕೂ ತಮ್ಮ ಹೊರಹಾಕುವಿಕೆಗೂ ಸಂಬಂಧವಿಲ್ಲ. ತಮ್ಮ ಸ್ಥಾನಕ್ಕೆ ಬೇರೆಯವರನ್ನು ತರುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಪೋಸ್ ಗಾರ್ಡನ್ ನಿವಾಸದಲ್ಲಿ ತಮ್ಮನ್ನು ನಾಯಿಯಿಯಂತೆ ನಡೆಸಿಕೊಳ್ಳಲಾಯಿತು ಎಂಬುದು ಶಶಿಕಲಾ ಹೇಳಿಕೆ.

ಇನ್ನು ಶಶಿಕಲಾ ಪುಷ್ಪ ಅವರ ರಾಜಕೀಯ ಹಾದಿ ನೋಡುವುದಾದ್ರೆ, ಸ್ಥಳೀಯ ಚುನಾವಣೆಗಳಲ್ಲಿ ಜಯ ಸಾಧಿಸಿದ್ದ ಶಶಿಕಲಾ ಪುಷ್ಪಾ 2011 ರ ಅಕ್ಟೋಬರ್ ನಲ್ಲಿ ತೂತುಕುಡಿ ನಗರ ಪಾಲಿಕೆ ಮೇಯರ್ ಆಗಿದ್ದವರು. ನಂತರ 2014 ರಲ್ಲಿ ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇನ್ನು ಇದೇ ವರ್ಷ ಜಯಲಲಿತಾ ಅವರು ಮಹಿಳಾ ಘಟಕದ ಕಾರ್ಯದರ್ಶಿ ಸ್ಥಾನದಿಂದಲೂ ಪುಷ್ಪಾರನ್ನು ಕಿತ್ತುಹಾಕಿದ್ದರು.

Leave a Reply