ಸುಬೇದಾರ ಬಸಪ್ಪ ಪಾಟೀಲ- ಸಿಪಾಯಿ ಹಸನ್ ಬಲಿದಾನ ಸಾರುತ್ತಿರುವ ವಾಸ್ತವ, ಗುಂಡು- ನೆಲಬಾಂಬುಗಳ ನಡುವೆ ಅವರಲ್ಲಿ ಗಡಿ ಕಾಯುತ್ತಿರುವ ಕಾರಣಕ್ಕೆ ಉಳಿದಿದೆ ನಮ್ಮ ಜೀವ

ಸುಬೇದಾರ್ ಬಸಪ್ಪ ಪಾಟೀಲ್ ಮತ್ತು ಸಿಪಾಯಿ ಹಸನ್

ಡಿಜಿಟಲ್ ಕನ್ನಡ ವಿಶೇಷ:

ಸೋಮವಾರ ಕರ್ನಾಟಕಕ್ಕೆ ಸೂತಕ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರನ ಅಂತ್ಯಕ್ರಿಯೆ ಒಂದೆಡೆ. ಇದೇ ಸಂದರ್ಭದಲ್ಲಿ ಧಾರವಾಡ ಮತ್ತು ಬೆಳಗಾವಿಯ ಎರಡು ಹಳ್ಳಿಗಳಲ್ಲೂ ದುಃಖ ಮಡುಗಟ್ಟಿತ್ತು. ಕಳೆದುಕೊಂಡವರ ನೋವಿನ ಆಕ್ರಂದನ ಮುಗಿಲು ಮುಟ್ಟಿತ್ತು.

ಭಾರತೀಯ ಸೇನೆಯ ಸುಬೇದಾರ್ ಬಸಪ್ಪ ಪಾಟೀಲ್ ಮತ್ತು ಸಿಪಾಯಿ ಹಸನ್ ಅವರ ಅಂತ್ಯಕ್ರಿಯೆಯೂ ನೆರವೇರಿತು. ಜಮ್ಮು-ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ ಉದ್ದಕ್ಕೂ ಗಸ್ತಿಗೆ ತೆರಳಿದಾಗ, ಜುಲೈ 29ರಂದು ನೆಲಬಾಂಬಿಗೆ ಬಲಿಯಾದವರು ಇಬ್ಬರು.

ಇಬ್ಬರೂ ಯೋಧರಿಗೆ ಲೇಹ್’ನಲ್ಲಿ ಅಂತಿಮ ನಮನ ಸಲ್ಲಿಸಿದ ಭಾರತೀಯ ಸೇನೆ, ನಂತರ ರಾಜ್ಯಕ್ಕೆ ಹುತಾತ್ಮರ ದೇಹಗಳನ್ನು ಕಳುಹಿಸಿಕೊಟ್ಟಿತು.

48ರ ಹರೆಯದ ಬಸಪ್ಪ ಪಾಟೀಲ್ ಗೋಕಾಕ್ ತಾಲೂಕಿನ ಖನಗಾಂವ್ ನವರು. ಮದ್ರಾಸ್ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಮಕ್ಕಳಾದ ಕೀರ್ತಿ ಮತ್ತು ಪ್ರಕಾಶ ಹಾಗೂ ಮಡದಿ ಶಕುಂತಲಾ ಅವರನ್ನು ಅಗಲಿದ್ದಾರೆ. ಇವರ ಸಹೋದರ ಸುರೇಶ ಪಾಟೀಲ್ ಸಹ ಸೇನೆಯಲ್ಲಿದ್ದಾರೆ.

ಇನ್ನು, ಧಾರವಾಡದ ನವಲಗುಂದದ ಸೈದಾಪುರ ಗ್ರಾಮದ ಸಿಪಾಯಿ ಹಸನ್ ಅವರದ್ದಿನ್ನೂ 25ರ ಪ್ರಾಯವಾಗಿತ್ತು. 2013ರಲ್ಲಿ ಮದ್ರಾಸ್ ರೆಜಿಮೆಂಟ್ ಸೇರಿದ್ದ ಇವರು, ಊರಲ್ಲಿ ಹೊಸಮನೆ ಕಟ್ಟಿದ ನಂತರ ಮದುವೆಯಾಗ್ತೀನಿ ಅಂತ ಸಹೋದರಿಯ ವಿವಾಹ ಕಾರ್ಯ ಮುಗಿಸಿದ್ದರು. ಕನಸುಗಳು ಅರಳುವ ವಯಸ್ಸಿನಲ್ಲಿ ದೇಶಕ್ಕಾಗಿ ಕಣ್ಣುಮುಚ್ಚಿದ್ದಾರೆ ಸಿಪಾಯಿ ಹಸನ್.

ಇದು ಯುದ್ಧ ಸಂದರ್ಭವಲ್ಲದಿರಬಹುದು. ಹಾಗೆಂದು ಇವರ ಬಲಿದಾನದ ಅರ್ಥ ನಮ್ಮನ್ನು ತಾಗದಿದ್ದರೆ ಪ್ರಮಾದವಾಗುತ್ತದೆ.

ಕಳೆದ ಬುಧವಾರವಷ್ಟೇ ಕೇಂದ್ರ ಗೃಹಖಾತೆಯ ರಾಜ್ಯ ಸಚಿವರಾದ ಹಂಸರಾಜ ಅಹಿರ್ ಅವರು ಜಮ್ಮು-ಕಾಶ್ಮೀರ ಗಡಿಭಾಗದಲ್ಲಿ ಉಗ್ರರ ಒಳ ನುಸುಳುವಿಕೆ ಪ್ರಯತ್ನದಲ್ಲಿ ಹೆಚ್ಚಳ ಉಂಟಾಗಿದೆ ಎಂಬ ಸಂಗತಿಯನ್ನು ಸಂಸತ್ತಿನ ಮುಂದಿರಿಸಿದ್ದರು.

‘ಜೂನ್ 30ರವರೆಗೆ 90 ಒಳನುಸುಳುವಿಕೆ ಪ್ರಯತ್ನಗಳಾಗಿವೆ. ಇದೇ ಅವಧಿಯ 2015ರ ಅಂಕಿಅಂಶ 29 ಇತ್ತು. ನಮ್ಮ ಯೋಧರು ಮತ್ತು ಗುಪ್ತಚರ ವಿಭಾಗದವರು ಸದಾಕಾಲ ಎಚ್ಚರಿಕೆಯಲ್ಲೇ ಇರುತ್ತಾರೆ. ಅಷ್ಟಾಗಿಯೂ 54 ಒಳನುಸುಳುವಿಕೆ ಪ್ರಯತ್ನಗಳು ಫಲಪ್ರದವಾಗಿದೆ’ ಎಂಬುದು ರಾಜ್ಯಸಭೆಗೆ ತಿಳಿಸಿರುವ ಮಾಹಿತಿ.

ಜುಲೈ 22ಕ್ಕೆ ವರದಿಯಾಗಿದ್ದ ವಿದ್ಯಮಾನದಲ್ಲಿ, ಇದೇ ಕುಪ್ವಾರಾದಲ್ಲಿ ಒಳನುಸುಳುತ್ತಿದ್ದ ನಾಲ್ವರು ಪಾಕ್ ಉಗ್ರರನ್ನು ಯೋಧರು ಹೊಡೆದು ಹಾಕಿದ್ದರು. ಆದರೆ ಈ ಪ್ರಯತ್ನದಲ್ಲಿ ಒಬ್ಬ ಯೋಧ ಸಹ ಚಕಮಕಿಯಲ್ಲಿ ಹುತಾತ್ಮನಾದ.

ಇವನ್ನೆಲ್ಲ ಗಮನಿಸಿದಾಗ ಸುಬೇದಾರ್ ಬಸಪ್ಪ ಪಾಟೀಲ್ ಹಾಗೂ ಸಿಪಾಯಿ ಹಸನ್ ಅವರ ಬಲಿದಾನದ ಮಹತ್ವ ಅರಿವಾಗುತ್ತದೆ. ಗಸ್ತು ತಿರುಗುತ್ತಿದ್ದಾಗ ನೆಲಬಾಂಬಿಗೆ ಇವರು ಜೀವ ತೆತ್ತಿದ್ದಾರೆ. ಅತ್ತ ಕಡೆಯಿಂದ ತೂರಿಬರುವ ಉಗ್ರನ ಗುಂಡು, ಹುಗಿದಿಟ್ಟ ನೆಲಬಾಂಬುಗಳು ಇವೆಲ್ಲ ಅಪಾಯಗಳ ನಡುವೆಯೇ ಇಂಥ ಯೋಧರು ಗಡಿ ಕಾಯುತ್ತಿರುವುದರಿಂದಲೇ ಅಲ್ಲವೇ ನಮಗಿಲ್ಲಿ ನಿದ್ರಾಭಾಗ್ಯ, ಅಭಿವ್ಯಕ್ತಿ ಸ್ವಾಂತಂತ್ರ್ಯದ ಹೆಸರಲ್ಲಿ ಮೇಜು ಕುಟ್ಟಿಕೊಂಡಿರುವ ಭಾಗ್ಯ ಸಿಕ್ಕಿರುವುದು? ಪಾಶ್ಚಾತ್ಯ ರಾಷ್ಟ್ರಗಳ ಅತಿ ಭದ್ರತೆಯ ನಡುವೆಯೇ ಭಯೋತ್ಪಾದಕ ಕೃತ್ಯಗಳಾಗುತ್ತಿವೆ. ಅಂಥದ್ದರಲ್ಲಿ ಇಷ್ಟು ವಿಶಾಲ ದೇಶದಲ್ಲಿ ಏನೆಲ್ಲ ವಿಧ್ವಂಸಗಳು ನಡೆದುಬಿಡಬೇಕಿತ್ತಲ್ಲವೇ? ಹಾಗಾಗುತ್ತಿಲ್ಲ ಎಂಬುದಕ್ಕೆ ಬಸಪ್ಪ ಪಾಟೀಲ, ಸಿಪಾಯಿ ಹಸನ್ ರಂಥವರನ್ನು ದೇಶ ಪಡೆದಿದೆ ಎಂಬುದೇ ವಾಸ್ತವ.

ನಮ್ಮ ಖುಷಿಗಳು ವ್ಯಸ್ತವಾಗದಿರಲೆಂದು ಕಾಶ್ಮೀರದ ತುದಿಯಲ್ಲಿ ಕಾವಲು ಕಾಯುತ್ತ ನೆಲಬಾಂಬಿಗೆ ಬಲಿದಾನವಾದ ಬಸಪ್ಪ ಪಾಟೀಲ ಮತ್ತು ಸಿಪಾಯಿ ಹಸನ್… ಅಮರವಾಗಲಿ ಅವರ ಚೇತನ!

Leave a Reply