ಟೀಂ ಇಂಡಿಯಾ ಮುನ್ನಡೆ ಹೆಚ್ಚಿಸಿದ ರಹಾನೆ ಶತಕ, ಭಾರತದ ಜಯದ ಹಾದಿಗೆ ವರುಣನ ಅಡ್ಡಿ

 

ಡಿಜಿಟಲ್ ಕನ್ನಡ ಟೀಮ್:

ರಕ್ಷಣಾತ್ಮಕ ಬ್ಯಾಟಿಂಗ್ ಮೂಲಕ ವೆಸ್ಟ್ ಇಂಡೀಸ್ ದಾಳಿಯನ್ನು ಎದುರಿಸಿದ ಅಜಿಂಕ್ಯ ರಹಾನೆ ಶತಕ ದಾಖಲಿಸಿ ಭಾರತದ ಮುನ್ನಡೆ ಹೆಚ್ಚಿಸಿದ ಖುಷಿ ಒಂದೆಡೆಯಾದ್ರೆ, ಮತ್ತೊಂದೆಡೆ ಪಂದ್ಯದಲ್ಲಿ ಜಯ ಸಾಧಿಸುವ ತಕವದಲ್ಲಿ ಓಡುತ್ತಿರುವ ಟೀಂ ಇಂಡಿಯಾ ವೇಗಕ್ಕೆ ಮಳೆ ಬ್ರೇಕ್ ಹಾಕಿರೋದು ನಿರಾಸೆ.

ಪಂದ್ಯದ ಮೂರನೇ ದಿನವಾದ ಸೋಮವಾರ ಪೂರ್ಣ ಪ್ರಮಾಣದಲ್ಲಿ ಆಟ ಸಾಗಲಿಲ್ಲ. ದ್ವಿತೀಯ ಹಾಗೂ ತೃತೀಯ ಅವಧಿಗಳಲ್ಲಿ ಹೆಚ್ಚಾಗಿದ್ದು ಮಳೆಯ ಆಟವೇ. ಇದರೊಂದಿಗೆ ಮೂರನೇ ದಿನ ಕೇವಲ 46.1 ಓವರ್ ಗಳಷ್ಟು ಆಟ ನಡೆಯಿತು. ಎರಡನೇ ದಿನದಾಟ ಮುಕ್ತಾಯಕ್ಕೆ 358ಕ್ಕೆ 5 ರಿಂದ ಮೂರನೇ ದಿನದಾಟ ಮುಂದುವರಿಸಿದ ಭಾರತ ಆತುರ ಪಡದೆ ತಾಳ್ಮೆಯಿಂದಲೇ ಬ್ಯಾಟ್ ಮಾಡಿತು. ಅದರೊಂದಿಗೆ ಭಾರತ 9 ವಿಕೆಟ್ ಗೆ 500 ರನ್ ಪೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ವಿಂಡೀಸ್ ವಿರುದ್ಧ 304 ರನ್ ಮುನ್ನಡೆ ಸಾಧಿಸಿತು.

ಅರ್ಧಶತಕದ ಹೊಸ್ತಿಲಲ್ಲಿದ್ದ ಅಜಿಂಕ್ಯ ರಹಾನೆ ಶತಕದ ಗಡಿ ತಲುಪಿದರೆ, ವೃದ್ಧಿಮಾನ್ ಸಾಹ (47), ಅಮಿತ್ ಮಿಶ್ರಾ (21) ಹಾಗೂ ಉಮೇಶ್ ಯಾದವ್ (19) ತಂಡದ ಮುನ್ನಡೆಗೆ ಅಳಿಲು ಸೇವೆ ನೀಡಿದರು. ಭಾರತ ಇನಿಂಗ್ಸ್ ಡಿಕ್ಲೇರ್ ಆಗುತ್ತಿದ್ದಂತೆ ಎರಡನೇ ಬಾರಿಗೆ ಅಡ್ಡಿಯಾದ ಮಳೆ ಮತ್ತೆ ಆಡಲು ಅವಕಾಶ ಮಾಡಿಕೊಡಲೇ ಇಲ್ಲ. ಇದರೊಂದಿಗೆ ವೆಸ್ಟ್ ಇಂಡೀಸ್ ನಾಲ್ಕನೇ ದಿನ ಎರಡನೇ ಇನಿಂಗ್ಸ್ ಆರಂಭಿಸಲಿದೆ. ಮಂಗಳವಾರವೂ ಜಮೈಕಾದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದಿದೆ ಹವಾಮಾನ ಇಲಾಖೆ. ಇದರೊಂದಿಗೆ ಭಾರತದ ಜಯದ ಹಾದಿಗೆ ಮಳೆ ಅಡ್ಡವಾಗಿ ವಿಂಡೀಸ್ ತಂಡವನ್ನು ರಕ್ಷಿಸುವುದೇ ಕಾದು ನೋಡಬೇಕು.

ಇನ್ನು ವಿಂಡೀಸ್ ಪರ ರೊಸ್ಟನ್ ಚೇಸ್ 5, ಗೆಬ್ರಿಯಲ್, ಹೊಲ್ಡರ್ ಮತ್ತು ಬಿಶೂ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್: (ಮೂರನೇ ದಿನದಾಟ ಮುಕ್ತಾಯಕ್ಕೆ)

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ (196, 52.3 ಓವರ್)

ಬ್ರಾಥ್ ವೈಟ್ 1, ಚಂದ್ರಿಕಾ 5, ಡಾರೆನ್ ಬ್ರಾವೊ 0, ಮರ್ಲಾನ್ 37, ಬ್ಲಾಕ್ ವುಡ್ 62, ಚೇಸ್ 10, ಡೌರಿಚ್ 5, ಹೋಲ್ಡರ್ 13, ಬಿಶೂ 12, ಕಮಿನ್ಸ್ ಅಜೇಯ 24, ಗೆಬ್ರಿಯಲ್ 15, ಇತರೆ 12. (ಅಶ್ವಿನ್ 52ಕ್ಕೆ5, ಶಮಿ 23ಕ್ಕೆ 2, ಇಶಾಂತ್ 53ಕ್ಕೆ 2, ಮಿಶ್ರಾ 38ಕ್ಕೆ 1)

ಭಾರತ ಮೊದಲ ಇನಿಂಗ್ಸ್ (500ಕ್ಕೆ 9 ಡಿಕ್ಲೇರ್, 171.1 ಓವರ್)

ಕೆ.ಎಲ್.ರಾಹುಲ್ 158, ಧವನ್ 27, ಪೂಜಾರಾ 46, ಕೊಹ್ಲಿ 44, ರಹಾನೆ ಅಜೇಯ 108, ಅಶ್ವಿನ್ 3, ಸಾಹ 47, ಮಿಶ್ರಾ 21, ಶಮಿ 0, ಉಮೇಶ್ 19 ಇತರೆ 27. (ಚೇಸ್ 121ಕ್ಕೆ 5, ಗೆಬ್ರಿಯಲ್ 62ಕ್ಕೆ 1, ಬಿಶೂ 107ಕ್ಕೆ 1, ಹೋಲ್ಡರ್ 72ಕ್ಕೆ 1)

Leave a Reply